Asianet Suvarna News Asianet Suvarna News

ಭಕ್ತಿ, ಸೇವೆ, ಜ್ಞಾನದ ಮಹಾ ಸಂತ ಸೇವಾಲಾಲ

ಸಂತ ಸೇವಾಲಾಲರು ತಮ್ಮ ಜೀವನವನ್ನು ಸಮಾಜದ ಉದ್ಧಾರಕ್ಕೆ ಮುಡಿಪಿಟ್ಟವರು. ಸಂತರ ತಮ್ಮ ಜೀವನದಲ್ಲಿ ಯುವಜನತೆಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದು, ಮಹಿಳಾ ಸಮಾನತೆ, ಮೂಢ ನಂಬಿಕೆ ನಿರ್ಮೂಲನೆ, ಆರೋಗ್ಯ ಅರಿವು ಪಸರಿಸಿದವರು. ಸಕಲ ವಿದ್ಯಾ ಪಾರಂಗತರಾಗಿದ್ದರೂ ಅವರ ವಿನಮ್ರತೆ ಹಾಗೂ ಪ್ರೀತಿ ಇಂದಿಗೂ ಸ್ಮರಣೀಯ

Dr DB Naik and Dr Harilal Pawar Talks Over Sant Sevalal Maharaj grg
Author
First Published Feb 14, 2024, 12:20 PM IST

ಡಾ. ಡಿ.ಬಿ. ನಾಯಕ
ಡಾ. ಹರಿಲಾಲ ಪವಾರ

ಬಂಜಾರ ಸಂಸ್ಕೃತಿಯ ಪ್ರತೀಕರಾದ ಸೇವಾಲಾಲರನ್ನು ಬಂಜಾರ-ಲಂಬಾಣಿ ಸಮಾಜವು ಪೂಜ್ಯ ಭಾವನೆಯಿಂದ ಕಾಣುತ್ತದೆ. ಅವರನ್ನು ಸೇವಾಭಾಯಾ ಎಂತಲೂ ಕರೆಯುತ್ತದೆ. ‘ಭಾಯಾ’ ಎಂದರೆ ಲಂಬಾಣಿಗರಲ್ಲಿ ‘ಸಹೋದರ’ ಎಂದರ್ಥ. ಸೇವಾಲಾಲರು ಮರಿಯಮ್ಮ ದೇವಿಯ ಭಕ್ತರು. ಅವರೊಬ್ಬ ಮಹಾಯೋಗಿ, ವಿಭೂತಿಪುರುಷ, ಪವಾಡ ಪುರುಷ, ಸಮಾಜ ಸುಧಾರಕರು. ಸಾಂಸ್ಕೃತಿಕ ನಾಯಕರಾದ ಅವರು ಬಂಜಾರ ಸಮಾಜದ ಜೀವನಾಡಿ. ಬಂಜಾರ ಸಮಾಜಕ್ಕೆ ಅವರು ಮಾಡಿದ ಸೇವೆ, ನೀಡಿದ ಮಾರ್ಗದರ್ಶನಗಳು ಅವರ ಜನಪ್ರಿಯತೆಗೆ ಕಾರಣಗಳಾಗಿವೆ. ಅನ್ಯರ ದಾಳಿಗಳಿಂದ ಸಮಾಜವನ್ನು ರಕ್ಷಿಸಿದ್ದಲ್ಲದೆ, ಹಸಿದವರ ಹೊಟ್ಟೆ ಬಟ್ಟೆ ನೋಡಿದ್ದು, ದುರ್ಬಲರನ್ನು ಉಪಚರಿಸಿದ್ದು; ರೋಗಿಗಳಿಗೆ ಆರೈಕೆ ಮಾಡಿದ್ದು, ಸಮಾಜದ ಒಳಜಗಳ- ಮೂಢನಂಬಿಕೆ, ಅಜ್ಞಾನಗಳನ್ನು ಹೋಗಲಾಡಿಸಿದ್ದು, ಹೆಣ್ಣುಮಕ್ಕಳಿಗೆ ಪುರುಷ ಸಮಾನ ಸ್ಥಾನಮಾನ ಕಲ್ಪಿಸಿದ್ದು, ಅವರ ಉನ್ನತ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿ ಸರಿದಾರಿಯಲ್ಲಿ ಸಾಗಲು ಕಟ್ಟುಪಾಡುಗಳನ್ನು ರೂಪಿಸಿದ್ದು ಸಾಮಾಜಿಕ ಹಾಗೂ ಧಾರ್ಮಿಕ ಚಿಂತಕರನ್ನು ಮೂಕವಿಸ್ಮಿತಗೊಳಿಸುತ್ತದೆ.

ಸೇವಾಲಾಲರು 18ನೇ ಶತಮಾನದಲ್ಲಿ ಬಂಜಾರ ಸಮಾಜವನ್ನು ಸಂಘಟಿಸಿ, ಅದಕ್ಕೊಂದು ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವರೂಪ ಗಟ್ಟಿಗೊಳ್ಳುವಂತೆ ಮಾಡಿದರಲ್ಲದೆ, ಜನರಿಗೆ ನ್ಯಾಯ, ನೀತಿ, ಧರ್ಮ, ಅಧರ್ಮ, ಸತ್ಯ-ಅಸತ್ಯ ಮತ್ತು ಭಕ್ತಿಯ ಬಗೆಗೆ ತಿಳಿವಳಿಕೆಯನ್ನು ನೀಡಿದರು.

ಸಂತ ಸೇವಾಲಾಲ ಪ್ರತಿಷ್ಠಾನಕ್ಕೆ 10 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ ಘೋಷಣೆ

ಸೂರಗೊಂಡಕೊಪ್ಪದಲ್ಲಿ ಜನನ

ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡಕೊಪ್ಪ (ಭಾಯಾಗಡ) ಸಮೀಪದ ಅಲೆಮಾರಿ (ಲದೇಣಿ) ಬಂಜಾರ ಸಮುದಾಯದ ಭೀಮಾ ನಾಯಕ -ಧರ್ಮಣಿಬಾಯಿ ದಂಪತಿಗೆ ಶಿರಸಿಯ ಮಾರಿಕಾಂಬೆಯ ಕೃಪಾಶೀರ್ವಾದದಿಂದ ಸೇವಾಲಾಲರು ಜನಿಸಿದರು. ಬಂಜಾರರ ಮೌಖಿಕ ಪರಂಪರೆಯ ಸೇವಾಲಾಲ ಮಹಾಕಾವ್ಯದಲ್ಲಿ ಬರುವಂತೆ ಇವರ ಜನನವು 15-02-1739 ರಂದು ಆಯಿತು. ‘ಬೆಳೆಯುವ ಪೈರು ಮೊಳಕೆಯಲ್ಲಿ ನೋಡು’ ಎನ್ನುವಂತೆ ಮಗು ನೋಡಲು ಸುಂದರವಾಗಿದ್ದು ತನ್ನ ದಿನನಿತ್ಯದ ಕಾರ್ಯಗಳಲ್ಲಿ ಚುರುಕಾಗಿರುತ್ತಾನೆ. ಬಾಲಗೋಪಾಲರೊಂದಿಗೆ ಅಡವಿಗೆ ಹೋಗಿ ರಾಸುಗಳನ್ನು ಮೇಯಿಸುತ್ತಾನೆ. ಮುಂದೆ ತಂದೆ-ತಾಯಿಯರ ಸಲಹೆಯ ಮೇರೆಗೆ ಸಪ್ತಮಾತೆಯರ ಸೇವೆಯಲ್ಲಿ ತೊಡಗುತ್ತಾನೆ.

ಆಜನ್ಮ ಬ್ರಹ್ಮಚಾರಿಯಾಗಿ, ಸಮಾಜ ಸುಧಾರಕರಾಗಿ, ಸಮಾಜ ಸಂಘಟಕರಾಗಿದ್ದ ಸೇವಾಲಾಲರು ವೈರಾಗ್ಯ ಪುರುಷರು. ಸಾಧು ಸತ್ಪುರುಷರಲ್ಲಿ ವಿದ್ಯೆಯನ್ನು ಕಲಿತ ಅವರು ಅಷ್ಟಾಂಗ ಯೋಗ, ರಾಜಯೋಗಾದಿ ಮಾರ್ಗಗಳಿಂದ ಬ್ರಹ್ಮಾನುಭೂತಿಯ ನೆಲೆಯನ್ನೇರಿ ಬ್ರಹ್ಮಜ್ಞಾನಿಗಳಾದರು. ಇಷ್ಟದೈವವಾದ ಜಗದಂಬೆಯನ್ನು ಭಕ್ತಿ ಹಾಗೂ ಜ್ಞಾನದ ನೆಲೆಯಿಂದ ಆರಾಧಿಸಿದ ಅವಧೂತರು. ದೇವಿಯ ಸಾಕ್ಷಾತ್ಕಾರವನ್ನು ಪಡೆದುಕೊಂಡ ವಿರಕ್ತರವರು. ಸತ್ಯ, ತ್ಯಾಗ, ಅಹಿಂಸೆ, ದಯೆ, ಅನುಕಂಪ, ಸಮಾನತೆ, ಮಹಿಳಾ ಸಮಾನತೆ, ಆಧ್ಯಾತ್ಮ, ಪರೋಪಕಾರಗಳ ಪ್ರತಿರೂಪವಾಗಿದ್ದರು. ಯೋಗ ಸಾಧಕರಾಗಿದ್ದ ಅವರು ಮಂತ್ರ-ತಂತ್ರಾದಿಗಳನ್ನು ಬಲ್ಲವರಾಗಿದ್ದರು. ಅಂತೆಯೇ ಅನೇಕ ಪವಾಡಗಳನ್ನು ಮಾಡಿ ತೋರಿಸಿದ ಮಹಾಪುರುಷರು. ಜೀವಿಗಳೆಲ್ಲರೂ ಸಮಾನ, ಕ್ರೀಮಿಕೀಟ, ಪಶು-ಪಕ್ಷಿಗಳ ಜೀವ ಕೂಡ ಮನುಷ್ಯನ ಜೀವದಷ್ಟೇ ಮುಖ್ಯವಾದುದೆಂಬ ನಿಲುವನ್ನು ಹೊಂದಿದ್ದರು. ಭೂತದಯೆಯನ್ನು ಬದುಕಿನುದ್ದಕ್ಕೂ ಮೆರೆದರು.

ರಾಸುಗಳ ಮೇಲೆ ಸೇನೆಗೆ ಸರಕು

ಸೇವಾಲಾಲರು ಕೇವಲ ಗೋರಕ್ಷಕರಾಗಿರಲಿಲ್ಲ. ದುಡಿಮೆಯ ಮಹಿಮೆಯನ್ನು ಸ್ವತಃ ಆಚರಿಸಿ ತೋರಿಸಿ, ಬಂಜಾರ, ಭಿಲ್, ಗರಾಸಿಯಾ ಮುಂತಾದ ಬುಡಕಟ್ಟು ಸಮುದಾಯಗಳನ್ನು ರಕ್ಷಿಸಿದರು. ನಮ್ಮ ದೇಶದಲ್ಲಿ ರೈಲು ಸಂಚಾರ ಪ್ರಾರಂಭವಾಗುವ ಪೂರ್ವದಲ್ಲಿ ತಮ್ಮ ಸಾವಿರಾರು ರಾಸುಗಳ ಮೇಲೆ ಸಾಮಾನು ಸರಂಜಾಮುಗಳನ್ನು ಹೇರಿಕೊಂಡು ಸಮಾಜದ ಇತರೆ ತಂಡದವರೊಂದಿಗೆ ದೇಶದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಸಾಮಗ್ರಿಗಳನ್ನು ಮೊಘಲ್‌ ಅರಸರು, ನಿಜಾಮ ಮತ್ತು ಬ್ರಿಟಿಷರ ಸೈನ್ಯಗಳಿಗೆ ಪೂರೈಸಿದರು. ದುಡಿಮೆಯ ಮಹತ್ವವನ್ನು ಬೋಧನೆ ಮಾಡುತ್ತ ಸಮುದಾಯ ಪ್ರಗತಿ ಕಾಣುವಂತೆ ಮಾಡಿದರು. ಸಾಮಾನು ಸರಂಜಾಮುಗಳನ್ನು ಪೂರೈಸುವಲ್ಲಿ ಅನ್ಯರಿಂದ ಬಂದ ಅಡೆತಡೆಗಳನ್ನು ಸಮಾಲೋಚನೆ ಹಾಗೂ ಪ್ರತಿಭಟನೆಗಳ ಮೂಲಕ ಸಮರ್ಥವಾಗಿ ಪರಿಹರಿಸಿದರು. ಬ್ರಿಟಿಷರು ಕರವಸೂಲಿಗೆ ಮುಂದಾದಾಗ ಅದಕ್ಕೆ ಪ್ರತಿರೋಧವನ್ನು ಒಡ್ಡಿ ಅವರ ಮನಸ್ಸನ್ನು ಒಲಿಸಿದರು.

ಕಾಯಕವೇ ಕೈಲಾಸ ತತ್ವದ ಪಾಲಕರು

ದುಡಿಮೆಯ ಬಗೆಗೆ ಸೇವಾಲಾಲರು ಅತೀವ ನಿಷ್ಠೆಯುಳ್ಳವರಾಗಿದ್ದರು. ದುಡಿಯದೆ ಮಾನವ ಜನಾಂಗ ಪ್ರಗತಿಯನ್ನು ಕಾಣಲಾರದೆಂಬ ನಂಬಿಕೆಯುಳ್ಳವರಾಗಿದ್ದರು. ‘ಕಾಯಕವೇ ಕೈಲಾಸ’ ಎಂಬ ಹನ್ನೆರಡನೆಯ ಶತಮಾನದ ಅಣ್ಣ ಬಸವಣ್ಣನವರ ತತ್ವವನ್ನು ಬದುಕಿನಲ್ಲಿ ಅಕ್ಷರಶಃ ಪಾಲಿಸುತ್ತಿದ್ದರು. ಬಂಜಾರಗಳಲ್ಲಿ ಪ್ರಚಲಿತದಲ್ಲಿರುವ ಒಂದು ಗಾದೆ ಮಾತು ಹೀಗಿದೆ:

ಸಂತ ಸೇವಾಲಾಲ್‌ ಕ್ಷೇತ್ರ ಅಭಿವೃದ್ಧಿಗೆ ಸಂಸದ ಮನವಿ

‘ಕರನ್ ಖೋ ಲಾಗಜತ್ರಾ ; ಮಾಂಗನ್ ಖೋ ಘಾಲಜತ್ರಾ’

ಅಂದರೆ ‘ಮಾಡಿ ಉಣ್ಣ ಬೇಕಾದಷ್ಟು, ಬೇಡಿ ಉಣ್ಣು ಹಾಕಿದಷ್ಟೆ’ ಎಂದರ್ಥ. ಇದರಿಂದ ಸ್ಪಷ್ಟವಾಗುವುದೇನೆಂದರೆ ಮನುಷ್ಯನು ಜೀವನದಲ್ಲಿ ಶ್ರಮವಹಿಸಿ ದುಡಿದು ಜೀವನ ಸಾಗಿಸಬೇಕು. ಇದು ಪ್ರತಿಯೊಬ್ಬ ಮನುಷ್ಯನು ಅಗತ್ಯವಾಗಿ ಪಾಲಿಸಬೇಕಾದ ಸಂದೇಶವಾಗಿದೆ. ಅಂತೆಯೇ ಬಂಜಾರ ಸಮಾಜ ಶ್ರಮ ಸಂಸ್ಕೃತಿ ಪ್ರಿಯವಾದ ಸಮಾಜವಾಗಿದೆ.

ಸೇವಾಲಾಲರು ಸುಳ್ಳನ್ನು ನುಡಿಯಬೇಡಿ, ಯಾವುದೇ ಜೀವಿಯನ್ನು ಕೊಲ್ಲಬೇಡಿ, ಸೇರೆ ಸಿಂಧಿ ಸೇವಿಸಬೇಡಿ, ಬಡವರಿಗೆ ಮೋಸ ವಂಚನೆ ಮಾಡಬೇಡಿ. ನಿಮ್ಮ ಜೀವನ ನೀವೆ ರೂಪಿಸಿಕೊಳ್ಳಿ, ಸಮಾಜದಲ್ಲಿ ಯಾರೂ ದೊಡ್ಡವರಲ್ಲ; ಯಾರೂ ಚಿಕ್ಕವರಲ್ಲ. ಎಲ್ಲರೂ ಸಮಾನರೆಂದು ಬೋಧಿಸಿದರು. ಬುದ್ಧನ ಕರುಣೆ, ಬಸವಣ್ಣನ ಕಾಯಕ ಹಾಗೂ ಏಸುವಿನ ದಯೆ ಸೇವಾಲಾಲರಲ್ಲಿ ಮುಪ್ಪುರಿಗೊಂಡಿವೆ. ಅಂತೆಯೇ ಸೇವಾಲಾಲರು ಇಂದಿಗೂ ಪ್ರಸ್ತುತವಾಗಿದ್ದಾರೆ. ಅದಕ್ಕಾಗಿಯೇ ಬಂಜಾರಗಳು ಸೇವಾಲಾಲರ ಆರಾಧಕರಾಗಿದ್ದಾರೆ. ಪ್ರತಿಯೊಂದು ತಾಂಡಾಗಳಲ್ಲಿ ಮರಿಯಮ್ಮ ಹಾಗೂ ಸೇವಾಲಾಲರ ದೇವಾಲಯಗಳಿವೆ.

Follow Us:
Download App:
  • android
  • ios