ಬಸವಕಲ್ಯಾಣ(ಜ.07): ಬಸವಕಲ್ಯಾಣದ ನೂತನ ಅನುಭವ ಮಂಟಪ ನಿರ್ಮಾಣ ಬರುವ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ ಅವರಿಂದಲೇ ಉದ್ಘಾಟನೆ ನೆರವೇರಿಸುವುದಾಗಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪ ಆವರಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು ಕಾರ್ಯ ನೆರವೇರಿಸಿ ಮಾತನಾಡಿದ ಅವರು, ನೂತನ ಅನುಭವ ಮಂಟಪಕ್ಕೆ 500 ಕೋಟಿ ಮೀಸಲಿಡಲಾಗಿದೆ. ಈಗಾಗಲೇ 100 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದು, ವಾರದೊಳಗಾಗಿ ಇನ್ನೂ 100 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ನೂತನ ಅನುಭವ ಮಂಟಪ ವಿಶ್ವಕ್ಕೆ ಮಾದರಿಯಾಗುವಂಥ ಪ್ರವಾಸಿ ಕೇಂದ್ರವನ್ನಾಗಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕರೆಯಿಸಿ ಮೂರ್ನಾಲ್ಕು ಲಕ್ಷ ಜನರನ್ನು ಸೇರಿಸಿ ಉದ್ಘಾಟನೆ ನೆರವೇರಿಸುತ್ತೇನೆ. ಭೂಮಿ ಪೂಜೆ ನೆರವೇರಿಸಿದ ಈ ದಿನ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ದಿನವಾಗಿದೆ. ಅನುಭವ ಮಂಟಪ ನಿರ್ಮಾಣ ಕಾರ್ಯದ ರೂಪುರೇಷೆಗಳೊಂದಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ತಕ್ಷಣ ಕಾರ್ಯಾರಂಭವಾಗುತ್ತದೆ. ಬರುವ ಎರಡು ವರ್ಷಗಳ ಒಳಗಾಗಿ ಈ ಕಾರ್ಯವನ್ನು ಪೂರ್ಣಗೊಳಿಸುವುದಕ್ಕೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ ಅವರಿಗೆ ಜವಾಬ್ದಾರಿ ನೀಡಿದ್ದೇನೆ. ದೇಶದ ಜನರ ಗಮನ ಸೆಳೆಯುವಂಥ ನೂತನ ಅನುಭವ ಮಂಟಪ ನಿರ್ಮಾಣವಾಗಲಿದೆ ಎಂಬುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

'ಅನುಭವ ಮಂಟಪ' ಕ್ಕೆ ಸಿಎಂ ಶಿಲಾನ್ಯಾಸ, ಹೀಗಿರಲಿದೆ ವಿಶೇಷ..!

ಇದೇ ವೇಳೆ ಬಸವಕಲ್ಯಾಣದಲ್ಲಿ ಪ್ರತಿ ವರ್ಷ ಬಸವ ಉತ್ಸವ ನಿರಂತರವಾಗಿ ನಡೆಯುವುದು ಸೇರಿದಂತೆ ವಚನ ವಿಶ್ವ ವಿದ್ಯಾಲಯ ಸ್ಥಾಪಿಸುವ ಕುರಿತಂತೆ ಹಿರಿಯರ ಸಲಹೆ ಪಡೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಪ್ರಭು ಚವ್ಹಾಣ, ಡಾ.ಸುಧಾಕರ್‌, ಸಂಸದ ಭಗವಂತ ಖೂಬಾ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ್‌, ರಹೀಮ್‌ ಖಾನ್‌, ಹಿರಿಯ ಸಾಹಿತಿ ಗೋ.ರು.ಚನ್ನಬಸಪ್ಪ, ವಿಶ್ವ ಬಸವ ಧರ್ಮ ಟ್ರಸ್ಟ್‌ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು, ಗುರು ಮಹಾಂತ ಸ್ವಾಮೀಜಿ, ಹಾರಕೂಡ ಹಿರೇಮಠದ ಚನ್ನವೀರ ಶಿವಾಚಾರ್ಯ ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿದ್ದರು.