ನಾಗ್ಪುರ(ಫೆ.13): ಹನುಮ ವಿಹಾರಿ(114) ಹಾಗೂ ಮಯಾಂಕ್‌ ಅಗರ್‌ವಾಲ್‌ (95) ಆಕರ್ಷಕ ಇನ್ನಿಂಗ್ಸ್‌ ಹೊರತಾಗಿಯೂ, ಶೇಷ ಭಾರತ (ರೆಸ್ಟ್‌ ಆಫ್‌ ಇಂಡಿಯಾ) ಇಲ್ಲಿ ಮಂಗಳವಾರ ರಣಜಿ ಚಾಂಪಿಯನ್‌ ವಿದರ್ಭ ವಿರುದ್ಧ ಆರಂಭಗೊಂಡ ಇರಾನಿ ಟ್ರೋಫಿ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 330 ರನ್‌ಗೆ ಆಲೌಟ್‌ ಆಯಿತು.

ಇದನ್ನೂ ಓದಿ: ಪಾಕ್ ವೇಗಿ ಶೋಯಿಬ್ ಅಕ್ತರ್ ಕ್ರಿಕೆಟ್‌ಗೆ ವಾಪಾಸ್- ಯುವಕರಿಗೆ ಚಾಲೆಂಜ್!

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಶೇಷ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಅನ್ಮೋಲ್‌ಪ್ರೀತ್‌ ಸಿಂಗ್‌ (15) ಬೇಗನೆ ವಿಕೆಟ್‌ ಕಳೆದುಕೊಂಡರು. ಭಾರತ ತಂಡದ ಆಟಗಾರರಾದ ಮಯಾಂಕ್‌ ಹಾಗೂ ಹನುಮ 2ನೇ ವಿಕೆಟ್‌ಗೆ 125 ರನ್‌ ಜೊತೆಯಾಟವಾಡಿದರು. ಮಯಾಂಕ್‌ ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದರು. ಆದರೆ ಅವರ ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಶೇಷ ಭಾರತ ಕುಸಿಯಿತು. 171 ರನ್‌ಗೆ 1 ವಿಕೆಟ್‌ ಕಳೆದುಕೊಂಡಿದ್ದ ಶೇಷ ಭಾರತ, 258 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡಿತು.

ಇದನ್ನೂ ಓದಿ: ರೋಹಿತ್’ಗೆ ರೆಸ್ಟ್; ಈ ಇಬ್ಬರಿಗೆ ವಿಶ್ವಕಪ್ ಎಂಟ್ರಿ ಕೊಡಲು ಕೊನೆಯ ಚಾನ್ಸ್..?

ನಾಯಕ ಅಜಿಂಕ್ಯ ರಹಾನೆ(13) ಮತ್ತೊಂದು ನಿಧಾನಗತಿ ಬೌಲಿಂಗ್‌ ಎದುರಿಸಲು ಪರದಾಡಿದರು. ರಣಜಿ ಫೈನಲ್‌ ಹೀರೋ ಆದಿತ್ಯ ಸರ್ವಾಟೆ (3/99) ರಹಾನೆಗೆ ಪೆವಿಲಿಯನ್‌ ದಾರಿ ತೋರಿಸಿದರು. ಫೈನಲ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಚೇತೇಶ್ವರ್‌ ಪೂಜಾರ ವಿಕೆಟ್‌ ಕಿತ್ತಿದ್ದ ಆದಿತ್ಯ, ರಹಾನೆಯನ್ನೂ ತಮ್ಮ ಸ್ಪಿನ್‌ ಬಲೆಗೆ ಕೆಡವಿದರು. ಸರ್ವಾಟೆಗೆ ಅಕ್ಷಯ್‌ ಕರ್ನೇವಾರ್‌ (1/45) ಹಾಗೂ ಹಿರಿಯ ಆಫ್‌ ಸ್ಪಿನ್ನರ್‌ ಅಕ್ಷಯ್‌ ವಾಖರೆ (3/67) ಉತ್ತಮ ಬೆಂಬಲ ನೀಡಿದರು.

ಕಳೆದ ಇರಾನಿ ಟ್ರೋಫಿ ಪಂದ್ಯದಲ್ಲಿ ಶತಕ ಬಾರಿಸಿದ್ದ ಹನುಮ ವಿಹಾರಿ, ಮತ್ತೊಮ್ಮೆ ಶೇಷ ಭಾರತಕ್ಕೆ ಆಸರೆಯಾದರು. 211 ಎಸೆತಗಳನ್ನು ಎದುರಿಸಿದ ಅವರು 11 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 114 ರನ್‌ ಗಳಿಸಿದರು. ಮತ್ತೊಂದೆಡೆ ವೇಗವಾಗಿ ಬ್ಯಾಟ್‌ ಬೀಸಿದ ಮಯಾಂಕ್‌, 134 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 95 ರನ್‌ಗೆ ಔಟಾಗುವ ಮೂಲಕ ಶತಕದಿಂದ ವಂಚಿತರಾದರು. 19 ವರ್ಷದ ವೇಗಿ ಯಶ್‌ ಠಾಕೂರ್‌ ಎಸೆತದಲ್ಲಿ ಮಯಾಂಕ್‌ ಬೌಲ್ಡ್‌ ಆದರು.

ಇದನ್ನೂ ಓದಿ: ದಿಗ್ಗಜ ಕ್ರಿಕೆಟಿಗ, ಕನ್ನಡಿಗ GR ವಿಶ್ವನಾಥ್‌ಗೆ ಹುಟ್ಟು ಹಬ್ಬದ ಸಂಭ್ರಮ!

ಕ್ರೀಸ್‌ನಲ್ಲಿ ನೆಲೆಯೂರಲು ಹನುಮ ಕೆಲ ಸಮಯ ತೆಗೆದುಕೊಂಡರು. 24 ರನ್‌ ಗಳಿಸಿದ್ದಾಗ ಅವರಿಗೆ ಜೀವದಾನ ದೊರೆಯಿತು. ರಹಾನೆ ಔಟಾಗುತ್ತಿದ್ದಂತೆ, ಸಹ ಆಟಗಾರರು ನಾಯಕನನ್ನು ಹಿಂಬಾಲಿಸಿದರು. ತಂಡ 231ಕ್ಕೆ 3ರಿಂದ 258ಕ್ಕೆ 7ಕ್ಕೆ ಕುಸಿಯಿತು. ಶ್ರೇಯಸ್‌ ಅಯ್ಯರ್‌ (19), ಇಶಾನ್‌ ಕಿಶನ್‌ (02), ಕೆ.ಗೌತಮ್‌ (07) ಹಾಗೂ ಧರ್ಮೇಂದ್ರ ಜಡೇಜಾ (06) ಬೇಗನೆ ವಿಕೆಟ್‌ ಕಳೆದುಕೊಂಡರು. ಇದೇ ವೇಳೆ ವಿಹಾರಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 16ನೇ ಶತಕ ಪೂರೈಸಿದರು.

ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳ ಜತೆ ಕ್ರೀಸ್‌ ಹಂಚಿಕೊಂಡು ರನ್‌ ಗಳಿಕೆಗೆ ವೇಗ ತುಂಬಿದ ವಿಹಾರಿ, ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಸರ್ವಾಟೆ ಎಸೆತದಲ್ಲಿ ವಿದರ್ಭ ನಾಯಕ ಫೈಯಜ್‌ ಫಜಲ್‌ಗೆ ಕ್ಯಾಚಿತ್ತು ವಿಹಾರಿ ಪೆವಿಲಿಯನ್‌ ಸೇರಿದರು. ಸ್ಪಿನ್ನರ್‌ ರಾಹುಲ್‌ ಚಾಹರ್‌ (22) ಹಾಗೂ ವೇಗಿ ಅಂಕಿತ್‌ ರಜಪೂತ್‌ (25) ಹೋರಾಡಿ ತಂಡ 330 ರನ್‌ಗಳ ಗೌರವ ಮೊತ್ತ ಕಲೆಹಾಕಲು ನೆರವಾದರು.

ಸ್ಕೋರ್‌: ಶೇಷ ಭಾರತ ಮೊದಲ ಇನ್ನಿಂಗ್ಸ್‌ 330/10 (ಹನುಮ ವಿಹಾರಿ 114, ಮಯಾಂಕ್‌ ಅಗರ್‌ವಾಲ್‌ 95, ಅಕ್ಷಯ್‌ ವಾಖರೆ 3-67, ಆದಿತ್ಯ ಸರ್ವಾಟೆ 3-99)