ವಿಧಾನಪರಿಷತ್ತಿನಲ್ಲಿ ನಜೀರ್ ಅಹ್ಮದ್ ಅವರ ಹೇಳಿಕೆ ಮತ್ತು ಸಿ.ಟಿ. ರವಿ ಅವರ 'ಪಾಕಿಸ್ತಾನದ ನಾಲಿಗೆ' ಎಂಬ ತಿರುಗೇಟಿನಿಂದಾಗಿ ತೀವ್ರ ಜಟಾಪಟಿ ನಡೆದಿದೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ಸಂಧಾನ ವಿಫಲವಾಗಿದ್ದು, ಕ್ಷಮೆಯಾಚನೆಗೆ ಬಿಜೆಪಿ ಪಟ್ಟು ಹಿಡಿದಿರುವುದರಿಂದ ವಿವಾದ ಇದೀಗ ಸಿಎಂ ಅಂಗಳ ತಲುಪಿದೆ.

ವಿಧಾನಪರಿಷತ್: ವಿಧಾನಪರಿಷತ್ತಿನಲ್ಲಿ ಸೃಷ್ಟಿಯಾಗಿರುವ ನಜೀರ್ ಅಹ್ಮದ್ ಅವರ ಹೇಳಿಕೆ ಮತ್ತು ಸಿಟಿ ರವಿ ಅವರ ತಿರುಗೇಟಿನ ವಿವಾದ ಇದೀಗ ಮುಖ್ಯಮಂತ್ರಿಗಳ ಅಂಗಳ ತಲುಪಿದೆ. ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯ ನಂತರವೂ ಬಿಕ್ಕಟ್ಟು ಬಗೆಹರಿದಿಲ್ಲ. ಸಚಿವ ಎಚ್.ಕೆ. ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳ ಸಂದೇಶದೊಂದಿಗೆ ಸಭಾಪತಿಗಳೊಂದಿಗೆ ಚರ್ಚೆ ನಡೆಸಿದ್ದು, ಅಂತಿಮ ನಿರ್ಧಾರದ ಹೊಣೆಗಾರಿಕೆಯನ್ನು ಸಿಎಂ ಜೊತೆಗಿನ ಮಾತುಕತೆ ಬಳಿಕ ಪ್ರಕಟಿಸಲು ನಜೀರ್ ಅಹ್ಮದ್ ನಿರ್ಧರಿಸಿದ್ದಾರೆ.

Add Asianetnews Kannada as a Preferred SourcegooglePreferred

‘ಪಾಕಿಸ್ತಾನದ ನಾಲಿಗೆ’ ವರ್ಸಸ್ ‘ದೇಶಪ್ರೇಮ’

ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಸಿ.ಟಿ. ರವಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, 'ನಾವು ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ಇಲ್ಲೇ ಸಾಯುತ್ತೇವೆ. ನಜೀರ್ ಅಹ್ಮದ್ ಅವರನ್ನು 'ಪಾಕಿಸ್ತಾನದ ನಾಲಿಗೆ' ಎಂದು ಕರೆಯುವುದು ಎಷ್ಟು ಸರಿ? ಅವರ ವಿರುದ್ಧ ಕ್ರಮ ಕೈಗೊಳ್ಳಿ' ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು, 'ನಮ್ಮ ದೂರಿನ ಬಗ್ಗೆ ಮೊದಲು ಕ್ರಮವಾಗಲಿ, ಕಂಪ್ಲೇಂಟ್‌ಗೆ ಮತ್ತೊಂದು ಕಂಪ್ಲೇಂಟ್ ಪರಿಹಾರವಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತನ್ನ ಮಾತಿಗೆ ಬದ್ಧ ಎಂದ ಸಿ.ಟಿ. ರವಿ

ಸದನದಲ್ಲಿ ಅಕ್ಷರಶಃ ಕೆಂಡ ಕಾರಿದ ಸಿ.ಟಿ. ರವಿ, 'ಭಾರತದ ನಾಲಿಗೆ ಪ್ರಧಾನಿಯ ಬಗ್ಗೆ ಅಂತಹ ಕೀಳು ಪದ ಬಳಸಲು ಸಾಧ್ಯವೇ ಇಲ್ಲ. ಪ್ರಧಾನಿ ಬಗ್ಗೆ ಗೌರವ ಇರುವವರು ಯಾರೂ ಹಾಗೆ ಮಾತನಾಡಲಾರರು. ಆಚಾರವಿಲ್ಲದ ನಾಲಿಗೆ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ದಾಸರು ಹೇಳಿದ್ದು ಇಂತಹ ಸಂದರ್ಭಕ್ಕೇ ಇರಬೇಕು. ನಾನು ನನ್ನ ಮಾತಿಗೆ ಈಗಲೂ ಬದ್ಧ' ಎಂದು ಗುಡುಗಿದರು. ಸಭಾಪತಿಗಳು ಅವರು ಆಡಿದ ಮಾತುಗಳನ್ನು ಓದಿದಾಗಲೂ ರವಿ ತಮ್ಮ ನಿಲುವಿನಿಂದ ಹಿಂದೆ ಸರಿಯಲಿಲ್ಲ.

ನ್ಯಾಯ ಎಲ್ಲರಿಗೂ ಒಂದೇ ಅಲ್ವಾ? - ನಜೀರ್ ಅಹ್ಮದ್

ತನ್ನ ವಿರುದ್ಧದ ಆರೋಪಗಳಿಗೆ ಉತ್ತರಿಸಿದ ನಜೀರ್ ಅಹ್ಮದ್, 'ಸಭಾಪತಿಗಳೇ, ನಾನು ಪ್ರಧಾನಿ ಬಗ್ಗೆ ಮಾತನಾಡಿದ್ದು ತಪ್ಪು ಎಂದಾದರೆ, ಸಿ.ಟಿ. ರವಿ ಅವರು ಆಡಿದ ಮಾತುಗಳೂ ತಪ್ಪು ತಾನೇ? ಇಬ್ಬರಿಗೊಂದು ನ್ಯಾಯವೇಕೆ? ಸಮ ಸಮಾಜ ಅಂದರೆ ಎಲ್ಲರಿಗೂ ಒಂದೇ ರೂಲ್ಸ್ ಇರಬೇಕು' ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಬೈರತಿ ಸುರೇಶ್, 'ಸಿ.ಟಿ. ರವಿ ವಿಷಾದ ವ್ಯಕ್ತಪಡಿಸಲಿ, ಆಮೇಲೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ' ಎಂದರು.

ವಿಷಾದ ಬೇಡ, ಕ್ಷಮೆಯಾಚಿಸಲಿ ಎಂದ ಬಿಜೆಪಿ

ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂಧಾನದ ಸೂತ್ರವಾಗಿ 'ನಜೀರ್ ಅಹ್ಮದ್ ಮೊದಲು ಕ್ಷಮೆ ಕೇಳಲಿ, ಆಮೇಲೆ ಸಿ.ಟಿ. ರವಿ ವಿಷಾದ ವ್ಯಕ್ತಪಡಿಸಲಿ' ಎಂಬ ಸಲಹೆ ನೀಡಿದರು. ನಜೀರ್ ಅಹ್ಮದ್ 'ನನ್ನ ಮಾತಿನಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ' ಎಂದರಾದರೂ, ಬಿಜೆಪಿ ಸದಸ್ಯರು ಒಪ್ಪಲಿಲ್ಲ. 'ವಿಷಾದಕ್ಕೂ ಅವಕಾಶವಿಲ್ಲ, ಕೇವಲ ಕ್ಷಮೆಯೊಂದೇ ನಮಗೆ ಬೇಕು. ಪೀಠದಿಂದ ಕ್ಷಮೆಯಾಚನೆಗೆ ಸೂಚನೆ ಬರಲಿ' ಎಂದು ಬಿಜೆಪಿ ಸದಸ್ಯರು ಹಠ ಹಿಡಿದರು. ಇದರಿಂದಾಗಿ ಸದನದಲ್ಲಿ ಜಟಾಪಟಿ ಮುಂದುವರಿಯಿತು.