ಅವಧಿಗೂ ಮೊದಲೇ ಚುನಾವಣೆ ಸಾಧ್ಯತೆ?: ಸಚಿವ ಸುಧಾಕರ್‌ ಸುಳಿವು

ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರೂ ಸನ್ನದ್ಧರಾಗಿರುವಂತೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಕರೆ ನೀಡಿದ ಸಚಿವ ಸುಧಾಕರ್‌

Elections are Likely Before the Term in Karnataka Says K Sudhakar grg

ಚಿಕ್ಕಬಳ್ಳಾಪುರ(ಜು.31):  ವಿಶ್ವೇಶ್ವರಯ್ಯ ಜಲಭಾಗ್ಯ ನಿಗಮದ ಮೂಲಕ ಬೂದುಗೊಂಡ್ಲು ಬಳಿ 52 ಕೋಟಿ ರು.ಗಳ ವೆಚ್ಚದಲ್ಲಿ ಡ್ಯಾಂ ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಿದ್ದು ಈ ಅಣೆಕಟ್ಟು ನಿರ್ಮಾಣವಾದರೆ ಮಂಡಿಕಲ್‌ ಹೋಬಳಿಯ ಎಲ್ಲ ಗ್ರಾಮಗಳ ಪ್ರತಿ ಮನೆಗೂ ನಲ್ಲಿ ನೀರು ನೀಡಲು ಸಹಕಾರಿಯಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ತಾಲೂಕಿನ ಚಲಕಾಯಲಪರ್ತಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಲಜೀವನ್‌ ಮಿಷನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಶೀಘ್ರವೇ ಡ್ಯಾಂ ನಿರ್ಮಾಣ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು. ಜಲಜೀವನ್‌ ಮಿಷನ್‌ ಯೋಜನೆಯಿಂದಾಗಿ ದೇಶದ ಪ್ರತೀ ಗ್ರಾಮದ ಪ್ರತಿ ಮನೆಗೆ ನಲ್ಲಿ ನೀರು ಪೂರೈಸಲು ಸಾಧ್ಯವಾಗಲಿದೆ ಎಂದರು..

ಜಲಜೀವನ್‌ ಮಿಷನ್‌ ಅನುಷ್ಠಾನ

ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದರೂ ಕನಿಷ್ಠ ಮೂಲಸೌಕರ್ಯಗಳಾದ ನೀರು, ಶೌಚಾಲಯ, ರಸ್ತೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸದ ಕಾರಣ ಗ್ರಾಮೀಣ ಮಹಿಳೆಯರ ಸಂಕಷ್ಟತೀವ್ರವಾಗಿತ್ತು. ಇದನ್ನು ಅರಿತ ಪ್ರಧಾನಿ ನರೇಂದ್ರಮೋದಿ ಅವರು, ಜಲಜೀವನ್‌ ಮಿಷನ್‌ ಯೋಜನೆಯನ್ನು ಜಾರಿಗೊಳಿಸಿದ್ದು, ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನೀರು ನೀಡುವ ಕೆಲಸ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಯೋಜನೆ ರೂಪಿಸಲಾಗುತ್ತಿದೆ ಎಂದರು ಹೇಳಿದರು.

ನಾನು ನುಡಿದಂತೆ ನಡೆದುಕೊಂಡಿದ್ದೇನೆ: ಸಚಿವ ಸುಧಾಕರ್‌

ಈ ಹಿಂದೆ ಈ ಯೋಜನೆ ಅನುಷ್ಠಾನಕ್ಕೆ ನೀರಿನ ತೀವ್ರ ಕೊರತೆ ಇತ್ತು. ಆದರೆ ಎಚ್‌ಎನ್‌ ವ್ಯಾಲಿ ಮೂಲಕ ಶುದ್ಧೀಕರಿಸಿದ ನೀರು ಈ ಭಾಗದ ಕೆರೆಗಳಿಗೆ ತುಂಬಿಸಿದ ನಂತರ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗಿದ್ದು, ಮುಂದಿನ ವರ್ಷದ ಡಿಸೆಂಬರ್‌ ವೇಳೆಗೆ ಎತ್ತಿನಹೊಳೆ ನೀರು ಜಿಲ್ಲೆಗೆ ಆಗಮಿಸಲಿದೆ ಎಂದರು.

ಕೃಷ್ಣಾದಿಂದಲೂ ನೀರು ತರಲು ಕ್ರಮ

ಪ್ರಸ್ತುತ ಕೊಳವೆ ಬಾವಿಗಳಲ್ಲಿ ಯಥೇಚ್ಛವಾಗಿ ನೀರು ಇರುವ ಕಾರಣ ಎಲ್ಲ ಗ್ರಾಮಗಳಿಗೆ ನೀರು ನೀಡಲಾಗುತ್ತಿದೆ. ಮಂಚೇನಹಳ್ಳಿ ನೂತನ ತಾಲೂಕು ವ್ಯಾಪ್ತಿಯ 54 ಗ್ರಾಮಗಳಿಗೆ ಒಂದೇ ಯೋಜನೆ ಮೂಲಕ 44 ಕೋಟಿ ವೆಚ್ಚದಲ್ಲಿ ನಲ್ಲಿ ನೀರು ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಎಚ…ಎನ್‌ ವ್ಯಾಲಿ, ಎತ್ತಿನಹೊಳೆ ಜೊತೆಗೆ ಕೃಷ್ಣಾ ಕೊಳ್ಳದಿಂದಲೂ ಅಗತ್ಯ ನೀರು ತಂದು ಕುಡಿಯಲು ಮತ್ತು ಕೃಷಿ ಬಳಕೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಕೈಗಾರಿಕೆಗಳ ಸ್ಥಾಪನೆಗಾಗಿ ಕ್ಷೇತ್ರದಲ್ಲಿ 3 ಸಾವಿರ ಎಕರೆ ಪ್ರದೇಶ ಗುರ್ತಿಸಲಾಗಿದೆ. ಆದಷ್ಟುಶೀಘ್ರದಲ್ಲಿ ಕೈಗಾರಿಕಾ ಪ್ರದೇಶಕ್ಕೆ ಜಮೀನು ನೀಡಿ, ಕೈಗಾರಿಕೆಗಳನ್ನು ತಂದು ಯುವಕರಿಗೆ ಉದ್ಯೋಗವಕಾಶ ಕಲ್ಪಿಸಲು ಕ್ರಮ ವಹಿಸಲಾಗುವುದು. ಗಡಿ ಪ್ರದೇಶದಲ್ಲಿರುವ ಮತ್ತು ಹೆಚ್ಚು ಬಡವರನ್ನೇ ಹೊಂದಿರುವ ಗ್ರಾಮಗಳಿಗೆ ಕುಡಿಯುವ ನೀರು ನಲ್ಲಿ ಮೂಲಕ ಮನೆ ಮನೆಗೆ ತಲುಪಿಸುತ್ತಿರುವುದು ಖುಷಿ ತಂದಿದೆ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ…, ಸಿಇಒ ಪಿ.ಶಿವಶಂಕರ್‌, ಎ.ಪಿ.ಎಂ.ಸಿ ಮಾರುಕಟ್ಟೆಯ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ತಹಸೀಲ್ದಾರ್‌ ಗಣಪತಿ ಶಾಸ್ತ್ರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

ಡಿಸೆಂಬರ್‌ ವೇಳೆಗೆ 15 ಸಾವಿರ ನಿವೇಶನ

ಮುಂದಿನ ಡಿಸೆಂಬರ್‌ ವೇಳೆಗೆ ಗ್ರಾಮೀಣ ಪ್ರದೇಶದ 10 ಸಾವಿರ ಮತ್ತು ನಗರ ವ್ಯಾಪ್ತಿಯ 5 ಸಾವಿರ ಸೇರಿ ಒಟ್ಟು 15 ಸಾವಿರ ಮಂದಿಗೆ ಉಚಿತ ನಿವೇಶನಗಳನ್ನು ಹಂಚಲಾಗುವುದು ಡಿಸೆಂಬರ್‌ ವೇಳೆಗೆ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ 15 ಸಾವಿರ ಮಂದಿ ಬಡವರಿಗೆ ಉಚಿತ ನಿವೇಶನ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಅವಧಿಗೂ ಮೊದಲೇ ಚುನಾವಣೆ ಸಾಧ್ಯತೆ?

ಮುಂದಿನ ಏಪ್ರಿಲ್‌ ಅಥವಾ ಮೇನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆದರೆ ಅವಧಿಗೂ ಮುನ್ನವೇ ಚುನಾವಣೆ ನಡೆಸುವ ಸಾಧ್ಯತೆಯೂ ಇಲ್ಲದಿಲ್ಲ. ಹಾಗಾಗಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರೂ ಸನ್ನದ್ಧರಾಗಿರುವಂತೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಸಚಿವ ಡಾ.ಕೆ.ಸುಧಾಕರ್‌ ಕರೆ ನೀಡಿದರು.

ಬಹುದಿನಗಳ ಕನಸು ಈಡೇರುವ ಆಶಾಭಾವನೆ: ಚಿಕ್ಕಬಳ್ಳಾಪುರ- ಗೌರಿಬಿದನೂರು ರೈಲು ಮಾರ್ಗ ಸಮೀಕ್ಷೆ

ತಾಲೂಕಿನ ಗಂಗರೇಕಾಲುವೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರಿದ ಮುಖಂಡರನ್ನು ಸ್ವಾಗತಿಸಿ ಮಾತನಾಡಿದ ಸಚಿವರು, ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತ್ತು ತಮ್ಮ ಮೇಲೆ ವಿಶ್ವಾಸವಿಟ್ಟು ಇತರೆ ಪಕ್ಷಗಳ ಅನೇಕ ಮಂದಿ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿಗೆ ಸೇರುತ್ತಿರುವುದು ಪಕ್ಷದ ಮುಂದಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಕೋವಿಡ್‌ ನಿರ್ವಹಣೆಯಲ್ಲಿ ಯಶಸ್ವಿ

ಮುಂದಿನ ಚುನಾವಣೆಗಳಲ್ಲಿ ಮುಖಂಡರೇ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಹೊರಬೇಕಿದೆ. ಕೋವಿಡ್‌ನಿಂದಾಗಿ ರಾಜ್ಯದ ಜನತೆಯನ್ನು ರಕ್ಷಿಸುವ ಹೊಣೆ ನೀಡಿದ್ದು ಈ ಕ್ಷೇತ್ರದ ಜನತೆ. ಕ್ಷೇತ್ರದ ಜನತೆಯ ಆಶೀರ್ವಾದದಿಂದಾಗಿ ದೇಶದಲ್ಲಿಯೇ ಅತ್ಯುತ್ತಮ ಕೋವಿಡ್‌ ನಿರ್ವಹಣೆ ಮಾಡಿದ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಇದಕ್ಕಾಗಿ ಪ್ರಶಸ್ತಿಯನ್ನೂ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣ ಮೂರ್ತಿ, ಗಂಗರೇಕಾಲುವೆ ಪ್ರಸಾದ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios