Asianet Suvarna News Asianet Suvarna News

ಬಿಜೆಪಿ ಪ್ರಧಾನ ಕಾರ‍್ಯದರ್ಶಿ ದಿಟ್ಟನುಡಿ : ಹೊಸ ಕಾಯ್ದೆಗಳ ಬಗ್ಗೆ ವಿವರಣೆ ನೀಡಿದ ಸಿ.ಟಿ. ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಂದರ್ಶನದಲ್ಲಿ ಕಾಯ್ದೆಯನ್ನು ಯಾಕಾಗಿ ಜಾರಿಗೆ ತರಲಾಗಿದೆ, ಕಾಯ್ದೆಯ ಪರಿಣಾಮಗಳೇನು, ರೈತರ ಹೋರಾಟ ಮತ್ತಿತರ ಅಂಶಗಳ ಬಗ್ಗೆ ವಿವರವಾಗಿ ಪ್ರಸ್ತಾಪಿಸಿದ್ದಾರೆ.

interview with BJP Leader CT Ravi snr
Author
Bengaluru, First Published Dec 14, 2020, 10:55 AM IST

ಬೆಂಗಳೂರು (ಡಿ.14):  ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ನಡೆಯುತ್ತಿರುವ ರೈತರ ಹೋರಾಟವು ಬಿಜೆಪಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಕಾಯ್ದೆಗಳು ರೈತರ ಪರ ಇದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರೂ ರೈತರೊಂದಿಗಿನ ಸಂಧಾನ ವಿಫಲವಾಗುತ್ತಿದೆ. ದಿನೇ ದಿನೇ ರೈತರ ಹೋರಾಟ ತೀವ್ರವಾಗತೊಡಗಿದೆ. ಈಗಾಗಲೇ ಒಂದು ಬಾರಿ ಭಾರತ್‌ ಬಂದ್‌ ಕೂಡ ಕರೆಯಲಾಗಿತ್ತು.

ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಕಾಯ್ದೆಯನ್ನು ಯಾಕಾಗಿ ಜಾರಿಗೆ ತರಲಾಗಿದೆ, ಕಾಯ್ದೆಯ ಪರಿಣಾಮಗಳೇನು, ರೈತರ ಹೋರಾಟ ಮತ್ತಿತರ ಅಂಶಗಳ ಬಗ್ಗೆ ವಿವರವಾಗಿ ಪ್ರಸ್ತಾಪಿಸಿದ್ದಾರೆ.

* ನಿಮ್ಮ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಹೋರಾಟದ ಕಾವು ತೀವ್ರವಾಗುತ್ತಿದೆ?

- ನಿದ್ದೆ ಮಾಡುತ್ತಿರುವವರನ್ನು ಎಬ್ಬಿಸಬಹುದು. ಆದರೆ, ನಿದ್ದೆ ಮಾಡುವಂತೆ ನಟಿಸುವವರನ್ನು ಎಬ್ಬಿಸುವುದು ಕಷ್ಟ. ಪ್ರತಿಭಟನಾಕಾರರಲ್ಲಿ ಹಾಗೂ ಸಾರ್ವಜನಿಕರಲ್ಲಿ ಯಾವ ಆತಂಕಗಳಿದ್ದವೋ ಅವೆಲ್ಲವುಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಉತ್ತರ ನೀಡಿದೆ. ಕನಿಷ್ಠ ಬೆಂಬಲ ದರ (ಎಂಎಸ್‌ಪಿ) ರದ್ದಾಗುತ್ತದೆ ಎಂಬ ಮೊದಲ ಆತಂಕದ ಬಗ್ಗೆ ತಿಳಿಸಲಾಗಿದೆ. ಯಾವುದೇ ಕಾರಣಕ್ಕೂ ಎಂಎಸ್‌ಪಿ ರದ್ದಾಗುವುದಿಲ್ಲ. ಎರಡನೇಯದಾಗಿ ರೈತರ ಭೂಮಿಯನ್ನು ಅಡಮಾನ ಇಟ್ಟುಕೊಳ್ಳುತ್ತಾರೆ ಎಂಬುದು ಇದೆ. ಅದೂ ಕೂಡ ಇಲ್ಲ. ಕೇವಲ ಬೆಳೆಯೊಂದಿಗಿನ ಒಪ್ಪಂದವೇ ಹೊರತು ಭೂಮಿಯೊಂದಿಗಿನ ಒಪ್ಪಂದವಲ್ಲ. ಅಲ್ಲದೇ, ಯಾವುದೇ ಸಂದರ್ಭದಲ್ಲಿಯೂ ರೈತರು ಬೆಳೆಯೊಂದಿಗೆ ಒಪ್ಪಂದಿಂದ ಹಿಂದಕ್ಕೆ ಬರಲು ಅವಕಾಶ ಇದೆ. ಮೂರನೇಯದು ಎಪಿಎಂಸಿ ಮುಚ್ಚಲಾಗುತ್ತದೆ ಎಂಬುದು. ಈಗಾಗಲೇ ಈ ಬಗ್ಗೆ ಸ್ಪಷ್ಟಪಡಿಸಲಾಗಿದೆ. ಎಪಿಎಂಸಿ ವ್ಯವಸ್ಥೆ ಯಥಾಸ್ಥಿತಿ ಇರುತ್ತದೆ. ಎಪಿಎಂಸಿ ಜತೆ ಖಾಸಗಿಯವರು ಸಹ ಇರಲಿದ್ದಾರೆ. ಕಾಯ್ದೆ ತರುವ ಪೂರ್ವಭಾವಿಯಾಗಿ ಎಲ್ಲರೊಂದಿಗೆ ಮಾತುಕತೆ ನಡೆಸಲಾಗಿದೆ. ನಂತರವೂ ಯಾರನ್ನೂ ಕತ್ತಲಲ್ಲಿ ಇಟ್ಟಿಲ್ಲ.

* ಪ್ರತಿಭಟನೆ ಮೂಲಕ ಕಾಯ್ದೆ ವಿರುದ್ಧ ದೇಶಾದ್ಯಂತ ರೈತರು ಸಂಘಟಿತರಾದಂತಿದೆ?

- ಇಲ್ಲ.. ಇಲ್ಲ..ರೈತರು ಸಂಘಟಿತರಾಗಿದ್ದರೆ ಭಾರತ್‌ ಬಂದ್‌ ಯಶಸ್ವಿಯಾಗಬೇಕಾಗಿತ್ತು. ಯಾಕೆ ಆಗಲಿಲ್ಲ? ದೇಶದ ಬಹುತೇಕ ರಾಜ್ಯಗಳಲ್ಲಿ ಬಂದ್‌ ಕೇವಲ ಪ್ರತಿಭಟನೆಗೆ ಮಾತ್ರ ಸಿಮೀತವಾಯಿತು. ಕೆಲವು ರಾಜಕೀಯ ಪಕ್ಷಗಳು, ಕೆಲ ವೈಚಾರಿಕ ವಿರೋಧಿಗಳು ಹೋರಾಟ ಮಾಡಿಸುತ್ತಿದ್ದಾರೆ. ರೈತರಿಗೆ ಕೃಷಿ ಕಾಯ್ದೆಗಳಿಂದ ಯಾವುದೇ ನಷ್ಟವಾಗುವುದಿಲ್ಲ.

ಕಾಂಗ್ರೆಸ್​ನ ಹೀನಾಯ ಸ್ಥಿತಿಗೆ ಕಾರಣ ಕೊಟ್ಟ ಸಿ.ಟಿ. ರವಿ

* ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಚರ್ಚೆ ನಡೆಸುವುದಕ್ಕೂ ಕೇಂದ್ರದ ಬಿಜೆಪಿ ಸರ್ಕಾರ ಹೆಚ್ಚು ಅವಕಾಶ ಕಲ್ಪಿಸಲಿಲ್ಲ?

-ವಿಧೇಯಕ ಕುರಿತು ಚರ್ಚೆ ಮಾಡುವುದು ಇಂದಿನದ್ದಲ್ಲ. 2010ರಲ್ಲಿಯೇ ಕಾಯ್ದೆ ತರಬೇಕು ಎಂಬ ಚರ್ಚೆ ಯುಪಿಎ ಸರ್ಕಾರದಲ್ಲಿ ನಡೆದಿತ್ತು. ದಲ್ಲಾಳಿಗಳ ಬೆದರಿಕೆಗೆ ಹಿಂದಿನ ಸರ್ಕಾರಗಳು ಧೈರ್ಯ ಮಾಡಲಿಲ್ಲ. ಈಗ ನಾವು ಧೈರ್ಯ ಮಾಡಿದ್ದೇವೆ. ಯುಪಿಎ ಸರ್ಕಾರ ಕಾಯ್ದೆಗಳಿಂದ ಯಾಕೆ ಹಿಂದೆ ಸರಿದರು ಎಂದರೆ ದಲ್ಲಾಳಿಗಳಿದ್ದರು. ರೈತರು ಅಸಂಘಟಿತರು, ದಲ್ಲಾಳಿಗಳು ಸಂಘಟಿತರು.

* ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಾದ ಅಂಬಾನಿ, ಅದಾನಿಗಳನ್ನು ಮತ್ತಷ್ಟುಶ್ರೀಮಂತರನ್ನಾಗಿಸುವುದಕ್ಕೇ ಈ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂಬ ಆಪಾದನೆಯಿದೆ?

- ನೋಡಿ, ಅಂಬಾನಿ, ಅದಾನಿ ದೇಶದ ಅತ್ಯಂತ ಶ್ರೀಮಂತರಾಗಿ ಹೊರಹೊಮ್ಮಿದ್ದು ಪ್ರಧಾನಿ ಮೋದಿ ಅವರು ಬಂದ ಮೇಲಲ್ಲ. ಅದಕ್ಕೂ ಮೊದಲೇ ಶ್ರೀಮಂತರಾಗಿದ್ದರು. ಅವರೆಲ್ಲ ಶ್ರೀಮಂತರಾಗಲು ಮೆಟ್ಟಿಲು ಮಾಡಿದ್ದು ಬಿಜೆಪಿಯವರಾ ಅಥವಾ ಕಾಂಗ್ರೆಸ್‌ನವರಾ? ರೈತ ವಿರೋಧಿಗಳಾಗಿದ್ದರೆ ಮೋದಿ ಅವರು ಕಿಸಾನ್‌ ಸಮ್ಮಾನ್‌ ಯೋಜನೆ ಯಾಕೆ ಜಾರಿಗೆ ತಂದರು? ಮೋದಿ ಬರುವ ಮೊದಲು ಕಿಸಾನ್‌ ಸಮ್ಮಾನ್‌ ಯೋಜನೆ ಇತ್ತಾ? ಕೃಷಿ ಕಾಯ್ದೆಗಳು ರೈತರ ಸ್ನೇಹಿಯಾಗಿವೆ. ರೈತರು ಬೆಳೆಯುವ 28 ವಿವಿಧ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚು ಮಾಡಲಾಗಿದೆ. ಕಾಯ್ದೆಯಲ್ಲಿ ರೈತರ ಮಕ್ಕಳೇ ಒಂದಾಗಿ ಟ್ರೇಡಿಂಗ್‌ ವ್ಯವಸ್ಥೆ ತರಬಹುದು. ಸಹಕಾರಿ ಸಂಘಗಳೇ ಟ್ರೇಡಿಂಗ್‌ ವ್ಯವಸ್ಥೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬಹುದು.

* ಈ ಕಾಯ್ದೆಗಳಿಂದ ರೈತರ ಆತ್ಮಹತ್ಯೆ ನಿಲ್ಲಿಸಲು ಸಾಧ್ಯವೇ?

- ಆತ್ಮಹತ್ಯೆಯ ಮೂಲ ಕಾರಣ ಕಂಡು ಹಿಡಿದು ಪರಿಹಾರ ಕಂಡುಕೊಳ್ಳಲು ಇರುವುದೇ ಈ ಕಾಯ್ದೆ. ಕೇವಲ ಅಧಿಕಾರದಲ್ಲಿರಬೇಕು ಎನ್ನುವುದಾದರೆ ವಿವಾದವನ್ನು ಮೈಮೇಲೆ ಹಾಕಿಕೊಳ್ಳದೆ ಸುಮ್ಮನೆ ಇರಬಹುದಿತ್ತು. ಆದರೆ, ಮೋದಿ ಅವರು ದೇಶದಲ್ಲಿ ಸುಧಾರಣೆ ತರಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ್ದಾರೆ. ಎಪಿಎಂಸಿಯಲ್ಲಿನ ದಲ್ಲಾಳಿಗಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇದೆಯೇ? ರೈತರೇ ಏಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು. ದಲ್ಲಾಳಿಯಿಂದ ಬಿಡುಗಡೆ ಮಾಡಲು ಈ ಮೂಲಕ ಪ್ರಧಾನಿಗಳು ಮುಂದಾಗಿದ್ದಾರೆ.

ಕಾಂಗ್ರೆಸ್‌ನಿಂದ ಕೆಟ್ಟೆ ಎಂದು ಎಚ್‌ಡಿಕೆಗೆ ಸಿಟಿ ರವಿ ಸಲಹೆ ಜತೆಗೆ ಕಿವಿಮಾತು..! .

* ನಿಮ್ಮ ಪ್ರಕಾರ ಈಗ ಬೀದಿಗೆ ಬಂದು ಹೋರಾಟ ಮಾಡುತ್ತಿರುವವರು ರೈತರೇ ಅಥವಾ ದಲ್ಲಾಳಿಗಳೇ?

- ಎಲ್ಲರನ್ನೂ ದಲ್ಲಾಳಿಗಳು ಎನ್ನುವುದಿಲ್ಲ. ಕೆಲ ರೈತರಲ್ಲಿ ಅನಗತ್ಯವಾಗಿ ಭಯವನ್ನುಂಟು ಮಾಡಲಾಗಿದೆ. ಸತ್ಯ ಸಂಗತಿ ತಿಳಿದ ಬಳಿಕ ಭಯ ಮತ್ತು ಭ್ರಮೆ ದೂರವಾಗಲಿದೆ. ಎಲ್ಲಿ ಹೆಚ್ಚು ಬೆಲೆ ಸಿಗಲಿದೆ ಎಂಬುದು ರೈತರಿಗೆ ಗೊತ್ತಾದ ಬಳಿಕ ಮೋದಿ ಪರವಾಗಿ ನಿಲ್ಲುತ್ತಾರೆ. ಇದು ಕೆಲ ರಾಜಕೀಯ ಪಕ್ಷಗಳಿಗೆ ತಮ್ಮ ಅಸ್ತಿತ್ವ ಹೋಗಲಿದೆ ಎಂಬ ಆತಂಕ ಮತ್ತು ದಲ್ಲಾಳಿಗಳ ವ್ಯವಹಾರಕ್ಕೆ ಧಕ್ಕೆ ಎಂಬ ಭಯದಲ್ಲಿ ರೈತರನ್ನು ಬೀದಿಗೆ ನಿಲ್ಲಿಸಿದ್ದಾರೆ.

* ದೇಶದಲ್ಲಿ ನಕ್ಸಲ್‌ ಹೋರಾಟ ಬೇರೆಯಲ್ಲ. ರೈತ ಹೋರಾಟ ಬೇರೆಯಲ್ಲ ಎಂಬ ಹೇಳಿಕೆ ತೂರಿಬಂದಿದೆ?

- ಅವರು ಬ್ಯಾಲೆಟ್‌ ಮೇಲೆ ನಂಬಿಕೆ ಇಲ್ಲದವರು. ಬುಲೆಟ್‌ ಮೇಲೆ ನಂಬಿಕೆ ಇಟ್ಟಿರುವವರು. ರೈತ ಹೋರಾಟಕ್ಕೂ, ನಕ್ಸಲ್‌ ಹೋರಾಟಕ್ಕೂ ಹೋಲಿಕೆ ಮಾಡುವುದು ಭೂಮಿಗೆ ರಕ್ತವನ್ನು ಬೆವರಾಗಿ ಸುರಿಸಿ ಕೆಲಸ ಮಾಡುವ ರೈತನಿಗೆ ಮಾಡುವ ಅಪಮಾನ. ರೈತ ಎಂದಿಗೂ ಬಂದೂಕಿನ ಮೇಲೆ ನಂಬಿಕೆ ಇಟ್ಟವನಲ್ಲ. ನೇಗಿಲು ಮತ್ತು ಶ್ರಮದ ಮೇಲೆ ನಂಬಿಕೆ ಇಟ್ಟವನು ರೈತ.

* ದೆಹಲಿ ಬಳಿ ನಡೆಯುತ್ತಿರುವ ಹೋರಾಟವನ್ನು ಹೇಗೆ ನಿಭಾಯಿಸುತ್ತೀರಿ?

- ತುಕಡೆ ಗ್ಯಾಂಗ್‌ನ ಷಡ್ಯಂತ್ರದ ಭಾಗವಾಗಿರುವವರು ಆಗಿದ್ದರೆ ಅವರಿಗೆ ಮನವರಿಕೆ ಮಾಡಲಾಗುವುದಿಲ್ಲ. ಅವರಿಗೆ ದುರುದ್ದೇಶ ಇದೆ. ರೈತರಿಗೆ ಮನವರಿಕೆಯಾದ ಬಳಿಕ ಬೀದಿಗಿಳಿದರೆ ಷಡ್ಯಂತ್ರ ಮಾಡಿರುವವರಿಗೆ ಕಷ್ಟವಾಗಲಿದೆ. ಕಾಂಗ್ರೆಸ್‌ ಭಸ್ಮವಾಗಲಿದ್ದು, ಎಡಪಕ್ಷಗಳು ಕೇರಳದಲ್ಲಿ ಗೆಲ್ಲುವುದಿಲ್ಲ. ಅವರಿಗೆ ರೈತರ ಶಾಪ ತಟ್ಟಲಿದೆ.

Follow Us:
Download App:
  • android
  • ios