Wimbledon 2023: ಜೋಕೋವಿಚ್ vs ಆಲ್ಕರಜ್ ಫೈನಲ್‌ಗೆ ವೇದಿಕೆ ಸಜ್ಜು..!
ವಿಂಬಲ್ಡನ್ ಫೈನಲ್‌ಗೆ ಲಗ್ಗೆಯಿಟ್ಟ ಜೋಕೋವಿಚ್-ಆಲ್ಕರಜ್ ಫೈಟ್
ಇಟಲಿಯ ಜಾನಿಕ್ ಸಿನ್ನರ್ ವಿರುದ್ಧ ಜೋಕೋವಿಚ್‌ಗೆ ಸುಲಭ ಜಯ
ವಿಶ್ವ ನಂ.3 ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ದ ಸೆಮೀಸ್‌ಗೆ ಲಗ್ಗೆಯಿಟ್ಟ ಆಲ್ಕರಜ್
ಲಂಡನ್: ಸತತ 5ನೇ ಹಾಗೂ ಒಟ್ಟಾರೆ 8ನೇ ವಿಂಬಲ್ಡನ್ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ನೋವಾಕ್ ಜೋಕೋವಿಚ್ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್‌ನಲ್ಲಿ 9ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಫೈನಲ್‌ನಲ್ಲಿ ವಿಶ್ವದ ನಂ.1 ಟೆನಿಸಿಗ ಸ್ಪೇನ್‌ನ ಕಾರ್ಲೊಸ್ ಆಲ್ಕರಜ್ ಅವರನ್ನು ಎದುರಿಸಲಿದ್ದಾರೆ. 2023ರ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ನಿರೀಕ್ಷೆಯಂತೆಯೇ ವಿಶ್ವ ನಂ.1 ಆಲ್ಕರಜ್ ಹಾಗೂ ವಿಶ್ವ ನಂ.2 ಜೋಕೋ ನಡುವಿನ ಫೈನಲ್ ಫೈಟ್‌ಗೆ ವೇದಿಕೆ ಸಜ್ಜಾಗಿದೆ.
23 ಗ್ರ್ಯಾನ್‌ಸ್ಲಾಂಗಳ ಒಡೆಯ ಜೋಕೋ, ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಇಟಲಿಯ ಜಾನಿಕ್ ಸಿನ್ನರ್ ವಿರುದ್ಧ 6-3, 6-4, 7-6(7/4) ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಮೊದಲೆರಡು ಸೆಟ್‌ಗಳಲ್ಲಿ ನಿರೀಕ್ಷಿತ ಆಟವಾಡಲು 8ನೇ ಶ್ರೇಯಾಂಕಿತ ಸಿನ್ನರ್‌ಗೆ ಸಾಧ್ಯವಾಗದಿದ್ದರೂ, 3ನೇ ಸೆಟ್‌ಗಳಲ್ಲಿ ಪ್ರತಿರೋಧ ತೋರಿದರು. ಆದರೆ ಅನುಭವಿ ಜೋಕೋವಿಚ್‌ರ ತಂತ್ರಗಾರಿಕೆ ಮುಂದೆ ಸಿನ್ನರ್ ಆಟ ನಡೆಯಲಿಲ್ಲ. ಇದರೊಂದಿಗೆ ಚೊಚ್ಚಲ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ಗೇರುವ 21 ವರ್ಷದ ಸಿನ್ನರ್ ಕನಸು ನನಸಾಗಲಿಲ್ಲ.
Breaking: ಪುರುಷ ಮತ್ತು ಮಹಿಳಾ ಐಸಿಸಿ ಟೂರ್ನಿಗಳಲ್ಲಿ ಇನ್ನು ಸಮಾನ ಬಹುಮಾನ
ಇನ್ನು ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂ.3 ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಅವರನ್ನು 20 ವರ್ಷದ ಆಲ್ಕರಜ್ 6-3, 6-3, 6-3 ಸೆಟ್‌ಗಳಲ್ಲಿ ಸೋಲಿಸಿ , ಮೊದಲ ಬಾರಿಗೆ ವಿಂಬಲ್ಡನ್ ಫೈನಲ್ ಪ್ರವೇಶಿಸಿದರು. ಭಾನುವಾರ(ಜು.16) ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯ ನಡೆಯಲಿದೆ.
ಜಬುರ್-ಮಾರ್ಕೆಟಾ ಫೈನಲ್ ಹಣಾಹಣಿ!
ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯ ಶನಿವಾರ ನಡೆಯಲಿದ್ದು, ಟ್ಯುನೀಶಿಯಾದ ಒನ್ಸ್ ಜಬುರ್ ಹಾಗೂ ಚೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೋವಾ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ. ಇಬ್ಬರೂ ಚೊಚ್ಚಲ ಬಾರಿ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 6ನೇ ಶ್ರೇಯಾಂಕಿತ ಜಬುರ್ ಕಳೆದ ಬಾರಿ ರನ್ನರ್-ಅಪ್ ಆಗಿದ್ದರು. ಶ್ರೇಯಾಂಕ ರಹಿತ ಮಾರ್ಕೆಟಾ ಮೊದಲ ಬಾರಿ ವಿಂಬಲ್ಡನ್ ಫೈನಲ್ ಆಡಲಿದ್ದಾರೆ.
WWE ಲೆಜೆಂಡ್ ಅಂಡರ್‌ಟೇಕರ್ ನೋಡಿ ಬೆಚ್ಚಿಬಿದ್ದ ಡೇಂಜರಸ್ ಶಾರ್ಕ್..! ವಿಡಿಯೋ ವೈರಲ್
ಯುಎಸ್ ಓಪನ್: ಸೇನ್, ಸಿಂಧು, ಶಂಕರ್ ಕ್ವಾರ್ಟರ್‌ಗೆ
ಲೋವಾ(ಅಮೆರಿಕ): ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಲಕ್ಷ್ಯ ಸೇನ್ ಹಾಗೂ ಯುವ ಪ್ರತಿಭೆ ಶಂಕರ್ ಮುತ್ತುಸ್ವಾಮಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮಹಿಳಾ ಸಿಂಗಲ್ಸ್ 2ನೇ ಸುತ್ತಿನಲ್ಲಿ ಸಿಂಧು, ಕೊರಿಯಾದ ಸುಂಗ್ ಶೊಯುನ್ ವಿರುದ್ಧ ಜಯಗಳಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಸೇನ್ ಚೆಕ್ ಗಣರಾಜ್ಯದ ಜಾನ್ ಲೊಡಾ ವಿರುದ್ಧ ಗೆದ್ದರು. ಶಂಕರ್ ಇಸ್ರೇಲ್‌ನ ಮಿಶಾ ಜಿಲ್ಬೆರ್‌ಮಾನ್‌ರನ್ನು ಮಣಿಸಿದರು. ಕ್ವಾರ್ಟರ್‌ನಲ್ಲಿ ಸೇನ್ ಹಾಗೂ ಶಂಕರ್ ಮುಖಾಮುಖಿಯಾಗಲಿದ್ದಾರೆ.
ಜುಲೈ 16ರ ವರೆಗೆ ಬೆಂಗ್ಳೂರಲ್ಲಿ ರಾಜ್ಯ ಟೆಕ್ವಾಂಡೋ ಕೂಟ
ಬೆಂಗಳೂರು: ಕರ್ನಾಟಕ ರಾಜ್ಯ ಟೆಕ್ವಾಂಡೋ ಸಂಸ್ಥೆ ಆಯೋಜಿಸುವ 40ನೇ ಆವೃತ್ತಿಯ ರಾಜ್ಯ ಟೆಕ್ವಾಂಡೋ ಚಾಂಪಿಯನ್‌ಶಿಪ್ ಶುಕ್ರವಾರ ಆರಂಭಗೊಂಡಿದ್ದು, ಭಾನುವಾರದ ವರಗೆ ನಡೆಯಲಿದೆ. ನಗರದ ಕೋರಮಂಗಳದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಕೂಟದ ಪಂದ್ಯಗಳು ನಡೆಯಲಿದ್ದು, ಸುಮಾರು 1500ರಷ್ಟು ಸ್ಪರ್ಧಿಗಳು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಟೆಕ್ವಾಂಡೋ ಸಂಸ್ಥೆ ತಿಳಿಸಿದೆ.