ಅಂತರ್ಧರ್ಮ ಮದುವೆ ಮೇಲೆ ಹದ್ದಿನ ಕಣ್ಣು, ಬಲವಂತದ ಮತಾಂತರ ಮಾಡಿದ್ದರೆ ಕಠಿಣ ಕ್ರಮ
ಅಂತರ್ಧರ್ಮ ಮದುವೆ ಮೇಲೆ ಉತ್ತರಾಖಂಡ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. 2018ರ ಬಳಿಕ ನಡೆದ ಅಂತರ್ಧರ್ಮೀಯ ವಿವಾಹಗಳ ಪರಿಶೀಲನೆ ನಡೆಸಲು ಮುಂದಾಗಿದೆ. ಬಲವಂತದ ಮತಾಂತರ ಮಾಡಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಇಂಥ ಕಾರ್ಯಾಚರಣೆ ದೇಶದಲ್ಲಿ ನಡೆಯುತ್ತಿರುವುದು ಇದೇ ಮೊದಲು.
ಡೆಹ್ರಾಡೂನ್: ಬಲವಂತದ ಮತಾಂತರ ನಿಷೇಧ ಕುರಿತು 2018ರಲ್ಲೇ ಕಾಯ್ದೆ ರೂಪಿಸಿದ್ದ ಉತ್ತರಾಖಂಡ ಸರ್ಕಾರ, ಇದೀಗ ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಅಂತರ್ಧರ್ಮೀಯ ವಿವಾಹಗಳನ್ನು ಮರುಪರಿಶೀಲನೆ ಮಾಡಲು ನಿರ್ಧರಿಸಿದೆ. ಬಹುಶಃ ಇಂಥ ನಡೆ ಇಡೀ ದೇಶದಲ್ಲೇ ಮೊದಲು ಎಂದು ಹೇಳಲಾಗಿದೆ. 2018ರಲ್ಲಿ ಬಲವಂತದ ಮತಾಂತರದ ಮೇಲೆ ಕಠಿಣ ನಿರ್ಬಂಧ ಹೇರುವ ‘ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿತ್ತು. ಇದರ ನಿಯಮಗಳನ್ನು 2022ರಲ್ಲಿ ಕೆಲವು ತಿದ್ದುಪಡಿಗಳೊಂದಿಗೆ ಕೆಲವು ಬದಲಾವಣೆಗಳನ್ನೂ ಮಾಡಲಾಗಿತ್ತು. ಆದರೆ ಈವರೆಗೆ (ಕಳೆದ 5 ವರ್ಷದಲ್ಲಿ) ಕೇವಲ 18 ಪ್ರಕರಣಗಳು ಈ ಕಾಯ್ದೆಯಡಿ ದಾಖಲಾಗಿವೆ.
ಹೀಗಾಗಿ ಕಾಯ್ದೆಯ ಬಿಗಿ ಜಾರಿಗೆ ಈಗ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ. ‘5 ವರ್ಷದಲ್ಲಿ ಆದ ಎಲ್ಲ ಅಂತರ್ಧರ್ಮೀಯ ವಿವಾಹಗಳ ಪರಿಶೀಲನೆಗೆ 13 ಜಿಲ್ಲೆಗಳ ಎಸ್ಪಿಗಳಿಗೆ ಸೂಚಿಸಲಾಗುತ್ತದೆ’ ಎಂದು ಎಡಿಜಿ (ಕಾನೂನು ಸುವ್ಯವಸ್ಥೆ) ವಿ. ಮುರುಗೇಶನ್ ಹೇಳಿದ್ದಾರೆ. ಕಾಯ್ದೆಯ ಯಾವುದೇ ಉಲ್ಲಂಘನೆ ಆಗಿದ್ದರೆ ಜಿಲ್ಲಾ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ಪೋಷಕರ ಒಪ್ಪಿಗೆ ಮೇರೆಗೆ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಮದುವೆ ನಿಲ್ಲಿಸಿದ ಪೊಲೀಸ್!
ಏನೇನು ಪರಿಶೀಲನೆ?
ಕಾಯ್ದೆ ಪ್ರಕಾರ, ಮತಾಂತರಕ್ಕೆ ಒಳಗಾಗುವ ವ್ಯಕ್ತಿಯು ಮತಾಂತರ (Religious conversion) ಆಗುವ ಕನಿಷ್ಠ ಒಂದು ತಿಂಗಳ ಮೊದಲು ಜಿಲ್ಲಾಧಿಕಾರಿಗೆ ಮಾಹಿತಿ ನೀಡುವುದು ಕಡ್ಡಾಯ. ಅಲ್ಲದೆ, ಮತಾಂತರದ ಪೌರೋಹಿತ್ಯ ವಹಿಸುವವರೂ ಜಿಲ್ಲಾಧಿಕಾರಿಯ ಅನುಮತಿ ಪಡೆಯಬೇಕು. ಇದನ್ನು ಉಲ್ಲಂಘಿಸಿ ಬಲವಂತದ ಮತಾಂತರ ಮಾಡಿದರೆ 10 ವರ್ಷಗಳವರೆಗೆ ಜೈಲು ಶಿಕ್ಷೆ (Punishment) ಮತ್ತು 50 ಸಾವಿರ ರು. ದಂಡ ವಿಧಿಸಲು ಅವಕಾಶವಿದೆ. ಕಾರ್ಯಾಚರಣೆ (Operation) ವೇಳೆ, ಧರ್ಮ ಬದಲಿಸಿಕೊಂಡು ಮದುವೆ (Marriage) ಮಾಡಿದವರನ್ನು ಪ್ರಶ್ನಿಸಲಾಗುತ್ತದೆ.
ಕಾಯ್ದೆಯ ಪ್ರಕಾರ ಜಿಲ್ಲಾಧಿಕಾರಿಗೆ ತಿಳಿಸಿ ಮತಾಂತರ ಆಗಿದ್ದಾರಾ ಎಂಬುದನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ನಿಯಮ (Rules) ಪಾಲಿಸದೇ ಮತಾಂತರಗೊಂಡಿದ್ದರೆ ಅಥವಾ ಬಲವಂತದ ಮತಾಂತರ ಮಾಡಿ ಮದುವೆ ಆಗಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಲವ್ ಜಿಹಾದ್ ನಿಷೇಧ ಬಳಿಕ ಅಂತರ್ ಧರ್ಮೀಯ ವಿವಾಹ ಪ್ರೋತ್ಸಾಹ ಧನ ರದ್ದು!