ಭುವನೇಶ್ವರ(ಜೂ.16): ನಿರೀಕ್ಷೆಯಂತೆ ಭಾರತ ಪುರುಷರ ಹಾಕಿ ತಂಡ ಎಫ್‌ಐಎಚ್‌ ಸೀರೀಸ್‌ ಫೈನಲ್ಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಶನಿವಾರ ಇಲ್ಲಿ ನಡೆದ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು.

ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಿಗೆ ಪ್ರವೇಶಿಸಿದ್ದ ಭಾರತ, ಚಾಂಪಿಯನ್‌ ತಂಡದ ರೀತಿಯಲ್ಲೇ ಪ್ರದರ್ಶನ ತೋರಿ ಆಡಿದ 5 ಪಂದ್ಯಗಳಲ್ಲೂ ಗೆಲುವು ಪಡೆಯಿತು. ಟೂರ್ನಿಯಲ್ಲಿ ಬರೋಬ್ಬರಿ 35 ಗೋಲು ಬಾರಿಸಿದ ಭಾರತ, ಕೇವಲ 4 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿತು.

ಶನಿವಾರದ ಪಂದ್ಯದಲ್ಲಿ ಭಾರತ ಪರ ಡ್ರ್ಯಾಗ್‌ಫ್ಲಿಕ್ಕರ್‌ಗಳಾದ ವರುಣ್‌ ಕುಮಾರ್‌ (2ನೇ ಹಾಗೂ 49ನೇ ನಿಮಿಷ), ಹರ್ಮನ್‌ಪ್ರೀತ್‌ ಸಿಂಗ್‌ (11ನೇ ಹಾಗೂ 25ನೇ ನಿ.) ಗೋಲು ಬಾರಿಸಿದರು. ಮತ್ತೊಂದು ಗೋಲನ್ನು ವಿವೇಕ್‌ ಪ್ರಸಾದ್‌ (35ನೇ ನಿ.) ಗಳಿಸಿದರು. 53ನೇ ನಿಮಿಷದಲ್ಲಿ ರಿಚರ್ಡ್‌ ಪೌಟ್ಜ್ ದ.ಆಫ್ರಿಕಾ ಪರ ಏಕೈಕ ಗೋಲು ಗಳಿಸಿದರು.

ಫೈನಲ್‌ಗೇರಿದ ಭಾರತ ಹಾಗೂ ದ.ಆಫ್ರಿಕಾ ತಂಡಗಳು ಇದೇ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ 2020ರ ಟೋಕಿಯೋ ಒಲಿಂಪಿಕ್ಸ್‌ನ ಅಂತಿಮ ಸುತ್ತಿನ ಅರ್ಹತಾ ಟೂರ್ನಿಗೆ ಪ್ರವೇಶ ಪಡೆದವು.