ಸಾಗರದಾಳದಲ್ಲಿ ಪತ್ತೆಯಾಯ್ತು ಮಲ್ಪೆ ಬೋಟ್ ಅವಶೇಷ?
‘ಸುವರ್ಣ ತ್ರಿಭುಜ’ವನ್ನು ಸಾಗರತಳದಲ್ಲಿ ಶೋಧಿಸುತ್ತಿರುವ ನೌಕಾಸೇನೆಯ ಐಎನ್‌ಎಸ್ ಕೊಚ್ಚಿಗೆ ಬೋಟಿನ ಅವಶೇಷಗಳು ಮಹಾರಾಷ್ಟ್ರದ ಸಮುದ್ರ ತೀರದಲ್ಲಿ ಪತ್ತೆಯಾಗಿವೆ
ಉಡುಪಿ : ಮಹಾರಾಷ್ಟ್ರದ ಸಮುದ್ರ ತೀರದಲ್ಲಿ ಮುಳುಗಿರಬಹುದಾದ ಮಲ್ಪೆ ಬಂದರಿನ ಮೀನುಗಾರಿಕಾ ಬೋಟು ‘ಸುವರ್ಣ ತ್ರಿಭುಜ’ವನ್ನು ಸಾಗರತಳದಲ್ಲಿ ಶೋಧಿಸುತ್ತಿರುವ ನೌಕಾಸೇನೆಯ ಐಎನ್‌ಎಸ್ ಕೊಚ್ಚಿಗೆ ಬೋಟಿನ ಅವಶೇಷಗಳು ಪತ್ತೆಯಾಗಿವೆ. ಆದರೆ, ಇದು ಸುವರ್ಣ ತ್ರಿಭುಜ ದೋಣಿಯದ್ದೇ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ.
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ, ಮಲ್ಪೆಯ 2 ಮತ್ತು ಉತ್ತರ ಕನ್ನಡ ಜಿಲ್ಲೆಯ 5 ಮಂದಿ ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟು, ಡಿ.15ರಂದು ಮಹಾರಾಷ್ಟ್ರದ ಸಿಂಧುದುರ್ಗಾ ಜಿಲ್ಲೆಯ ತೀರದ ಸಮೀಪ ಮೀನುಗಾರರ ಸಹಿತ ನಿಗೂಢ ರೀತಿಯಲ್ಲಿ ಕಾಣೆಯಾಗಿತ್ತು. ಪೊಲೀಸ್, ಕರಾವಳಿ ಕಾವಲು ಪಡೆ ಮತ್ತು ನೌಕಾಸೇನೆಯಿಂದ ಸಾಕಷ್ಟುಶೋಧನೆ ನಡೆದು, ಕೊನೆಗೆ ಸುವರ್ಣ ತ್ರಿಭುಜ ಬೋಟು ಯಾವುದೋ ಅವಘಡಕ್ಕೆ ಈಡಾಗಿ ಸಮುದ್ರದಲ್ಲಿ ಮುಳುಗಿರಬೇಕು ಎಂಬ ಅಭಿಪ್ರಾಯಕ್ಕೆ ನೌಕಾಸೇನೆ ಬಂದಿದೆ. ‘ಐಎನ್‌ಎಸ್ ಕೊಚ್ಚಿ’ ಎಂಬ ಯುದ್ಧನೌಕೆಯ ಸಹಾಯದಿಂದ ಸೋನಾರ್ ತಂತ್ರಜ್ಞಾನ ಬಳಸಿ ಸಿಂಧುದುರ್ಗಾ ತೀರದಲ್ಲಿ ಕಳೆದ 2 ವಾರಗಳಿಂದ ಸಾಗರತಳದಲ್ಲಿ ಶೋಧನೆ ನಡೆಸುತ್ತಿದೆ.
ಮಾಹಿತಿ ತಾಳೆಯಾಗುತ್ತಿದೆ: ಸದ್ಯ ಐಎನ್‌ಎಸ್ ಕೊಚ್ಚಿ ಯುದ್ಧನೌಕೆಯ ಸೋನಾರ್ ತಂತ್ರಜ್ಞಾನಕ್ಕೆ ಸಮುದ್ರದಾಳದಲ್ಲಿ ಬೋಟಿನ ಕೆಲ ಭಗ್ನಾವಶೇಷಗಳು ಪತ್ತೆಯಾಗಿವೆ. ಲಭ್ಯ ಮಾಹಿತಿಯಂತೆ ಐಎನ್‌ಎಸ್ ಕೊಚ್ಚಿ ಸಾಗರದಾಳದಲ್ಲಿ ಸುಮಾರು 60-70 ಮೀಟರ್ ಆಳದಲ್ಲಿ, ವಿವಿಧ ಬಗೆಯ ಚಿಕ್ಕದೊಡ್ಡ ಅವಶೇಷಗಳನ್ನು ಪತ್ತೆ ಮಾಡಿದೆ. ಅದರಲ್ಲಿ ಬೋಟಿನ ಭಗ್ನ ಅವಶೇಷಗಳೂ ಪತ್ತೆ ಆಗಿವೆ. ಅದು ಸರಿಸುಮಾರು 75-78 ಅಡಿ ಉದ್ದವಿರುವುದರಿಂದ ಮೀನುಗಾರಿಕಾ ಬೋಟು ಇರಬಹುದು ಎಂಬ ನಿರ್ಧಾರಕ್ಕೆ ತಜ್ಞರು ಬಂದಿದ್ದಾರೆ.
ಈ ಅವಶೇಷಗಳು ಸುವರ್ಣ ತ್ರಿಭುಜ ನಾಪತ್ತೆಯಾದ ಸಿಂಧುದುರ್ಗಾ ತೀರದಲ್ಲೇ ಪತ್ತೆಯಾಗಿರುವುದು ಮತ್ತು ಸುವರ್ಣ ತ್ರಿಭುಜ ಬೋಟು ಕೂಡ 75 ಅಡಿ ಉದ್ದವಿದ್ದ ಹಿನ್ನೆಲೆಯಲ್ಲಿ ಇದು ಮಲ್ಪೆಯಿಂದ ಹೋಗಿದ್ದ ಬೋಟಿನ ಅವಶೇಷವೇ ಎನ್ನುವ ಅನುಮಾನ ಈಗ ಕಾಡುತ್ತಿದೆ.
ಐಎನ್‌ಎಸ್ ಸಟ್ಲೆಜ್ ಬಳಕೆ: ಆದರೆ, ಈ ಅವಶೇಷಗಳು 60-70 ಮೀಟರ್ ಆಳದಲ್ಲಿರುವುದರಿಂದ ಅದರ ಸರಿಯಾದ ಚಿತ್ರವನ್ನು ಸೆರೆ ಹಿಡಿಯುವುದು ಐಎನ್‌ಎಸ್ ಕೊಚ್ಚಿಗೆ ಸಾಧ್ಯವಾಗಿಲ್ಲ. ಆದ್ದರಿಂದ ನೌಕಾಸೇನೆ ಅತ್ಯಾಧುನಿಕ 3ಡಿ ಮ್ಯಾಪಿಂಗ್ ತಂತ್ರಜ್ಞಾನವಿರುವ ‘ಐಎನ್‌ಎಸ್ ಸಟ್ಲೇಜ್’ ಎನ್ನುವ ಹೈಡ್ರೋಗ್ರಾಫಿಕ್ ಸರ್ವೆ ಹಡಗನ್ನು ಕಾರ್ಯಾಚರಣೆಗೆ ಇಳಿಸಿದೆ. ಅದು ಗುರುವಾರ ಅಥವಾ ಶುಕ್ರವಾರ ಸಮುದ್ರದ ತಳದಲ್ಲಿ ಪತ್ತೆಯಾಗಿರುವ ಅವಶೇಷಗಳ ನೈಜ ಚಿತ್ರ ನೀಡಲಿದೆ. ಅದರ ನಂತರ ಅದು ಸುವರ್ಣ ತ್ರಿಭುಜ ಹೌದೋ ಅಲ್ಲವೋ ಎಂಬುದು ಖಚಿತವಾಗಲಿದೆ.
ವರದಿ : ಸುಭಾಶ್ಚಂದ್ರ ಎಸ್.ವಾಗ್ಳೆ