21ರ ಯುವತಿಯ ಬಟ್ಟೆ ಕಂಡು ಗರಂ ಆದ ತಾಲಿಬಾನಿಯರು, ಗುಂಡು ಹಾರಿಸಿ ಹತ್ಯೆ!
* ಅಫ್ಘಾನಿಸ್ತಾನದ ಉತ್ತರದಲ್ಲಿರುವ ಬಾಲ್ಖ್ ಪ್ರಾಂತ್ಯದಲ್ಲಿ 21 ವರ್ಷದ ಯುವತಿಯ ಹತ್ಯೆ
* ಯುವತಿಯನ್ನು ಹತ್ಯೆಗೈದ ತಾಲಿಬಾನಿಯರು
* ಉಗ್ರರಿಗೆ ಹಿಡಿಸಲಿಲ್ಲ ಯುವತಿ ಧರಿಸಿದ್ದ ಬಟ್ಟೆ
ಕಬೂಲ್(ಆ.09): ಅಫ್ಘಾನಿಸ್ತಾನದ ಉತ್ತರದಲ್ಲಿರುವ ಬಾಲ್ಖ್ ಪ್ರಾಂತ್ಯದಲ್ಲಿ 21 ವರ್ಷದ ಯುವತಿಯನ್ನು ತಾಲಿಬಾನಿಯರು ಹತ್ಯೆಗೈದಿರುವ ಘೋರ ಘಟನೆ ಬೆಳಕಿಗೆ ಬಂದಿದೆ. ಈ ಯುವತಿ ಬಿಗಿಯಾದ ಬಟ್ಟೆಗಳನ್ನು ಧರಿಸಿದ್ದರಿಂದ ಆಕೆಯನ್ನು ಹತ್ಯೆಗೈಯ್ಯಲಾಗಿದೆ ಎಂದು ಅಫ್ಘಾನಿಸ್ತಾನದ ರೇಡಿಯೋ ಆಜಾದಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಮಹಿಳೆಯನ್ನು ತಾಲಿಬಾನ್ ನಿಯಂತ್ರಣದಲ್ಲಿರುವ ಸಮರ್ ಕಾಂಡ್ ಗ್ರಾಮದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ.
ಮನೆಯಿಂದ ಹೊರಡುವಾಗ ಗುಂಡು ಹಾರಿಸಿದ ಉಗ್ರರು
ಮಾಧ್ಯಮ ವರದಿಗಳ ಪ್ರಕಾರ, ಹುಡುಗಿಗೆ ಯಾವುದೇ ಪುರುಷ ಸಂಬಂಧಿ ಅಥವಾ ಸ್ನೇಹಿತರು ಇರಲಿಲ್ಲ. ಇನ್ನು ಮೃತ ಯುವತಿಯನ್ನು ನಜ್ನೀನ್ ಎಂದು ಗುರುತಿಸಲಾಗಿದ್ದು, ಆಕೆ ಮನೆಯಿಂದ ಹೊರಗೆ ಬಂದು ಮಜರ್-ಇ-ಷರೀಫ್‌ಗಾಗಿ ಕಾರನ್ನು ಹಿಡಿಯುತ್ತಿದ್ದಾಗ ಉಗ್ರರು ದಾಳಿ ನಡೆಸಿದ್ದಾರೆನ್ನಲಾಗಿದೆ.
ದಾಳಿಯ ವೇಳೆ ಬುರ್ಖಾ ಧರಿಸಿದ್ದ ನಜ್ನೀನ್
ದಾಳಿ ವೇಳೆ ನಜ್ನೀನ್ ಬುರ್ಖಾ ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಹೊರಗೆ ಕೆಲಸ ಮಾಡುವುದನ್ನು ನಿಷೇಧಿಸಿದೆ.
ಭಾನುವಾರ, ಉತ್ತರ ಅಫ್ಘಾನಿಸ್ತಾನದ ಕುಂಡುಜ್ ಪ್ರಾಂತ್ಯದ ರಾಜಧಾನಿ ಕೆಲ ಪ್ರದೇಶಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ದಿ ಮೇಲ್ ವರದಿಯ ಪ್ರಕಾರ, ತಾಲಿಬಾನ್ ಹೊಸ ಪ್ರದೇಶವನ್ನು ಆಕ್ರಮಿಸಿಕೊಂಡ ತಕ್ಷಣ. ಅವರು ಅಲ್ಲಿನ ಮಸೀದಿ, ಪೋಲಿಸರು ಮತ್ತು ಸರ್ಕಾರಿ ನೌಕರರ ಹೆಂಡತಿ ಹಾಗೂ ವಿಧವೆಯರನ್ನು ತಮಗೊಪ್ಪಿಸುವಂತೆ ಘೋಷಿಸುತ್ತಾರೆ.
ಅಫ್ಘಾನಿಸ್ತಾನದಲ್ಲಿ ಮತ್ತೆ ಮರಳುತ್ತಿವೆಯಾ ಕರಾಳ ದಿನಗಳು?
1996 ರಿಂದ 2001 ರವರೆಗೆ, ಅಫ್ಘಾನಿಸ್ತಾನದ ಶೇ 90% ರಷ್ಟು ಭಾಗವನ್ನು ತಾಲಿಬಾನ್ ನಿಯಂತ್ರಣದಲ್ಲಿತ್ತು. ಆಗ ಮಹಿಳೆಯರಿಗೆ ಕಠಿಣ ನಿಯಮಗಳನ್ನು ವಿಧಿಸಲಾಗುತ್ತಿತ್ತು. ಆಜ್ಞೆಯ ಉಲ್ಲಂಘಿಸಿದರೆ ಕಲ್ಲು ತೂರಾಟ ಹಾಗೂ ಸಾರ್ವಜನಿಕವಾಗಿ ಚಾಟಿ ಬೀಸಿ ಶಿಕ್ಷೆ ವಿಧಿಸಲಾಗುತ್ತಿತ್ತು.