ಬೆಂಗಳೂರು :  ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌)ದ ನೂತನ ಕೇಬಲ್‌ ಮತ್ತು ಡಿಟಿಎಚ್‌ ನೀತಿ ಅನ್ವಯ ಗ್ರಾಹಕರಿಗೆ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ನೀಡಿದ್ದ ಗಡುವು ಗುರುವಾರ (ಫೆ.7) ಮುಕ್ತಾಯವಾಗಲಿದೆ.

ವಾರದ ಹಿಂದೆಯೇ ಕೇಬಲ್‌ ಆಪರೇಟರ್‌ಗಳು ಉಚಿತ ಚಾನೆಲ್‌ಗಳ ಆಯ್ಕೆಗಾಗಿ ಗ್ರಾಹಕರಿಗೆ ಚಾನೆಲ್‌ಗಳ ಪಟ್ಟಿನೀಡಿ, ನಿಗದಿತ ಅವಧಿಯಲ್ಲಿ ಚಾನೆಲ್‌ ಆಯ್ಕೆ ಮಾಡಿ ತಿಳಿಸುವಂತೆ ಸೂಚಿಸಿದ್ದರು. ಆದರೆ ಇದುವರೆಗೂ ರಾಜ್ಯದಲ್ಲಿ ಶೇ.2ರಷ್ಟುಗ್ರಾಹಕರು ಮಾತ್ರ ಉಚಿತ ಚಾನೆಲ್‌ಗಳ ಆಯ್ಕೆ ಮಾಡಿದ್ದಾರೆ. ಟ್ರಾಯ್‌ ಸೂಚನೆ ಪ್ರಕಾರ ಗುರುವಾರದ ನಂತರ ಪೇ ಚಾನೆಲ್‌ಗಳ ಪ್ರಸಾರ ಕಡಿತಗೊಳ್ಳಲಿದೆ ಎಂದು ರಾಜ್ಯ ಕೇಬಲ್‌ ಆಪರೇಟರ್‌ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್‌ ರಾಜು ತಿಳಿಸಿದರು.

ರಾಜ್ಯದಲ್ಲಿ 80 ಲಕ್ಷ ಕೇಬಲ್‌ ಸಂಪರ್ಕದ ಗ್ರಾಹಕರಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 30 ಲಕ್ಷ ಗ್ರಾಹಕರಿದ್ದಾರೆ. ಗ್ರಾಹಕರು ಉಚಿತ ಚಾನೆಲ್‌ಗಳನ್ನು ಆಯ್ಕೆ ಮಾಡಿದ ಬಳಿಕ ಅದನ್ನು ಸೆಟ್‌ ಮಾಡಲು ಕನಿಷ್ಠ ಮೂರರಿಂದ ನಾಲ್ಕು ತಾಸು ಹಿಡಿಯುತ್ತದೆ. ಅಲ್ಲದೆ, ದೇಶದಾದ್ಯಂತ ಹೊಸ ವ್ಯವಸ್ಥೆಗೆ ಅಳವಡಿಸಿಕೊಳ್ಳುವ ಪ್ರಕ್ರಿಯೆ ಚಾಲನೆಯಲ್ಲಿರುವುದರಿಂದ ಸರ್ವರ್‌ ಜಾಮ್‌ ಆಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಹೊಸ ವ್ಯವಸ್ಥೆ ಅಳವಡಿಕೆ ಪ್ರಕ್ರಿಯೆ ಮುಗಿಯಲು ಸಾಕಷ್ಟುಸಮಯಬೇಕಾಗುತ್ತದೆ ಎಂದು ಹೇಳಿದರು.

ಕೆಲವೆಡೆ ಪೇ ಚಾನೆಲ್‌ ಕಡಿತ :  ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಭಾಗಗಳಲ್ಲಿ ಕೆಲವು ಪೇ ಚಾನೆಲ್‌ ಪ್ರಸಾರ ಕಡಿತವಾಗಿದ್ದು, ಗ್ರಾಹಕರಿಗೆ ಅಡಚಣೆಯಾಗಿದೆ. ಗುರುವಾರದ ಬಳಿಕ ಎಲ್ಲೆಡೆ ಈ ಪೇ ಚಾನೆಲ್‌ ಪ್ರಸಾರದಲ್ಲಿ ವ್ಯತ್ಯಯವಾಗಲಿದೆ. ಟ್ರಾಯ್‌ ನೂತನ ನೀತಿಯ ಅನ್ವಯ ಗ್ರಾಹಕರು ಶೇ.18ರಷ್ಟುಜಿಎಸ್‌ಟಿ ಸೇರಿ 153 ರು.ಗಳಿಗೆ ನೂರು ಉಚಿತ ಚಾನೆಲ್‌ಗಳನ್ನು ವೀಕ್ಷಿಸಬಹುದು. ನಂತರ ತಮ್ಮಿಷ್ಟದ ಚಾನೆಲ್‌ಗಳನ್ನು ವೀಕ್ಷಿಸಲು ನಿಗದಿತ ಮೊತ್ತ ಪಾವತಿಸಬೇಕು. ಇದೀಗ ಉಚಿತ ಚಾನೆಲ್‌ಗಳ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಆದಾಯ ಹಂಚಿಕೆ ಕಗ್ಗಂಟು :  ಕೇಬಲ್‌ ಆಪರೇಟರ್‌ಗಳು ಮತ್ತು ಮಲ್ಟಿಸಿಸ್ಟಂ ಆಪರೇಟರ್‌(ಎಂಎಸ್‌ಓ) ನಡುವೆ ಆದಾಯ ಹಂಚಿಕೆ ವಿಚಾರ ಕಗ್ಗಂಟಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ ವಿವಿಧ ಎಂಎಸ್‌ಓ ಮುಖ್ಯಸ್ಥರು ಹಾಗೂ ಕೇಬಲ್‌ ಆಪರೇಟರ್‌ಗಳ ಸಂಘದ ಪದಾಧಿಕಾರಿಗಳ ನಡುವೆ ಆದಾಯ ಹಂಚಿಕೆ ಕುರಿತಂತೆ ಸುದೀರ್ಘ ಚರ್ಚೆ ನಡೆದರೂ ಫಲಿತಾಂಶ ವಿಫಲವಾಗಿದೆ. ಕೇಬಲ್‌ ಆಪರೇಟರ್‌ಗಳು ಟ್ರಾಯ್‌ನ ಈ ನೂತನ ನೀತಿಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದಾಯ ಹಂಚಿಕೆ ಅವೈಜ್ಞಾನಿಕವಾಗಿದ್ದು, ಈ ಆದಾಯ ಪಡೆದು ಬದುಕು ದೂಡುವುದು ಕಷ್ಟವಾಗುತ್ತದೆ. ಆದಾಯದ ಪಾಲು ಹೆಚ್ಚಿಸಿದರೆ ಮಾತ್ರ ಕೆಲಸ ಮಾಡಲು ಸಾಧ್ಯ ಎನ್ನುತ್ತಾರೆ ಕೇಬಲ್‌ ಆಪರೇಟರ್‌ಗಳು.