Asianet Suvarna News Asianet Suvarna News

ಬಂದೇ ಬಿಡ್ತು ದಸರಾ; ರಜೆ ಮಜಾ ಮಾಡಲು ಓಕಿನಾವಾಗೆ ಪ್ರವಾಸ ಹೋಗಲು ರೆಡಿಯಾಗಿ!

ಒನ್ ಫೈನ್ ಮಾರ್ನಿಂಗ್ ಎದ್ದು ನೋಡಿದಾಗ ಒಂದು ವಾವ್ ಅನ್ನಿಸುವ ಜಾಗದಲ್ಲಿ ಇರಬೇಕು ಅನ್ನಿಸುವುದು ಸಹಜ ಆಸೆ. ಅದಕ್ಕೆ ತಕ್ಕಂತೆ ಅಕ್ಟೋಬರ್ ಸಮೀಪಿಸಿದೆ. ದಸರಾ ರಜೆ ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರವಾಸ ಹೋಗಬೇಕು ಎಂಬ ಆಲೋಚನೆ ಇರುವವರಿಗಾಗಿಯೇ ಈ ಸಂಚಿಕೆ ರೂಪಿಸಲಾಗಿದೆ.

This Dasara Make Trip Plan To Okinawa Islands
Author
Bengaluru, First Published Sep 22, 2019, 11:48 AM IST

ಈ ವರ್ಷದ ಮಾರ್ಚ್ ನಲ್ಲಿ ಓಕಿನಾವಾಕ್ಕೆ ಹೋಗಿ ಬಂದು ಇಂದಿಗೆ ಬಹಳ ದಿನಗಳು ಕಳೆದಿದ್ದರೂ, ಅಲ್ಲಿನ ಜನರ ಆತ್ಮೀಯ ನಡೆ, ಅತಿಥಿ ಸತ್ಕಾರ, ಮುಖದ ಮೇಲೆ ಸದಾ ಇರುವ ನಗು ಎಲ್ಲವೂ ಇನ್ನು ನನ್ನ ನೆನಪಿನಂಗಳದಲ್ಲಿ ಹಸಿರಾಗಿದೆ. ಆಹಾರ, ಕಲೆ, ಸಂಸ್ಕೃತಿ ಎಲ್ಲದರಲ್ಲೂ ತನ್ನತನವನ್ನು ಉಳಿಸಿಕೊಂಡು ಶ್ರೀಮಂತವಾಗಿರುವ ಇದು ಜಗತ್ತಿನ ಅದ್ಭುತ ನಾಡುಗಳಲ್ಲಿ ಒಂದೆನಿಸಿದೆ.

ಪೆಸಿಫಿಕ್‌ ಸಾಗರದಲ್ಲಿರುವ ದ್ವೀಪ ಸಮೂಹಗಳಲ್ಲಿ ಓಕಿನಾವಾ ಸಹ ಒಂದು. ಜಪಾನಿನ ಪ್ರಮುಖ ಭೂಭಾಗದ ದಕ್ಷಿಣಕ್ಕೆ ಓಕಿನಾವಾ ಸೇರಿದಂತೆ ನೂರಕ್ಕೂ ಹೆಚ್ಚು ದ್ವೀಪಗಳು ಇದ್ದರೂ, ಅದರಲ್ಲಿ ಕೇವಲ 49 ದ್ವೀಪಗಳಲ್ಲಿ ಮಾತ್ರ ಮನುಷ್ಯರ ಆವಾಸ ಕಂಡುಬರುತ್ತದೆ.

19ನೇ ಶತಮಾನದ ತನಕ ರುಯುಕ್ಯೂ ರಾಜಾಡಳಿತದಲ್ಲಿದ್ದ ಇವುಗಳು, 1879ರಲ್ಲಿ ಅಧಿಕೃತವಾಗಿ ಜಪಾನ್‌ ಗೆ ಸೇರ್ಪಡೆಗೊಂಡವು. ರುಯುಕ್ಯೂ ದ್ವೀಪಗಳಲ್ಲೇ ದೊಡ್ಡದಾಗಿರುವ ಓಕಿನಾವಾ ವಿಶ್ವ ಭೂಪಟದಲ್ಲಿ ಒಂದು ಸಣ್ಣ ಚುಕ್ಕೆಯಾಗಿ ಕಾಣುತ್ತದೆ.

ಜಗತ್ತಿನ ಮೈ ನವಿರೇಳಿಸುವ ಹೋಟೆಲ್ ಪೂಲ್‌ಗಳಿವು!

ವಿಮಾನ ಇಳಿಯುತ್ತಿದ್ದಂತೆಯೇ ನನ್ನ ಪಕ್ಕ ಕೂತಿದ್ದ ಗಂಡ ಹೆಂಡತಿಯಿಬ್ಬರೂ ಭಾರವಾದ ಬ್ಯಾಗ್‌ಗಳನ್ನೂ ಹಿಡಿದು ಸಲೀಸಾಗಿ ಇಳಿಯುತ್ತಿದ್ದಾಗ ಅವರನ್ನು ನೋಡಿ ಆಶ್ಚರ್ಯವಾಯಿತು. ನನ್ನ ಬಳಿ ಇದ್ದ ಚಿಕ್ಕ ಬ್ಯಾಗ್‌ ಒಂದನ್ನೇ ಹಿಡಿದು ಇಳಿಯಲು ಸೋಂಬೇರಿತನವಿದ್ದ ನನಗೆ, ನಗು ನಗುತ್ತಾ ಇಳಿಯುತ್ತಿದ್ದ ಅವರಿಬ್ಬರನ್ನು ಮಾತಾಡಿಸಲೇ ಬೇಕೆಂದೆನಿಸಿತು. ಓಕಿನಾವಾದ ನಿವಾಸಿಗಳೇ ಆಗಿದ್ದ ಇಬ್ಬರಲ್ಲಿ, ಗಂಡ ನನಗೆ 86 ವರ್ಷ, ನನ್ನ ಹೆಂಡತಿಗೆ 84 ಎಂದಾಗ ಒಮ್ಮೆ ತಲೆ ತಿರುಗಿದಂತಾಯ್ತು. ಅವರೇ ಹೇಳಿದಂತೆ ಈ ಪುಟ್ಟದ್ವೀಪ ಜಗತ್ತಿನಲ್ಲೇ ಅತೀ ಹೆಚ್ಚು

ಆಯುಸ್ಸಿನ ಮನುಷ್ಯರನ್ನು ಹೊಂದಿರುವ ಪ್ರದೇಶ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ದೀರ್ಘಾಯಸ್ಸಿನ ಗುಟ್ಟೇನು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಾಗ ನನಗೆ ಸಿಕ್ಕ ಉತ್ತರ ಅವರ ಆಹಾರ ಪದ್ಧತಿಯಲ್ಲಿದೆ ಎಂಬುದು. ನಮ್ಮಂತೆ ಎಣ್ಣೆಯ ಉಪಯೋಗವೇ ಇಲ್ಲದೆ (ಇದ್ದರೂ ಅತೀ ಕಡಿಮೆ), ಗೆಣಸು, ಬೇಯಿಸಿದ ಹಸಿರು ಮತ್ತು ಹಳದಿ ತರಕಾರಿಯನ್ನೇ ತಮ್ಮ ದಿನನಿತ್ಯದ ಆಹಾರವಾಗಿ ಬಳಸುವುದು ಒಂದೆಡೆಯಾದರೆ ಎರಡನೆಯದಾಗಿ ಹಾಗೂ ಮುಖ್ಯವಾಗಿ ಅವರ ಆಹಾರ ಕ್ರಮದಲ್ಲಿ ಸಮುದ್ರ ಕಳೆಯನ್ನು ಬಳಸುವುದು. ಇದು ವಿಟಮಿನ್‌ ಮತ್ತು ಖನಿಜದ ಅಂಶವನ್ನು ಹೆಚ್ಚಾಗಿ ಹೊಂದಿದ್ದು, ಇದೇ ಓಕಿನಾವಾ ಜನರ ಆರೋಗ್ಯದ ಹಿಂದಿನ ರಹಸ್ಯವಾಗಿದೆ.

ಇಲ್ಲಿ ಮನೆ ತಗೋಬೇಕಂದ್ರೆ ಚದರ ಅಡಿಗೆ 56,000 ರೂ ಕೊಡ್ಬೇಕು!

ಅವರದೇ ಆದ ಸಿದ್ಧಾಂತವಾದ ‘ಹರಾ ಹಚ್ಚಿ ಭೂ’ ಅಂದರೆ ನಮ್ಮಂತೆ ಹೊಟ್ಟೆಪೂರ್ತಿಯಾಗಿ ತುಂಬುವಂತೆ ತಿನ್ನದೇ, ಇನ್ನು ಸ್ವಲ್ಪ ತಿನ್ನಬೇಕು ಅನ್ನಿಸುವಾಗಲೇ ತಿನ್ನಲು ಕಡಿವಾಣ ಹಾಕುವುದೇ ದೀರ್ಘಾಯುಸ್ಸಿನ ಮತ್ತೊಂದು ಗುಟ್ಟು ಎಂದು ನಂಬಲಾಗಿದೆ. ನೂರರವರೆಗೆ ಜೀವಿಸುವುದೆಂದರೆ ಇಲ್ಲಿ ಮಾತ್ರೆ, ಔಷಧಿಗಳಿಂದ ಅಲ್ಲ. ಬದಲಿಗೆ ಹೃದಯಾಘಾತ ಮತ್ತು ಕ್ಯಾನ್ಸರ್‌ನಂತಹ ಖಾಯಿಲೆಗಳಿಗೆ ಹೆಚ್ಚು ತುತ್ತಾಗದೆ ಇರುವಷ್ಟುದಿನ ಆರೋಗ್ಯವಾಗಿ, ತಾವು ತಿನ್ನುವ ಆಹಾರದಲ್ಲಿ ಕೊಬ್ಬು, ಪ್ರೊಟೀನ್‌, ನಾರಿನ ಅಂಶವು ಎಷ್ಟಿದೆ ಎಂದು ತಾಳೆ ಹಾಕಿ ತಿನ್ನುವುದು ಓಕಿನಾವಿಗರ ಜೀವನ ಕ್ರಮದ ಭಾಗವಾಗಿದೆ. ಅದರಲ್ಲೂ ಓಕಿನಾವಾದ ಹೆಂಗಸರು ಭೂಮಿಯ ಇನ್ಯಾವುದೇ ಭಾಗದಲ್ಲಿ ಜೀವಿಸುವ ಹೆಂಗಸರಿಗಿಂತ ಆರೋಗ್ಯಕರವಾಗಿ ದೀರ್ಘಾಯಸ್ಸನ್ನು ಹೊಂದಿದ್ದಾರೆ. ಹಂದಿ ಇವರ ನಿತ್ಯದ ಆಹಾರ. ಅದೆಷ್ಟೋ ಸಾವಿರ ಸಂಖ್ಯೆಯಲ್ಲಿ ಹಂದಿಗಳು ದಿನವೂ ಕೊಲ್ಲಲ್ಪಡುತ್ತದೆ.

ಓಕಿನಾವಾದಲ್ಲಿ ಓಗಿಮಿ ಎಂಬ ಹಳ್ಳಿಯಿದೆ. ದ್ವೀಪದ ಉತ್ತರ ಭಾಗದಲ್ಲಿರುವ ಈ ಪುಟ್ಟಹಳ್ಳಿಯಲ್ಲಿರುವುದು ಸುಮಾರು 3000ದಷ್ಟುಜನರಾದರೂ ಇದು ಶತಾಯುಷಿಗಳ ನಾಡು ಎಂದೇ ಖ್ಯಾತಿಯಾಗಿದೆ. ಚುರುಕುತನದ ಓಡಾಟವೇ ಕಾಣುವ ಈ ಊರಲ್ಲಿ ವಯಸ್ಸು ಎಂಬುದು ಬರೀ ಒಂದು ಸಂಖ್ಯೆಯಷ್ಟೇ. ವಯಸ್ಸು ಎಂಭತ್ತಾದರೂ ಹೊಲದಲ್ಲಿ ಸಂಜೆಯವರೆಗೆ ದುಡಿಯುವುದು, ತಾವೇ ಬೆಳೆದ ಆರೋಗ್ಯಕರ ಬೆಳೆಯನ್ನು ಸೇವಿಸುವುದು ಅವರು ತಮ್ಮ ಆರೋಗ್ಯವನ್ನು ಕಾಪಾಡಿಟ್ಟುಕೊಳ್ಳಲು ಸಾಧ್ಯವಾಗಿಸಿದೆ.

ಡಾರ್ಕ್ ಟೂರಿಸಂ; ಕ್ರೂರವಾದ ಕಣ್ಣೀರ ಕಥೆ ಹೇಳುವ ತಾಣಗಳಿವು

ಕಹಿ ಕಲ್ಲಂಗಡಿ, ಸಿಹಿ ಆಲೂಗಡ್ಡೆ, ಕಂದು ಬಣ್ಣದ ಅಕ್ಕಿ, ಶೀಕುವಾಸ ಎಂಬ ಕಿತ್ತಳೆಯಂತಹ ಹಣ್ಣು ಇವೇ ಅವರ ಆಹಾರದ ಭಾಗವಾಗಿದ್ದು, ಇವೆಲ್ಲವೂ ರೋಗ ನಿರೋಧಕ ಅಂಶಗಳಿಗೆ ಪ್ರಸಿದ್ಧಿಯಾಗಿದೆ. ಹೀಗೆ ದೇಹಕ್ಕೆ ಅಗತ್ಯವಿರುವ ಅಂಶಗಳೆಲ್ಲವೂ ಹೆಚ್ಚಿರುವ ಅವರ ಆಹಾರದ ಜೊತೆಗೆ ಸಂಸ್ಕರಿಸಿದ ಆಹಾರವು ಎಂದೂ ಅವರ ಆಹಾರದ ಭಾಗವಾಗಿಲ್ಲದೆ ಇರುವುದೂ ಅವರ ಆರೋಗ್ಯದ ಹಿಂದಿನ ರಹಸ್ಯವಾಗಿದೆ.

ಇದ್ದ ಅಷ್ಟೂದಿನ ಓಕಿನಾವಿಗರ ಒಡನಾಟದಿಂದ ತಿಳಿದ್ದಿದ್ದೇನೆಂದರೆ ಅವರ ಆಹಾರ ಕ್ರಮದಲ್ಲಿರುವ ಶಿಸ್ತಿನಂತೆಯೇ ಓಕಿನಾವಿಗರ ಜೀವನ ಶೈಲಿಯೂ ಅಷ್ಟೇ ಶಿಸ್ತುಬದ್ಧವಾಗಿದೆ ಎಂದು. ಜಪಾನಿಗರಿಗೆ ಹೋಲಿಸಿದರೆ ನಾವು ಸೋಂಬೇರಿಗಳು. ಎಲ್ಲದನ್ನೂ ನಿಧಾನವಾಗಿ ಮಾಡಲು ಇಚ್ಚಿಸುವವರು. ಓಕಿನಾವಿಗರ ಆಡು ಭಾಷೆಯಲ್ಲಿ ಅವರ ಸಮಯವನ್ನು ‘ಉಚಿನ ಟೈಮ್‌’ ಎಂದು (ನಮ್ಮಲ್ಲಿನ ಇಂದಿಗೂ ವಿಳಂಬ ಎಂದೆನಿಸಿರುವ ಇಂಡಿಯನ್‌ ಟೈಮ್‌ನಂತೆ) ಕರೆದುಕೊಳ್ಳುತ್ತಿದ್ದರು.

ಸುಖ ಪ್ರಯಾಣಕ್ಕೆ ಸಪ್ತ ಸೂತ್ರಗಳು!

ಅತೀ ಚುರುಕಿನ, ಸಮಯಕ್ಕೆ ಹೆಚ್ಚು ಮಹತ್ವಕೊಡುವ, ಶಿಸ್ತು ಪರಿಪಾಲನೆಯಲ್ಲಿ ಎತ್ತಿದ ಕೈ ಇವರದು. ಹಾಗಿದ್ದರೂ ಓಕಿನಾವಿಗರೇ ತಮ್ಮನ್ನು ತಾವು ಸೋಂಬೇರಿಗಳು ಎಂದು ಕರೆದುಕೊಂಡಾಗ, ಇನ್ನು ಜಪಾನೀಯರ ಚುರುಕುತನವು ಯಾವ ಮಟ್ಟಿಗೆ ಇರಬಹುದು ಎಂದು ನಾನು ಚಕಿತಗೊಂಡಿದ್ದಂತೂ ಹೌದು.

ಪೆಸಿಫಿಕ್‌ ಸಾಗರದ ಮಧ್ಯೆಯೇ ಒಂದು ಪುಟ್ಟನಾಡಾಗಿರುವ ಇದು, ನಾ ಕಂಡ, ಎಂದೂ ಖುಷಿಯಾಗಿರುವ ಜನಗಳ ಸಮುದಾಯ. ಇಲ್ಲಿ ಉಷ್ಣವಲಯದ ಹವಾಮಾನ ಇದ್ದು, ವರ್ಷದ ಸರಾಸರಿ ಉಷ್ಣಾಂಶ 23 ಡಿಗ್ರಿ. ಪ್ರತೀ ವರ್ಷ ಹಲವಾರು ತೂಫಾನುಗಳಿಂದ ಜನಜೀವನ ಅಲುಗಾಡಿದರೂ, ಮತ್ತೆ ಚೇತರಿಸಿಕೊಂಡು, ಅದೇ ಉತ್ಸಾಹದೊಂದಿಗೆ ಜನರ ಜೀವನ ಸಾಗುತ್ತದೆ. ಕಳೆದ ಒಂದು ವರ್ಷದಲ್ಲೇ 29 ಬಾರಿ ಚಂಡಮಾರುತ ಮತ್ತು ತೂಫಾನು ಅಪ್ಪಳಿಸಿತ್ತು ಎಂದು ಅಲ್ಲಿನ ಜನರು ಹೇಳಿದಾಗ ಆಶ್ಚರ್ಯವಾಗಿದ್ದೂ ಹೌದು. ಜಪಾನ್‌ಅನ್ನು

ಭೌಗೋಳಿಕವಾಗಿ ನೋಡಿದಾಗ ಉತ್ತರದಿಂದ ದಕ್ಷಿಣ ತುದಿಯವರೆಗೆ 40 ಡಿಗ್ರಿಗಳಷ್ಟುಉಷ್ಣಾಂಶದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಈ ಭಿನ್ನತೆಯೇ ಅಲ್ಲಿನ ಜನರಿಗೆ ವರ್ಷವಿಡೀ ಬದಲಾಗುವ ಋುತುಮಾನಗಳನ್ನು ಉಣಬಡಿಸುತ್ತದೆ. ಅವರ ಸಂಸ್ಕೃತಿಯ ರೂಪುಗೊಳ್ಳುವಿಕೆಯಲ್ಲೂ ಇದು ಬಹುಮುಖ್ಯ ಪಾತ್ರ ವಹಿಸಿದೆ. ಪ್ರತೀ ಋುತುವನ್ನೂ ಹಬ್ಬದಂತೆ ಆಹ್ವಾನಿಸುತ್ತಾ ಆಹಾರ ಮತ್ತು ದಿನನಿತ್ಯದ ಜೀವನವನ್ನೇ ಆಚರಿಸುವ ಮನೋಭಾವ ಈ ದೇಶದ ಇತಿಹಾಸದ್ದುದ್ದಕ್ಕೂ ಕಾಣುತ್ತದೆ.

ವಸಂತ ಋುತುವಿನ ಆಗಮನವಾಗುತ್ತಿದ್ದಂತೆಯೇ ಚೆರ್ರಿ ಅರಳುವ ಪ್ರಕೃತಿಯ ಸೌಂದರ್ಯದ ಅನಾವರಣವಾಗುತ್ತದೆ. ಇದು ಕಣ್ಣಿಗೆ ಹಬ್ಬವಾದರೆ ಇನ್ನು ಕಡುಗೆಂಪು ಬಣ್ಣದ ಎಲೆಗಳು ಉದುರುವ ಕಾಲ ಇನ್ನೊಂದು ಸೊಬಗನ್ನು ಸೃಷ್ಟಿಸುತ್ತದೆ. ಜಪಾನಿನಲ್ಲಿ ಚೆರ್ರಿ ಹಬ್ಬ ಆರಂಭವಾಗುವ 2 ತಿಂಗಳ ಮುಂಚೆಯೇ ಅಂದರೆ ಜನವರಿ ಹಾಗೂ ಫೆಬ್ರುವರಿಯಲ್ಲೆ ಓಕಿನಾವಾದಲ್ಲಿ ಆರಂಭವಾಗುತ್ತದೆ. ಗುಲಾಬಿ ಬಣ್ಣದ ಚಿತ್ತಾರಕ್ಕೆ ಹಿಂದೆ ಹಸಿರು ಗುಡ್ಡಗಳು ತೆರೆಯಂತಿದ್ದು ಸ್ವಚ್ಛ ನೀಲಿ ಆಕಾಶವು ಚಪ್ಪರದಂತೆ ತೋರುತ್ತದೆ. ಇದೂ ಒಂದು ಹಬ್ಬವಾಗಿ ಮಾರ್ಪಾಡಾಗಿ, ಹಲವಾರು ಪ್ರವಾಸಿಗರನ್ನೂ ಸೆಳೆಯುತ್ತದೆ.

ಇತಿಹಾಸದ ಪುಟಗಳನ್ನೂ ತಿರುವಿ ನೋಡಿದಾಗ, ಓಕಿನಾವಾವನ್ನು ಷೋ ಹಾಗೂ ರುಯುಕ್ಯೂ ರಾಜವಂಶಗಳು ಆಳಿದ್ದವು. 1879ರಲ್ಲಿ ರುಯುಕ್ಯೂ ಆಡಳಿತ ಅಂತ್ಯ ಕಂಡು ಓಕಿನಾವಾ ಜಪಾನ್‌ಗೆ ಸೇರಿತು. ವಿಶ್ವ ಯುದ್ಧ 2 ರ ಕೊನೆಗೆ ಅಂದರೆ 1945ರಲ್ಲಿ ಓಕಿನಾವಾ ಒಂದು ರಣರಂಗವಾಗಿ ಮಾರ್ಪಾಡಾಗಿತ್ತು. ‘ಓಕಿನಾವಾ ಕದನ’ ಎಂದೇ ಕರೆಯಲ್ಪಡುವ ಇದು, ಇತಿಹಾಸದ ಕರಾಳ ಯುದ್ಧಗಳಲ್ಲಿ ಒಂದೆನಿಸಿದೆ. ಇತ್ತ ಯುರೋಪಿನಲ್ಲಿ ಯುದ್ಧದ ತೀವ್ರತೆ ಕಡಿಮೆಯಾಗುತ್ತಿದ್ದಂತೆಯೇ, ಯುಎಸ್‌ ಸೇನೆ ಜಪಾನ್‌ ಒಳಗೆ ಆಕ್ರಮಿಸಲು ಓಕಿನಾವಾವನ್ನು ಮೊದಲ ತಂಗುದಾಣವನ್ನಾಗಿ ಮಾಡಿಕೊಂಡು, ತನ್ನೆಲ್ಲಾ ಅಧಿಪತ್ಯವನ್ನು ಸಾಧಿಸುವ ಹುನ್ನಾರದಲ್ಲಿತ್ತು.

82 ದಿನಗಳ ನಿರಂತರ ಹೋರಾಟಕ್ಕೆ ಸಾಕ್ಷಿಯಾದ ಓಕಿನಾವಾ ಕದನವು ಕೊನೆಗೆ ಎರಡೂ ಬಳಗಲ್ಲೂ ಅಪಾರ ಹಾನಿ, ಲಕ್ಷಾಂತರ ಜನರ ಸಾವು, ಅದರಲ್ಲೂ ಜಪಾನ್‌ನ ಪರ ಹೋರಾಡಿದ ಓಕಿನಾವಾ ನಾಗರಿಕರ ಸಾವಿಗೆ ಕಾರಣವಾಗಿತ್ತು. ಕದನದ ಕೊನೆಗೆ ಓಕಿನಾವಾದ ಮೂರನೇ ಒಂದು ಭಾಗದಷ್ಟುಜನರು ಇನ್ನಿಲ್ಲವಾಗಿದ್ದರು. ಜೂನ್‌ 22ರೆಂದು ಈ ಯುದ್ಧಕ್ಕೆ ಅಂತ್ಯ ಹಾಡಿ, ತನ್ನ ಬಲವನ್ನು ಭದ್ರವಾಗಿಸಿ ಮುಂದುವರಿದ ಯುಎಸ್‌ ಸೈನ್ಯ ನಂತರದ ಆಗಸ್ಟ್‌ನಲ್ಲಿ ಮತ್ತೂ ಭೀಕರದ ಹಿರೋಷಿಮಾ ಮತ್ತು ನಾಗಸಾಕಿ ಮೇಲಿನ ಬಾಂಬ್‌ ದಾಳಿಗೆ ಕಾರಣವಾಯಿತು.

ಇಂದಿಗೂ ಓಕಿನಾವಾದ ಕಾಲುಭಾಗದಲ್ಲಿ ಯುಎಸ್‌ ಮಿಲಿಟರಿ ಬೇಸ್‌ಗಳು ಕಾರ್ಯನಿರತವಾಗಿರುವುದನ್ನು ಕಾಣಬಹುದಾಗಿದೆ. ಪುಟ್ಟಅಮೆರಿಕವೇ ಇದು ಎಂದು ಅನಿಸುವಷ್ಟುಅಮೆರಿಕನ್ನರನ್ನು ಹೊಂದಿರುವ ಜಾಗಗಳು ಓಕಿನಾವಾದಲ್ಲಿದ್ದು ಒಂದು ಕ್ಷಣ ನಾವು ಓಕಿನಾವಾದಲ್ಲೇ ಇದ್ದೇವಾ ಎಂದು ಅನಿಸುತ್ತದೆ.

ಓಕಿನಾವಾ ಜಪಾನ್‌ ದೇಶಕ್ಕೆ ಸೇರಿದರೂ ತನ್ನದೇ ಆದ ಸಾಂಸ್ಕೃತಿಕ ಮತ್ತು ಪಾರಂಪರಿಕ ಶ್ರೀಮಂತಿಕೆಯಿಂದ ಭಿನ್ನವೆನಿಸಿದೆ. ಅಲ್ಲದೆ ಅವರದ್ದೇ ಆದ ನಂಬಿಕೆ, ಆಚರಣೆ ಅಷ್ಟೇ

ಭಾಷೆಯಿಂದ ವಿಶಿಷ್ಟಎನಿಸಿದೆ. ಓಕಿನಾವಾಕ್ಕೆ ತನ್ನದೇ ಆದ ಭಾಷೆಯೂ ಇದೆ. ‘ಉಚಿನಾಗುಚಿ’ ಎಂದು ಕರೆಯಲ್ಪಡುವ ಇದು ಜಪಾನಿನ ಪ್ರಮುಖ ಭೂಭಾಗದಲ್ಲಿ ಪ್ರಾಂತ್ಯ ಭಾಷೆಯಾಗಿಯೂ ರೂಢಿಯಲ್ಲಿದೆ. ಜಪಾನ್‌ಗೆ ಸೇರುವ ಮೊದಲು ವ್ಯಾಪಾರದ ಕೇಂದ್ರದಂತಿದ್ದ ಓಕಿನಾವಾ ಭಾಷೆ, ಸಂಸ್ಕೃತಿಯಲ್ಲಿ ಚೀನಾ, ಕೊರಿಯಾ, ತೈವಾನ್‌ ದೇಶಗಳ ಸಂಸ್ಕೃತಿಯೊಳಗೆ ಮಿಳಿತಗೊಂಡು ತನ್ನದೇ ಹೊಸ ಸಂಸ್ಕೃತಿಗೆ ರೂಪ ನೀಡಿದೆ.

ವೀಕೆಂಡ್ ಬಂದ್ರೆ ಎಲ್ ಹೋಗ್ಬೇಕು ಅಂತ ಯೋಚಿಸೋರಿಗಿದು!

ಸಿಂಹ ಮತ್ತು ನಾಯಿ- ಈ ಎರಡರ ಮಿಶ್ರ ತಳಿಯಂತೆ ತೋರುವ ಪ್ರಾಣಿಯಾದ ‘ಶೀಸ’ ಈ ದೇಶದ ಪ್ರತೀಕದಂತಿದೆ. ಕೆಟ್ಟದ್ದನ್ನೆಲ್ಲ ಹೊರಹಾಕಿ, ಅದೃಷ್ಟವನ್ನಷ್ಟೇ ತನ್ನಲ್ಲಿ ಉಳಿಸಿಕೊಳ್ಳುವುದನ್ನು ಸೂಚಿಸುವ ಈ ಪ್ರಾಣಿಯನ್ನು ಪ್ರತೀ ಮನೆಯ ಮುಂದೆಯೂ ಕಾಣಬಹುದಾಗಿತ್ತು. ಎಡಗಡೆಯಲ್ಲಿ ಕುಳಿತಿರುವ ಬಾಯಿಯನ್ನು ಮುಚ್ಚಿರುವ ಪ್ರಾಣಿಯು ಒಳ್ಳೆಯದನ್ನೆಲ್ಲವನ್ನೂ ನಮ್ಮಲ್ಲೇ ಇರಿಸಿ, ತೆರೆದ ಬಾಯಿಯನ್ನು ಹೊಂದಿದ ಪ್ರಾಣಿಯು ದುಷ್ಟತನವನ್ನೆಲ್ಲಾ ಹೊರಗೆ ಹಾಕುವುದನ್ನು ಬಿಂಬಿಸುತ್ತದೆ ಎಂಬುದು ಅಲ್ಲಿನ ಜನರಿಂದ ತಿಳಿಯಿತು.

ನಾನು ಇದ್ದ ಆ ದಿನಗಳಲ್ಲಿ ಭೇಟಿಯಾದ ಮತ್ತೊಂದು ಜಾಗವಾದ ಶೂರಿ ನಗರವು ಒಂದು ಪ್ರವಾಸಿ ತಾಣವಾಗಿದೆ. ಸುಮಾರು 450 ವರ್ಷಗಳ ಕಾಲ ರುಯುಕ್ಯೂ ಆಡಳಿತವಿದ್ದ ಸಮಯದಲ್ಲಿ ಸಾಂಸ್ಕೃತಿಕ, ರಾಜಕೀಯ ಕೇಂದ್ರವಾಗಿ ಬೆಳೆದು, ನಂತರ ಓಕಿನಾವಾ ಕದನದಲ್ಲೂ ಈ ನಗರ ಮತ್ತು ಇಲ್ಲಿರುವ ಶೂರಿ ಕೋಟೆ ಬಹುಮುಖ್ಯ ಪಾತ್ರ ವಹಿಸಿತ್ತು. ಜಪಾನಿಗರ ರಕ್ಷಣಾ ತಾಣವಾಗಿದ್ದ ಶೂರಿ ನಗರವು, ಕದನದ ಅಂತ್ಯದೊಂದಿಗೆ ಸಂಪೂರ್ಣವಾಗಿ ತನ್ನ ಶೂರಿ ಕೋಟೆಯ ಅಂತ್ಯವನ್ನೂ ಕಂಡಿತ್ತು. ಮತ್ತೆ 1992 ರಲ್ಲಿ ಈ ಕೋಟೆಯನ್ನು ಕಟ್ಟಲಾಗಿದ್ದು, ಇಂದು ಇದು ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ.

ತನ್ನ ನಾಡು ಪುಟ್ಟದಾದರೂ, ಜಗತ್ತಿಗೆ ಓಕಿನಾವಾ ನೀಡಿರುವ ಕೊಡುಗೆ ಅಪಾರವಾಗಿದೆ. ಜಗತ್ಪ್ರಸಿದ್ಧವಾದ, 2020ರ ಒಲಿಂಪಿಕ್ಸ್‌ ಗೆ ಹೊಸದಾಗಿ ಸೇರ್ಪಡೆಯಾದ ಕರಾಟೆಯ ಉಗಮವೂ ಓಕಿನಾವಾವೆ ಆಗಿದೆ. ರುಯುಕ್ಯೂ ರಾಜಾಡಳಿತದ ಕಾಲದಲ್ಲಿ, ಆಯುಧಗಳೆಲ್ಲವೂ ನಿಷೇಧಗೊಂಡು ಸ್ವರಕ್ಷಣೆಗೆ ಒತ್ತುಕೊಟ್ಟಸಂದರ್ಭದಲ್ಲಿ ಕರಾಟೆಯು ಜನರಿಂದ ಆರಂಭವಾಗಿ, ನಂತರ ಜಪಾನ್‌ಗೆ ಸೇರ್ಪಡೆಯಾದಾಗ ಅಲ್ಲಿಂದ ಬೆಳೆದು, ಇಂದು ಜಗತ್ತಿನ ಮೂಲೆ ಮೂಲೆಗೂ ತಲುಪಿ ಹಲವು ಮಾರ್ಪಾಡುಗಳಿಗೆ ಒಳಗಾಗಿದೆ.

ಕಾಗದದಲ್ಲಿ ಮಾಡುವ ಕಲೆಯಾದ ಓರಿಗಾಮಿ ಸಹ ಇಲ್ಲಿ ಪ್ರಸಿದ್ಧವಾಗಿದೆ. ಇದರಲ್ಲಿ ಒಂದು ಭಾಗವಾದ ಕೊಕ್ಕರೆಯನ್ನು ಮಾಡುವ ಕಲೆಯು ಓಕಿನಾವಿಗರ ಪ್ರೀತಿಪಾತ್ರವಾಗಿದೆ. ಅಲ್ಲಿನ ಜನರೇ ಹೇಳುವಂತೆ ಕೊಕ್ಕರೆಯನ್ನು ತುಂಬಾ ಪವಿತ್ರ ಭಾವದಲ್ಲಿ ಜನರು ನೋಡುವುದಾಗಿಯೂ, ಓರಿಗಾಮಿ ಕಾಗದ ಕಲೆಯಲ್ಲಿ 1000 ಕೊಕ್ಕರೆಗಳನ್ನು ಮಾಡಿ, ಅವುಗಳನ್ನೆಲ್ಲವನ್ನೂ ಪೋಣಿಸಿದರೆ ನಮ್ಮ ಮನಸ್ಸಿನಲ್ಲಿನ ಇಷ್ಟಾರ್ಥಗಳನ್ನು ಈಡೇರುವುದಾಗಿಯೂ ಅವರ ನಂಬಿಕೆಯಾಗಿದೆ.

ಅಲ್ಲಿ ಇದ್ದಷ್ಟುದಿನದಲ್ಲಿ ನನಗೆ ಪರಿಚಯವಾದ ಮತ್ತೆರೆಡು ಕಲೆಗಳೆಂದರೆ, ಬಿಂಗಾಟ ಮತ್ತು ಬುಕು ಬುಕು ಚಾ. ಬಿಂಗಾಟ ಎಂಬುದು ಓಕಿನಾವಾದ ಬಟ್ಟೆಗೆ ಬಣ್ಣ ಹಾಕುವ ಕಲೆಯಾಗಿದೆ. ಇದು 14-15ನೇ ಶತಮಾನದಲ್ಲಿ ರುಯುಕ್ಯೂ ರಾಜರ ಆಳ್ವಿಕೆಯ ಕಾಲದಲ್ಲಿ ಆರಂಭವಾಗಿದ್ದು. ಹಿಂದೆ ಸಾಂಪ್ರದಾಯಿಕ ಉಡುಗೆಯಾಗಿ ಕೇವಲ ಹೆಣ್ಣು ಮಕ್ಕಳು ತೊಡುತ್ತಿದ್ದ ಈ ಬಟ್ಟೆಯ ಬಣ್ಣ ಹಾಗೂ ವಿನ್ಯಾಸಗಳು ರಾಜರನ್ನು ಆಕರ್ಷಿಸಿ, ರಾಜಮನೆತನಕ್ಕೆ ಕಾಲಿಟ್ಟಿತು.

ಬಣ್ಣ ಬಣ್ಣದ ಬಟ್ಟೆಯಾಗಿ ಪ್ರಕೃತಿಯ ಅಂಶಗಳಾದ ಹೂವು, ಮೀನು, ಎಲೆಗಳ ರಚನೆಯಿಂದ ಕೂಡಿದೆ. ಆಗ್ನೇಯ ಏಷ್ಯಾದಲ್ಲಿ ಆರಂಭವಾಗಿ 14 ನೆ ಶತಮಾನದ ಹೊತ್ತಿಗೆ ವ್ಯಾಪಾರದ ಸಮಯದಲ್ಲಿ ಓಕಿನಾವಾಕ್ಕೆ ಕಾಲಿಟ್ಟಿರುವ ಸಾಧ್ಯತೆಯನ್ನು ಇತಿಹಾಸಜ್ಞರು ಉಲ್ಲೇಖಿಸುತ್ತಾರೆ. ಅಲ್ಲಿಂದ ಕಲೆಯು ಓಕಿನಾವಾಕ್ಕೆ ಕಾಲಿಟ್ಟರೂ ತನ್ನದೇ ಮಾರ್ಪಾಡುಗಳು ಒಳಪಟ್ಟಿದೆ.

ಓಕಿನಾವಾ ಕದನದ ಸಮಯದಲ್ಲಿ ಹಿನ್ನಡೆ ಅನುಭವಿಸಿ, ಬಿಂಗಾಟ ಕಲೆ ಹಾಗೂ ಅದರ ರೂವಾರಿಗಳನ್ನು ಓಕಿನಾವಾ ಕಳೆದುಕೊಂಡರೂ, ಕೆಲವೇ ವರ್ಷಗಳಲ್ಲಿ ಜಪಾನ್‌ನಲ್ಲಿ ಇದರ ಕುರುಹಾಗಿ ಇದ್ದ ಜಾಗಗಳು ಮತ್ತು ಕಲಾವಿದರ ನೆರವಿನಿಂದ ಮತ್ತೆ ಕಲೆಗೆ ಜೀವ ಬಂದಿತು. ಮತ್ತೊಂದು ಕಲೆಯಾದ ಬುಕುಬುಕು ಚಾ ಒಂದು ಐತಿಹಾಸಿಕ ಚಹಾವಾಗಿದೆ. ಲೋಟದ ಮೇಲೆ ನೊರೆಯಾಗಿ, ಆಕರ್ಷಕವಾಗಿ ಕಾಣುವ ಇದನ್ನು ಹುರಿದ ಕಂದು ಬಣ್ಣದ ಅಕ್ಕಿಯ ಪುಡಿಯಿಂದ ಮಾಡಲಾಗುತ್ತದೆ.

ನಂತರ ಇದನ್ನು ಓಕಿನಾವಾ ಗಡಸು ನೀರಿನಲ್ಲಿ ಕುದಿಸಿ, ಬಿದಿರಿನ ಕೋಲಿನಿಂದ ರಭಸವಾಗಿ ತಿರುಗಿಸುತ್ತಾ, ಅಲ್ಲಾಡಿಸುತ್ತಾ ಚಹಾ ತಯಾರಿಸುತ್ತಾರೆ. ಇದರ ಮೇಲೆ ಚಿಕ್ಕ ಚಿಕ್ಕ ನೀರಿನ ಗುಳ್ಳೆಗಳು ಮೂಡಿ, ಚಹಾದ ಮೋಡವನ್ನೇ ತಿಂದಂತಹ ಅನುಭವವಾಗುತ್ತದೆ. ನೋಡಲು ಸುಲಭ ಎಂದು ಎಣಿಸಿದರೂ, ಇದನ್ನು ತಯಾರಿಸಲು ನುರಿತ ಪರಿಣಿತರಿಗಷ್ಟೇ ಸಾಧ್ಯ. ನಾವು ಒಳಿತನ್ನು ಬಯಸುವವರಿಗೆ ತಯಾರಿಸಿ ಕೊಟ್ಟರೆ ಅವರು ಆರಂಭಿಸಿದ ಪಯಣವು ಸುಖಕರವಾಗಿ ಮತ್ತೆ ಅವರನ್ನು ಸಂಧಿಸುವ ಭರವಸೆಯ ಪ್ರತೀಕವಾಗಿದೆ.

ಮೊದಲು ನೊರೆಯನ್ನು ತಿಂದು ನಂತರ ಚಹಾವನ್ನು ಕುಡಿಯಬೇಕು. ಹಾಗೆ ಕುಡಿಯುವಾಗ ಯಾವುದೇ ಸದ್ದನ್ನು ಮಾಡದೆ ಕುಡಿಯಬೇಕು ಎಂದು ಓಕಿನಾವಿಗರು ಮೊದಲೇ ತಿಳಿಸಿರುತ್ತಾರೆ. ಬಿಂಗಾಟದ ಬಟ್ಟೆಯನ್ನೇ ಧರಿಸಿ ಈ ಚಹಾವನ್ನು ತಯಾರಿಸುವುದು ಮತ್ತೊಂದು ವಿಶೇಷ. ಬಟ್ಟೆಗೆ ಬಣ್ಣ ಹಚ್ಚುವ ಕಲೆ, ಮಡಿಕೆ ಮಾಡುವ ಕಲೆಗಳ ಜೊತೆಗೆ ಓಕಿನಾವಾ ಜನರ ವಿಶಿಷ್ಟಗಾಜು ತಯಾರಿಕೆ ಸಹ ಅವರ ನೈಪುಣ್ಯತೆಗೆ ಹಿಡಿದ ಕನ್ನಡಿಯಂತಿದೆ. ಹಲವಾರು ವರ್ಷಗಳಿಂದ ರುಯುಕ್ಯೂ ಜನರ ದಿನನಿತ್ಯದ ಭಾಗವಾಗಿ ಬೆಳೆದು, ಇಂದು ಜಗತ್ಪ್ರಸಿದ್ಧಿಯಾಗಿದೆ.

ಅವಾಮೋರಿ ಎಂಬುದು ಇಲ್ಲಿನ ಪ್ರಸಿದ್ಧವಾದ ಮದ್ಯ. ವಿಶೇಷವಾದ ಇಂಡಿಕಾ ಎಂಬ ಅಕ್ಕಿಯನ್ನು ಶುದ್ಧೀಕರಣ ಪ್ರಕ್ರಿಯೆಗೆ ಒಳಪಡಿಸಿ, ಅದರಿಂದ ತಯಾರಾಗುವ ಈ ಮದ್ಯವು 15 ನೆಯ ಶತಮಾನದಲ್ಲಿ ಥೈಲ್ಯಾಂಡ್‌ನಿಂದ ಬಂದು, ಇಂದು ಓಕಿನಾವಾದಲ್ಲಿ ಹಲವು ಮಾರ್ಪಾಡುಗಳನ್ನು ಕಂಡುಕೊಂಡಿದೆ.

ಓಕಿನಾವಾದಲ್ಲಿ ಹಗ್ಗ ಜಗ್ಗಾಟದ ದೊಡ್ಡ ಹಬ್ಬವೇ ನಡೆಯುತ್ತದೆ. 18ನೆ ಶತಮಾನದ ಸುಮಾರಿಗೆ ಎರಡು ಹಳ್ಳಿಗಳ ನಡುವಿನ ಸ್ಪರ್ಧೆಯಾಗಿ ಆರಂಭವಾದ ಇದನ್ನು, ಇಂದು 40 ಟನ್‌ ನಷ್ಟುತೂಗುವ ಹಗ್ಗವನ್ನು 15,000 ಜನರು ಎಳೆದಾಡುತ್ತಾ ಸಂಭ್ರಮಿಸುತ್ತಾರೆ. ಹಲವು ಹಗ್ಗಗಳನ್ನು ಸೇರಿಸಿ ದೊಡ್ಡ ಹಗ್ಗವನ್ನಾಗಿ ಮಾಡಿ, ಕೊನೆಗೆ ಆಟ ಮುಗಿದಾದ ಮೇಲೆ ತಮ್ಮ ತಮ್ಮ ಮನೆಗಳಿಗೆ ಒಂದೊಂದು ಹಗ್ಗವನ್ನು ಅದರಿಂದ ತೆಗೆದುಕೊಂಡು ಹೋಗುವುದು ಶುಭದ ಸಂಕೇತವೆಂದೇ ಭಾವಿಸಿದ್ದಾರೆ. ಹೀಗೆ ಓಕಿನಾವಾ ತನ್ನದೇ ಪುಟ್ಟಪ್ರಪಂಚದಲ್ಲಿ ತನ್ನ ನೆಲದ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ಅವರದೇ ನಂಬಿಕೆಗಳಿಗೆ ಬಹಳಷ್ಟುಜನರು ಬದ್ಧರಾಗಿದ್ದಾರೆಂದು ಅಲ್ಲಿನ ಜನರ ಒಡನಾಟದಿಂದ ಖಾತ್ರಿಯಾಯಿತು.

ಪುಟ್ಟಭೂಪ್ರದೇಶವಾದ ಇದು ತನ್ನದೇ ಆದ ಜನಪದ ಶ್ರೀಮಂತಿಕೆಯಿಂದಲೂ ಕೂಡಿದೆ. ಜೂನ್‌ನಿಂದ ಸೆಪ್ಟೆಂಬರ್‌ ತಿಂಗಳ ತನಕ ಇಲ್ಲಿ ಈಸ ಡ್ರಮ್‌ ನೃತ್ಯ ನಡೆಯುತ್ತದೆ. ಟೈಕೊ ಎಂದು ಕರೆಯುವ ಡ್ರಮ್‌ಅನ್ನು ಹಿಡಿದು ಯುವಕರು ನೃತ್ಯ ಮಾಡುತ್ತಾರೆ. ಸಾವಿನ ನಂತರದ ಪಯಣಕ್ಕೆ ನಮ್ಮ ಪೂರ್ವಜರನ್ನು ಕಳಿಸಿಕೊಡುವ ಬೊನ್‌ ಹಬ್ಬವೆಂದೇ ಖ್ಯಾತಿಯಾಗಿರುವ ಈ ನೃತ್ಯವನ್ನು ಕಣ್ತುಂಬಿಕ್ಕೊಳ್ಳಲು ಲಕ್ಷಾಂತರ ಜನ ಆಗಮಿಸುತ್ತಾರೆ.

ರುಯುಕ್ಯೂ ಆಳುತ್ತಿದ್ದ ಸಮಯದಲ್ಲಿ ಆರಂಭವಾದ ‘ಯೊತ್ಸುತಕೆ’ ಎಂಬ ನೃತ್ಯವು ಅಂದಿನ ಶಾಸ್ತ್ರೀಯ ನೃತ್ಯ ಆಗಿತ್ತು. ಕೆಂಪು ವಸ್ತ್ರ ಹಾಗೂ ಹನಗಾಸಾ ಎಂದು ಕರೆಯಲ್ಪಡುವ ಹೂವಿನ ಟೋಪಿಯೊಂದಿಗೆ ಯೊತ್ಸುತಕೆ ವಾದ್ಯವನ್ನು ನೃತ್ಯ ಮಾಡುವಾಗ ಹಿಡಿದು ಮಾಡಲಾಗುತ್ತದೆ. ಮತ್ತೊಂದು ವಿಶಿಷ್ಟವಾದ, ಓಕಿನಾವಾದ ಪ್ರಮುಖ ಆಕರ್ಷಣೆಯು ಸಿಂಹ ನೃತ್ಯ. ಬೃಹತ್‌ ಸಿಂಹದ ವೇಷವನ್ನು ಧರಿಸಿ ಮಾಡುವ ಈ ನೃತ್ಯದಲ್ಲಿ ಸಿಂಹದ ಬಾಯಿಯೊಳಗೆ ಹೋಗಿ, ಅದರಿಂದ ಕಚ್ಚಿಸಿಕೊಂಡರೆ

ಯಾವುದೇ ಖಾಯಿಲೆಯು ಸುಳಿಯುವುದಿಲ್ಲವೆಂಬ ನಂಬಿಕೆ ಇದೆ.

ಇದ್ದ ಅಷ್ಟೂದಿನಗಳಲ್ಲೂ ನನ್ನ ಕಣ್ಣು ವಿವಿಧ ಜಾತಿಯ ಪಕ್ಷಿಗಳನ್ನು ಅರಸುತ್ತಿತ್ತು. ಪೆಸಿಫಿಕ್‌ ತೀರದ ಪಕ್ಕದಲ್ಲೇ ಉಳಿದಿದ್ದರೂ ಒಂದೆರೆಡು ಕಡಲ ಹಕ್ಕಿ, ರಾಕ್‌ ತೃಷ್‌ ಹಕ್ಕಿಗಳೊಂದಷ್ಟುಮಾತ್ರ ಕಾಣಲು ಸಿಕ್ಕವು. ಇದ್ದ ಕೆಲ ದಿನಗಳಲ್ಲಿ ಕಾಣಲು ಸಿಗದಿದ್ದರೂ ಪೆಸಿಫಿಕ್‌ ಸಾಗರದ ಭಾಗವಾಗಿರುವ ಇಲ್ಲಿ ವಿಶೇಷ ಜೀವವೈವಿಧ್ಯತೆಯೇ ಮನೆ ಮಾಡಿದೆ.

ಜನವರಿಯಿಂದ ಮಾಚ್‌ರ್‍ ವರೆಗೆ ಓಕಿನಾವಾದ ಸುತ್ತಲಿನ ಸಾಗರದಲ್ಲಿ ಹಂಪ್ಬ್ಯಾಕ್‌ ತಿಮಿಂಗಿಲಗಳು ಕಾಣಸಿಗುತ್ತದೆ. ಅಲಾಸ್ಕಾದ ಉತ್ತರ ಪೆಸಿಫಿಕ್‌ ಸಾಗರದಲ್ಲಿ ಬೇಸಿಗೆ ಕಳೆದು, 9000 ಕಿಲೋಮೀಟರ್‌ಗಳಷ್ಟುಪ್ರಯಾಣ ಮಾಡಿ ದಕ್ಷಿಣ ಪೆಸಿಫಿಕ್‌ಗೆ ಈ ತಿಮಿಂಗಿಲಗಳು ವಲಸೆ ಬರುತ್ತವೆ. ಹೀಗೆ ಬಂದು ಮರಿ ಮಾಡಿ, ತಮ್ಮ ಪಯಣವನ್ನು ಮುಂದುವರಿಸುವ ತನಕ ದ್ವೀಪದ ಬಳಿ ಕಾಣಸಿಗುತ್ತವೆ.

ಹವಳದ ದಿಬ್ಬಗಳೂ ಓಕಿನಾವಾದ ದಕ್ಷಿಣ ಭಾಗದಲ್ಲಿ ರೂಪುಗೊಂಡಿವೆ. ಇವು ಇಂಗಾಲವನ್ನು ಹೀರಿ, ಆಮ್ಲಜನಕವನ್ನು ನೀಡಿ, ತನ್ನನ್ನು ಆಶ್ರಯಿಸಿದ ಬರೀ ಜಲಚರಗಳಿಗಷ್ಟೇ ಅಲ್ಲದೆ ಪ್ರಕೃತಿಯ ಸಮತೋಲನದಲ್ಲಿ ತನ್ನದೇ ಆದ ಮಹತ್ತರ ಪಾತ್ರವನ್ನು ವಹಿಸಿದೆ. ತನ್ನ ಅಂಗಾಶದ ಮೇಲೆ ಬೆಳೆಯುವ ಸೂಕ್ಷ್ಮಾಣು ಅಲ್ಗೆಯ ಮೇಲೆ ಅವಲಂಬಿತವಾಗಿ, ಅದರಿಂದಲೇ ತನಗೆ ಬೇಕಾದ ಪೌಷ್ಟಿಕತೆಯನ್ನು ಪಡೆದುಕೊಳ್ಳುತ್ತದೆ.

ಜಗತ್ತಿನ ಸುಮಾರು 800 ವಿಧದ ಹವಳದ ದಿಬ್ಬಗಳಲ್ಲಿ ಇನ್ನೂರಕ್ಕಿಂತ ಹೆಚ್ಚು ದಿಬ್ಬಗಳು ಓಕಿನಾವಾ ದ್ವೀಪ ಸಮೂಹದಲ್ಲೇ ಕಾಣಸಿಗುತ್ತದೆ. ಆದರೆ ಇಂದು ಜಾಗತಿಕ ತಾಪಮಾನ ಏರಿಕೆಯಿಂದ, ಸಾಗರದ ಉಷ್ಣಾಂಶವೂ ಏರಿಕೆಯಾಗಿ ತನಗೆ ರಕ್ಷಣೆ ನೀಡುತ್ತಿದ್ದ ಕವಚನ್ನೇ ಕಳೆದುಕೊಂಡು ಈ ಹವಳದ ದಿಬ್ಬಗಳು ಬಿಳುಚುಗೊಳ್ಳುತ್ತಿದೆ. ಉಷ್ಣಾಂಶವು ಕಡಿಮೆ ಆಗದೇ ಹೀಗೇ ಮುಂದುವರಿದರೆ ಆರು ತಿಂಗಳುಗಳೊಳಗೆ ಈ ದಿಬ್ಬಗಳು ಸಾವನ್ನಪ್ಪುತ್ತದೆ. ಇದನ್ನರಸಿ ಬದುಕುವ ಚಿಕ್ಕ ಪುಟ್ಟಜಲಚರಗಳೆಲ್ಲವೂ ಮರೆಯಾಗುತ್ತವೆ.

ಈಗಾಗಲೇ ಅರ್ಧದಷ್ಟುಹವಳದ ದಿಬ್ಬಗಳನ್ನು ಕಳೆದುಕೊಂಡು, ಇನ್ನುಳಿದ ಹವಳದ ದಿಬ್ಬಗಳೂ ಅನಾರೋಗ್ಯಕರವಾಗಿರುವುದು ಮನುಷ್ಯನ ಮಿತಿಮೀರಿದ ನಡತೆಗೆ ಹಿಡಿದ ಕೈಗನ್ನಡಿಯಾಗಿದೆ. ಕಲುಷಿತಗೊಳ್ಳುತ್ತಿರುವ ಸಾಗರ, ಸಮುದ್ರಕ್ಕಿಳಿಯುವಾಗ ಮೈಗೆ ಹಚ್ಚುವ ಸನ್‌ಸ್ಕ್ರೀನ್‌ ಸಹ ನಶಿಸುತ್ತಿರುವ ಹವಳದ ದಿಬ್ಬಗಳಿಗೆ ಪ್ರಮುಖ ಕಾರಣವೆನ್ನಲಾಗಿದೆ. ಯುಎನ್‌ ವರದಿಯೊಂದರ ಪ್ರಕಾರ 2100ರ ವೇಳೆಗೆ ಬದಲಾಗುತ್ತಿರುವ ಜಾಗತಿಕ ಬದಲಾವಣೆಗಳಿಂದ ಹವಳದ ದಿಬ್ಬಗಳು ಕಣ್ಮರೆಯಾಗುವ ಸಂಭವವೇ ಹೆಚ್ಚಿದೆ.

ಒಟ್ಟಿನಲ್ಲಿ ಓಕಿನಾವಾ ಎಂಬ ದ್ವೀಪ ತನ್ನೆಲ್ಲಾ ವಿಶೇಷತೆಗಳಿಂದ ಭಿನ್ನವಾಗಿ ಕಾಣುವುದಂತೂ ಹೌದು. ಸದಾ ಖುಷಿಯಾಗಿ ತೋರುವ ಓಕಿನಾವಿಗರೂ ಹೋದ ಪ್ರವಾಸಿಗನಿಗೆ ಅಲ್ಲಿಗೆ ಹೋಗಿದ್ದಕ್ಕೂ ಸಾರ್ಥಕವಾಯಿತು ಎಂಬ ಭಾವ ತರಿಸುತ್ತಾರೆ. ಅಲ್ಲಿಯ ಜನ ಇಂಗ್ಲಿಷ್‌ ಬರದಿದ್ದರೂ ಇಂಗ್ಲಿಷ್‌ನಲ್ಲಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಮೊಬೈಲ್‌ನಲ್ಲಿ ಹುಡುಕಿ ತಮ್ಮ ಭಾಷೆಯಲ್ಲಿ ಅರ್ಥೈಸಿಕೊಂಡು ಕೊಡುವ ಉತ್ತರವೇ ಒಂದು ತರಹದ ಮಜಾ ನೀಡುತ್ತದೆ.

ಹೀಗೆ ಒಂದು ದಿನ ಭಾರತಕ್ಕೆ ವಾಪಸಾಗುವ ಮೊದಲು ಚಾಕೋಲೇಟ್ಸ್‌ ತರೋಣ ಎಂದು ಯೋಚಿಸಿ, ಅಂಗಡಿಗೆ ಹೋದರೆ, ನನ್ನ ದುರಾದೃಷ್ಟವೇನೋ ಎಂಬಂತೆ ಎಲ್ಲಾ ಪದಾರ್ಥಗಳೂ ಅವರದ್ದೇ ಭಾಷೆಯಲ್ಲಿದ್ದು, ಅದಕ್ಕೆ ಏನೇನನ್ನು ಹಾಕಿದ್ದಾರೆ ಎಂದು ನೋಡುವುದೇ ಒಂದು ಸಾಹಸದ ಕೆಲಸವಾಗಿತ್ತು. ಚೀನಿಯರಷ್ಟಲ್ಲದಿದ್ದರೂ ಬಹಳಷ್ಟುಮಾಂಸಾಹಾರ ಬಳಕೆ ಅವರ ದಿನನಿತ್ಯದ ಆಹಾರ ಕ್ರಮವಾಗಿದ್ದರಿಂದ ಪರಿತಪಿಸಲೇಬೇಕಾಯಿತು.

ಇನ್ನು ಅಂಗಡಿಯಲ್ಲಿ ಹೆಂಗಸು ನಗುನಗುತ್ತಾ ಅದರಲ್ಲಿರುವುದನ್ನು ತನ್ನದೇ ಭಾಷೆಯಲ್ಲಿ ಮತ್ತೆ ಓದಿ ಹೇಳಿ, ಇಂಗ್ಲಿಷ್‌ ನಲ್ಲಿ ಗೊತ್ತಿಲ್ಲವೆಂದು ತಲೆಯಾಡಿಸುತ್ತಿದ್ದಾಗ ಅದೇ ನಗುವನ್ನು ಅವಳಿಗೆ ವಾಪಸ್ಸಿತ್ತು ಅಂಗಡಿಯಿಂದ ಹೊರ ನಡೆಯಬೇಕಾಯಿತು. ಕೊನೆಗೂ ಒಬ್ಬ ಇಂಗ್ಲಿಷ್‌ ಬರುವ ಹೆಂಗಸು ಸಿಕ್ಕು, ಅದನ್ನು ಮೊಬೈಲ್‌ ನಲ್ಲಿ ನೋಡಿ, ನಮಗೆ ತೋರಿಸಿದಾಗ ನಮಗೆ ಬೇಕಾದ ಒಂದೆರಡು ಚಾಕಲೇಟ್‌ಗಳು ಸಿಕ್ಕವು.

ಈ ನಾಡಿನಲ್ಲಿ ಅಪರಾಧದ ಪ್ರಕರಣಗಳೂ ಎಷ್ಟುಕಡಿಮೆ ಎಂದರೆ, ಇಲ್ಲಿನ ಪೊಲೀಸರಿಗೆ ದಿನದಲ್ಲಿ ಕೆಲಸವೇ ಇರುವುದಿಲ್ಲ ಎಂದು ಅಲ್ಲಿಯ ಜನರು ಹೇಳಿದಾಗ ನಮ್ಮಲ್ಲಿಯ ಪೊಲೀಸರು ಒಮ್ಮೆ ನೆನಪಿಗೆ ಬಂದದ್ದಂತೂ ಹೌದು. ಇಷ್ಟೆಲ್ಲ ವಿಭಿನ್ನತೆಗಳಿಂದ ಓಕಿನಾವಾ ನನ್ನ ಮನಸ್ಸಿಗೆ ಹತ್ತಿರವಾದರೂ, ಇಲ್ಲಿನ ಯಥೇಚ್ಛ ಪ್ಲಾಸ್ಟಿಕ್‌ ಬಳಕೆಯು ಓಕಿನಾವಾ ಬಗೆಗಿನ ಪ್ರೀತಿಯನ್ನು ಸ್ವಲ್ಪ ಕುಂಠಿತಗೊಳಿಸಿತ್ತು. ಅಲ್ಲಿನ ಜನರನ್ನು ಭೇಟಿಯಾದಾಗ ಎಲ್ಲರೂ ಪ್ಲಾಸ್ಟಿಕ್‌ ಜಾಲದಲ್ಲಿ ಸಿಲುಕಿದ್ದು, ಮುಂದಿನ ಜೀವನದ ಪರಿಕಲ್ಪನೆಯೂ ಇಲ್ಲದಂತೆ ಬದುಕು ಸಾಗಿಸುತ್ತಿದ್ದಂತೆ ತೋರಿತು. ಈಗಾಗಲೇ ಜಾಗತಿಕ ತಾಪಮಾನ ಏರಿಕೆಯ ಹಲವು ಪರಿಣಾಮಗಳನ್ನು ಕಾಣುತ್ತಿರುವ ದ್ವೀಪ ಇನ್ನಾದರೂ ಎಚ್ಚೆತ್ತುಕೊಂಡು ಹೆಜ್ಜೆ ಇಟ್ಟರೆ ತನ್ನಲ್ಲಿನ ಜೀವವೈವಿಧ್ಯತೆಯನ್ನು ಮುಂದಿನ ಪೀಳಿಗೆಯೂ ನೋಡುವಂತೆ ಮಾಡಲು ಸಾಧ್ಯವಾಗುತ್ತದೆ.

- ಸ್ಮಿತಾ ರಾವ್ ಶಿವಮೊಗ್ಗ 

Follow Us:
Download App:
  • android
  • ios