Asianet Suvarna News Asianet Suvarna News

ವಾಕಿಂಗ್ ಸ್ಟಿಕ್ ಹಿಡಿದು ವೇದಿಕೆ ಏರಿದ ಕೃಷ್ಣರ ಹಳೆಯ ಮೈಸೂರು ನಂಟು ಮೆಲುಕು

  • ಈ ಬಾರಿಯ ದಸರಾ ಮಹೋತ್ಸವನ್ನು ಉದ್ಘಾಟಿಸಿದ ರಾಜ್ಯದ ಹಿರಿಯ ಮುತ್ಸದ್ಧಿ ರಾಜಕಾರಣಿ ಎಸ್‌.ಎಂ. ಕೃಷ್ಣ
  • ತಮ್ಮ ಹಾಗೂ ಮೈಸೂರಿನ ಸಂಬಂಧವನ್ನು ಮೆಲಕು ಹಾಕಿದರು
SM Krishna Remembers his old mysuru days in Dasara Program snr
Author
Bengaluru, First Published Oct 8, 2021, 12:58 PM IST
  • Facebook
  • Twitter
  • Whatsapp

 ಮೈಸೂರು (ಅ.08):  ಈ ಬಾರಿಯ ದಸರಾ (Dasara) ಮಹೋತ್ಸವನ್ನು ಉದ್ಘಾಟಿಸಿದ ರಾಜ್ಯದ ಹಿರಿಯ ಮುತ್ಸದ್ಧಿ ರಾಜಕಾರಣಿ ಎಸ್‌.ಎಂ. ಕೃಷ್ಣ (SM Krishna) ಅವರು ತಮ್ಮ ಹಾಗೂ ಮೈಸೂರಿನ (Mysuru) ಸಂಬಂಧವನ್ನು ಮೆಲಕು ಹಾಕಿದರು. ತಮ್ಮ ಉಡುಗೆ-ತೊಡುಗೆ, ನಯ- ನಾಜೂಕಿನ ಮಾತುಗಳಿಗೆ ಹೆಸರಾದ ಕೃಷ್ಣ ಅವರು ವಯೋಮಾನದ ಕಾರಣಕ್ಕೆ ವಾಕಿಂಗ್‌ ಸ್ಟಿಕ್‌ ಹಿಡಿದು ನಿಧಾನವಾಗಿ ವೇದಿಕೆಗೆ ಬಂದಿದ್ದರು.

ಈಗ ತಾನೆ ತಾಯಿ ಚಾಮುಂಡೇಶ್ವರಿಯ (Chamundeshwari) ಅಡಿದಾವರೆಗಳಿಗೆ ಪ್ರಾರ್ಥನೆ ಸಲ್ಲಿಸಿ, ಮನುಕುಲಕ್ಕೆ ಬಂದಿರುವ ಬಹಳ ದೊಡ್ಡ ಗಂಡಾಂತರ ಕೊರೋನಾ (Corona) ಪಿಡುಗು ತೊಲಗಿಸಿ ರಕ್ಷಣೆ ಮಾಡಬೇಕು ಎಂದು ಪ್ರಾರ್ಥಿಸಿದ್ದೇನೆ ಎಂದು ಅವರು ಮಾತು ಆರಂಭಿಸಿದರು.

ಮೈಸೂರು ದಸರಾ: ಯದುವೀರ್‌ 7ನೇ ಖಾಸಗಿ ದರ್ಬಾರ್‌

ಯಾವ ಜನ್ಮದ ಪುಣ್ಯವೋ ಏನೋ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅವರ ನಿರ್ಧಾರದಿಂದ ಈ ಬಾರಿಯ ದಸರೆ ಉದ್ಘಾಟಿಸುವ ಸೌಭಾಗ್ಯ ನನ್ನದಾಗಿದೆ. ಈ ದೊಡ್ಡ ಗೌರವನ್ನು ನನ್ನದಾಗಿ ಮಾಡಿಕೊಟ್ಟಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಅನಂತ ಧನ್ಯವಾದಗಳು ಎಂದರು.

ತಾಯಿ ಚಾಮುಂಡೇಶ್ವರಿ ದೇವಿಯ ಕೃಪೆಯಿಂದ ಈ ಸಾಲಿನ ದಸರಾ ಉತ್ಸವವನ್ನು ಉದ್ಘಾಟಿಸಲು ನನಗೆ ಅವಕಾಶ ದೊರಕಿದೆ. ಅದಕ್ಕಾಗಿ ತಾಯಿ ಶ್ರೀಚಾಮುಂಡೇಶ್ವರಿ ತಾಯಿಗೆ ಭಕ್ತಿ ನಮಸ್ಕಾರಗಳನ್ನು ಅರ್ಪಿಸುತ್ತೇನೆ. ನಾನು ಮೈಸೂರಿಗೆ ಬಂದು ಈ ಉತ್ಸವವನ್ನು ಉದ್ಘಾಟಿಸಲು ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದರು.

ನಾನು ವಿದ್ಯಾರ್ಥಿ ದೆಸೆಯಿಂದಲೂ ಮೈಸೂರಿನ ದಸರಾ ಉತ್ಸವನ್ನು ನೋಡುತ್ತಾ ಬೆಳೆದಿದ್ದೇನೆ. 10-12 ವರ್ಷದವನಿದ್ದಾಗ ನಮ್ಮ ತಂದೆ ಓದಲು ಮೈಸೂರಿಗೆ ಕಳುಹಿಸಿಕೊಟ್ಟರು. ಒಂಟಿಕೊಪ್ಪಲು ಮಿಡಲ್‌ ಸ್ಕೂಲ್‌, ಮಹಾಜನ ಹೈಸ್ಕೂಲ್‌, ಯುವರಾಜ ಕಾಲೇಜು, ಮಹಾರಾಜ ಕಾಲೇಜಿನಲ್ಲಿ ಓದಿನ ಜೊತೆಜೊತೆಗೆ ನನ್ನ ವ್ಯಕ್ತಿತ್ವ ರೂಪಿಸಿಕೊಂಡಿದ್ದೇನೆ. ರಾಮಕೃಷ್ಣ ಆಶ್ರಮದಿಂದ ವಾರಕ್ಕೊಮ್ಮೆ ಚಾಮುಂಡಿಬೆಟ್ಟಕ್ಕೂ (Chamundi Hill) ಭೇಟಿ ಕೊಟ್ಟು, ಚಾಮುಂಡಿಗೆ ಕೈಮುಗಿಯುತ್ತಿದ್ದೆ.

ಜಗನ್ಮೋಹನ ಅರಮನೆಯಲ್ಲಿ (Palace) ಪ್ರಜಾಪ್ರತಿನಿಧಿ ಸಭೆ, ಮರಿಮಲ್ಲಪ್ಪ ಶಾಲೆಯಲ್ಲಿ ವಾಸ್ತವ್ಯ, ಟಿ. ವರದಾಚಾರ್‌, ಪಿಟೀಲು ಚೌಡಯ್ಯ, ದೇವೇಂದ್ರಪ್ಪ ಅವರಿಂದ 10 ದಿನಗಳು ಸಂಗೀತ ಕಾರ್ಯಕ್ರಮಗಳು ಇರುತ್ತಿದ್ದವು. ದಸರಾ ಪ್ರದರ್ಶನ ನೋಡಲು ಸಹಸ್ರಾರು ಜನ ಬರುತ್ತಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿ ದಿವಾನ್‌. ಸರ್‌ ಎಂ. ವಿಶ್ವೇಶ್ವರಯ್ಯ (sir M Vishweshwaraiah), ಸರ್‌ ಮಿರ್ಜಾ ಇಸ್ಮಾಯಿಲ್‌ ಕಾಲದಿಂದಲೂ ಈ ದಸರಾದ ವೈಭವವನ್ನು ನೋಡಿದ್ದೇನೆ. ನಮ್ಮ ಹಿರಿಯರಿಂದ ಅನೇಕ ಸಂಗತಿಗಳನ್ನು ಕೇಳಿದ್ದೇನೆ. ಮೈಸೂರು, ಮಂಡ್ಯ, ಚಾಮರಾಜನಗರ ಮೊದಲಾದ ಕಡೆ ದಸರಾ ಹಬ್ಬ ಎಂದರೆ ತಮ್ಮ ಮನೆಯಲ್ಲಿ ನಡೆಯುವ ಹಬ್ಬ ಎನ್ನುವ ಸಂಭ್ರಮವಿರುತ್ತಿತ್ತು.

ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ 1,000 ಹೆಚ್ಚುವರಿ ಬಸ್‌

ನವರಾತ್ರಿ (Navaratri) ಆ ಹತ್ತು ದಿನಗಳಲ್ಲೂ ‘ಬೊಂಬೆ ಪ್ರದರ್ಶನ’ ಪ್ರತಿ ಮನೆಯಲ್ಲೂ ನಡೆಯುತ್ತಿತ್ತು. ಇನ್ನು ದೇಶದ ಪ್ರಖ್ಯಾತ ಸಂಗೀತಗಾರರನ್ನ ನೋಡಲು ದಸರಾ ತನಕ ಕಾಯುವ ಶೋತೃಗಳಿಗೆ ಕಡಿಮೆಯಿರಲಿಲ್ಲ. ಸಂಗೀತ ಕಲಾವಿದರಿಗೂ ಮೈಸೂರಿನ ದಸರಾ ಸಂದರ್ಭದಲ್ಲಿ ಹಾಗೂ ಬೆಂಗಳೂರಿನ ಶ್ರೀರಾಮಸೇವಾ ಮಂಡಲಿಯಲ್ಲಿ ಹಾಡುವುದು ಪ್ರತಿಷ್ಠೆಯ ವಿಚಾರವಾಗಿತ್ತು. ಅವರು ‘ಇವು ತಮ್ಮ ಬದುಕಿನ ಸುಸಂದರ್ಭ’ ಎಂದು ಕಲಾವಿದರು ಭಾವಿಸುತ್ತಿದ್ದರು. ಅದಕ್ಕೆ ಮುಖ್ಯ ಕಾರಣ ಕಾಲದ ಜನರ ಅಭಿರುಚಿ. ಕಲಾವಿದರನ್ನು ಅವರ ಪ್ರತಿಭೆಯ ಮೇಲೆ ಗೌರವಿಸುತ್ತಿದ್ದರು. ಈ ಪರಂಪರೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಜಯಚಾಮರಾಜ ಒಡೆಯರ್‌ ಅವರು ಪ್ರಾರಂಭಿಸಿ ಯಶÜಸ್ವಿಯಾಗಿ ಅದನ್ನು ಮುಂದುವರಿಸಿಕೊಂಡು ಬಂದಿದ್ದರು. ಅದನ್ನ ಇಂದು ನಾವು ಮುಂದುವರಿಸುವ ಅಗತ್ಯವಿದೆ ಎಂದರು.

ಮೈಸೂರಿನ ದಸರಾ ಉತ್ಸವಕ್ಕೆ 800 ವರ್ಷಗಳ ಇತಿಹಾಸವಿದೆ. ವಿಜಯನಗರದ ಅರಸರು (vijayanagara dynasty) ಈ ದಸರಾವನ್ನ ತಮ್ಮ ಶಕ್ತಿ ಪ್ರದರ್ಶನ, ವಿದೇಶಿಯರ ಭೇಟಿ ಮಾಡುವುದು ಮತ್ತು ಹೊಸ ದಿಗ್ವಿಜಯಕ್ಕೆ ಹೋಗಲು ಈ ಮೂಹೂರ್ತವನ್ನು ನಿಗದಿ ಮಾಡುವುದಕ್ಕೆ ಉಪಯೋಗಿಸಿ ಕೊಳ್ಳುತ್ತಿದ್ದರು. ವಿಜಯನಗರದ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಹಂಪಿಯಲ್ಲಿ ದಸರಾ ಆಚರಣೆಗಾಗಿ ‘ಮಹಾನವಮಿ ದಿಬ್ಬ’ವನ್ನು ನಿರ್ಮಿಸಲಾಗಿತ್ತು. ಅಲ್ಲಿ ನವರಾತ್ರಿ ಹತ್ತು ದಿನಗಳ ಕಾಲವು ಕ್ರೀಡೆ, ಸಾಹಸ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ‍್ಯಕ್ರಮಗಳು ಜರುಗುತ್ತಿದ್ದವು.

ಇನ್ನು 9 ದಿನ ದಸರಾ ಸಂಭ್ರಮ: ರಾಜ್ಯಾದ್ಯಂತ ವಿಭಿನ್ನ ರೀತಿಯಲ್ಲಿ ನವರಾತ್ರಿ ಆಚರಣೆ!

ವಿಜಯನಗರ ಸಾಮ್ರಾಜ್ಯದ ದಸರಾ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು ಅವರ ಉತ್ತರಾಧಿಕಾರಿಗಳಾಗಿದ್ದ ಮೈಸೂರು ಒಡೆಯರ ಸಂತತಿಯವರು ಎಂದರೆ ತಪ್ಪಿಲ್ಲ. ಕ್ರಿ.ಶ. 1610 ರಲ್ಲಿ ರಾಜ ಒಡೆಯರ್‌ ಅವರು ಶ್ರೀರಂಗಪಟ್ಟಣದಲ್ಲಿ ಈ ದಸರಾವನ್ನು ಪ್ರಾರಂಭ ಮಾಡಿದರು. ಈ ಅಂಬಾರಿಯನ್ನು ಸಹ ವಿಜಯನಗರದವರಿಂದಲೇ ಪಡೆದಿದ್ದರು. ಈ ಅಂಬಾರಿ ಮಹಾರಾಷ್ಟ್ರದ ದೇವಗಿರಿಯಿಂದ ವಿಜಯನಗರದವರಿಗೆ ಬಂದಿತ್ತು. ಈ ಅಂಬಾರಿಗೆ 8 ಶತಮಾನಗಳ ಇತಿಹಾಸವಿದೆ. 750 ಕೆ. ಜಿ.ಯ ಸ್ವರ್ಣ ಅಂಬಾರಿಯಲ್ಲೇ ವಿಜಯ ದಶಮಿಯೆಂದು ದೇವಿ ಚಾಮುಂಡೇಶ್ವರಿಯ ಮೆರವಣಿಗೆ ಹೋಗುವುದು ಎಂದರು.

ದಸರಾಕ್ಕೆ ಹೊಸ ಸ್ವರೂಪ ಕೊಟ್ಟಕೀರ್ತಿ ಮೈಸೂರಿನ ದಿವಾನರಿಗೆ ಸೇರುತ್ತದೆ. ದಿವಾನ್‌ ರಂಗಾಚಾರ್ಯಲು ಅವರಿಂದ ಹಿಡಿದು ಸರ್‌. ಪುಟ್ಟಣ ಚೆಟ್ಟಿಯಾರ್‌ ತನಕ ಎಲ್ಲಾ ದಿವಾನರಿಗೆ ಮೈಸೂರು ಸಂಸ್ಥಾನದ ಪ್ರಗತಿಯನ್ನು ರಾಜ್ಯದ ಜನತೆಯ ಗಮನಕ್ಕೆ ತರಬೇಕೆಂಬ ಹಿರಿದಾಸೆಯಿತ್ತು. ದಸರಾ ಸಂದರ್ಭದಲ್ಲಿ ಪ್ರಜಾ ಪ್ರತಿನಿಧಿ ಸಭೆಯ ಅಧಿವೇಶನ ಮೈಸೂರಿನಲ್ಲಿ ನಡೆಯುತ್ತಿತ್ತು. ದಿವಾನ್‌ರು ಸದಸ್ಯರ ಸಣ್ಣ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದರು. ಮೈಸೂರು ಸಂಸ್ಥಾನದ ಯಾವುದೇ ಜಿಲ್ಲಾ ಕೇಂದ್ರವನ್ನು ತೆಗೆದುಕೊಳ್ಳಿ ಆ ಕಾಲದಲ್ಲೇ ಶಾಲೆ, ಕಾಲೇಜು ಹಾಗೂ ಆಸ್ಪತ್ರೆಗಳಿದ್ದನ್ನು ನೋಡಬಹುದು. ದಿವಾನ್‌ರ ಜೊತೆ ಮಹಾರಾಣಿ ಸನ್ನಿಧಾನಕ್ಕೂ ಸಹ ಅವರು ಸಂಸ್ಥಾನದ ಪ್ರಜೆಗಳ ವಿಚಾರದಲ್ಲಿ ತುಂಬಾ ಪ್ರೀತಿಯಿತ್ತು. ಚೆಲುವಾಂಬ ಆಸ್ಪತ್ರೆಯ ನಿರ್ಮಾಣವನ್ನು ಜ್ಞಾಪಿಸಿಕೊಳ್ಳಿ ಎಂದು ಅವರು ಹೇಳಿದರುಯ

ಮಹಾತ್ಮ ಗಾಂಧೀಜಿ (Mahathma Gandhiji) ಅವರೇ ಈ ಪರಿಶಿಷ್ಟಜಾತಿ ಮತ್ತು ವರ್ಗಕ್ಕೆ ಮೈಸೂರಿನ ರಾಜರು ಹಾಗೂ ಆ ಕಾಲದ ಗಣ್ಯರು ಮಾಡಿದ ಸೇವೆಯನ್ನ ಮೆಚ್ಚಿಕೊಂಡಿದ್ದರು. ನಮ್ಮ ತಂದೆ ಎಸ್‌. ಸಿ. ಮಲ್ಲಯ್ಯ ಅವರು ನಮ್ಮೂರಿನಲ್ಲಿ ಪರಿಶಿಷ್ಟಜಾತಿಗೆ ನಿರ್ಮಿಸಿದ್ದ ವಸತಿನಿಲಯಕ್ಕೆ ಮಹಾತ್ಮ ಗಾಂಧೀಜಿ ಭೇಟಿ ಕೊಟ್ಟಿದ್ದರು. ಅವರು ‘ನ್ಯಾಯ ವಿಧೇಯಕ ಸಭೆಯ’ ಸದಸ್ಯರಾಗಿದ್ದರು. ಕೃಷ್ಣರಾಜ ಸಾಗರದ ನಿರ್ಮಾಣದ ಸಂದರ್ಭದಲ್ಲಿ ಒಡೆಯರ್‌ ಮನೆತನದವರು ನಡೆದು ಕೊಂಡ ಉದಾರತೆಯನ್ನ ನಮ್ಮ ತಂದೆ ಅನೇಕ ಸಲ ಹೇಳಿದ್ದಾರೆ ಎಂದರು.

ಪ್ರತಿಯೊಂದು ಧಾರ್ಮಿಕ ಆಚರಣೆಯ ಹಿಂದೆ ಮಹತ್ವದ ಸಂದೇಶವಿರುತ್ತದೆ. ಉದಾಹರಣೆಗೆ ಹೇಳುವುದಾದರೆ ಇಂದಿನ ದಸರಾ ಉತ್ಸವ ಕೇವಲ ಧಾರ್ಮಿಕ ಆಚರಣೆ ಎನ್ನುವಂತಿಲ್ಲ. ಇದಕ್ಕೊಂದು ಸಾಂಸ್ಕೃತಿಕ ಮಹತ್ವವಿದೆ ಎಂದು ಅವರು ಹೇಳಿದರು.

ಮೈಸೂರು ದಸರಾದಲ್ಲಿ ಕುಸ್ತಿಗೆ ಈಗಲೂ ಪ್ರಾಮುಖ್ಯತೆ ಇದೆ ಎಂದು ಭಾವಿಸಿದ್ದೇನೆ. ಮೈಸೂರಿನಲ್ಲಿ ಕುಸ್ತಿ ಕ್ರೀಡೆ ಬೆಳೆಯಲು ಸಾಹುಕಾರ್‌ ಚನ್ನಯ್ಯ ಅವರ ಪಾತ್ರ ಹಿರಿದಾಗಿತ್ತು. ವ್ಯಕ್ತಿಗಳು ಮನಸ್ಸು ಮಾಡಿದರೆ ಕ್ರೀಡೆ ಮತ್ತು ಸಾಂಸ್ಕೃತಿಕ ವಿಚಾರಗಳಿಗೆ ಎಷ್ಟೊಂದು ಆದ್ಯತೆ ಕೊಡಬಹುದೆಂಬುದಕ್ಕೆ ಉದಾಹರಣೆಯಾಗಿ ಕುಸ್ತಿ ವಿಚಾರ ಹೇಳಿದ್ದೇನೆ ಎಂದರು.

Follow Us:
Download App:
  • android
  • ios