Asianet Suvarna News Asianet Suvarna News

Wrestlers Protest ನೂರಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಸಾಕ್ಷಿ ಮಲಿಕ್ ಗಂಭೀರ ಆರೋಪ!

ಬ್ರಿಜ್‌ಭೂಷಣ್ ವಿರುದ್ದ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ
ಬ್ರಿಜ್‌ಭೂಷಣ್ ಮೇಲೆ ಸಾಕ್ಷಿ ಮಲಿಕ್ ಗಂಭೀರ ಆರೋಪ
100ಕ್ಕೂ ಹೆಚ್ಚು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ 

Hundreds of girls are sexually harassed but dont have the courage to speak up immediately Says Sakshi Malik k
Author
First Published May 19, 2023, 9:58 AM IST

ನವದೆಹಲಿ(ಮೇ.19): ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ತಾರಾ ಕುಸ್ತಿಪಟುಗಳ ಪೈಕಿ ಒಬ್ಬರಾದ ಸಾಕ್ಷಿ ಮಲಿಕ್‌ ಪ್ರತಿಭಟನೆಯ ಹಿಂದಿರುವ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು 100ಕ್ಕೂ ಹೆಚ್ಚು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

‘ಅನೇಕ ಮಹಿಳಾ ಕುಸ್ತಿಪಟುಗಳಿಗೆ ತೊಂದರೆಯಾಗಿದೆ. ಹಲವರು ಎಫ್‌ಐಆರ್‌ ದಾಖಲಿಸಲು ಮುಂದಾದರೂ ಪ್ರಯೋಜನವಾಗಿಲ್ಲ. ಬ್ರಿಜ್‌ಭೂಷಣ್‌ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎನ್ನುವುದು ಗೊತ್ತಾಗಿ ಮತ್ತೆ ಪ್ರತಿಭಟನೆ ಆರಂಭಿಸಿದೆವು. ಬ್ರಿಜ್‌ ಬಂಧನವಾಗುವ ವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದು ಸಾಕ್ಷಿ ಹೇಳಿದ್ದಾರೆ.

ಮೋದಿ, ಶಾಗೆ ಮತ್ತೆ ಕುಸ್ತಿಪಟುಗಳ ಮನವಿ

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ರ ಬಂಧನಕ್ಕೆ ಆಗ್ರಹಿಸಿ ಕಳೆದ 25 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು, ತಮ್ಮ ನೆರವಿಗೆ ಧಾವಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮತ್ತೊಮ್ಮೆ ಮನ ಮಾಡಿದ್ದಾರೆ. ‘ನಮ್ಮ ಕೂಗು ಪ್ರಧಾನಿ ಮೋದಿ ಅವರಿಗೆ ಕೇಳುತ್ತಿಲ್ಲ ಅನಿಸುತ್ತದೆ. ನಮಗೆ ನ್ಯಾಯ ಕೊಡಿಸುವಂತೆ ಮೋದಿ ಹಾಗೂ ಅಮಿತ್‌ ಶಾ ಅವರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತೇವೆ. ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಎಂದು ಮೋದಿ ಅವರು ಹೇಳುತ್ತಿರುತ್ತಾರೆ. ಇಲ್ಲಿ ಪ್ರತಿಭಟನೆ ನಡೆಸುತ್ತಿರುವವರೂ ಅವರ ಹೆಣ್ಣು ಮಕ್ಕಳಿದ್ದಂತೆ. ಇವರೆಲ್ಲಾ ದೇಶದ ಹೆಣ್ಣು ಮಕ್ಕಳು’ ಎಂದು ಕುಸ್ತಿಪಟು ಭಜರಂಗ್‌ ಪೂನಿಯಾ ಬುಧವಾರ ಹೇಳಿದರು.

Wrestlers Protest ಹೋರಾಟ ಚಾಲ್ತಿಯಲ್ಲಿಡಲು ಕುಸ್ತಿಪಟುಗಳ ಹೊಸ ಪ್ರಯೋಗ!

ಕಿರಿಯರ ಕುಸ್ತಿ ಟ್ರಯಲ್ಸ್‌ಗೆ 1700ಕ್ಕೂ ಹೆಚ್ಚು ನೋಂದಣಿ!

ನವದೆಹಲಿ: ಪ್ರತಿಭಟನಾ ನಿರತ ಕುಸ್ತಿಪಟುಗಳ ಒತ್ತಾಯದ ಮೇಲೆ ಭಾರತೀಯ ಒಲಿಂಪಿಕ್ಸ್‌ ಸಮಿತಿ(ಐಒಎ) ನೇಮಿಸಿರುವ ಭಾರತೀಯ ಕುಸ್ತಿ ಫೆಡರೇಶನ್‌ನ ತಾತ್ಕಾಲಿಕ ಸಮಿತಿಯು ತನ್ನ ಮೇಲ್ವಿಚಾರಣೆಯಲ್ಲಿ ಕಿರಿಯರ ಆಯ್ಕೆ ಟ್ರಯಲ್ಸ್‌ ಆಯೋಜಿಸಿದೆ. ಪಟಿಯಾಲಾ ಹಾಗೂ ಸೋನೆಪತ್‌ನಲ್ಲಿ ನಡೆಯುತ್ತಿರುವ ಅಂಡರ್‌-17, ಅಂಡರ್‌-23 ಆಯ್ಕೆ ಟ್ರಯಲ್ಸ್‌ಗೆ 1704 ಯುವ ಕುಸ್ತಿಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಟ್ರಯಲ್ಸ್‌ನಲ್ಲಿ ಜೂ.10-18ರ ವರೆಗೂ ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆಯಲಿರುವ ಏಷ್ಯನ್‌ ಚಾಂಪಿಯನ್‌ಶಿಪ್‌ಗೆ ಭಾರತ ತಂಡದ ಆಯ್ಕೆ ನಡೆಯಲಿದೆ.

ಫೆಡ್‌ ಕಪ್‌: ರಾಜ್ಯದ ನಾಲ್ವರು ಫೈನಲ್‌ಗೆ

ರಾಂಚಿ: 26ನೇ ರಾಷ್ಟ್ರೀಯ ಫೆಡ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 3ನೇ ದಿನವಾದ ಬುಧವಾರ ಕರ್ನಾಟಕದ ನಾಲ್ವರು ಫೈನಲ್‌ಗೆ ಪ್ರವೇಶ ಪಡೆದರು. ಮಹಿಳೆಯರ 800 ಮೀ. ಓಟದಲ್ಲಿ ವಿಜಯಕುಮಾರಿ, 200 ಮೀ. ಓಟದಲ್ಲಿ ದಾನೇಶ್ವರಿ, ಪುರುಷರ 200 ಮೀ. ಓಟದಲ್ಲಿ ಅಭಿನ್‌ ದೇವಾಡಿಗ, 400 ಮೀ. ಹರ್ಡಲ್ಸ್‌ನಲ್ಲಿ ಯಶಸ್‌ ಪಿ. ಫೈನಲ್‌ ಪ್ರವೇಶಿಸಿದ್ದು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಗುರುವಾರ ಕೂಟದ ಕೊನೆಯ ದಿನವಾಗಿದ್ದು, ಕರ್ನಾಟಕ ತನ್ನ ಪದಕ ಗಳಿಕೆಯನ್ನು ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಬೇಸಿಗೆಯಲ್ಲಿ ಟೂರ್ನಿಗಳನ್ನು ಆಯೋಜಿಸಲ್ಲ: ಎಐಎಫ್‌ಎಫ್‌

ನವದೆಹಲಿ: ಈ ವರ್ಷ ಸೂಪರ್‌ ಕಪ್‌ ಹಾಗೂ ಭಾರತೀಯ ಮಹಿಳಾ ಲೀಗ್‌(ಐಡಬ್ಲ್ಯುಎಲ್‌) ಟೂರ್ನಿಗಳನ್ನು ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ನಡೆಸಲಾಗಿತ್ತು. ಆದರೆ ಮುಂಬರುವ ಆವೃತ್ತಿಗಳನ್ನು ಬೇಸಿಗೆಯಲ್ಲಿ ಆಯೋಜಿಸದೆ ಇರಲು ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ನಿರ್ಧರಿಸಿದೆ. ಈ ಕುರಿತು ಬುಧವಾರ ಚೆನ್ನೈನಲ್ಲಿ ಮಾತನಾಡಿದ ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ, ‘ಅಧಿಕ ಬಿಸಿಲಿರುವ ಏಪ್ರಿಲ್‌, ಮೇ ತಿಂಗಳಲ್ಲಿ ನಮ್ಮ ಆಟಗಾರರು ದಣಿಯುವುದನ್ನು ತಡೆಯಬೇಕಿದೆ. ಮುಂದಿನ ವರ್ಷದಿಂದ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

Follow Us:
Download App:
  • android
  • ios