Belagavi Riot: ಬೊಮ್ಮಾಯಿ ಸರ್ಕಾರಕ್ಕೆ ಸವಾಲು ಹಾಕಿದ ಶಿವಸೇನೆ ನಾಯಕ
* ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟ
* ಎಂಇಎಸ್ ಬ್ಯಾನ್ ಮಾಡುವಂತೆ ಬೊಮ್ಮಾಯಿ ಸರ್ಕಾರಕ್ಕೆ ಆಗ್ರಹ
* ಬೊಮ್ಮಾಯಿ ಸರ್ಕಾರಕ್ಕೆ ಸವಾಲು ಹಾಕಿದ ಶಿವಸೇನೆ ನಾಯಕ
ಬೆಂಗಳೂರು, (ಡಿ.22): ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಎಂಇಎಸ್(MES) ಪುಂಡರ ಪುಂಡಾಟ ಮಿತಿ ಮೀರಿದ್ದು, ಅದನ್ನು ವಿರೋಧಿಸಿ ರಾಜ್ಯದೆಲ್ಲೆಡೆ ಆಕ್ರೋಶದ ಕಟ್ಟೆ ಹೊಡೆದಿದೆ.
ಅಲ್ಲದೇ ರಾಜ್ಯದಲ್ಲಿ ಎಂಇಎಸ್ ಬ್ಯಾನ್(MES Ban) ಮಾಡಬೇಕೆಂಬ ಕೂಗು ಜೊರಾಗಿದೆ. ಇದರ ನಡುವೆಯೇ ಶಿವಸೇನೆ (Shiv Sena) ನಾಯಕ ಸಂಜಯ್ ರಾವತ್(Sanjay Raut) ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
Karnataka Bandh : ಡಿ.31 ಕರ್ನಾಟಕ ಬಂದ್- ಕನ್ನಡಿಗರೇ ಬೆಂಬಲಿಸಿ
ಕರ್ನಾಟಕದಲ್ಲಿ ಧೈರ್ಯವಿದ್ದರೆ ಎಂಇಎಸ್ ನ್ನು ನಿಷೇಧಿಸಲಿ ಎಂದು ಅವರು ಬೊಮ್ಮಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಈ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಶಿವಾಜಿ ಹೆಸರಿನಲ್ಲಿ ಮತ ಕೇಳುವ ಬಿಜೆಪಿ, ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದರೂ ಮೌನ ವಹಿಸಿದೆ. ಆದರೆ, ಇನ್ನೊಂದೆಡೆ ಮೊಘಲರ ವಿರುದ್ಧ ಶಿವಾಜಿ ಮಹಾರಾಜರ ಹೋರಾಟ ಬಣ್ಣಿಸುತ್ತಿದೆ. ಈಗ ಇಷ್ಟೊಂದು ಅವಮಾನವಾದರೂ ಮೌನ ವಹಿಸಿದೆ. ಕೇಂದ್ರದ ಯಾವೊಬ್ಬ ಬಿಜೆಪಿ ಸಂಸದರೂ ಈ ಕುರಿತು ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಮರಾಠರ ಸೇವೆ ಮಾಡುತ್ತಿರುವ 200ಕ್ಕೂ ಹೆಚ್ಚು ಎಂಇಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಆದರೂ ಬಿಜೆಪಿ ಮೌನ ವಹಿಸಿದೆ. ಬಿಜೆಪಿ ನೇತೃತ್ವದ ಸರ್ಕಾರ ಇರುವ ರಾಜ್ಯದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂದು ಆರೋಪಿಸಿದ್ದಾರೆ.
ಎಂಇಎಸ್ ಬ್ಯಾನ್ ಮಾಡುವಂತೆ ಆಗ್ರಹ
ಬೆಳಗಾವಿಯಲ್ಲಿ ಎಂಇಎಸ್ ಮೇಲಿಂದ ಮೇಲೆ ಕರ್ನಾಟಕಕ್ಕೆ ಅವಮಾನ ಮಾಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಂಇಎಸ್ ಅನ್ನು ನಿಷೇಧಿಸಬೇಕೆಂದು ಕನ್ನಡಪರ ಸಂಘಟನೆಗಳು ಸೇರಿದಂತೆ ಇತರೆ ಸಂಘಗಳು ಆಗ್ರಹಿಸಿವೆ. ಅಲ್ಲದೇ ಎಂಇಎಸ್ ರದ್ದು ಮಾಡುವಂತೆ ಪ್ರತಿಭಟನೆಗಳು ನಡೆಯುತ್ತಲೇ ಇವೆ.
ಖಂಡನಾ ನಿರ್ಣಯ ಅಂಗೀಕಾರ
ಸಂಗೊಳ್ಳಿ ರಾಯಣ್ಣ ಪುತ್ಥಳಿ ಭಗ್ನ ಹಾಗೂ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ನಡೆಸಿದ್ದ ಎಂಇಎಸ್ ಸಂಘಟನೆಯ ವಿರುದ್ಧ ಅಧಿವೇಶನದಲ್ಲಿ ಸರ್ವಾನುಮತದಿಂದ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ.
ಅಧಿವೇಶನದಲ್ಲಿ ಸಿಎಂ ಬೊಮ್ಮಾಯಿ ಅವರು ಖಂಡನಾ ನಿರ್ಣಯವನ್ನು ಮಂಡಿಸಿದ್ದು ಎಲ್ಲರೂ ಒಕ್ಕೊರಳಿನಿಂದ ಅಂಗೀಕರಿಸಿದ್ದಾರೆ. ನಂತರ ಮಾತನಾಡಿದ ಅವರು ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಶಿವಾಜಿ ಪ್ರತಿಮೆಗೆ ಅವಮಾನವನ್ನು ಸದನವು ಗಂಭೀರವಾಗಿ ಖಂಡಿಸುತ್ತದೆ. ಇಂಥ ಕೃತ್ಯಗಳನ್ನು ದೇಶದ್ರೋಹ ಎಂದು ಪರಿಗಣಿಸಿ ಗಂಭೀರ ಕ್ರಮ ತೆಗೆದುಕೊಳ್ಳಲಾಗುವುದು. ವಿವರಗಳನ್ನು ಕೇಂದ್ರ ಗೃಹ ಇಲಾಖೆಗೆ ಕಳಿಸಿಕೊಡಲಾಗುವುದು.
ಎರಡೂ ರಾಜ್ಯಗಳ ನಡುವೆ ಸಾಮರಸ್ಯ ಇರಬೇಕೆಂದು ಕರ್ನಾಟಕ ಸರ್ಕಾರ ಬಯಸುತ್ತಿದೆ. ಆದರೆ ಗಡಿಯಾಚೆಗೂ ಪುಂಡಾಟಿಕೆಗೆ ಪ್ರೋತ್ಸಾಹ ಸಿಗುತ್ತಿದೆ. ಅದನ್ನು ನಿಲ್ಲಿಸಬೇಕೆಂದು ಸದನ ನಿರ್ಣಯ ಮಾಡುತ್ತದೆ. ಇನ್ನು ಮುಂದೆ ಇಂಥ ಪ್ರಕರಣಗಳನ್ನು ದೇಶದ್ರೋಹ ಎಂದು ಪರಿಗಣಿಸಿ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ. ಸದನದ ಎಲ್ಲ ಪಕ್ಷಗಳೂ ಈ ವಿಚಾರದಲ್ಲಿ ಸರ್ಕಾರದ ಜೊತೆಗೆ ಇವೆ ಎಂದು ನಿರ್ಣಯ ಮಂಡಿಸಿದ್ದರು.
ಡಿ.31 ಕರ್ನಾಟಕ ಬಂದ್
ರಾಜ್ಯದಲ್ಲಿ ಎಂಇಎಸ್ (MES) ಪುಂಡಾಟ ಮೆರೆಯುತ್ತಿದ್ದು, ಕನ್ನಡಿಗರ (Kannadiga) ಮೇಲೆ ಹಲ್ಲೆ ಆಸ್ತಿ-ಪಾಸ್ತಿಗಳ ಮೇಲೆ ಮನಬಂದತೆ ದಾಳಿ ಮಾಡುತ್ತಿರುವುದನ್ನು ವಿರೋಧಿಸಿ ಇದೇ ಡಿ.31 ರಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ. ಅಂದು ಬೆಂಗಳೂರಿನ (Bengaluru) ಟೌನ್ ಹಾಲ್‌ನಲ್ಲಿ 5 ಲಕ್ಷ ಜನ ಸೇರಿಸಿ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಡಿ.31 ರಂದು ಎಲ್ಲರೂ ಕನ್ನಡಿಗರೂ ಒಗ್ಗಟ್ಟಾಗಿ ಬಂದ್‌ಗೆ ಸಾಥ್ ನೀಡಬೇಕು ಎಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಬೆಂಗಳೂರು ಟೌನ್ ಹಾಲ್ ಇಂದ ಬಂದ್ ಪ್ರಕ್ರಿಯೆಗಳು ಆರಂಭವಾಗಲಿದೆ. ಎಲ್ಲರೂ ಇದಕ್ಕೆ ಸಾಥ್ ನೀಡಿ ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ 31ಕ್ಕೆ ಸಂಪೂರ್ಣ ಬಂದ್ ಮಾಡಬೇಕೆಂದು ಹೇಳಿವೆ.