ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ವಿವಾಹವಾಗಿ ಒಂದು ವರ್ಷವಾಗಿದ್ದು, ಇವರಿಗೆ ಮಹಾನಟಿ ವೇದಿಕೆಯಲ್ಲಿ ಸರ್​ಪ್ರೈಸ್​ ನೀಡಲಾಗಿದೆ. ಅದರ ವಿಡಿಯೋ ಇಲ್ಲಿದೆ... 

ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ 2024 ಆಗಸ್ಟ್​ 11ರಂದು ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಜೋಡಿ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ತಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ನಡೆದಿತ್ತು. ಸೋನಲ್​ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್​ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ.

ಜೀ ಕನ್ನಡದ ಮಹಾನಟಿ ಷೋಗೆ ತರುಣ್​ ಸುಧೀರ್​ ಅವರು ತೀರ್ಪುಗಾರರಾಗಿದ್ದಾರೆ. ಇದೇ ಕಾರಣಕ್ಕೆ ವಾಹಿನಿಯ ಕಡೆಯಿಂದ ಇವರ ವಿವಾಹ ವಾರ್ಷಿಕೋತ್ಸವವನ್ನು ವೇದಿಕೆ ಮೇಲೆ ಅದ್ಧೂರಿಯಾಗಿ ಆಚರಿಸಲಾಗಿದೆ. ಇದೇ ವೇಳೆ ಸಂಗೀತದ ಆಲ್ಬಂ ನೀಡುವ ಮೂಲಕ ತರುಣ್​ಗೆ ಸರ್​ಪ್ರೈಸ್​ ನೀಡಿದ್ದಾರೆ ಸೋನಲ್​. ಇದೇ ವೇಳೆ ಸೋನಲ್​ ಅವರಿಗೆ ಸೀರೆಯ ಉಡುಗೊರೆಯನ್ನು ನೀಡಿದ್ದಾರೆ. ಈ ಕ್ಷಣದಲ್ಲಿ ಪರಸ್ಪರ ಭಾವುಕರಾಗಿದೆ ಜೋಡಿ. ಇವರ ಈ ಪ್ರೀತಿಗೆ ಸಂಪೂರ್ಣ ವೇದಿಕೆ ಫಿದಾ ಆಗಿದೆ.

ಈ ಹಿಂದೆ ಸೋನಲ್​ (Sonal Monteiro) ಅವರು ತಮ್ಮ ಮದುವೆಯ ಬಗ್ಗೆ ಅನುಭವ ಹಂಚಿಕೊಂಡಿದ್ದರು. ಮದುವೆಯಾದ ಮೇಲೆ ಹೇಗಿರುತ್ತೋ ಎನ್ನುವ ಭಯವಿತ್ತು. ಆದರೆ ಅದೆಲ್ಲಾ ನಮ್ಮ ಮೈಂಡ್​ಸೆಟ್​ನಲ್ಲಿ ಇರುತ್ತೆ ಅಷ್ಟೇ. ನನ್ನ ವಿಚಾರದಲ್ಲಂತೂ ತುಂಬಾ ಲಕ್ಕಿ. ನನಗೆ ಮದುವೆ ಆಗಿದೆ ಎಂದೇ ಅನ್ನಿಸ್ತಿಲ್ಲ. ಮೊದಲು ಲೈಫ್​ ಹೇಗಿತ್ತೋ ಈಗಲೂ ಹಾಗೆಯೇ ಇದೆ ಎಂದಿದ್ದರು. ನಾವು ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗಬೇಕು ಅಷ್ಟೇ. ಹಾಗಿದ್ರೆ ಜನ ನಮ್ಮ ಕೈಹಿಡಿಯುತ್ತಾರೆ. ಪತಿ ತರುಣ್​ ಅವರೂ ಸಿನಿಮಾದವರೇ ಆಗಿರುವುದರಿಂದ ತುಂಬಾ ಸಪೋರ್ಟಿವ್​ ಆಗಿದ್ದಾರೆ. ಈ ಚಿತ್ರಕ್ಕೆ ನನಗಿಂತ ಹೆಚ್ಚಿಗೆ ಅವರೇ ಪ್ರೊಮೋಷನ್​ ಮಾಡುತ್ತಿದ್ದಾರೆ. ನಿಜ ಹೇಳಬೇಕು ಎಂದ್ರೆ ಅವರು ನಿಜ ಜೀವನದಲ್ಲಿ ಡೈರೆಕ್ಟರ್​ ಆಗಿದ್ರೂ, ಫ್ಯಾಮಿಲಿ ವಿಷ್ಯಕ್ಕೆ ಬಂದ್ರೆ ನಾನೇ ಅವರಿಗೆ ಡೈರೆಕ್ಟರ್​ ಎಂದು ತಮಾಷೆ ಮಾಡಿದ್ದರು.

ಇವರಿಬ್ಬರ ನಡುವೆ ಪ್ರೀತಿಗೆ ನಟ ದರ್ಶನ್​ ಕಾರಣ ಎನ್ನುವುದೂ ಈ ಹಿಂದೆ ರಿವೀಲ್​ ಆಗಿತ್ತು. ರಾಬರ್ಟ್‌ ಸಿನಿಮಾ ಸೆಟ್‌ನಲ್ಲಿಯೇ ದರ್ಶನ್‌ ಹಲವು ಬಾರಿ ತರುಣ್‌ ಸುಧೀರ್‌ಗೆ ಮದುವೆ ಮಾಡಿಸಬೇಕು. ಒಳ್ಳೆಯ ಹುಡುಗಿ ಇದ್ದರೆ ಹೇಳಿ ಎನ್ನುತ್ತಿದ್ದಂತೆ. ಇದೇ ವೇಳೆ ಶೂಟಿಂಗ್‌ ಸೆಟ್‌ನಲ್ಲಿದ್ದ ತರುಣ್‌-ಸೋನಲ್‌ ಇಬ್ಬರನ್ನೂ ಇದೇ ವಿಚಾರವಾಗಿ ರೇಗಿಸುತ್ತಿದ್ದರು. ಕೊನೆಗೆ ಇಬ್ಬರ ನಡುವೆ ಪ್ರೀತಿ ಹುಟ್ಟಲು ಇದೇ ಅಂಶ ಕಾರಣವಾಗಿದೆ ಎನ್ನಲಾಗಿದೆ. ಇವರ ಮದುವೆಯ ದಿನ ದರ್ಶನ್​ ಜೈಲಿನಲ್ಲಿ ಇದ್ದರು. ಅವರು ಜೈಲಿನಿಂದ ಹೊರಕ್ಕೆ ಬಂದ ಮೇಲೆ ಜೋಡಿ ಅವರಿಂದ ಆಶೀರ್ವಾದ ಪಡೆದು ಬಂದಿತ್ತು.

View post on Instagram