Asianet Suvarna News Asianet Suvarna News

ಇತಿಹಾಸ ಸೃಷ್ಟಿಸಿ ತೆರೆಯ ಮರೆಗೆ ಸಿಜೆಐ ಗೊಗೋಯ್

ಸುಪ್ರೀಂಕೋರ್ಟ್‌ ಅಸ್ತಿತ್ವಕ್ಕೆ ಬರುವುದಕ್ಕೂ ಮೊದಲೇ ಅಸ್ತಿತ್ವದಲ್ಲಿದ್ದ ಅಯೋಧ್ಯೆ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿದ ಖ್ಯಾತಿ ಸಿಜೆಐ ರಂಜನ್ ಗೋಗೋಯ್ ಅವರದ್ದು. ನವೆಂಬರ್ 17 ಕ್ಕೆ ನಿವೃತ್ತಿಯಾಗಿದ್ದು ಅವರ ವ್ಯಕ್ತಿತ್ವದ ಕಿರು ಪರಿಚಯ ಇಲ್ಲಿದೆ. 

CJI Ranjan gogoi to retire on November 17 unknown facts about him
Author
Bengaluru, First Published Nov 17, 2019, 3:11 PM IST

ಗೊಗೋಯ್‌ ಅವರದು. ಅಸ್ಸಾಂನ ಮುಖ್ಯಮಂತ್ರಿಯ ಮಗನಾದ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದೇ ಒಂದು ಕುತೂಹಲದ ಕತೆ. ಸಿಜೆಐ ಆದಾಗ ಈಶಾನ್ಯದಿಂದ ಬಂದ ಮೊದಲ ಸಿಜೆಐ ಎಂಬ ಇತಿಹಾಸ ಸೃಷ್ಟಿಸಿದ್ದ ಅವರು ಈಗ ನಿವೃತ್ತಿಯಾಗುವಾಗಲೂ ಇತಿಹಾಸ ಸೃಷ್ಟಿಸಿಯೇ ತೆರಳುತ್ತಿದ್ದಾರೆ.

ಸುಪ್ರೀಂಕೋರ್ಟ್‌ ಅಸ್ತಿತ್ವಕ್ಕೆ ಬರುವುದಕ್ಕೂ ಮೊದಲೇ (1950) ಅಸ್ತಿತ್ವದಲ್ಲಿದ್ದ ಅಯೋಧ್ಯೆ ವ್ಯಾಜ್ಯದ ಬಗ್ಗೆ ದೇಶದ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಕೇವಲ ಅಯೋಧ್ಯೆ ಮಾತ್ರವಲ್ಲದೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಕಚೇರಿಯನ್ನು ಆರ್‌ಟಿಐ ಅಡಿ ತರುವುದು, ರಾಜಕೀಯವಾಗಿ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದ ರಫೇಲ್‌ ಯುದ್ಧ ವಿಮಾನ ಖರೀದಿ ಕುರಿತ ಆರೋಪ ಸೇರಿದಂತೆ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ಮಹತ್ವದ ವಿಚಾರಗಳನ್ನು ಸುಪ್ರೀಂಕೋರ್ಟ್‌ ಫಟಾಫಟ್‌ ವಿಚಾರಣೆ ನಡೆಸಿ ಅವಕ್ಕೊಂದು ತಾರ್ಕಿಕ ಅಂತ್ಯ ನೀಡಿದೆ. ಈ ಎಲ್ಲಾ ಒಮ್ಮತದ ತೀರ್ಪಿನ ಹಿಂದೆ ಇದ್ದುದು ದೇಶದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌.

ಇಂದು ರಂಜನ್ ಗೊಗೋಯ್ ನಿವೃತ್ತಿ: ಬಿಟ್ಟು ಹೊರಟರು ರಂಜನೀಯ ತೀರ್ಪುಗಳ ಬುತ್ತಿ!

ಧೈರ್ಯ ಮತ್ತು ಪಾರದರ್ಶಕತೆಗೆ ಹೆಸರಾಗಿರುವ ಗೊಗೋಯ್‌ ಅವಿವೇಕತನವನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವವರಲ್ಲ. ಇದೇ ಕಾರಣದಿಂದಾಗಿ ತಮ್ಮ ತವರು ರಾಜ್ಯದ ಎನ್‌ಆರ್‌ಸಿ (ರಾಷ್ಟ್ರೀಯ ನಾಗರಿಕ ನೋಂದಣಿ) ಕುರಿತ ಮೇಲ್ವಿಚಾರಣೆಯನ್ನು ಸಮಯದ ಚೌಕಟ್ಟಿನೊಳಗೆ ಮುಗಿಸಿ ದಶಕಗಳ ಕಾಲದ ತಲೆನೋವಾಗಿದ್ದ ಅಕ್ರಮ ಬಾಗ್ಲಾ ವಲಸಿಗರ ಸಮಸ್ಯೆಗೆ ಶಾಂತಿಯುತ ಅಂತ್ಯ ಕಲ್ಪಿಸಿಕೊಟ್ಟಿದ್ದಾರೆ.

ಇವರ ತಂದೆ ಅಸ್ಸಾಂ ಸಿಎಂ ಆಗಿದ್ರು

ರಂಜನ್‌ ಗೊಗೋಯ್‌ ಹುಟ್ಟಿದ್ದು ಈಶಾನ್ಯ ಭಾರತದ ಅಸ್ಸಾಂ ರಾಜ್ಯದ ದಿಬ್ರುಘರ್‌ನ ಶ್ರೀಮಂತ ಕುಟುಂಬದಲ್ಲಿ. ಇವರ ತಂದೆ ಕೇಶವ್‌ ಚಂದ್ರ ಗೊಗೋಯ್‌ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಾಜಕಾರಣಿ ಮತ್ತು 1982ರಲ್ಲಿ ಎರಡು ತಿಂಗಳ ಕಾಲ ಅಸ್ಸಾಂ ಮುಖ್ಯಮಂತ್ರಿಯಾಗಿಯೂ ಕಾರ‍್ಯ ನಿರ್ವಹಿಸಿದ್ದಾರೆ. ಅಸ್ಸಾಂನ ದಿಬ್ರುಘರ್‌ನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಗೊಗೋಯ್‌ ಪದವಿ ಪಡೆಯಲು ದೆಹಲಿಗೆ ಬಂದರು. ದೆಹಲಿ ಯುನಿವರ್ಸಿಟಿಯಲ್ಲಿ ಕಾನೂನು ಪದವಿ ಪೂರೈಸಿದರು.

Fact Check: ಹಿಂದೂ ರಾಷ್ಟ್ರಪರ ತೀರ್ಪು ನೀಡಿದ ಜಡ್ಜ್‌ಗಳಿಗೆ ಧನ್ಯವಾದ ಅರ್ಪಿಸಿದ ಮೋದಿ!

ಮಗ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆಂಬುದು ಗೊಗೋಯ್‌ ತಂದೆಯ ಕನಸು. ಗೊಗೋಯ್‌ ಕೂಡ ಅದೇ ಹಾದಿಯಲ್ಲಿದ್ದರು. ಆದರೆ ಒಂದು ದಿನ ತಾನೊಬ್ಬ ವಕೀಲನಾಗಬೇಕೆಂಬ ಹೆಬ್ಬಯಕೆಯನ್ನು ನಯವಾಗಿ ತಂದೆ ಎದುರು ಬಿಚ್ಚಿಟ್ಟರು. ಅದೇ ಕನಸಿನ ಬೆನ್ನತ್ತಿ, ದೇಶದ ನ್ಯಾಯಾಂಗದಲ್ಲಿ ಅತ್ಯುನ್ನತ ಹುದ್ದೆ ಏರಿ, ಸುಪ್ರೀಂಕೋರ್ಟ್‌ನಲ್ಲಿ ಐತಿಹಾಸಿಕ ದಾಖಲೆಗಳನ್ನು ಬರೆದು ಈಗ ನಿವೃತ್ತರಾಗುತ್ತಿದ್ದಾರೆ.

ಈಶಾನ್ಯ ರಾಜ್ಯದ ಪ್ರಥಮ ಸಿಜೆಐ

ರಂಜನ್‌ ಗೊಗೋಯ್‌ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ್ದು ಅಸ್ಸಾಂನ ರಾಜಧಾನಿ ಗುವಾಹಟಿಯಲ್ಲಿ. ಅಲ್ಲಿಂದ ಒಂದೊಂದೇ ಮೆಟ್ಟಿಲು ಏರುತ್ತಾ ಫೆ.28, 2001ರಂದು ಗುವಾಹಟಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಂಡರು. ನಂತರ ವರ್ಗಾವಣೆ ಪಡೆದು ಪಂಜಾಬ್‌, ಹರಾರ‍ಯಣ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. 2012ರ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್‌ಗೆ ಬಡ್ತಿ ಪಡೆದರು.

ಅ.2, 2018 ರಂದು ಸರ್ವೋಚ್ಚ ನ್ಯಾಯಾಲಯದ 46ನೇ ಸಿಜೆಐ ಆಗಿ ಅಧಿಕಾರ ವಹಿಸಿಕೊಂಡರು. ಈಶಾನ್ಯ ಭಾರತದಿಂದ ಈ ಸ್ಥಾನಕ್ಕೆ ಆಯ್ಕೆಯಾದ ಪ್ರಥಮ ವ್ಯಕ್ತಿ ಇವರು. 13 ತಿಂಗಳು ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿ, ಅ.17ಕ್ಕೆ ಇವರಿಗೆ 65 ವರ್ಷ ಪೂರ್ಣಗೊಳ್ಳುತ್ತಿದ್ದು, ಅಧಿಕೃತವಾಗಿ ನಿವೃತ್ತಿ ಪಡೆಯಲಿದ್ದಾರೆ.

ಹೈಕೋರ್ಟ್‌ಗೆ ಸೈಕಲ್‌ನಲ್ಲಿ ಹೋಗ್ತಿದ್ರು!

ಗೊಗೋಯ್‌ ಅಸ್ಸಾಂನ ರಾಯಲ್‌ ಕುಟುಂಬದಲ್ಲಿ ಜನಿಸಿದ್ದರೂ ಅತ್ಯಂತ ಸರಳ ಜೀವನ ಶೈಲಿಯನ್ನು ಇಷ್ಟಪಡುವವರು. ಹಾಗಾಗಿಯೇ ಗುವಾಹಟಿಯಲ್ಲಿ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದಾಗಲೂ ಸೈಕಲ್‌ ರಿಕ್ಷಾದಲ್ಲಿ ಓಡಾಡುತ್ತಿದ್ದರು. ಆಗಾಗ ಸ್ನೇಹಿತ ಶರ್ಮಾ ಅವರ ಮೋಟರ್‌ ಸೈಕಲ್‌ನಲ್ಲಿ ಡ್ರಾಪ್‌ ತೆಗೆದುಕೊಳ್ಳುತ್ತಿದ್ದರು. ಹೀಗೆ ನಿತ್ಯ ಕಚೇರಿಗೆ ಆಗಮಿಸುತ್ತಿದ್ದ ಗೊಗೋಯ್‌ ಕೆಲ ದಿನಗಳ ಬಳಿಕ ಅತ್ಯಂತ ಕಡಿಮೆ ಬೆಲೆಯ ವೆಸ್ಪಾ ಸ್ಕೂಟರ್‌, ಅದಾದ ನಂತರ ಮಾರುತಿ 800 ಖರೀದಿಸಿದ್ದರು.

ಗೊಗೋಯ್‌ ಅವರಿಗೆ ವಕೀಲಿಕೆ ಎಷ್ಟುಪ್ರಿಯವಾಗಿತ್ತೆಂಬ ಬಗ್ಗೆ ಅವರ ಆಪ್ತ ವಲಯದಲ್ಲಿ ದಂತಕತೆಯೊಂದು ಚಾಲ್ತಿಯಲ್ಲಿದೆ. ಒಮ್ಮೆ ಗೊಗೋಯ್‌ ಅವರ ತಂದೆಯ ಬಳಿ ಅವರ ಸಹೋದ್ಯೋಗಿಗಳು, ‘ನಿಮ್ಮ ಮಗ ಯಾವಾಗ ರಾಜಕೀಯಕ್ಕೆ ಬರ್ತಾರೆ’ ಎಂದರಂತೆ. ಅದಕ್ಕೆ ಅವರು, ‘ನನ್ನ ಮಗ ಎಂದಿಗೂ ರಾಜಕೀಯಕ್ಕೆ ಇಳಿಯುವುದಿಲ್ಲ. ಬಹುಶಃ ಆತ ಮುಂದೊಂದು ದಿನ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗುತ್ತಾನೆ’ ಎಂದರಂತೆ. ಇದೇನೂ ಕಟ್ಟುಕತೆಯಲ್ಲ ಎಂದು ಗುವಾಹಟಿಯ ಕೆಲ ಹಿರಿಯ ವಕೀಲರು ಹಾಗೂ ಗೊಗೋಯ್‌ ಅವರ ಸಹೋದ್ಯೋಗಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ.

ಲೈಂಗಿಕ ಕಿರುಕುಳದ ಆರೋಪ

ರಂಜನ್‌ ಗೊಗೋಯ್‌ ಪರಿಶ್ರಮಿ ಮಾತ್ರವಲ್ಲ, ಸೂಕ್ಷ್ಮ ವ್ಯಕ್ತಿತ್ವದವರೂ ಹೌದು. ಅವರು ಭಾರತದ ನ್ಯಾಯಾಂಗದ ಮುಖ್ಯಸ್ಥರಾದಾಗಿನಿಂದ ಅಥವಾ ಅವರು ಹೈಕೋರ್ಟ್‌ ನ್ಯಾಯಮೂರ್ತಿಗಳಾದಾಗಿನಿಂದಲೂ ವೃತ್ತಿ ಜೀವನದಲ್ಲಿ ಸಾಕಷ್ಟುಏರಿಳಿತಗಳನ್ನು, ಸವಾಲುಗಳನ್ನು ಎದುರಿಸಿದ್ದಾರೆ. ಆದರೆ ಅವರ ಖಡಕ್‌ ನಿರ್ಧಾರಗಳ ಮೇಲೆ ಅವೆಂದೂ ಪ್ರಭಾವ ಬೀರಿಲ್ಲ.

ಗೊಗೋಯ್‌ ಅವರು ವೃತ್ತಿ ಜೀವನದಲ್ಲಿ ಎದುರಿಸಿದ ಅತಿ ದೊಡ್ಡ ಸವಾಲು ಎಂದರೆ ಅವರು ಸಿಜೆಐ ಆಗಿದ್ದಾಗಲೇ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿದ್ದು. ಆದರೆ ಈ ಆರೋಪ ಅವರನ್ನು ಎದೆಗುಂದಿಸಲಿಲ್ಲ. ನಂತರ ಆ ಆರೋಪದಲ್ಲಿ ಹುರುಳಿಲ್ಲ ಎಂಬುದೂ ಸಾಬೀತಾಯಿತು. ಜ

ಎಸ್‌.ಎ ಬೋಬ್ಡೆ ನೇತೃತ್ವದ ಮೂರು ಜನರ ತನಿಖಾ ಸಮಿತಿಯು ಗೊಗೋಯ್‌ಗೆ ಕ್ಲೀನ್‌ಚಿಟ್‌ ನೀಡಿತು.

ಕ್ರಾಂತಿಕಾರಿ ಪತ್ರಿಕಾಗೋಷ್ಠಿ

ಎರಡು ವರ್ಷದ ಹಿಂದೆ ಸುಪ್ರೀಂಕೋರ್ಟ್‌ನ ಇತಿಹಾಸದಲ್ಲೇ ಮೊದಲ ಬಾರಿ ಐವರು ಜಡ್ಜ್‌ಗಳು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ್ದರು. ಆ ಐವರು ಜಡ್ಜ್‌ಗಳ ತಂಡದಲ್ಲಿ ಭಾವಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್‌ ಗೊಗೋಯ್‌ ಕೂಡ ಇದ್ದರು. ಬಳಿಕ ಇದೇ ವಿಚಾರವಾಗಿ ಕಾರ‍್ಯಕ್ರಮವೊಂದರಲ್ಲಿ ‘ಸ್ವತಂತ್ರ ನ್ಯಾಯಾಧೀಶರು ಮತ್ತು ಗದ್ದಲ ಎಬ್ಬಿಸುವ ಪತ್ರಕರ್ತರೇ ಪ್ರಜಾಪ್ರಭುತ್ವದ ಮೊದಲ ಹಂತದ ಸೈನಿಕರು’ ಎಂದಿದ್ದರು.

ನ್ಯಾಯಾಂಗವೊಂದು ಸಾಮಾನ್ಯ ಜನರಿಗೆ ಉತ್ತರದಾಯಿ ಆಗಿರಬೇಕೆಂದರೆ ಅಲ್ಲಿ ಸುಧಾರಣೆ ಅಲ್ಲ, ಕ್ರಾಂತಿ ಅಗತ್ಯ ಎಂದೂ ಹೇಳಿದ್ದರು. ಹಾಗೆಯೇ ಮಾಧ್ಯಮಗಳ ಮುಂದೆ ಹೋಗುವುದು ಎಂದಿಗೂ ನನ್ನ ನೆಚ್ಚಿನ ಆಯ್ಕೆಯಲ್ಲ. ಸಾರ್ವಜನಿಕರ ವಿಶ್ವಾಸ ಮತ್ತು ನಂಬಿಕೆಯನ್ನು ಆಧರಿಸಿರುವ ಸಂಸ್ಥೆಗೆ ಸೇರಿದವನಾಗಿರಲು ನಾನು ಬಯಸುತ್ತೇನೆ ಎಂದು ತಮ್ಮ ನಡೆಯ ಬಗ್ಗೆ ನಿವೃತ್ತಿ ವೇಳೆಯೂ ಸ್ಪಷ್ಟನೆ ನೀಡಿದ್ದಾರೆ.

ಖಡಕ್‌ ಮತ್ತು ಅಚ್ಚರಿಯ ತೀರ್ಪು

ಗೊಗೋಯ್‌ ಅಚ್ಚರಿಯ ಹಾಗೂ ಖಡಕ್‌ ತೀರ್ಪುಗಳಿಗೆ ಹೆಸರುವಾಸಿ. ಹಾಗಾಗಿಯೇ ಶತಮಾನಗಳ ವಿವಾದವಾಗಿದ್ದ ಅಯೋಧ್ಯೆಯ ವಿಚಾರದಲ್ಲಿಯೂ ‘ಇನ್ನು ಇದೇ ವಿಚಾರಣೆ ಮುಂದುವರೆಸುವುದಿಲ್ಲ, ಇನಫ್‌ ಈಸ್‌ ಇನಫ್‌’ ಎಂದು ಖಂಡತುಂಡವಾಗಿ ಹೇಳಿ, ನಿಗದಿತ ಕಾಲಾವಧಿಗೆ ಎರಡು ದಿನ ಮುಂಚಿತವಾಗಿಯೇ ತೀರ್ಪು ಪ್ರಕಟಿಸಿ ಅಚ್ಚರಿ ಮೂಡಿಸಿದರು. ಗೊಗೋಯ್‌ ಅವರ ನಿವೃತ್ತಿಗೂ 3 ದಿನ ಮುಂಚಿತವಾಗಿ ಅಯೋಧ್ಯೆ ತೀರ್ಪು ಪ್ರಕಟವಾಗಬಹುದು ಎಂಬುದು ಎಲ್ಲರ ಊಹೆಯಾಗಿತ್ತು.

ಆದರೆ ನ.8ರ ರಾತ್ರಿ ನಾಳೆಯೇ ಅಯೋಧ್ಯೆ ತೀರ್ಪು ಎಂಬ ಸುದ್ದಿ ಹಠಾತ್‌ ರವಾನೆಯಾಯಿತು. ದೇಶದ ಮುಖ್ಯ ನ್ಯಾಯಮೂರ್ತಿಯಾಗಿದ್ದರೂ ಎಲ್ಲ ಸಂಪ್ರದಾಯಗಳನ್ನು ಬದಿಗಿಟ್ಟು ಗೊಗೋಯ್‌ ಅವರು ಉತ್ತರ ಪ್ರದೇಶಕ್ಕೆ ತೆರಳಿ ಅಲ್ಲಿನ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳ ಜೊತೆ ಭದ್ರತೆಯ ಬಗ್ಗೆ ಸಭೆ ನಡೆಸಿ ಮುನ್ನೆಚ್ಚರಿಕೆಯನ್ನು ಸ್ವತಃ ಪರಿಶೀಲಿಸಿದರು.

ನಂತರ ಸುಪ್ರೀಂಕೋರ್ಟ್‌ನ ಇತಿಹಾಸದಲ್ಲೇ ಮೊದಲ ಬಾರಿ ರಜಾದಿನವಾದ ಶನಿವಾರ ಅತ್ಯಂತ ಮಹತ್ವದ ತೀರ್ಪು ಪ್ರಕಟಿಸಿದರು. ಕೇವಲ ಒಂದೇ ವರ್ಷ ಸಿಜೆಐ ಆಗಿದ್ದರೂ ರಂಜನ್‌ ಗೊಗೋಯ್‌ ಬಹುಕಾಲ ಈ ದೇಶದ ನ್ಯಾಯಾಂಗದ ಇತಿಹಾಸದಲ್ಲಿ ಉನ್ನತ ಸ್ಥಾನದಲ್ಲಿರುತ್ತಾರೆ.

 

Follow Us:
Download App:
  • android
  • ios