Asianet Suvarna News Asianet Suvarna News
breaking news image

ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್‌ ಚೆಂಡು ಈಗ ಹೈಕೋರ್ಟ್ ಅಂಗಳಕ್ಕೆ, ಪ್ರತಿಭಟನೆ ನಿಲ್ಲಿಸಿದ ರೈತರು

ಕೆಆರ್‌ಎಸ್ ಅಣೆಕಟ್ಟು ಬಳಿ ನಡೆಸಲುದ್ದೇಶಿಸಿರುವ ಟ್ರಯಲ್ ಬ್ಲಾಸ್ಟ್ ಚೆಂಡು ಈಗ ಹೈಕೋರ್ಟ್ ಅಂಗಳದಲ್ಲಿದೆ.  ಜು.5ಕ್ಕೆ ವಿಚಾರಣೆಗೆ ಬರಲಿರುವುದರಿಂದ ನ್ಯಾಯಾಲಯದ ಆದೇಶಕ್ಕೆ ಅಧಿಕಾರಿಗಳು ಕಾಯುತ್ತಿದ್ದಾರೆ.

trial blast near KRS reservoir Mandya district administration waiting for karnataka high court decision gow
Author
First Published Jul 3, 2024, 1:14 PM IST

ಮಂಡ್ಯ ಮಂಜುನಾಥ

ಮಂಡ್ಯ (ಜು.3): ಕೆಆರ್‌ಎಸ್ ಅಣೆಕಟ್ಟು ಬಳಿ ನಡೆಸಲುದ್ದೇಶಿಸಿರುವ ಟ್ರಯಲ್ ಬ್ಲಾಸ್ಟ್ ಚೆಂಡು ಈಗ ಹೈಕೋರ್ಟ್ ಅಂಗಳದಲ್ಲಿದೆ. ನೀರಾವರಿ ಇಲಾಖೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಜು.5ಕ್ಕೆ ವಿಚಾರಣೆಗೆ ಬರಲಿರುವುದರಿಂದ ನ್ಯಾಯಾಲಯದ ಆದೇಶ ಗಮನಿಸಿ ಮುಂದೆ ಹೆಜ್ಜೆ ಇಡುವುದಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ನ್ಯಾಯಾಲಯದ ಆದೇಶವಿಲ್ಲದಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳೇ ದಿನಾಂಕ ನಿಗದಿಪಡಿಸಿಕೊಂಡು ಪರೀಕ್ಷಾರ್ಥ ಸ್ಫೋಟ ನಡೆಸಲು ಮುಂದಾಗಿದ್ದ ಅಧಿಕಾರಿಗಳ ವಿರುದ್ಧ ಮಂಗಳವಾರ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳು ಹೋರಾಟಕ್ಕಿಳಿದರು. ಹೋರಾಟಕ್ಕೆ ಮಣಿದಿರುವ ಅಧಿಕಾರಿಗಳು ಜು.5ರ ಹೈಕೋರ್ಟ್ ಆದೇಶವನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ನೀಡಿದ್ದರಿಂದ ಹೋರಾಟಗಾರರು ತಾತ್ಕಾಲಿಕವಾಗಿ ಗೋ-ಬ್ಯಾಕ್ ಚಳವಳಿಯನ್ನು ಹಿಂಪಡೆದಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಕಿಚನ್ ವಿಭಾಗದ ನೌಕರನಾಗಿದ್ದ ಯುವಕ ಆತ್ಮಹತ್ಯೆ!

ಜು.7ರಂದು ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ದಿನಾಂಕ ನಿಗದಿಪಡಿಸಿಕೊಂಡಿದ್ದ ನೀರಾವರಿ ಇಲಾಖೆ ಅಷ್ಟರೊಳಗೆ ರಹಸ್ಯವಾಗಿ ವಿಜ್ಞಾನಿಗಳ ನಿರ್ದೇಶನದಂತೆ ಹಲವು ಕಡೆ ಕುಳಿಗಳನ್ನು ನಿರ್ಮಿಸಿ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ನೀಡಲಾಗಿದ್ದ ಮೂರು ದಿನಾಂಕಗಳಲ್ಲಿ ಜು.೩ ಕೂಡ ಸೇರಿತ್ತು. ಯಾರಿಗೂ ವಿಷಯ ತಿಳಿಸದೆ ಗೌಪ್ಯವಾಗಿ ಪರೀಕ್ಷಾರ್ಥ ಸ್ಫೋಟ ನಡೆಸಿ ವರದಿ ಪಡೆದುಕೊಳ್ಳುವುದಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಒಳಗೊಳಗೆ ಕಾರ್ಯಪ್ರವೃತ್ತರಾಗಿದ್ದರು. ಸಾಧ್ಯವಾದರೆ ಜು.೩ರಂದೇ ಪರೀಕ್ಷಾರ್ಥ ಸ್ಫೋಟಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಅಷ್ಟರೊಳಗೆ ರೈತಸಂಘಕ್ಕೆ ಮಾಹಿತಿ ಸೋರಿಕೆಯಾಗಿದ್ದರಿಂದ ನೀರಾವರಿ ಇಲಾಖೆ ಅಧಿಕಾರಿಗಳ ಲೆಕ್ಕಾಚಾರ ತಲೆಕೆಳಗಾಯಿತು.

ನೀರಾವರಿ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಆದೇಶವಿಲ್ಲದಿದ್ದರೂ ಟ್ರಯಲ್ ಬ್ಲಾಸ್ಟ್ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದರ ವಿರುದ್ಧ ಸಿಟ್ಟಿಗೆದ್ದು ಗೋ-ಬ್ಯಾಕ್ ಚಳವಳಿಗಿಳಿದಿದ್ದರಿಂದ ಅಧಿಕಾರಿಗಳು ನ್ಯಾಯಾಲಯದ ಆದೇಶ ನೋಡಿಕೊಂಡೇ ಟ್ರಯಲ್ ಬ್ಲಾಸ್ಟ್ ವಿಚಾರದಲ್ಲಿ ಮುಂದಿನ ತೀರ್ಮಾನ ಮಾಡುವುದಕ್ಕೆ ನಿರ್ಧರಿಸಿದ್ದಾರೆ.

ಬೆಂಗಳೂರು: ಮದುವೆಯಾದ ಹರೆಯದ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಟ್ರಯಲ್ ಬ್ಲಾಸ್ಟ್ ವಿರುದ್ಧ ಸಿಡಿದೆದ್ದ ರೈತರು: ವಿರೋಧದ ನಡುವೆಯೂ ಜಿಲ್ಲಾಡಳಿತ ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್‌ಗೆ ಸಿದ್ಧತೆ ನಡೆಸಿರುವುದರ ವಿರುದ್ಧ ರಾಜ್ಯ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಕೆಆರ್‌ಎಸ್ ಬಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

92 ವರ್ಷ ಹಳೆಯದಾದ ಕೆಆರ್‌ಎಸ್ ಅಣೆಕಟ್ಟೆಯ ಸುರಕ್ಷತೆ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ಗಣಿದಂಧೆಕೋರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಟ್ರಯಲ್ ಬ್ಲಾಸ್ಟ್ ಸಿದ್ಧತೆಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಿಡಿಕಾರಿದರು. ಅಲ್ಲದೇ, ಟ್ರಯಲ್ ಬ್ಲಾಸ್ಟ್ ನಡೆಸಲು ತಜ್ಞರ ತಂಡ ಕೆಆರ್‌ಎಸ್‌ಗೆ ಆಗಮಿಸದಂತೆ ಗೋ-ಬ್ಯಾಕ್ ಘೋಷಣೆ ಕೂಗಿದರು.

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನ ನೀರಾವರಿ ನಿಗಮದ ಎಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತಸಂಘದ ಕಾರ್ಯಕರ್ತರು, ವಿವಿಧ ಕನ್ನಡಪರ, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರಕ್ಕೆ ಕೆಆರ್‌ಎಸ್ ಉಳಿಸುವ ಕಾಳಜಿ ಇದ್ದರೆ ಕೂಡಲೇ ಅಣೆಕಟ್ಟು ಸುರಕ್ಷತಾ ಕಾಯಿದೆಯನ್ನು ಜಾರಿಗೊಳಿಸಬೇಕು. ಅಣೆಕಟ್ಟು ಸುರಕ್ಷತಾ ಸಮಿತಿ ರಚಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.

ಅಧೀಕ್ಷಕ ಅಭಿಯಂತರಗೆ ರೈತರಿಂದ ತರಾಟೆ: ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ರಘುರಾಮ್ ಅವರನ್ನು ರೈತ ಮುಖಂಡರರು ತೀವ್ರ ತರಾಟೆ ತೆಗೆದುಕೊಂಡರು.

ಟ್ರಯಲ್ ಬ್ಲಾಸ್ಟ್ ನ್ಯಾಯಾಲಯ ಆದೇಶ ನೀಡಿದೆಯೇ..?, ನೀಡಿದ್ದರೆ ಅದರ ಪ್ರತಿಯನ್ನು ಕೊಡಿ. ಕೋರ್ಟ್ ಆದೇಶಕ್ಕೂ ಮುನ್ನವೇ ಟ್ರಯಲ್ ಬ್ಲಾಸ್ಟ್‌ಗೆ ಏಕೆ ಮುಂದಾಗಿದ್ದೀರಿ?. ಕೋಟ್ಯಂತರ ಜನರ ಜೀವನಾಡಿಗಿಂತ ಗಣಿ ಲಾಭಿಯೇ ನಿಮಗೆ ಹೆಚ್ಚಾಯಿತೇ?. ತಾವಾಗಿಯೇ ದಿನಾಂಕ ನಿಗದಿ ಮಾಡಿಕೊಂಡು ಹೈಕೋರ್ಟ್‌ಗೆ ಹೋಗಿದ್ದೇಕೆ?. ಗಣಿಗಾರಿಕೆಯಿಂದ ಅಣೆಕಟ್ಟೆಗೆ ಆಗುವ ಅಪಾಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿಲ್ಲ ಏಕೆ ಎಂದು ಅಧಿಕಾರಿಗೆ ಸಾಲು ಸಾಲು ಪ್ರಶ್ನೆ ಹಾಕಿದರು. ಹೋರಾಟಗಾರರ ಪ್ರಶ್ನೆಗೆ ಉತ್ತರಿಸಲಾಗದೆ ಅಧಿಕಾರಿ ಮೌನಕ್ಕೆ ಶರಣಾದರು.

ಪ್ರತಿಭಟನೆಯಲ್ಲಿ ರೈತಸಂಘದ ಪ್ರಸನ್ನ ಎನ್.ಗೌಡ, ಲಿಂಗಪ್ಪಾಜಿ, ನಾಗಣ್ಣ, ಶಿವಪ್ಪ, ಪ್ರೊ.ಹುಲ್ಕೆರೆ ಮಹದೇವು, ಹರವು ಪ್ರಕಾಶ್‌, ಶೆಟ್ಟಹಳ್ಳಿ ರವಿ, ಅಣ್ಣಯ್ಯ, ಮಂಡ್ಯ ನಗರ ಆಟೋಚಾಲಕರ ಸಂಘದ ಅಧ್ಯಕ್ಷ ಕೃಷ್ಣ ಮತ್ತಿತರರಿದ್ದರು.

ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿ ರಚನೆಗೆ ರೈತಸಂಘ ಆಗ್ರಹ: ಕೃಷ್ಣ ರಾಜಸಾಗರ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿಯನ್ನು ಕೂಡಲೇ ರಚಿಸುವಂತೆ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.

ಪ್ರತಿಭಟನೆಯನ್ನು ಹಿಂಪಡೆದ ಬಳಿಕ ನೀರಾವರಿ ಇಲಾಖೆ ಅಧಿಕಾರಿಗಳು ಮೇಲಧಿಕಾರಿಗಳಿಂದ ಅಧಿಕೃತ ಆಡಳಿತಾತ್ಮಕ ನಿರ್ದೇಶನಗಳನ್ನು ಪಡೆಯದೆ ಪರೀಕ್ಷಾರ್ಥ ಸ್ಫೋಟ ನಡೆಸುತ್ತಿರುವುದು ಕಾನೂನು ಉಲ್ಲಂಘನೆಯ ಕ್ರಮವಾಗಿದೆ. ಪರೀಕ್ಷಾರ್ಥ ಸ್ಫೋಟ ಕುರಿತಂತೆ ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿಯಿಂದ ನಿರ್ದೇಶನಗಳನ್ನು ಪಡೆಯದೆ ಅವಸರವಾಗಿ ಟ್ರಯಲ್ ಬ್ಲಾಸ್ಟ್ ನಡೆಸಿ ಅಕ್ರಮ ಗಣಿಗಾರಿಕೆಗೆ ನೆರವಾಗುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.

ಅಣೆಕಟ್ಟು ಭದ್ರತೆ ದೃಷ್ಟಿಯಿಂದ ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿ ರಚಿಸಿ ರಾಜ್ಯಸರ್ಕಾರದ ಸಂಬಂಧಿಸಿದ ಸಚಿವರು ಮತ್ತು ಇಲಾಖಾ ಮುಖ್ಯಸ್ಥರಿಗೆ ವರದಿ ಮಾಡುವುದು. ನೀರಾವರಿ ಇಲಾಖೆ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಿ ಟ್ರಯಲ್ ಬ್ಲಾಸ್ಟ್ ನಡೆಸುವುದನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಬೇಕು. ಈ ಸಂಬಂಧ ಸರ್ಕಾರದ ಉನ್ನತಾಧಿಕಾರಿಗಳು ಹಾಗೂ ರಾಜ್ಯ-ಜಿಲ್ಲಾಮಟ್ಟದ ಅಧಿಕಾರಿಗಳು, ತಜ್ಞರ ಸಭೆಯನ್ನು ನಡೆಸಿ ಹೋರಾಟಗಾರರ ಸಮ್ಮುಖದಲ್ಲಿ ವಿಷಯ ಕುರಿತು ಚರ್ಚಿಸುವುದು ಸೂಕ್ತವೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಟ್ರಯಲ್ ಬ್ಲಾಸ್ಟ್‌ಗೆ ನ್ಯಾಯಾಲಯ ಆದೇಶ ಮಾಡಿಲ್ಲ. ಆದರೂ, ರಾಜ್ಯ ಸರ್ಕಾರ ಗಣಿ ಮಾಲೀಕರ ಪರವಾಗಿ ಕೆಲಸ ಮಾಡುವ ಸಲುವಾಗಿ ಅಣೆಕಟ್ಟೆಗೆ ಯಾವುದೇ ಅಪಾಯ ಇಲ್ಲ ಎಂದು ವರದಿ ಕೊಡಿಸಲು ವಿಜ್ಞಾನಿಗಳನ್ನು ಕರೆದುಕೊಂಡು ಬರಲು ಸಿದ್ಧತೆ ಮಾಡಿಕೊಂಡಿದೆ. ರೈತರ ಹಿತ ಬಲಿಕೊಟ್ಟು ಟ್ರಯಲ್ ಬ್ಲಾಸ್ಟ್‌ಗೆ ಮುಂದಾಗಿದೆ. ನ್ಯಾಯಾಲದ ತನ್ನ ಆದೇಶದಲ್ಲಿ ಒಬ್ಬರ ಹಿತಾಶಕ್ತಿಗಿಂತ ಸಾರ್ವಜನಿಕರ ಹಿತಾಶಕ್ತಿ ಮುಖ್ಯ, ಗಣಿಗಾರಿಕೆ ನಡೆಸುವುದಕ್ಕಿಂತ ಕೆಆರ್‌ಎಸ್ ಅಣೆಕಟ್ಟೆ ಮುಖ್ಯ ಎಂದು ಸ್ಪಷ್ಟವಾಗಿ ತಿಳಿಸಿದೆ. ಅಧಿಕಾರಸ್ಥರಿಗೆ ಆ ಸಾಮಾನ್ಯಜ್ಞಾನವಿಲ್ಲದಿರುವುದು ದುರಂತ.

ಬಡಗಲಪುರ ನಾಗೇಂದ್ರ, ಅಧ್ಯಕ್ಷರು, ರಾಜ್ಯ ರೈತಸಂಘ: ಜು.3ರಂದೇ ಟ್ರಯಲ್ ಬ್ಲಾಸ್ಟಿಂಗ್ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಹಾಗಾಗಿ ಮುನ್ನೆಚ್ಚರಿಕೆಯಾಗಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ನಡೆಸಲು ಅವಕಾಶ ಕೊಡುವುದಿಲ್ಲ, ಒಂದು ವೇಳೆ ವಿರೋಧದ ನಡುವೆಯೂ ಟ್ರಯಲ್ ಬ್ಲಾಸ್ಟ್‌ಗೆ ಮುಂದಾದರೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಮಂಡ್ಯ ಮಾತ್ರವಲ್ಲ ಕಾವೇರಿ ಕೊಳ್ಳದ ಜನರು ಸರ್ಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ.

- ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷರು, ರೈತಸಂಘ 

ಅಣೆಕಟ್ಟು ರಕ್ಷಣೆ ಮಾಡುವ ಇಚ್ಛಾಶಕ್ತಿ, ಬದ್ಧತೆ ಇದ್ದರೆ ರಾಜ್ಯಸರ್ಕಾರ ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿ ರಚಿಸಲಿ. ನೀರಾವರಿ ಇಲಾಖೆ ಅಧಿಕಾರಿಗಳು ಟ್ರಯಲ್ ಬ್ಲಾಸ್ಟ್‌ಗೆ ಇಷ್ಟೊಂದು ಆಸಕ್ತಿ ತೋರುತ್ತಿರುವುದೇಕೆ. ರಾಜಕೀಯ ಒತ್ತಡಕ್ಕೆ ಮಣಿದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಿರುವ ಅನುಮಾನ ಕಾಡುತ್ತಿದೆ. ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿರುವ ಅಂಶಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡದೆ ಗಣಿಧಣಿಗಳಿಗೆ ಅನುಕೂಲ ಮಾಡಿಕೊಡುವುದಕ್ಕೆ ಸರ್ಕಾರ, ನೀರಾವರಿ ಇಲಾಖೆ ಅಧಿಕಾರಿಗಳು ಟೊಂಕಕಟ್ಟಿ ನಿಂತಿದ್ದಾರೆ. ಈ ವಿಚಾರದಲ್ಲಿ ನಾವೂ ಕಾನೂನು ಸಮರ ಮುಂದುವರೆಸುತ್ತೇವೆ.

 ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ 

Latest Videos
Follow Us:
Download App:
  • android
  • ios