ಉದ್ಯೋಗ vs. ಕುಟುಂಬ ... ಐಪಿಎಸ್ ಅಧಿಕಾರಿ ಡಿ. ರೂಪಾ ಹಳೇ ವೀಡಿಯೋ ಈಗ ವೈರಲ್
ಉದ್ಯೋಗದ ಜೊತೆ ಕುಟುಂಬವನ್ನೂ ನಿಭಾಯಿಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಇಂಥ ಸನ್ನಿವೇಶದ ನಡುವೆ ಐಪಿಎಸ್ ಅಧಿಕಾರಿಯಂಥ ಜವಾಬ್ದಾರಿಯನ್ನು ನಿಭಾಯಿಸುತ್ತಾ ಕುಟುಂಬವನ್ನು ಡಿ.ರೂಪಾ ನಿಭಾಯಿಸುವುದು ಹೇಗೆ?
ಮಹಿಳೆಯಾದವಳೊಬ್ಬಳು ಉದ್ಯೋಗದ ಜೊತೆ ಕುಟುಂಬವನ್ನೂ (Family) ಸಮದೂಗಿಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಅತ್ತ ಕುಟುಂಬದವರಿಗೂ ಇತ್ತ ತಮ್ಮ ಉದ್ಯೋಗಕ್ಕೂ ಅನ್ಯಾಯವಾಗದ ರೀತಿಯಲ್ಲಿ ಎರಡೂ ಕಡೆ ಬ್ಯಾಲೆನ್ಸ್ ಮಾಡುತ್ತಾ ಸಾಗುವುದು ಹೇಳಿದ್ದಷ್ಟು ಈಜಿಯಲ್ಲ. ಅದರಲ್ಲಿಯೂ ಉನ್ನತ ಸ್ಥಾನಕ್ಕೇರಿದಷ್ಟೂ ಕೆಲಸದಲ್ಲಿ ಒತ್ತಡಗಳು ಹೆಚ್ಚು. ಆ ಒತ್ತಡಗಳನ್ನು ನಿಭಾಯಿಸುವ ಜೊತೆಜೊತೆಗೆ ಪತಿ, ಮಕ್ಕಳು, ಅತ್ತೆ-ಮಾವ ಇವರೆಲ್ಲರನ್ನೂ ಸಂಭಾಳಿಸಿಕೊಂಡು ಹೋಗುವುದು ದೊಡ್ಡ ಪವಾಡವೇ. ಆದರೆ ಗಂಡು ಮೆಟ್ಟಿದ ಕ್ಷೇತ್ರ ಎಂದಷ್ಟೇ ಗುರುತಿಸಿಕೊಂಡಿರುವ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ಕುಟುಂಬವನ್ನೂ ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ. ಅಂಥವರಲ್ಲಿ ಒಬ್ಬರು ಖಡಕ್ ಐಪಿಎಸ್ ಆಫೀಸರ್ (IPS Officer,) ಎಂದೇ ಹೆಸರುವಾಸಿಯಾಗಿರುವವರು ಡಿ. ರೂಪಾ. 2007 ರಲ್ಲಿ ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿ ಉಮಾಭಾರತಿ ಅವರನ್ನು ಬಂಧಿಸಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ದಿಟ್ಟ ಐಪಿಎಸ್ ಅಧಿಕಾರಿ ರೂಪಾ ಅವರು ತಮ್ಮ ಉದ್ಯೋಗದ ಜೊತೆಗೆ ಕುಟುಂಬವನ್ನೂ ಹೇಗೆ ನಿರ್ವಹಿಸುತ್ತಾರೆ ಎಂದು ಅವರೇ ತಿಳಿಸಿದ್ದು, ಮಜಾ ಟಾಕೀಸ್‌ನಲ್ಲಿ ಮಾತನಾಡಿದ ವೀಡಿಯೋ ಮತ್ತೆ ವೈರಲ್ ಆಗುತ್ತಿದೆ. ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಸಮರ ಸಾರಿದ ಬೆನ್ನಲ್ಲೇ ಈ ವೀಡಿಯೋ ಮತ್ತೆ ಪಾಪ್ ಅಪ್ ಆಗುತ್ತಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ.
ಅಂದಹಾಗೆ, ಡಿ. ರೂಪಾ ಅವರ ಪೂರ್ಣ ಹೆಸರು ರೂಪಾ ದಿವಾಕರ್ ಮೌದ್ಗಿಲ್. 2000ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಇವರು, ಕೇಂದ್ರ ಲೋಕಸೇವಾ ಆಯೋಗದ (UPSC) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 43 ನೇ ರ‍್ಯಾಂಕ್ ಗಳಿಸಿದ ಪ್ರತಿಭಾನ್ವಿತೆ. ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಇವರದ್ದು 5ನೇ ರ‍್ಯಾಂಕ್ ಪಡೆದ ಹೆಗ್ಗಳಿಕೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮನೋವಿಜ್ಞಾನದಲ್ಲಿ ಎಂಎ ಪದವಿ ಪಡೆದಿದ್ದಾರೆ. ರೂಪಾರ ತಂದೆ ಜೆ.ಎಚ್. ದಿವಾಕರ್ ನಿವೃತ್ತ ಇಂಜಿನಿಯರ್. ಅವರ ತಂಗಿ ರೋಹಿಣಿ ದಿವಾಕರ್ 2008ರ ಬ್ಯಾಚ್ನ ಐಆರ್ಎಸ್ ಅಧಿಕಾರಿಯಾಗಿದ್ದು, ಆದಾಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತಿರುವ ರೂಪಾ, ಅವರು ಇಬ್ಬರು ಮಕ್ಕಳ ತಾಯಿ. 2003 ರಲ್ಲಿ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಅವರನ್ನು ವಿವಾಹವಾಗಿರುವ ಇವರಿಗೆ ಇಬ್ಬರು ಮಕ್ಕಳು. ಮಗಳಿಗೆ ಈಗ ಏಳು ವರ್ಷ. ಮಗನಿಗೆ ನಾಲ್ಕು ವರ್ಷ. ಐಪಿಎಸ್ ಅಧಿಕಾರಿಯಂಥ ಒಂದು ದೊಡ್ಡ ಹುದ್ದೆಯನ್ನು ನಿಭಾಯಿಸುತ್ತಾ ಪುಟ್ಟ ಮಕ್ಕಳಿಗೂ ಅಮ್ಮನಾಗಿ ಕಾರ್ಯ ನಿರ್ವಹಿಸುವುದು ತುಸು ಕಷ್ಟವೇ. ಬಿಡುವಿಲ್ಲದ ಶೆಡ್ಯೂಲ್ (Schedule) ನಡುವೆಯೇ ಅಮ್ಮನ ಪಾತ್ರವನ್ನೂ ನಿರ್ವಹಿಸುವುದು ಹೇಗೆ ಎಂದು ರೂಪಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕಳೆದ ವರ್ಷದ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಅವರು ಈ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ. ಇಷ್ಟು ದೊಡ್ಡ ಹುದ್ದೆಯನ್ನು ಅಲಂಕರಿಸಿರುವಾಗ ಮಕ್ಕಳಿಗೆ ಹೆಚ್ಚಿನ ಸಮಯವನ್ನಂತೂ ನೀಡುವುದು ತುಂಬಾ ಕಷ್ಟವೇ.
Menstrual Leave: ಸ್ತ್ರೀಯರಿಗೆ ಮುಟ್ಟಿನ ರಜೆ ಸರ್ಕಾರದ ನೀತಿ ಎಂದ ಸುಪ್ರೀಂಕೋರ್ಟ್
ಅದಕ್ಕಾಗಿ ರೂಪಾ ಹೇಳಿದ್ದೇನೆಂದರೆ ಮಕ್ಕಳಿಗೆ ಎಷ್ಟು ಸಮಯ ಮೀಸಲು ಇಡುತ್ತೇವೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅವರಿಗಾಗಿ ಮೀಸಲು ಇಡುವ ಅಲ್ಪ ಸಮಯದಲ್ಲಿ ಎಷ್ಟು ಗುಣಮಟ್ಟದ ಸಮಯ ನೀಡುತ್ತೇವೆ ಎನ್ನುವುದು ಮುಖ್ಯ. 'ಕ್ವಾಂಟಿಟಿ (Quantity)ಗಿಂತಲೂ ಕ್ವಾಲಿಟಿ (Quality) ಮುಖ್ಯ ಎಂದು ನಂಬಿದವಳು ನಾನು. ಮಕ್ಕಳಿಗೆ ಮೀಸಲು ಇಡುವ ಅಲ್ಪ ಸಮಯದಲ್ಲಿಯೇ ಅವರಿಗೆ ತುಂಬಾ ಸಂತೋಷವಾಗುವಂತೆ ಸಮಯ ನೀಡುತ್ತೇನೆ' ಎಂದಿದ್ದಾರೆ. 'ಮಗಳಿಗೆ ಚೆಸ್ ಎಂದರೆ ಇಷ್ಟ. ಆಕೆಯ ಜೊತೆ ಚೆಸ್ ಆಡುತ್ತೇನೆ. ಮಗ ಚಿಕ್ಕವನು. ಅವನ ಜೊತೆ ಮಗುವಾಗಿಯೇ ಇರಬೇಕು. ಆತನಿಗೆ ಕಚಗುಳಿ ಆಟ ತುಂಬಾ ಇಷ್ಟ. ಆದ್ದರಿಂದ ಟೈಂ ಸಿಕ್ಕಾಗ ಆತನ ಜೊತೆ ಕಚಗುಳಿ ಆಟವಾಡುತ್ತೇನೆ' ಎಂದಿದ್ದಾರೆ. ಆದ್ದರಿಂದ ಸಿಗುವ ಅಲ್ಪ ಸಮಯದಲ್ಲಿಯೇ ಮಕ್ಕಳಿಗೆ ಇಷ್ಟವಾಗುವಂತೆ ನೋಡಿಕೊಳ್ಳುವುದು ಮುಖ್ಯ ಎನ್ನುವುದು ರೂಪಾ ಅವರ ಮಾತು. 'ಇದರ ಜೊತೆಗೆ ಮಕ್ಕಳಿಗೆ ಇಷ್ಟವಾಗುವ ಕಥೆಗಳನ್ನು ಹೇಳುತ್ತೇನೆ. ಅವರ ಮನಮುಟ್ಟುವಂಥ ಕೆಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತೇನೆ. ಹೀಗೆ ಸಿಗುವ ಅಲ್ಪ ಸಮಯದಲ್ಲಿಯೇ ಅವರಿಗೆ ಇಷ್ಟವಾಗುವ ಕೆಲಸ ಮಾಡುತ್ತೇನೆ' ಎಂದಿದ್ದಾರೆ ರೂಪಾ.
ಅಂದಹಾಗೆ ರೂಪಾ ಅವರು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ. ಭರತನಾಟ್ಯ ನೃತ್ಯಗಾರರೂ ಹೌದು. ದಾವಣಗೆರೆ ಮೂಲದ ಇವರು ಎರಡು ಬಾರಿ ಮಿಸ್ ದಾವಣಗೆರೆ ಅವಾರ್ಡ್ ಗೆದ್ದಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಎಸ್ಪಿಯಾಗಿ ಮೊದಲ ಪೋಸ್ಟಿಂಗ್ (Posting) ಆದ ನಂತರ 20 ವರ್ಷ ಹಲವು ಕಡೆ ಕಾರ್ಯ ನಿರ್ವಹಿಸಿದ್ದಾರೆ. ಸುಮಾರು 40 ಕಡೆಗಳಲ್ಲಿ ಇವರ ವರ್ಗಾವಣೆಯಾಗಿದೆ. ಆದರೆ ಇದುವರೆಗೂ ತಾವು ಮಿಸ್ ದಾವಣಗೆರೆಯಾಗಿರುವ ವಿಷಯವನ್ನು ಅವರು ಇಷ್ಟು ವರ್ಷಗಳು ಹೇಳಿಕೊಳ್ಳಲೇ ಇಲ್ಲವಂತೆ. 'ಪುರುಷ ಪ್ರಧಾನವಾಗಿರುವ ಪೊಲೀಸ್ ಇಲಾಖೆಯಲ್ಲಿ ಇಂಥ ಪ್ರೊಫೆಷನಲ್ ಅನ್ನು ಹೆಣ್ಣೊಬ್ಬಳು ನಿಭಾಯಿಸುತ್ತಾಳೆ ಎಂದರೆ ನಂಬುವುದು ಕಷ್ಟವೇ. ಅದರ ಮಧ್ಯೆ ಮಿಸ್ ಗಿಸ್ ಎಂದೆಲ್ಲಾ ಹೇಳಿಕೊಂಡರೆ ಚೆನ್ನಾಗಿರಲಿಲ್ಲ, ನಮ್ಮನ್ನು ಲೈಟ್ ಆಗಿ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಎಲ್ಲಿಯೂ ಇವೆಲ್ಲಾ ಹೇಳಿಕೊಳ್ಳಲು ಹೋಗಲಿಲ್ಲ' ಎನ್ನುತ್ತಾರೆ ರೂಪಾ.
ಬರೀ ಮನೆಯವರ ಸುಖ ದುಃಖ ನೋಡಿದರೆ ಸಾಲದು, ಮಹಿಳೆಯರು ತಮಗೂ ಹೀಗ್ ಟೈಂ ಇಟ್ಕೋಬೇಕು!