Asianet Suvarna News Asianet Suvarna News

ಪ್ರಧಾನಿ ವಿರುದ್ಧ ಅವಿ​ಶ್ವಾಸ ನಿರ್ಣ​ಯಕ್ಕೆ ಮುಂದಾ​ಗಿ ಬೆತ್ತ​ಲೆ​ಯಾದ ಐಎನ್‌ಡಿಐಎ: ಸಂಸದ ರಾಘವೇಂದ್ರ

ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರದ ಘಟನೆ ಬಗ್ಗೆ ಮಾತನಾಡಬೇಕು ಎಂಬ ಹಠಕ್ಕೆ ಬಿದ್ದ ವಿಪಕ್ಷಗಳ ಕೂಟ ‘ಐಎನ್‌ಡಿಐಎ’ ತನ್ನ ಬಹುನಿರೀಕ್ಷಿತ ಅವಿಶ್ವಾಸ ಮತ ಮಂಡಿಸಲು ಮುಂದಾಗಿ ತಮ್ಮನ್ನು ತಾವೇ ಬೆತ್ತಲು ಮಾಡಿಕೊಂಡಿದ್ದಾರೆ. 

MP BY Raghavendra Talks Over PM Narendra Modi gvd
Author
First Published Aug 11, 2023, 9:15 PM IST

ಶಿವಮೊಗ್ಗ (ಆ.11): ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರದ ಘಟನೆ ಬಗ್ಗೆ ಮಾತನಾಡಬೇಕು ಎಂಬ ಹಠಕ್ಕೆ ಬಿದ್ದ ವಿಪಕ್ಷಗಳ ಕೂಟ ‘ಐಎನ್‌ಡಿಐಎ’ ತನ್ನ ಬಹುನಿರೀಕ್ಷಿತ ಅವಿಶ್ವಾಸ ಮತ ಮಂಡಿಸಲು ಮುಂದಾಗಿ ತಮ್ಮನ್ನು ತಾವೇ ಬೆತ್ತಲು ಮಾಡಿಕೊಂಡಿದ್ದಾರೆ. ಪ್ರಧಾನಿ ಮಾತಾಡಿದರು; ವಿಪಕ್ಷಗಳ ಬುದ್ಧಿವಂತರು ಬೆಂಚು ಖಾಲಿ ಮಾಡಿ ಹೋದರು! ಒಂದು ರೀತಿಯಲ್ಲಿ ಐಎಎಸ್‌ ಪಾಸ್‌ ಮಾಡಿದವರು ಕಿಂಡರ್‌ ಗಾರ್ಟನ್‌ ಪರೀಕ್ಷೆ ಬರೆದ ಹಾಗೆ! ಆಸ್ಪ್ರೇಲಿಯಾ ಕ್ರಿಕೆಟ್‌ ಟೀಮು ಜರ್ಮನಿ ಟೀಮಿನ ಮೇಲೆ ಟೆಸ್ಟ್‌ ಮ್ಯಾಚ್‌ ಆಡಿದ ಹಾಗೆ! ಇಸ್ರೋ ವಿಜ್ಞಾನಿಯೊಬ್ಬ ಹೈಸ್ಕೂಲ್‌ನ ಸೈನ್ಸ್‌ ಪ್ರಾಜೆಕ್ಟ್ ಮಾಡಿದ ಹಾಗೆ!

ಕೆಲವು ಸಲ, ಫಲಿತಾಂಶದ ಬಗ್ಗೆ ಮೊದಲೇ ವಿಶ್ವಾಸವಿದ್ದರೂ, ಇಡೀ ಜಗತ್ತಿಗೇ ಅದರ ಬಗ್ಗೆ ಗೊತ್ತಿದ್ದರೂ, ಕನಿಷ್ಠ ಪಕ್ಷ ಪರೀಕ್ಷೆಯಲ್ಲಿ, ಆಟದಲ್ಲಿ ಅಥವಾ ಯಾವುದೇ ಒಂದು ಪ್ರಾಜೆಕ್ಟ್ನಲ್ಲಿ ಸ್ವಲ್ಪವಾದರೂ ಚಾಲೆಂಜ್‌ ಇರಲಿ ಅಂತ ಬಯಸುವುದು ಸುಳ್ಳಲ್ಲ. ಆಟ ನೋಡುವವರಿಗೂ ಅದು ಬೇಕು, ಪರೀಕ್ಷೆ ಬರೆಯುವವರಿಗೂ ಅದು ಬೇಕು. ನೋಡುವವರಿಗೆ ಏನೋ ಒಂದಿಷ್ಟುಹೊಸತನ್ನು ತಿಳಿದುಕೊಳ್ಳುವ ಅಥವಾ ಹೊಸತನ ನೋಡುವ ತವಕವಾದರೆ, ಆಡುವವರಿಗೆ-ಬರೆಯುವವರಿಗೆ ಸವಾಲನ್ನು ಮೆಟ್ಟಿನಿಂತು ಗೆಲುವು ಅನುಭವಿಸಿದ ತೃಪ್ತಿ ಪಡೆಯುವ ಹಂಬಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಣಕಿ ಸದನದಲ್ಲಿ ಕಣಕ್ಕೆ ಇಳಿದ ಐಎನ್‌ಡಿಐಎ ಕೂಟ ಅಕ್ಷರಶಃ ಬೆತ್ತಲಾಗಿ ಹೋದರು!

ಕೋಡಿಬೆಂಗ್ರೆ ಬೀಚ್‌ನಲ್ಲಿ ಮೀನಿನ ಸುಗ್ಗಿ, ಟನ್‌ಗಟ್ಟಲೆ ಮೀನು ಬಲೆಗೆ

ಹೀಗೆಂದು ಅವಿಶ್ವಾಸ ನಿರ್ಣಯದ ಕುರಿತಾಗಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಉತ್ತರದ ಕುರಿತು ಸಂಸದ ಬಿ.ವೈ. ರಾಘವೇಂದ್ರ ಸ್ವಾರಸ್ಯಕರ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಲ I.N.D.I.A ಅನ್ನುವ ಒಂದು ಅನುಕೂಲ ಸಿಂಧು ಮೈತ್ರಿಕೂಟ ಒಟ್ಟಾಗಿ ಮೋದಿ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದಾಗ, ತಾನು ಸೋಲುತ್ತೇನೆ ಅನ್ನುವುದು ಗೊತ್ತಿದ್ದರೂ ಅಂಥದ್ದೊಂದು ನಡೆಗೆ ಅದು ಇಳಿದಿದೆ ಅಂದಾಗ, ಏನೋ ನಾವು ಯಾರೂ ಕಾಣದ ಒಂದು ಸವಾಲನ್ನು ಮುಂದೆಸೆದು ಮೋದಿಯವರನ್ನೂ ಅವರ ತಂಡವನ್ನೂ ಕ್ಷಣಕ್ಕಾದರೂ ಅವಾಕ್ಕಾಗಿಸುತ್ತಾರೇನೋ ತಬ್ಬಿಬ್ಬುಗೊಳಿಸುತ್ತಾರೇನೋ ಅನ್ನುವ ಒಂದು ಸಣ್ಣ ನಿರೀಕ್ಷೆಯಂತೂ ಇತ್ತು. 

ರಾಹುಲ್‌ ಗಾಂಧಿ ಅವರು ಬೇರೆ ಸುಪ್ರೀಂ ಕೋರ್ಚ್‌ ಕೊಟ್ಟತಾತ್ಕಾಲಿಕ ನಿರಾಳದಿಂದ ಹುರುಪು ತುಂಬಿಕೊಂಡು ಸಂಸತ್ತಿಗೆ ಮರುಪ್ರವೇಶ ಮಾಡಿದ್ದರು. ‘ಭಾರತ್‌ ಜೋಡೋ’ ನಡಿಗೆಯಿಂದ ತಮ್ಮ ಇಮೇಜ್‌ ಇಡೀ ಇಂಡಿಯಾವೇ ಗಂಭೀರವಾಗಿ ತೆಗೆದುಕೊಳ್ಳುವಷ್ಟುಬದಲಾಗಿದೆ ಅಂತ ನಂಬಿದ್ದರು. ಐಎನ್‌ಡಿಐಎ ಒಕ್ಕೂಟಕ್ಕೆ ತಾವೇ ಕೇಂದ್ರ ಬಿಂದು ಅನ್ನುವ ಅವ್ಯಕ್ತ ವಿಶ್ವಾಸವೂ ಇತ್ತು. ಹೀಗಾಗಿ ಅವರು ಏನೋ ಮಾಡಬಹುದು, ಏನೋ ಒಂದು ಅನೂಹ್ಯ ಪ್ರಸಂಗ ನಡೆಯಬಹುದು ಅಂತಲೇ ಈ ದೇಶದ ಒಂದಷ್ಟುಜನ ಅಂದುಕೊಂಡಿದ್ದರು. ಆದರೆ, ಅಲ್ಲಿ ನಡೆದಿದ್ದು, 2019ರ ಪುನರಾವರ್ತನೆ! ಎಂದು ಹೇಳಿದ್ದಾರೆ.

ಪ್ರಧಾನಿಯವರು ಮಣಿಪುರದ ಬಗ್ಗೆ ಏನೂ ಮಾತಾಡಿಲ್ಲ ಅನ್ನುವುದೇ ವಿಪಕ್ಷಗಳ, ವಿಶೇಷವಾಗಿ ರಾಹುಲ್‌ ಗಾಂಧಿಯವರ ಆರೋಪ-ಆಕ್ರೋಶ ಆಗಿತ್ತು. ಆದರೆ, ಒಂದು ಸತ್ಯವೇನೆಂದರೆ, ಮನೆಯ ಯಜಮಾನನಿಗೆ ತನ್ನ ಮನೆಯಲ್ಲಿ ಏನಾಗುತ್ತಿದೆ, ಅದನ್ನು ತನ್ನ ಮನೆಯವರು ಹೇಗೆ ನಿಭಾಯಿಸುತ್ತಿದ್ದಾರೆ, ಮನೆಯ ಹಿತರಕ್ಷಣೆ ಆಗುತ್ತಿದೆಯಾ ಇಲ್ಲವಾ ಅನ್ನುವುದರ ಅರಿವಿದ್ದಾಗ, ಹುಸಿ ಮಾತಿನಿಂದ ಯಾರನ್ನೋ ಸಂತೃಪ್ತಿ ಪಡಿಸುವುದಕ್ಕಿಂತ ಸದ್ದಿಲ್ಲದೇ ಕೆಲಸ ಮಾಡುವುದು ಮುಖ್ಯ ಅಂತ ಗೊತ್ತಿದ್ದಾಗ, ಅವನು ಮಾತಾಡುವ ಅಗತ್ಯ ಬೀಳುವುದಿಲ್ಲ. ಅನೇಕ ಸಂಕೀರ್ಣ ಸನ್ನಿವೇಶಗಳಲ್ಲಿ ದಳಪತಿಗಳನ್ನು ಮುಂದೆ ಬಿಟ್ಟು ರಾಜ ಮೌನವಾಗಿರುವುದೇ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ವಿಪಕ್ಷಗಳ ಕೂಟಕ್ಕೆ ಗೊತ್ತಿಲ್ಲ. ಮೋದಿಯವರು ಮಾಡಿದ್ದೂ ಅದನ್ನೇ.

ಮಣಿಪುರದ ಘಟನೆ ಕುರಿತು ತನಗೆ ಪ್ರತಿದಿನ ಪ್ರಧಾನಿ ಎರಡು ಬಾರಿ ಕರೆ ಮಾಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆಯುತ್ತಿದ್ದರು ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದರು. ಗಲಭೆಯ ಬೆನ್ನಲ್ಲೇ ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಬದಲಿಸಿದ್ದಾರೆ. ಸುಮಾರು 36 ಸಾವಿರ ಸೈನಿಕರನ್ನು ಅಲ್ಲಿಗೆ ಕಳಿಸಲಾಗಿದೆ. ಹಾಗಾಗಿ, ದಿನೇದಿನೇ ಗಲಭೆಯ ಪ್ರಮಾಣ ಕಡಿಮೆಯಾಗಿ, ಅಮಾಯಕರ ಸಾವುಗಳ ಸಂಖ್ಯೆಯೂ ಇಳಿದಿದೆ ಎಂದಿದ್ದರು. ಆದರೆ, ರಾಹುಲ್‌ ಗಾಂಧಿ ಮಾಡಿದ್ದು ಬರೀ ರಾಜಕೀಯದ ಅಬ್ಬರ. ಮಣಿಪುರಕ್ಕೆ ಹೋದಾಗ ಇಂಫಾಲದಿಂದ ಚುರಾಚಂದ್‌ಪುರಕ್ಕೆ ಹೋಗಲು ತಮಗಾಗಿ ಹೆಲಿಕಾಪ್ಟರ್‌ ವ್ಯವಸ್ಥೆ ಆಗಿದ್ದರೂ ತಾವು ರಸ್ತೆಯಲ್ಲೇ ಹೋಗಬೇಕೆಂದು ಹಟಹಿಡಿದು ರಣರಂಪ ಮಾಡಿದರು. ಅವರು ರಸ್ತೆಯಲ್ಲಿ ಹೋಗುವುದೆಂದರೆ ರಸ್ತೆಯುದ್ದಕ್ಕೂ ಈಗಷ್ಟೇ ಮಾಯುತ್ತಿರುವ ಗಾಯಗಳನ್ನು ಮತ್ತೆ ಕೆರೆದಂತೆ! ಅದು ಗೊತ್ತಿದ್ದೂ ಹಟ ಹಿಡಿದರು, ಆದರೆ ಮರುದಿನ ಹೆಲಿಕಾಪ್ಟರಿನಲ್ಲೇ ಹೋದರು! ಆದರೆ ಮಣಿಪುರಕ್ಕೆ ಏನು ಮಾಡಬೇಕಿತ್ತು ಎಂದು ಹೇಳಲೇ ಇಲ್ಲ. ಇದು ವಿಪಕ್ಷಗಳ ನಡೆ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿ ಸರ್ಕಾರದ ನಡೆ ಪ್ರತಿಯೊಬ್ಬರಿಗೂ ಗೊತ್ತಿತ್ತು, ಮಣಿಪುರದ ಬಗ್ಗೆ ವಾಸ್ತವ ನೆಲೆಗಟ್ಟಿನಲ್ಲಿ ಮಾತಾಡಬಹುದಾದ ನೈತಿಕ ಗಟ್ಟಿತನವೇ ಯಾವ ವಿಪಕ್ಷಕ್ಕೂ ಇಲ್ಲ ಅನ್ನುವುದು. ಮತ್ತು, ಮಣಿಪುರದಲ್ಲಿ ದೇಶಾದ್ಯಂತ ಪ್ರಚಾರವಾದ ಒಂದೆರಡು ಅವಮಾನಕರ ಅಮಾನವೀಯ ದುರ್ಘಟನೆಗಳನ್ನು ಹೊರತುಪಡಿಸಿದರೆ ಪರಿಸ್ಥಿತಿ ಬಹುತೇಕ ಹತೋಟಿಗೆ ಬಂದಿತ್ತು ಅನ್ನುವುದು. ಹಾಗಾಗಿ, ಆಡಳಿತ ಪಕ್ಷದ ಅಂಗಳದಲ್ಲಿ ಮಣಿಪುರ ಸಂಭಾವ್ಯ ಚರ್ಚೆಯ ಬಗ್ಗೆ ಯಾವುದೇ ಹಿಂಜರಿಕೆಯಾಗಲೀ ಆತಂಕವಾಗಲೀ ಇರಲಿಲ್ಲ. ನಿಜ ಹೇಳಬೇಕೆಂದರೆ, ಅಂಥದ್ದೊಂದು ಚರ್ಚೆಗೆ ಸರ್ಕಾರ ಕಾಯುತ್ತಿತ್ತು! ಯಾಕೆಂದರೆ ಅದರ ಹತ್ತಿರ ದೇಶದ ಮುಂದೆ ಇಡಲು ಯೋಗ್ಯವಾದ, ಇಡಲೇಬೇಕಾದ ಅನೇಕ ಸತ್ಯಗಳಿದ್ದವು. ಜೊತೆಗೆ, ಮಣಿಪುರದ ಹಾಗೂ ಇಡೀ ಈಶಾನ್ಯದ ಜನರಿಗೆ ಒಂದು ವಿಶ್ವಾಸಪೂರ್ವಕ ಸಂದೇಶ ಕೊಡುವ ಅಗತ್ಯದ ಬಗ್ಗೆಯೂ ತಿಳಿದಿತ್ತು. ಹಾಗಾಗೇ ಗೃಹಮಂತ್ರಿ ಅಮಿತ್‌ ಶಾ ಅವರು ಸೇರಿದಂತೆ ಅನೇಕ ಹಿರಿಯ ಮಂತ್ರಿಗಳು ಪದೇಪದೆ ಮಣಿಪುರದ ಚರ್ಚೆಗೆ ಸರ್ಕಾರ ಸಿದ್ಧವಿರುವ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರು ಎಂದು ಸಂಸದ ರಾಘವೇಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಷ್ಟೆಲ್ಲಾ ವೀರಾವೇಶದಿಂದ ಮಾತಾಡಿದ ರಾಹುಲ್‌ ಅವರ ಜಾಣ ಮರೆವು. ತಮ್ಮದೇ ಸರ್ಕಾರಗಳಿದ್ದ ಸಮಯದಲ್ಲಿ ತಾವು ಹಾಗೂ ತಮ್ಮ ನಾಯಕರುಗಳು ಈಶಾನ್ಯ ರಾಜ್ಯಗಳ ವಿಷಯದಲ್ಲಿ ಹೇಗೆ ನಡೆದುಕೊಂಡಿದ್ದರು ಅನ್ನುವುದನ್ನು ನೆನಪಿಸಿಕೊಳ್ಳುತ್ತಿಲ್ಲ ಎಂದು ಟೀಕಿಸಿರುವ ಸಂಸದ ರಾಘವೇಂದ್ರ ಅವರು ಹಿಂದಿನ ಯಾವ ಗಲಭೆಯ ಸಮಯದಲ್ಲೂ ಯಾವ ಪ್ರಧಾನಿಯೂ ಯಾವ ಗೃಹಮಂತ್ರಿಯೂ ಅಪ್ಪಿತಪ್ಪಿ ಮಣಿಪುರಕ್ಕೆ ಹೋಗಿರಲಿಲ್ಲ ಅನ್ನುವುದನ್ನೂ ಮರೆತಿದ್ದಾರೆ. ಮಣಿಪುರದ ಘಟನೆ ಕುರಿತು ಮತ್ತು ಹಿಂದಿನ ಘಟನೆಗಳ ಕುರಿತು ಗೃಹ ಸಚಿವ ಅಮಿತ್‌ ಸದನದಲ್ಲಿ ಮಾಹಿತಿ ನೀಡುವಾಗ ರಾಹುಲ್‌ಗಾಂಧಿ ಸದನದಲ್ಲಿಯೇ ಇರಲಿಲ್ಲ ಎನ್ನುವುದನ್ನು ನೆನಪು ಮಾಡಿಕೊಟ್ಟಿದ್ದಾರೆ.

ಕೃಷಿ ಸಚಿವ ಚಲುವಗೆ ಕ್ಲೀನ್‌ಚಿಟ್‌ ಕೊಡಲೆಂದು ಸಿಐಡಿ ತನಿಖೆ: ಮುಖ್ಯಮಂತ್ರಿ ಚಂದ್ರು

ಈ ಹಿಂದೆ ರಾಹುಲ್‌ ಗಾಂಧಿಯವರು ‘ಚೌಕಿದಾರ್‌ ಚೋರ್‌ ಹೈ’ ಅನ್ನುವ ಒಂದೇ ಒಂದು ಟೊಳ್ಳು ಘೋಷಣೆಯನ್ನೇ ಅಸ್ತ್ರವಾಗಿ ಇಟ್ಟುಕೊಂಡು ಯುದ್ಧಕ್ಕಿಳಿದಿದ್ದರು. ರಫೇಲ್‌ ವಿಮಾನ ಖರೀದಿ ವ್ಯವಹಾರದಲ್ಲಿ ಇಲ್ಲಸಲ್ಲದ ಅಪಸವ್ಯಗಳನ್ನು ಅವರು ಆಗಷ್ಟೇ ಪಟ್ಟಿಮಾಡಿ ರಾಹುಲ್‌ ಗಂಟಲು ಶೋಷಣೆ ಮಾಡಿಕೊಂಡಿದ್ದರು. ಸಂಸತ್ತಿನಲ್ಲಿ ಏನೋ ಮಹತ್ತರವಾದ ಸಾಕ್ಷಿ ಸಮೇತ ತಮ್ಮ ಘೋಷಣೆಗೆ ಬಲ ತುಂಬುತ್ತಾರೆ ಅಂತಲೇ ಆಗಲೂ ಅವರ ಅಭಿಮಾನಿ ಕೌರವ ಬಳಗ ಅಂದುಕೊಂಡಿತ್ತು. ಆದರೆ, ಘೋಷಣೆ ಬಿಟ್ಟರೆ, ಆವೇಶ ಬಿಟ್ಟರೆ ಅವರ ಮಾತಿನಲ್ಲಿ ಅವತ್ತು ಏನೂ ಸಿಕ್ಕಿರಲಿಲ್ಲ. ಘೋಷಣೆ ನೆಲಕಚ್ಚಿತು ಎಂದು ಸಂಸದ ರಾಘ​ವೇಂದ್ರ ಹೇಳಿ​ದ್ದಾರೆ.

ಮೋದಿ ಅವರು ಅವತ್ತಿನ ಅವಿಶ್ವಾಸ ನಿರ್ಣಯವನ್ನು ಸೋಲಿಸಿದ್ದಷ್ಟೇ ಅಲ್ಲ, ಅದರ ಬೆನ್ನಲ್ಲೇ ಬಂದ ಲೋಕಸಭೆ ಚುನಾವಣೆಯನ್ನೂ ಗೆದ್ದು ಮತ್ತೆ ಅಧಿಕಾರಕ್ಕೆ ಬಂದರು ಎಂಬುದನ್ನು ಮೆಲುಕು ಹಾಕಿರುವ ಸಂಸದರು, ಈಗ ಮತ್ತದೇ ದೃಶ್ಯಗಳ ಮರುಪ್ರಸಾರ! ವಾರಗಟ್ಟಲೆ ಮಣಿಪುರದಲ್ಲಿನ ಸ್ಥಿತಿಯ ಬಗ್ಗೆ, ಅಲ್ಲಿನ ದುರದೃಷ್ಟಕರ ಅಶಾಂತಿಯ ಬಗ್ಗೆಯೇ ಮಾತಾಡುತ್ತಾ, ಅದನ್ನು ಬಿಟ್ಟರೆ ಬೇರೆ ಯಾವುದರ ಬಗ್ಗೆಯೂ ಮಾತಾಡಲು ತಾವು ಸಿದ್ಧವೇ ಇಲ್ಲ ಅನ್ನುತ್ತಾ ಬಂದಿದ್ದ ವಿಪಕ್ಷಗಳು, ಈ ಅವಿಶ್ವಾಸ ನಿರ್ಣಯದ ನೆಪದಲ್ಲಾದರೂ ಮಣಿಪುರದ ಘೋರ ಚಿತ್ರವನ್ನು ದೇಶದ ಮುಂದೆ ಬಿಚ್ಚಿಡುತ್ತವೆ ಅನ್ನುವ ನಿರೀಕ್ಷೆ ಹುಟ್ಟಿಸಿದ್ದವು. ಆದರೆ, ಎಲ್ಲವೂ ತಲೆಕೆಳಗಾಗಿ ಹೋದವು ಎಂದಿದ್ದಾರೆ.

Follow Us:
Download App:
  • android
  • ios