ದೋಹಾ(ಸೆ.28): ಮುಂದಿನ ವರ್ಷ ಇಲ್ಲಿ ಮೊದಲ ಬಾರಿಗೆ ಐಎಎಎಫ್‌ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ನಡೆಯಲಿದ್ದು, ಕ್ರೀಡಾಕೂಟಕ್ಕೆ ಸಿದ್ಧಗೊಳ್ಳುತ್ತಿರುವ ಖಲೀಫಾ ಕ್ರೀಡಾಂಗಣಕ್ಕೆ ಹವಾ ನಿಯಂತ್ರಣ(ಎ.ಸಿ) ಅಳವಡಿಸಲಾಗಿದೆ. ಜತೆಗೆ ಇದೇ ಮೊದಲ ಬಾರಿಗೆ ವಿಶ್ವ ದರ್ಜೆ ಕ್ರೀಡಾಂಗಣದಲ್ಲಿ ಗುಲಾಬಿ ಬಣ್ಣದ (ಪಿಂಕ್‌) ಟ್ರ್ಯಾಕ್‌ ಹಾಕಲಾಗಿದೆ. ಗುರುವಾರ ಆಯೋಜಕರು ನೂತನ ವ್ಯವಸ್ಥೆಯನ್ನು ಮಾಧ್ಯಮಗಳ ಮುಂದೆ ಅನಾವರಣಗೊಳಿಸಿದರು.

ಹೊರಾಂಗಣ ಕ್ರೀಡಾಂಗಣಕ್ಕೆ ಹವಾನಿಯಂತ್ರಣ ಅಳವಡಿಸಿರುವುದು ಇದೇ ಮೊದಲು. ವಿಶ್ವ ಚಾಂಪಿಯನ್‌ಶಿಪ್‌ ವೇಳೆ ಇಲ್ಲಿ ಅತ್ಯಂತ ಬಿಸಿಲಿನ ವಾತಾವರಣ ಇರಲಿದ್ದು, ಕ್ರೀಡಾಪಟುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಈ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ 40 ಡಿಗ್ರಿ ತಾಪಮಾನವಿದ್ದರೂ, ಕ್ರೀಡಾಂಗಣದ ಒಳಗೆ 24ರಿಂದ 26 ಡಿಗ್ರಿ ತಾಪಮಾನವನ್ನು ಕಾಯ್ದುಕೊಳ್ಳಬಹುದಾಗಿದೆ. 

ಕ್ರೀಡಾಂಗಣ 48000 ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಮಾಡುವ ಸಾಮರ್ಥ್ಯ ಹೊಂದಿದ್ದು, ಸುಡು ಬಿಸಿಲಿನಲ್ಲೂ ಸ್ಥಳೀಯರು ಕ್ರೀಡಾಂಗಣಕ್ಕೆ ಆಗಮಿಸಿ, ವಿಶ್ವದ ಶ್ರೇಷ್ಠ ಅಥ್ಲೀಟ್‌ಗಳ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದಾಗಿದೆ.