Asianet Suvarna News Asianet Suvarna News

ಬಿಬಿಎಂಪಿ 1500 ಪೌರಕಾರ್ಮಿಕರ ನೇಮಕಾತಿ ಶೀಘ್ರ?

ಹಲವಾರು ವರ್ಷದಿಂದ ಕಾಯಂ ನೇಮಕಾತಿಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಬಿಬಿಎಂಪಿಯ ಗುತ್ತಿಗೆ ಪೌರ ಕಾರ್ಮಿಕರಿಗೆ ಆಷಾಢ ಕಳೆದು ಶ್ರಾವಣದ ವೇಳೆಗೆ ಶುಭಸುದ್ದಿ ಸಿಗುವ ಲಕ್ಷಣಗಳಿವೆ.

BBMP recruitment of 1500 civil servants soon? bengaluru rav
Author
First Published Jun 30, 2023, 4:58 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಜೂ.30): ಹಲವಾರು ವರ್ಷದಿಂದ ಕಾಯಂ ನೇಮಕಾತಿಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಬಿಬಿಎಂಪಿಯ ಗುತ್ತಿಗೆ ಪೌರ ಕಾರ್ಮಿಕರಿಗೆ ಆಷಾಢ ಕಳೆದು ಶ್ರಾವಣದ ವೇಳೆಗೆ ಶುಭಸುದ್ದಿ ಸಿಗುವ ಲಕ್ಷಣಗಳಿವೆ.

ಬಿಬಿಎಂಪಿ(BBMP) ಸೇರಿದಂತೆ ರಾಜ್ಯದ 302 ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ನೇರ ವೇತನ ಪಾವತಿಯಡಿ ಕಾರ್ಯ ನಿರ್ವಹಿಸುತ್ತಿದ್ದ 40 ಸಾವಿರಕ್ಕೂ ಪೌರ ಕಾರ್ಮಿಕರನ್ನು ಹಂತ ಹಂತವಾಗಿ ಕಾಯಂಗೊಳಿಸುವುದಕ್ಕೆ ಈ ಹಿಂದಿನ ಸರ್ಕಾರ ನಿರ್ಧರಿಸಿ ಈ ಸಂಬಂಧಿಸಿದಂತೆ ಆದೇಶ ಹೊರಡಿಸಿತ್ತು. ಈ ಪ್ರಕಾರ ರಾಜ್ಯದ ವಿವಿಧ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ 7,460 ಹಾಗೂ ಬಿಬಿಎಂಪಿಯ 14,980 ಗುತ್ತಿಗೆ ಪೌರ ಕಾರ್ಮಿಕರು ಕಾಯಂ ನೇಮಕಾತಿಗೊಳ್ಳಲಿದ್ದಾರೆ.

ಬಿಬಿಎಂಪಿ ಸೇವೆ ಕಾಯಂ: 18,700 ಗುತ್ತಿಗೆ ಪೌರ ಕಾರ್ಮಿಕರಿಂದ ಅರ್ಜಿ ಸಲ್ಲಿಕೆ

ಈಗಾಗಲೇ ಬಿಬಿಎಂಪಿಯ 3,673 ಪೌರ ಕಾರ್ಮಿಕರ ಹುದ್ದೆಗಳು ಸೇರಿದಂತೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ 11,133 ಪೌರಕಾರ್ಮಿಕರ ನೇಮಕಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಿ, ಕೆಲವು ನೇಮಕಾತಿ ನಿಯಮಗಳನ್ನು ಸಡಿಲಗೊಳಿಸಿ ಅರ್ಜಿ ಆಹ್ವಾನಿಸಿ ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ, ಕಳೆದ ಮಾಚ್‌ರ್‍ನಲ್ಲಿ ಬಿಬಿಎಂಪಿಯ ಗುತ್ತಿಗೆ ಪೌರಕಾರ್ಮಿಕರು ಎಲ್ಲರೂ ಏಕಕಾಲಕ್ಕೆ ಕಾಯಂಗೊಳಿಸಬೇಕೆಂದು ಪಟ್ಟುಹಿಡಿದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 11,307 ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಕ್ಕೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು.

ಈ ನಡುವೆ ರಾಜ್ಯ ವಿಧಾನಸಭಾ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಹೀಗಾಗಿ, ಇಡೀ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದೀಗ ನೇಮಕಾತಿ ಪ್ರಕ್ರಿಗೆ ಚಾಲನೆ ನೀಡಲಾಗಿದ್ದು, ಶ್ರಾವಣದ ವೇಳೆಗೆ ನೇಮಕಾತಿ ಭಾಗ್ಯ ಗುತ್ತಿಗೆ ಪೌರಕಾರ್ಮಿಕರಿಗೆ ದೊರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

30 ದಿನದಲ್ಲಿ ನೇಮಕಾತಿ ಪತ್ರ:

ಈಗಾಗಲೇ ಅರ್ಜಿ ಆಹ್ವಾನಿಸಿ ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಬಿಬಿಎಂಪಿಯ 3,673 ಪೌರಕಾರ್ಮಿಕರನ್ನು ನೇಮಕಗೊಳಿಸುವುದಕ್ಕೆ ಅಂತಿಮ ಪಟ್ಟಿಸಿದ್ಧಪಡಿಸಲಾಗಿದೆ. ಒಂದು ತಿಂಗಳಲ್ಲಿ ಅಂತಿಮಗೊಂಡ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣೆ ಮಾಡುವುದಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.

ಮೀಸಲಾತಿ ಸ್ಪಷ್ಟೀಕರಣ ಬಾಕಿ:

ಇನ್ನು ಹೆಚ್ಚುವರಿಯಾಗಿ 11,307 ಪೌರಕಾರ್ಮಿಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯ ಆಡಳಿತ ವಿಭಾಗವೂ ಪತ್ರ ಬರೆದಿದೆ. ಪೌರ ಕಾರ್ಮಿಕರ ಹುದ್ದೆಗೆ ಹಿಂದುಳಿದ ವರ್ಗ ಹಾಗೂ ಇತರೆ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿಲ್ಲ. ಹೀಗಾಗಿ, ಈ ಹುದ್ದೆಗಳಿಗೆ ಎಸ್ಸಿ-ಎಸ್ಟಿಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವುದಂತೆ ಒಂದು ಬಾರಿ ಮೀಸಲಾತಿ ಸಡಿಲೀಕರಣ ಮಾಡಿಕೊಡುವಂತೆ ಕೋರಲಾಗಿದೆ.

ಎರಡೂ ನೇಮಕಾತಿ ಒಟ್ಟಿಗೆ ಪ್ರಕಟಕ್ಕೆ ಆಗ್ರಹ

ಗುತ್ತಿಗೆ ಪೌರಕಾರ್ಮಿಕರು ಹಾಗೂ ಪೌರಕಾರ್ಮಿಕರ ಸಂಘಟನೆಗಳು 3673 ಹುದ್ದೆಯ ನೇಮಕಾತಿ ಅಂತಿಮ ಪಟ್ಟಿಹಾಗೂ 11,703 ಹುದ್ದೆಯ ಅಂತಿಮ ಪಟ್ಟಿಯನ್ನು ಒಂದೇ ಮಾದರಿಯಲ್ಲಿ ಮಾಡಬೇಕು. ಜತೆಗೆ, ಏಕ ಕಾಲಕ್ಕೆ ಅಂತಿಮ ಪಟ್ಟಿಪ್ರಕಟ ಪಡಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುತ್ತಿದ್ದಾರೆ.

 

ಕಾಯಂ ಪೌರ ಕಾರ್ಮಿಕರಿನ್ನು ಪೌರ ನೌಕರರು: ಮುಖ್ಯಮಂತ್ರಿ ಬೊಮ್ಮಾಯಿ

3,673 ಪೌರಕಾರ್ಮಿಕರ ಹುದ್ದೆ ಹಾಗೂ 11,703 ಪೌರಕಾರ್ಮಿಕರ ಹುದ್ದೆಗಳನ್ನು ಒಂದೇ ಮಾದರಿಯಲ್ಲಿ ನೇಮಕ ಮಾಡಬೇಕೆಂದು ಪೌರಕಾರ್ಮಿಕರು ಬೇಡಿಕೆ ಇಟ್ಟಿದ್ದಾರೆ. ಈ ಹಿಂದೆ 3,673 ಹುದ್ದೆ ನೇಮಕಾತಿ ವೇಳೆ ಕೆಲವು ಷರತ್ತುಗಳನ್ನು ಸಡಿಲಗೊಳಿಸಲಾಗಿತ್ತು. ಆ ಸಡಿಲಿಕೆ ಮುಂದುವರಿಸುವುಕ್ಕೆ ಕೋರಲಾಗಿದೆ. ಶೀಘ್ರದಲ್ಲಿ ಸರ್ಕಾರದಿಂದ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ.

-ಡಾ ಕೆ.ಹರೀಶ್‌ ಕುಮಾರ್‌, ವಿಶೇಷ ಆಯುಕ್ತ, ಬಿಬಿಎಂಪಿ ಘನತ್ಯಾಜ್ಯ ವಿಭಾಗ

ಪೌರಕಾರ್ಮಿಕರ ನೇಮಕಾತಿ ಸಂಖ್ಯೆ

  • ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ-1 3,673
  • ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ-2 11,307
  • ಒಟ್ಟು 14,980
Follow Us:
Download App:
  • android
  • ios