1. ಲಾಕ್ ಡೌನ್ ಆಗುವ ಒಂದು ವಾರದ ಮೊದಲು ನಾಲ್ಕು ದೇಶ ಪರ್ಯಟನೆ ಮಾಡಿ, 12 ವಿಮಾನ ನಿಲ್ದಾಣಗಳಲ್ಲಿ ಸಂಚರಿಸಿ ಬಂದಿದ್ದೆ. ಒಂದು ವೇಳೆ ಎಲ್ಲಿಯಾದರೂ ತಡ ಮಾಡಿದ್ದರೆ ನಾನು ಕೂಡ ಬೇರೆ ದೇಶದಲ್ಲಿ ಕ್ವಾರಂಟೈನ್ ಆಗಬೇಕಿತ್ತು. ನನ್ನೂರಿಗೆ ಬಂದು ತಲುಪುವ ಹೊತ್ತಿಗೆ ಮನೆಯಲ್ಲಿ ಕೂರಬೇಕಾಯಿತು.

2. ಸ್ಥಾವರ, ಜಂಗಮ ಎಂದು ವಚನಕಾರರು, ಶರಣರು ಹೇಳಿದ ಮಾತುಗಳಿಗೆ ವ್ಯತಿರಿಕ್ತವಾದ ಜೀವನ ನಡೆಸುತ್ತಿದ್ದೇವೆ. ನಿಂತಿರುವುದು ಕೊಳೆಯುತ್ತದೆ, ಚಲಿಸುವುದು ಉಳಿಯುತ್ತದೆ ಎಂದಿದ್ದರು. ಆದರೆ, ನಾವು ಈಗ ಒಂದೇ ಕಡೆ ಸ್ಥಿರವಾಗಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದ್ದೇವೆ.  

ಲಾಕ್‌ಡೌನ್ ಎದುರಿಸೋದು ಹೇಗೆ? ಅನಂತ್ ನಾಗ್ ಸ್ಪೂರ್ತಿ ನೀಡುವ ಸಲಹೆಗಳು!

3. ಭಾರತೀಯರ ಬಹು ದೊಡ್ಡ ಗುಣ, ಅತಿಥಿ ದೇವೋ ಭವ. ಆದರೆ, ಎಂಥ ವಿಪರ್ಯಾಸ ನೋಡಿ, ನಮ್ಮ ಮನೆಗೆ ನೀವು ಬರಬೇಡಿ, ನಿಮ್ಮ ಊರಿಗೆ ನೀವು ಬರುವಂತಿಲ್ಲ ಎಂದು ನಮಗೆ ನಾವೇ ಬೇಲಿ ಹಾಕಿಕೊಳ್ಳುವಂತಾಗಿದೆ.

4. ಸಾಮಾಜಿಕ ಅಂತರ ಎಂಬುದು ಅಸ್ಪೃಶ್ಯತೆಯಾಗಿ ಕಾಣುತ್ತಿದೆ. ನನ್ನಿಂದ ನೀನು ದೂರ ಇರು ಎನ್ನುವ ಮಾತೇ ಮನುಷ್ಯನ ಅತ್ಯಂತ ಕಠೋರ ನಿರ್ಧಾರ.

5. ಈ ಬಿಕ್ಕಟ್ಟನ್ನು ಧರ್ಮಗಳ ನೆರಳಿನಲ್ಲಿ ನಿಂತು ನೋಡುತ್ತಿದ್ದಾರಲ್ಲ, ಅಂಥವರಿಗೆ ಏನು ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ಒಂದು ಧರ್ಮ ಮತ್ತೊಂದು ಧರ್ಮದ ಮೇಲೆ ಯುದ್ಧ ಸಾರುವಂತೆ ಕೊರೋನಾ ಭೀತಿಯನ್ನು ನೋಡುತ್ತಿರುವುದು ಸರಿಯಲ್ಲ. ಈ ಹೊತ್ತಿನಲ್ಲಿ ನಮಗೆ ಬೇಕಿರುವುದು ಏಕತೆಯ ಮಂತ್ರ. ಸಿದ್ಧಾಂತ, ಧರ್ಮಗಳನ್ನು ಆಚೆಗೆ ಇಟ್ಟು ಜತೆಯಾಗಿ ಇದನ್ನ ಎದುರಿಸಬೇಕಿದೆ.

6. ಸದ್ಯ ನಾನು ಕುಟುಂಬದ ಜತೆ ಕಾಲ ಕಳೆಯುತ್ತಿದ್ದೇನೆ. ಒಬ್ಬ ಮಗಳು ಕೆನಡಾದಲ್ಲಿದ್ದಾಳೆ. ಮತ್ತೊಬ್ಬ ಮಗಳು, ನಾನು ಮತ್ತು ಪತ್ನಿ ಜತೆಯಲ್ಲಿದ್ದೇವೆ.  ಬೆಳಗ್ಗೆ ಎದ್ದ ಕೂಡಲೇ ಆರೋಗ್ಯಕ್ಕೆ ಬೇಕಾದ ದೇಹ ದಂಡನೆ. ಜತೆಯಾಗಿ ಅಡುಗೆ ಮಾಡುತ್ತೇವೆ. ಜತೆಯಾಗಿ ಊಟ ಮಾಡುತ್ತೇವೆ. ನಿಜವಾಗಲೂ ಕೌಟುಂಬಿಕ ಸಂಭ್ರಮವನ್ನು ಸವಿಯುತ್ತಿದ್ದೇನೆ.

7. ಸಿನಿಮಾ, ಪುಸ್ತಕಗಳನ್ನು ಪಟ್ಟಿ ಮಾಡಿಕೊಂಡಿದ್ದೇನೆ. ನಾನು ಹೆಚ್ಚಾಗಿ ನಾನ್ ಫಿಕ್ಷನ್ ಪುಸ್ತಕಗಳನ್ನು ಓದುತ್ತಿದ್ದೇನೆ. ಮಹಾತ್ಮಗಾಂಧಿ ಜೀವನ ಚರಿತ್ರೆ ಓದಬೇಕು ಅನಿಸಿ ಓದುತ್ತಿದ್ದೇನೆ.

 8. ಸಾಕ್ಷ್ಯ ಚಿತ್ರಗಳನ್ನು ನೋಡುತ್ತಿದ್ದೇನೆ. ದೀರ್ಘಕಾಲ ಸೆರೆಮನೆ ಜೀವನ ಅನುಭವಿಸಿದ ಜಗತ್ತಿನ ರಾಜಕೀಯ ಖೈದಿಗಳ ಕುರಿತ ಸಾಕ್ಷ್ಯ ಚಿತ್ರ ನೋಡಿದೆ. ಚೆಗುವಾರ, ನೆಲ್ಸನ್ ಮಂಡೇಲಾ, ಸೂಕಿ ಮುಂತಾದವರ ಸೆರೆಮನೆ ವಾಸದ ಕತೆ ಹೇಳುವ ಚಿತ್ರವಿದು. ತುಂಬಾ ಅದ್ಭುತವಾಗಿದೆ.

9. ಒಂದು ಸಣ್ಣ ಜೈಲು ಕೋಣೆಯಲ್ಲಿ 21 ವಸಂತಗಳನ್ನು ಕಂಡಿದ್ದಾರೆ ನೆಲ್ಸನ್ ಮಂಡೇಲಾ. ನಮಗೆ 21 ದಿನ ಮನೆಯಲ್ಲಿ ಕೂರಕ್ಕೆ ಆಗಲ್ವಾ..

10. ನಮಗೆ ಇದೊಂದು ಬಂಧನ ಅಂದುಕೊಳ್ಳುವವರಿಗೆ ಒಂದು ಮಾತು ಕೇಳುತ್ತೇನೆ ಎಂದಾದರೂ ನಿಮ್ಮ ಮನೆಯನ್ನು ನೀವೇ ಅರ್ಥ ಮಾಡಿಕೊಂಡಿದ್ದೀರಾ, ನೀವು ಇರೋ ಮನೆ ಜತೆಗೆ ಎಷ್ಟು ಸಮಯ ಕಳೆದಿದ್ದೀರಿ, ನಿಮ್ಮ ಮನೆಯ ಕೆಲಸಗಳು ಹೇಗೆ ನಡೆಯುತ್ತವೆ ಅಂತ ಗೊತ್ತಾ, ಹೆಣ್ಣು ಮಕ್ಕಳ ಮನೆ ಜೀವನ ಕಂಡಿದ್ದೀರಾ, ಮನೆಯ ಆರ್ಥಿಕತೆ ನಿಭಾಯಿಸುವ ಗೃಹಿಣಿಯರ ಜತೆ ಕಾಲ ಕಳೆದಿದ್ದೀರಾ... ಇದೆಲ್ಲದಕ್ಕೂ ನೀವು ಈಗ ಉತ್ತರ ಕಂಡುಕೊಳ್ಳಿ.

11. ನೀವು ಎಂದೋ ಶಾಲೆಯಲ್ಲೋ, ಕಾಲೇಜಿನ ಸಂಭ್ರಮದಲ್ಲೋ ತೆಗೆಸಿಕೊಂಡಿದ್ದ ಫೋಟೋ ಆಲ್ಬಂಗಳನ್ನು ಈಗ ನೋಡಿ. ಆ ಶಾಲಾ- ಕಾಲೇಜಿನ ಗೆಳೆಯರಿಗೆ ಫೋನ್ ಮಾಡಿ. ಆಗ ನಿಮಗೆ ಸಿಗೋ ಖುಷಿ ಇದೆಯಲ್ಲ, ಅದನ್ನ ಮಾತಿನಲ್ಲಿ ಹೇಳಲಾಗದು. ನಾನು ಎಂದೋ ಆರ್ ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಫೋಟೋವನ್ನು ಹೀಗೆ ಗೆಳೆಯರು ಹುಡುಕಿ ಕಳಿಸಿದಾಗ ಅದನ್ನು ನೋಡಿ ನನಗೆ ಎಷ್ಟು ನಗು ಬಂತು ಅಂದರೆ ನನ್ನ ದಶಾವತಾರಗಳಲ್ಲಿ ಇದು ಒಂದು ಅಂತ ಅನಿಸಿತು.

'ಇಂಡಿಯಾ ವರ್ಸಸ್ ಇಂಗ್ಲೆಂಡ್'ನಲ್ಲಿ ಕನ್ನಡ ಕಲಿ ಎಂದ ಸುಮಲತಾ ಅಂಬರೀಶ್!

12. ನಾನು ಈಗ ಆನ್ ಲೈನ್ ನಲ್ಲಿ ಎಡಿಟಿಂಗ್ ಕಲಿಯುತ್ತಿದ್ದೇನೆ. ನಾನು ಎಡಿಟರ್ ಆಗಲ್ಲ. ಆದರೆ, ಈ ಬಿಡುವಿನಲ್ಲಿ ನನಗೆ ಕುತೂಹಲ ಮೂಡಿಸಿದ ಕೆಲಸ ಇದು. ಹಾಗೆ ನಿಮಗೂ ಯಾವುದೋ ಒಂದು ಕುತೂಹಲ ಇರುತ್ತದೆ. ಅದನ್ನು ಕಲಿಯಕ್ಕೆ ಪ್ರಯತ್ನ ಮಾಡಿ.

13. ವಿಜ್ಞಾನ, ಕಲೆ ಮತ್ತು ಅಧ್ಯಾತ್ಮ... ಈ ಮೂರೇ ನಮ್ಮ ಲಾಕ್ ಡೌನ್ ಜೀವನಕ್ಕೆ ದೊಡ್ಡ ಪರಿಹಾರ. ವಿಜ್ಞಾನ ಅದರ ಪಾಡಿಕೆ ಅದು ಕೆಲಸ ಮಾಡುತ್ತದೆ. ಓದು, ಸಿನಿಮಾ, ಕಲಿಕೆ ಎಂಬ ಕಲೆಯನ್ನು ಆಶ್ರಯಿಸಬೇಕು. ನಮ್ಮ ಜತೆಗೆ ನಾವೇ ಬದುಕುವುದು, ನಮ್ಮನ್ನು ನಾವೇ ಕಂಡುಕೊಳ್ಳುವುದು, ಒಂದು ಕ್ಷಣ ಕಣ್ಣು ಮುಚ್ಚಿ ಧ್ಯಾನ ಮಾಡಿದರೆ, ಇಡೀ ಜಗತ್ತಿನ ನೆಮ್ಮದಿ ನಿಮ್ಮ ಮುಂದೆ ನಿಲ್ಲುತ್ತದೆ. ಇದೇ ಆಧ್ಯಾತ್ಮ.

14. ನಿಮ್ಮ ಮನೆಯ ಅಕ್ಕ-ಪಕ್ಕ ಯಾರಾದರೂ ಕಷ್ಟದಲ್ಲಿ ಇದ್ದಾರೆಯೇ ಅಂತ ನೋಡಿ. ನಿಮ್ಮ ಏರಿಯಾದಲ್ಲಿ ಮನೆ ಕಟ್ಟಲಿಕ್ಕೆ ಬಂದವರು ಅದೇ ಕಟ್ಟಡದಲ್ಲಿ ಇದ್ದರೆ ಅವರಿಗೆ ಒಂದು ಹೊತ್ತಿನ ಊಟಕ್ಕೆ ನೀವು ನೆರವಾಗಬಹುದಾ ಅಂತ ನೋಡಿ. ಇಲ್ಲವೆ ನೆರವು ಸಿಗುವ ದಾರಿಗಳನ್ನು ಅವರಿಗೆ ತೋರಿಸಿ. ಈ ಸಮಯದಲ್ಲೇ ನಮ್ಮೊಳಗೊಬ್ಬ ಮನುಷ್ಯ ಎದ್ದು ನಿಲ್ಲಬೇಕು. ನಾನು ಮಾಡುತ್ತಿರುವುದು ಇದನ್ನೇ. ನನ್ನ ಆತ್ಮ ತೃಪ್ತಿಗಾಗಿ ನನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತಿದ್ದೇನೆ. ಯಾವ ಪ್ರಚಾರವೂ ಇಲ್ಲದೆ. ನೀವೂ ಅದನ್ನ ಮಾಡಿದರೆ ತುಂಬಾ ಉತ್ತಮ.