ಉಗ್ರರ ಜತೆ ಸಿಕ್ಕಿಬಿದ್ದ ಡಿವೈಎಸ್ಪಿ! : ಕಾರಿನಲ್ಲಿ ತೆರಳುತ್ತಿದ್ದಾಗ ಪೊಲೀಸ್ ಬಲೆಗೆ
ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿಯೊಬ್ಬರು ಇಬ್ಬರು ಉಗ್ರಗಾಮಿಗಳ ಜತೆ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿರುವ ಅತ್ಯಂತ ಅಪರೂಪದ ಹಾಗೂ ತೀವ್ರ ಕಳವಳಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಶ್ರೀನಗರ [ಜ.13]: ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಬಗ್ಗುಬಡಿಯಬೇಕಾದ ಹೊಣೆ ಹೊತ್ತಿರುವ, ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿಯೊಬ್ಬರು ಇಬ್ಬರು ಉಗ್ರಗಾಮಿಗಳ ಜತೆ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿರುವ ಅತ್ಯಂತ ಅಪರೂಪದ ಹಾಗೂ ತೀವ್ರ ಕಳವಳಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ದರ್ಜೆಯ ಆ ಅಧಿಕಾರಿಯನ್ನು ಉಗ್ರರ ಸಮೇತ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಗುಪ್ತಚರ ದಳ, ರಾ, ಸಿಐಡಿ, ಪೊಲೀಸ್, ಭದ್ರತಾ ಪಡೆಗಳು ಕೂಡ ವಿಚಾರಣೆಯಲ್ಲಿ ಭಾಗವಹಿಸಿವೆ.
ದವೀಂದರ್ ಸಿಂಗ್ ಎಂಬ ಡಿವೈಎಸ್ಪಿಯೇ ಉಗ್ರರ ಜತೆ ಪ್ರಯಾಣಿಸುವಾಗ ಸಿಕ್ಕಿಬಿದ್ದಿರುವ ಅಧಿಕಾರಿ. ಶ್ರೀನಗರ ವಿಮಾನ ನಿಲ್ದಾಣದಲ್ಲಿನ ಅಪಹರಣ ನಿಗ್ರಹ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ, ಕಳೆದ ವಾರ ಕಾಶ್ಮೀರಕ್ಕೆ ವಿದೇಶಿ ರಾಜತಾಂತ್ರಿಕರು ಭೇಟಿ ನೀಡಿದಾಗ ಅವರ ಜತೆಗೇ ಇದ್ದ ಎಂಬ ಆತಂಕಕಾರಿ ಮಾಹಿತಿಯೂ ಬೆಳಕಿಗೆ ಬಂದಿದೆ. ಈ ಅಧಿಕಾರಿ ಬಗ್ಗೆ ನಮಗೆ ಶನಿವಾರದವರೆಗೂ ಸಣ್ಣ ಸಂದೇಹವೂ ಇರಲಿಲ್ಲ ಎಂದು ಕಾಶ್ಮೀರದ ಐಜಿಪಿ ವಿಜಯ ಕುಮಾರ್ ಅವರು ಭಾನುವಾರ ತಿಳಿಸಿದ್ದಾರೆ.
ಉಗ್ರರಿಗೆ ಆಶ್ರಯ: ಚಾಮರಾಜನಗರದಲ್ಲಿ ಇಬ್ಬರು ಮೌಲ್ವಿಗಳ ಬಂಧನ...
ಮಾಜಿ ಪೊಲೀಸ್ ಸಿಬ್ಬಂದಿ ಕೂಡ ಆಗಿರುವ ಹಾಲಿ ಉಗ್ರ ಸೇರಿ ಇಬ್ಬರು ಭಯೋತ್ಪಾದಕರ ಜತೆ ದವೀಂದರ್ ಸಿಂಗ್ ಸಿಕ್ಕಿಬೀಳುತ್ತಿದ್ದಂತೆ, ಕಾಶ್ಮೀರದ ಶೋಪಿಯಾನ್ನಲ್ಲಿ ಅಡಗಿದ್ದ ಹಲವು ಉಗ್ರರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಅಧಿಕಾರಿ ಉಗ್ರರನ್ನು ಕಾಶ್ಮೀರದಿಂದ ಜಮ್ಮುವಿಗೆ ಕರೆದೊಯ್ದು ಅವರ ಪರಾರಿಗೆ ಸಹಾಯ ಮಾಡಲು ಯತ್ನಿಸಿದ್ದಿರಬಹುದು ಎಂಬ ಅನುಮಾನ ವ್ಯಕ್ತವಾಗಿವೆ. ಆದರೆ ತಾನು ಉಗ್ರರನ್ನು ಶರಣಾಗತಿ ಮಾಡಿಸಲು ಕರೆ ತಂದಿದ್ದೆ ಎಂದು ಡಿವೈಎಸ್ಪಿ ಹೇಳಿದ್ದಾರೆ ಎನ್ನಲಾಗಿದೆ. ಗಣರಾಜ್ಯೋತ್ಸವ ದಿನ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಘೋರ ದಾಳಿಗೆ ಏನಾದರೂ ಯತ್ನ ನಡೆದಿತ್ತಾ ಎಂಬ ಶಂಕೆಯೂ ವ್ಯಕ್ತವಾಗಿದೆ. ಬಂಧನದ ಬೆನ್ನಲ್ಲೇ ಡಿವೈಎಸ್ಪಿ ಮನೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಸಿಕ್ಕಿಬಿದ್ದದ್ದು ಹೇಗೆ?:
ನವೀದ್ ಅಹಮದ್ ಶಾ ಅಲಿಯಾಸ್ ನವೀದ್ ಬಾಬು ಎಂಬಾತ ಪೊಲೀಸ್ ಪೇದೆಯಾಗಿದ್ದ. 2017ರಲ್ಲಿ ಕರ್ತವ್ಯ ತ್ಯಜಿಸಿದ ಆತ 4 ಬಂದೂಕುಗಳನ್ನು ಕದ್ದು ಹಿಜ್ಬುಲ್ ಮುಜಾಹಿದಿನ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ. ಪೊಲೀಸ್ ಸಿಬ್ಬಂದಿ, ನಾಗರಿಕರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹಲವು ಪೊಲೀಸ್ ಪ್ರಕರಣಗಳಲ್ಲಿ ಬೇಕಾಗಿದ್ದ.
ನವೀದ್ ಹಾಗೂ ಮತ್ತೊಬ್ಬ ಉಗ್ರಗಾಮಿ ಶನಿವಾರ ಜಮ್ಮುವಿನ ಕಡೆಗೆ ಕಾರಿನಲ್ಲಿ ತೆರಳುತ್ತಿರುವ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು. ನಾಕಾ ಬಂದಿ ಹಾಕಿ ಐ10 ಕಾರೊಂದನ್ನು ತಪಾಸಣೆ ಮಾಡಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು. ಅದರಲ್ಲಿ ಉಗ್ರರ ಜತೆಗೆ ಹಾಲಿ ಡಿವೈಎಸ್ಪಿ ದವಿಂದರ್ ಸಿಂಗ್ ಕೂಡ ಇದ್ದರು. ಮೂವರನ್ನೂ ಪೊಲೀಸರು ಬಂಧಿಸಿದರು. ಇದೇ ಕಾರಿನಲ್ಲಿ ಉಗ್ರ ಪರ ಕಾರ್ಯನಿರ್ವಹಿಸುತ್ತಿರುವ ವಕೀಲ ಕೂಡ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಗ್ರರ ಜತೆ ಬಂಧನಕ್ಕೊಳಗಾಗಿರುವ ಡಿವೈಎಸ್ಪಿ ದವಿಂದರ್ ಸಿಂಗ್ ಅವರು 1990ರಿಂದಲೂ ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಇದೀಗ ಅವರೇ ಉಗ್ರರ ಜತೆ ಸಿಕ್ಕಿಬಿದ್ದಿರುವುದು ಪೊಲೀಸರಿಗೂ ಅಚ್ಚರಿಗೆ ಕಾರಣವಾಗಿದೆ.