Asianet Suvarna News Asianet Suvarna News

ವಿಜಯೇಂದ್ರ, ಅಶೋಕ್‌ ನೇಮಕಕ್ಕೂ ಮುನ್ನ ವರಿಷ್ಠರು ಎಲ್ಲರ ಜೊತೆ ಚರ್ಚಿಸಬೇಕಿತ್ತು: ಬೆಲ್ಲದ್‌

ಎಲ್ಲದಕ್ಕೂ ಸಮಯ ಕೂಡಿಬರಬೇಕು. ರಾಜಕಾರಣ ಎಂದರೆ ಮ್ಯಾರಥಾನ್‌ ಇದ್ದಂತೆ. ರಾಜಕಾರಣದ ದೃಷ್ಟಿಯಿಂದ ಬಹಳ ಸಮಯ ಇದೆ. ಕೇವಲ ನನ್ನ ಎರಡನೇ ಶಾಸಕ ಅವಧಿಗೆ ಮುಖ್ಯಮಂತ್ರಿ ಹುದ್ದೆವರೆಗೂ ನನ್ನ ಹೆಸರು ಕೇಳಿ ಬಂದಿತ್ತು. ಸೂಕ್ತ ಸಮಯ ಬಂದಾಗ ಅವಕಾಶ ಸಿಗುತ್ತವೆ: ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌
 

BJP MLA Aravind Bellad React to BY Vijayendra and R Ashok grg
Author
First Published Nov 23, 2023, 5:11 AM IST

ವಿಜಯ್ ಮಲಗಿಹಾಳ

ಬೆಂಗಳೂರು(ನ.23):  ಸುದೀರ್ಘ ಅವಧಿಯ ಬಳಿಕ ರಾಜ್ಯಾಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕ ಹುದ್ದೆಗಳಿಗೆ ನೇಮಕ ಮಾಡಿದ ಬೆನ್ನಲ್ಲೇ ಬಿಜೆಪಿ ಪಾಳೆಯದಲ್ಲಿ ಹೊಸ ಉತ್ಸಾಹ ಕಂಡುಬಂದಿದೆ. ಹಾಗಂತ ಅಸಮಾಧಾನ ಕಡಿಮೆ ಏನಿಲ್ಲ. ಆಕಾಂಕ್ಷಿಗಳು ಸೇರಿದಂತೆ ಹಲವು ಮುಖಂಡರು ಈ ನೇಮಕವನ್ನು ಬಹಿರಂಗವಾಗಿ ಸ್ವಾಗತಿಸದೆ ತಟಸ್ಥರಾಗಿದ್ದಾರೆ. ಈ ಪೈಕಿ ಶಾಸಕ ಅರವಿಂದ್ ಬೆಲ್ಲದ ಅವರೂ ಒಬ್ಬರು ಎನ್ನಬಹುದು. ಹಿಂದೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸುವ ವೇಳೆ ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿ ಬೆಲ್ಲದ ಅವರ ಹೆಸರೂ ಅಚ್ಚರಿ ಎಂಬಂತೆ ಬಲವಾಗಿ ಕೇಳಿಬಂದಿತ್ತು. ಇತ್ತೀಚಿನ ಪಕ್ಷದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅರವಿಂದ್ ಬೆಲ್ಲದ ಅವರೊಂದಿಗೆ ‘ಮುಖಾಮುಖಿ’ಯಾದಾಗ..

ಬೆಲ್ಲದ್‌ ಅವರಿಗೆ ಈ ಬಾರಿಯೂ ಬೆಲ್ಲ ಸಿಗಲಿಲ್ಲವಲ್ಲ?

ಎಲ್ಲದಕ್ಕೂ ಸಮಯ ಕೂಡಿಬರಬೇಕು. ರಾಜಕಾರಣ ಎಂದರೆ ಮ್ಯಾರಥಾನ್‌ ಇದ್ದಂತೆ. ರಾಜಕಾರಣದ ದೃಷ್ಟಿಯಿಂದ ಬಹಳ ಸಮಯ ಇದೆ. ಕೇವಲ ನನ್ನ ಎರಡನೇ ಶಾಸಕ ಅವಧಿಗೆ ಮುಖ್ಯಮಂತ್ರಿ ಹುದ್ದೆವರೆಗೂ ನನ್ನ ಹೆಸರು ಕೇಳಿ ಬಂದಿತ್ತು. ಸೂಕ್ತ ಸಮಯ ಬಂದಾಗ ಅವಕಾಶ ಸಿಗುತ್ತವೆ.

ಬಿಜೆಪಿಗರು ಸತ್ಯಹರಿಶ್ಚಂದ್ರನ ಮನೆಯಲ್ಲಿ ಬಾಡಿಗೆ ಇದ್ದೋರು ತರ ಆಡ್ತಾರೆ: ಲಕ್ಷ್ಮಣ್ ಸವದಿ

ರಾಜ್ಯಾಧ್ಯಕ್ಷ, ಪ್ರತಿಪಕ್ಷದ ನಾಯಕ ಈ ಎರಡರ ಪೈಕಿ ನೀವು ಗುರಿ ಯಾವುದಿತ್ತು?

ಪಕ್ಷ ನೀಡುವ ಯಾವುದೇ ಜವಾಬ್ದಾರಿ ನಿರ್ವಹಿಸಲು ನಾನು ಸಿದ್ಧನಾಗಿದ್ದೆ. ಅವಕಾಶ ನೀಡಿದ್ದರೆ ಎರಡೂ ಸ್ಥಾನ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದೆ. ನನ್ನಲ್ಲಿ ಆ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವಿದೆ.

ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕ ಬಳಿಕ ನೀವು ಬಹಿರಂಗವಾಗಿ ಸ್ವಾಗತ ಮಾಡಲಿಲ್ಲ?

ಹಾಗೇನು ಇಲ್ಲ. ಎಲ್ಲವನ್ನೂ ಸಾರ್ವಜನಿಕವಾಗಿ ಸ್ವಾಗತ ಮಾಡಬೇಕು ಎಂದೇನಿಲ್ಲ. ಪಕ್ಷದ ಮಟ್ಟದಲ್ಲಿ ಅಭಿನಂದನೆ ಸಲ್ಲಿಸಿದ್ದೇನೆ. ಈ ಹಿಂದೆಯೇ ನಾನು ಹೇಳಿದಂತೆ ಮೊದಲಿಗೆ ರಾಷ್ಟ್ರ ಮುಖ್ಯ, ನಂತರ ಪಕ್ಷ ಮುಖ್ಯ. ರಾಷ್ಟ್ರದ ದೃಷ್ಟಿಯಿಂದ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುವುದು ಬಹಳ ಮುಖ್ಯ. ಪಕ್ಷದ ತೀರ್ಮಾನವನ್ನು ಸ್ವಾಗತಿಸಿದ್ದೇನೆ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿರುವುದನ್ನು ಪಕ್ಷದ ಸ್ವರೂಪದಲ್ಲಿ ಸ್ವಾಗತಿಸಿದ್ದೇನೆ.

ನನ್ನ ನೇಮಕಕ್ಕೆ ವಿರೋಧವೆಂದರೆ ಮೋದಿ ವಿರೋಧಿಸಿದಂತೆ ಎಂಬ ವಿಜಯೇಂದ್ರ ಹೇಳಿಕೆ ಸರಿಯೇ?

ಒಂದು ಸಂಸ್ಥೆ ಎಂದಾಗ ಬೇರೆ ಬೇರೆ ನೋಟಗಳು ಇರಬೇಕು. ಯಾವುದೋ ತೀರ್ಮಾನಕ್ಕೆ ವಿರೋಧ ಎಂದಾಗ ಆ ವ್ಯಕ್ತಿಯನ್ನು ವಿರೋಧಿಸುತ್ತೇವೆ ಎಂದಲ್ಲ. ಆ ತತ್ವಕ್ಕೆ ವಿರೋಧ ಇದೆ ಎಂದಲ್ಲ. ಆ ಸಮಯಕ್ಕೆ ಬೇರೆ ವಿಚಾರ ಇರಬಹುದು. ಯಾವುದನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು.

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ನೇಮಕ ವಿಷಯದಲ್ಲಿ ವರಿಷ್ಠರು ಚರ್ಚೆ, ಅಭಿಪ್ರಾಯ ಸಂಗ್ರಹ ನಡೆಸಲಿಲ್ಲವೆ?

ಎರಡೂ ನೇಮಕದ ಮೊದಲು ವರಿಷ್ಠರು ಎಲ್ಲರ ಜತೆಗೆ ಚರ್ಚಿಸಬೇಕಿತ್ತು. ಪಕ್ಷ ಈಗ ಕೆಟ್ಟ ಪರಿಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಪಕ್ಷದ ನಾಯಕರ ಜತೆ ಚರ್ಚೆ ನಡೆಸಬೇಕಿತ್ತು. ವೈಯಕ್ತಿಕ ಅಭಿಪ್ರಾಯಗಳನ್ನು ಕೇಳಬೇಕಿತ್ತು. ನಂತರ ತೀರ್ಮಾನ ಮಾಡಬೇಕಿತ್ತು. ವರಿಷ್ಠರು ಈ ಎರಡೂ ಹುದ್ದೆಗಳ ನೇಮಕದ ಬಗ್ಗೆ ಒಂದೇ ಬಾರಿಗೆ ತೀರ್ಮಾನ ಮಾಡಿದ್ದಾರೆ. ಒಂದು ತೀರ್ಮಾನ ಬೇಗ ಘೋಷಣೆ ಮಾಡಿ ಮತ್ತೊಂದನ್ನು ತಡವಾಗಿ ಘೋಷಿಸಿದ್ದಾರೆ ಅನಿಸುತ್ತಿದೆ.

ಬಿಎಸ್‌ವೈ ಮಗ ಎಂಬ ಕಾರಣಕ್ಕೆ ವಿಜಯೇಂದ್ರಗೆ ಸ್ಥಾನ ನೀಡಿದ್ದಾರೆ ಎಂಬ ಆರೋಪವಿದೆ?

ವಿಜಯೇಂದ್ರ ಅವರಿಗೆ ಅನುಭವ ಕಡಿಮೆ. ಹಾಗಾಗಿ ಯಡಿಯೂರಪ್ಪ ಅವರ ಮಗ ಎಂಬ ಮುಖ್ಯ ಕಾರಣಕ್ಕೆ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿರಬಹುದು.
ವಿಜಯೇಂದ್ರ ನಾಯಕತ್ವ ಸಾಬೀತುಪಡಿಸಿದ್ದರಿಂದ ಸ್ಥಾನ ನೀಡಿದ್ದೇವೆ ಎಂದು ನಡ್ಡಾ ಸಮರ್ಥಿಸಿಕೊಂಡಿದ್ದಾರಲ್ಲ?

ಆ ಹೇಳಿಕೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ.

ಸೋಮಣ್ಣ, ಯತ್ನಾಳ್‌ ಮತ್ತು ನೀವು ಲಿಂಗಾಯತ ಸಮುದಾಯದ ಪ್ರಮುಖ ನಾಯಕರು. ವಿಜಯೇಂದ್ರ ಅವರ ಆಯ್ಕೆಯನ್ನು ಸ್ವಾಗತಿಸದಿರಲು ಜಾತಿ ಏನಾದರೂ ಕಾರಣವೇ?

ಇದರಲ್ಲಿ ಜಾತಿ ಪ್ರಶ್ನೆ ಏನಿಲ್ಲ. ರಾಜ್ಯದಲ್ಲಿ ಪಕ್ಷಕ್ಕೆ ಹೊಸ ನಾಯಕತ್ವ ಬೇಕು ಅಷ್ಟೇ. ಪ್ರಸ್ತುತ ರಾಜ್ಯದಲ್ಲಿ 80ರ ದಶಕದಲ್ಲಿ ರಾಜಕಾರಣಕ್ಕೆ ಬಂದವರ ಯುಗ ಮುಗಿಯುತ್ತಿದೆ. ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ಮತ್ತು ಅನಂತಕುಮಾರ್‌ ಸಮರ್ಥವಾಗಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದರು. ಆದರೆ, ಈಗ ಪಕ್ಷದಲ್ಲಿ ಯಡಿಯೂರಪ್ಪ ನಂತರ ನಾಯಕರಾಗಿ ಯಾರೂ ಪ್ರವರ್ಧಮಾನಕ್ಕೆ ಬಂದಿಲ್ಲ. ಈಗ ಸಮುದಾಯ ಮತ್ತು ಪಕ್ಷಗಳಲ್ಲಿ ನಿರ್ವಾತ (vaccum) ಇದೆ. ಮುಂದಿನ ಐದು ವರ್ಷಗಳಲ್ಲಿ ಆ ವ್ಯಾಕ್ಯೂಮ್ ತುಂಬಲಿದೆ. ಪಕ್ಷ ಮತ್ತು ಸಮುದಾಯಕ್ಕೆ ಪರ್ಯಾಯ ನಾಯಕತ್ವ ಸಿಗಲಿದೆ.

ಯಡಿಯೂರಪ್ಪ ಯಾರನ್ನೂ ಪರ್ಯಾಯ ನಾಯಕರಾಗಿ ಬೆಳೆಸಲು ಪ್ರಯತ್ನಿಸಲಿಲ್ಲವೆ?

ನಾಯಕರಾದವರು ಪರ್ಯಾಯ ನಾಯಕರನ್ನು ಬೆಳೆಸಬೇಕು. ಪಕ್ಷದಲ್ಲಿ ಇದ್ದವರು ಬೆಳೆಯಬೇಕು. ಹಿಂದೆ ಜಗದೀಶ್ ಶೆಟ್ಟರ್‌ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿತ್ತು. ಆದರೆ ಅವರು ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಬೊಮ್ಮಾಯಿ ಅವರು ಉತ್ತಮ ಆಡಳಿತ ಕೊಟ್ಟರು. ಅವರ ಅವಧಿಯಲ್ಲಿ ಹಲವು ಉತ್ತಮ ತೀರ್ಮಾನಗಳಾಗಿವೆ. ಆದರೆ, ನಾವು ಅದನ್ನು ಸರಿಯಾಗಿ ಮಾರ್ಕೆಟ್‌ ಮಾಡಲಿಲ್ಲ. ಕೆಲಸಗಳ ಬಗ್ಗೆ ಸಮರ್ಪಕ ಪ್ರಚಾರ ಮಾಡಲಿಲ್ಲ.

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಸ್ಥಾನ ಉತ್ತರ ಕರ್ನಾಟಕಕ್ಕೆ ಸಿಗಬೇಕು ಎಂದು ನೀವು ಒತ್ತಾಯಿಸಿದ್ದಿರಿ. ಆ ನಿಟ್ಟಿನಲ್ಲಿ ಪ್ರಯತ್ನಪಟ್ಟಿರಿ. ಈ ಬಗ್ಗೆ ಹೇಳಿ?

ನೋಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಭಾಗಗಳಲ್ಲಿ ಮೈಸೂರು ರಾಜರು ಉತ್ತಮ ಆಡಳಿತ ನೀಡಿದ್ದರು. ಬೆಂಗಳೂರು, ಮಂಗಳೂರು ಭಾಗಗಳಲ್ಲಿ ಬ್ರಿಟೀಷರ ಆಡಳಿತ ಇತ್ತು. ಬಳ್ಳಾರಿ ಮದ್ರಾಸ್‌ ಪ್ರಾಂತ್ಯ, ಬೀದರ್‌, ರಾಯಚೂರು ಭಾಗಗಳು ಹೈದರಾಬಾದ್‌ ನಿಜಾಮರ ಆಳ್ವಿಕೆ, ಕಿತ್ತೂರು ಕರ್ನಾಟಕ ಬಾಂಬೆ ಪ್ರಾಂತ್ಯಕ್ಕೆ ಸೇರಿದ್ದವು. ಉತ್ತರ ಕರ್ನಾಟಕದ ಜಿಲ್ಲೆಗಳು ಆಡಳಿತದ ರಾಜಧಾನಿಗಳಿಂದ ದೂರದಲ್ಲಿ ಇದ್ದುದರಿಂದ ಅಭಿವೃದ್ಧಿ ಆಗಲಿಲ್ಲ. ಕರ್ನಾಟಕ ಏಕೀಕರಣದ ಬಳಿಕವೂ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಸಮರ್ಪಕವಾಗಿ ಆಗಲಿಲ್ಲ. ದಕ್ಷಿಣ ಕರ್ನಾಟಕದ ರಾಜಕಾರಣಿಗಳು ಉತ್ತರ ಕರ್ನಾಟಕದ ಕಡೆಗೆ ಹೆಚ್ಚು ಬರುವುದಿಲ್ಲ. ಹೀಗಾಗಿ ಆ ಭಾಗದ ಜನರ ಬದುಕು-ಬವಣೆ, ಸಮಸ್ಯೆಗಳು, ಅವಕಾಶಗಳ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಇದನ್ನು ಸರಿದೂಗಿಸಲು ಆ ಭಾಗದವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಬೇಕು ಎಂಬ ಆಸೆ ಆ ಭಾಗದ ಶಾಸಕರು, ಕಾರ್ಯಕರ್ತರು ಹಾಗೂ ಜನರಿಗಿತ್ತು. ಆದರೆ, ಪಕ್ಷ ಹಿರಿಯ ನಾಯಕ ಆರ್‌.ಅಶೋಕ್‌ ಅವರನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಿ ತೀರ್ಮಾನ ತೆಗೆದುಕೊಂಡಿದೆ.

ಈ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ನಿಮ್ಮ ಹೆಸರು ಕೇಳಿ ಬಂದಿತ್ತು. ಅದರ ಅಸಲಿಯತ್ತೇನು?

ಬಿ.ಎಸ್‌.ಯಡಿಯೂರಪ್ಪ ಅವರು ವಯಸ್ಸಿನ ಕಾರಣದಿಂದ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟ ಬಳಿಕ ಬೇರೆಯವರನ್ನು ಮುಖ್ಯಮಂತ್ರಿ ಮಾಡಲು ಪಕ್ಷದಲ್ಲಿ ಹುಡುಕಾಟ ನಡೆಸುವ ವೇಳೆ ಸಾಕಷ್ಟು ಹೆಸರುಗಳು ಕೇಳಿ ಬಂದವು. ಆಗ ಜಗದೀಶ್‌ ಶೆಟ್ಟರ್‌, ಬಸನಗೌಡ ಯತ್ನಾಳ್‌, ಮುರುಗೇಶ್‌ ನಿರಾಣಿ ಹಾಗೂ ನನ್ನ ಹೆಸರು ಕೇಳಿಬಂದಿತ್ತು. ಬಳಿಕ ನಾನಾ ಕಾರಣಗಳಿಗೆ ಆ ಹೆಸರುಗಳನ್ನು ಕೈ ಬಿಡಲಾಯಿತು. ಆದರೆ, ನನ್ನ ಹೆಸರು ಕೊನೆಯವರೆಗೂ ಓಡಾಡಿತ್ತು. ಅಂತಿಮವಾಗಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯಲ್ಲಿ ಯಡಿಯೂರಪ್ಪ ಹಾಗೂ ಹೈಕಮಾಂಡ್‌ ಪ್ರಮುಖ ಪಾತ್ರ ವಹಿಸಿತು.

ನೀವೊಬ್ಬ ಯಶಸ್ವಿ ಉದ್ಯಮಿ. ಉದ್ಯಮದ ಸಂಪರ್ಕ ಬಳಸಿ ಸಿಎಂ ಸ್ಥಾನ ಪಡೆಯಲು ಪ್ರಯತ್ನಿಸಿದಿರಿ ಎಂಬ ಮಾತು ಕೇಳಿ ಬಂದಿತ್ತು?

ಉದ್ಯಮಕ್ಕೂ ಈ ಬೆಳವಣಿಗೆಗೂ ಸಂಬಂಧವಿಲ್ಲ. ನಮ್ಮ ತಂದೆ ಐದು ಬಾರಿ ಶಾಸಕರಾಗಿದ್ದರು. ಆ ಸಮಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪಕ್ಷದಿಂದಲೇ ನನ್ನ ಹೆಸರು ಕೇಳಿ ಬಂದಿತ್ತು.

ಅಂದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರ ಹಿಂದೆ ನಿಮ್ಮದು ಕೂಡ ಪ್ರಮುಖ ಪಾತ್ರವಿದೆ ಎಂಬ ಆರೋಪವಿದೆ. ಬಿ.ಎಲ್‌.ಸಂತೋಷ್‌ ಅವರ ಸೂಚನೆಯಂತೆ ನೀವು ನಡೆದುಕೊಂಡಿದ್ದಿರಂತೆ?

ಈಗ ಅದರ ಬಗ್ಗೆ ಈ ಚರ್ಚೆ ಮಾಡಿ ಅರ್ಥವಿಲ್ಲ. ಮುಗಿದು ಹೋದ ಕತೆ. ಯಡಿಯೂರಪ್ಪ ಹಿರಿಯ ನಾಯಕರು. ಹಿಂದೆ ನಡೆದ ವಿಷಯದ ಬಗ್ಗೆ ಈಗ ಮಾತನಾಡಿ ಪ್ರಯೋಜವಿಲ್ಲ. ಇನ್ನು ಆ ಸಮಯದಲ್ಲಿ ನಾನು ಯಾರ ಸೂಚನೆ ಮೇರೆಗೂ ನಡೆದುಕೊಳ್ಳಲಿಲ್ಲ. ನನಗೆ ಸೂಕ್ತ ಅನಿಸಿದ ಹಾಗೆ ನಡೆದುಕೊಂಡೆ.

ಮುಂದೆ ಇದೇ ನಿಮ್ಮ ರಾಜಕೀಯ ಸ್ಥಾನಮಾನಕ್ಕೆ ಮುಳುವಾಯಿತಲ್ಲವೇ?

ನನ್ನ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬಂದಾಗ ರಾಜ್ಯದ ಜನಕ್ಕೆ ನಾನು ಯಾರು ಎಂಬುದು ಗೊತ್ತಾಯಿತು. ಆಗ ನಾನು ಪ್ರವರ್ಧಮಾನಕ್ಕೆ ಬಂದೆ. ಈಗ ರಾಜ್ಯದ ಜನರಿಗೆ ನನ್ನ ಹೆಸರು ಮತ್ತು ಮುಖ ಚೆನ್ನಾಗಿ ಗೊತ್ತಿದೆ. ಮುಂದೆ ಸ್ಥಾನಮಾನಗಳೂ ಸಿಗುವ ವಿಶ್ವಾಸವಿದೆ.

ಕಳೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ತೆರೆಮರೆಯಲ್ಲಿ ಪ್ರಯತ್ನಪಟ್ಟಿದ್ದಿರಂತೆ?

ಆ ರೀತಿ ಯಾವುದೂ ನಡೆದಿಲ್ಲ.

ಜಗದೀಶ್‌ ಶೆಟ್ಟರ್‌ ಅವರನ್ನು ವಾಪಸ್‌ ಬಿಜೆಪಿ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆದಿದೆಯಂತೆ ಹೌದೆ?

ಅವರು ಮತ್ತೆ ಬಿಜೆಪಿ ಪಕ್ಷಕ್ಕೆ ವಾಪಸ್‌ ಬರುತ್ತಾರೆ ಅಂತ ಅನಿಸುವುದಿಲ್ಲ. ಅವರ ಅವಶ್ಯಕತೆ ಪಕ್ಷಕ್ಕೂ ಇಲ್ಲ. ಅವರ ಹಿಂದೆ ಈಗ ಯಾವುದೇ ಶಕ್ತಿ ಇಲ್ಲ. ಕಾಂಗ್ರೆಸ್‌ ಪಕ್ಷ ಲೋಕಸಭಾ ಚುನಾವಣೆವರೆಗೆ ಅವರಿಗೆ ಮಹತ್ವ ನೀಡಲಿದೆ.ಒಂದು ವೇಳೆ ಜಗದೀಶ್ ಶೆಟ್ಟರ್‌ ಬಿಜೆಪಿಗೆ ವಾಪಸ್‌ ಬಂದರೆ ನೀವು ಒಪ್ಪುವಿರಾ?ಅದು ಹೈಕಮಾಂಡ್‌ ತಿರ್ಮಾನ. ನನ್ನ ಪ್ರಕಾರ ಅವರು ಮತ್ತೆ ಬಿಜೆಪಿಗೆ ಬರುವುದಿಲ್ಲ.

ನೀವು ಮುಂದೆ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯಾಗುವಿರಿ ಎಂಬ ಕಾರಣಕ್ಕೆ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿಸಲಾಯಿತು ಎಂಬ ಮಾತಿದೆ?

ರಾಜಕಾರಣದಲ್ಲಿ ಹಾಗೇನು ಇರುವುದಿಲ್ಲ.

ನಿಮ್ಮ ಪ್ರಕಾರ ಕಳೆದ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲಲು ಪ್ರಮುಖ ಕಾರಣಗಳೇನು?

ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಸರಿಯಾದ ವಿಶ್ಲೇಷಣೆ ಮಾಡುವುದು ಮುಖ್ಯ. ಚುನಾವಣೆ ಬಳಿಕ ನಾನು ರಾಜಕಾರಣದ ಬಗ್ಗೆ ಆಸಕ್ತಿ ಇರುವ ವ್ಯಕ್ತಿಯಾಗಿ ದೂರ ನಿಂತು ವಿಶ್ಲೇಷಣೆ ಮಾಡಿದ್ದೇನೆ. ರಾಜ್ಯದ ಜನರಿಗೆ ಬಿಜೆಪಿ ಪಕ್ಷದ ಬಗ್ಗೆ ಮೂರು ಅಪೇಕ್ಷೆಗಳಿದ್ದವು. ಒಂದು ಅಭಿವೃದ್ಧಿ. ಬಿಜೆಪಿ ಸರ್ಕಾರ ಎಂದರೆ ಅಭಿವೃದ್ಧಿ ಇರಬೇಕು. ಕಳೆದ ನಮ್ಮ ಸರ್ಕಾರದಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ಆಗಿದ್ದವು. ಆದರೆ, ಆ ಕೆಲಸಗಳ ಬಗ್ಗೆ ಜನರ ಬಳಿ ಪ್ರಚಾರ ಮಾಡುವಲ್ಲಿ ನಾವು ಸೋತೆವು. ಎರಡನೆಯದು ಬಿಜೆಪಿ ಸರ್ಕಾರ ಎಂದರೆ ಹಿಂದುತ್ವ ಛಾಯೆ ಇರಬೇಕು ಎಂದು ಜನ ಅಪೇಕ್ಷಿಸುತ್ತಾರೆ. ಯೋಗಿ ಆದಿತ್ಯನಾಥ್‌ ಮಾದರಿಯಲ್ಲಿ ನಿರ್ಲಕ್ಷಿತ ಹಿಂದೂ ಸಮಾಜ, ಸನಾತನ ಧರ್ಮದ ಬಗ್ಗೆ ಗಮನಕೊಡಬೇಕು. ಇದು ನಮ್ಮ ಸರ್ಕಾರ ಅವಧಿಯಲ್ಲಿ ಕಡಿಮೆ ಆಯಿತು ಅನಿಸುತ್ತದೆ. ಮೂರನೆಯದು ಬಿಜೆಪಿ ಸರ್ಕಾರ ಎಂದರೆ, ಜನ ಸ್ವಚ್ಛ ಆಡಳಿತ ಅಪೇಕ್ಷಿಸುತ್ತಾರೆ. ಕಾಂಗ್ರೆಸ್‌ ಶೇ.40ರಷ್ಟು ಕಮಿಷನ್‌ ಸುಳ್ಳು ಆರೋಪಕ್ಕೆ ನಾವು ಸರಿಯಾಗಿ ಕೌಂಟರ್‌ ಕೊಡಲಿಲ್ಲ ಅನಿಸುತ್ತದೆ. ಈ ಮೂರು ಕಾರಣಗಳಿಂದ ರಾಜ್ಯದ ಜನ ಬಿಜೆಪಿ ಬಗ್ಗೆ ನಂಬಿಕೆ ಕಳೆದುಕೊಂಡರು ಅನಿಸುತ್ತದೆ. ಇನ್ನು ಹಳೇ ಮೈಸೂರು ಭಾಗದ ಜನರು ಜೆಡಿಎಸ್‌ ಬಗ್ಗೆ ಬೇಜಾರಾಗಿದ್ದರು. ಆ ಭಾಗದ ಜನ ಮತ್ತು ಜೆಡಿಎಸ್‌ ಮುಖಂಡರು ಪರ್ಯಾಯದ ಹುಡುಕಾಟದಲ್ಲಿದ್ದರು. ಅಲ್ಲಿನ ಜೆಡಿಎಸ್‌ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಲು ಮುಂದಾದಾಗ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ.

ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲಾತಿ ಮತ್ತು ಪರಿಶಿಷ್ಟರ ಒಳ ಮೀಸಲಾತಿ ಹೆಚ್ಚಳ ಮಾಡಿದ್ದು ಚುನಾವಣೆಯಲ್ಲಿ ಬಿಜೆಪಿ ಕೈಹಿಡಿಯಬೇಕಿತ್ತಲ್ಲವೆ?

ಚುನಾವಣೆ ಹೊಸ್ತಿಲಲ್ಲಿ ಮೀಸಲಾತಿ ನೀಡುವ ನಿರ್ಧಾರ ಮಾಡಲಾಯಿತು. ಆ ಕೆಲಸವನ್ನು ಚುನಾವಣೆಗೆ ಆರು ತಿಂಗಳು ಮೊದಲೇ ಮಾಡಬೇಕಿತ್ತು. ಮೀಸಲಾತಿ ನಿರ್ಧಾರ ಸಾಕಷ್ಟು ಜನರಿಗೆ ತಲುಪಲೇ ಇಲ್ಲ. ಹೀಗಾಗಿ ಬಿಜೆಪಿ ನಮ್ಮ ಮತ ಪಡೆದು ನಮಗೆ ಸ್ಪಂದಿಸುವುದಿಲ್ಲ ಎಂಬ ಭಾವನೆ ಜನರಲ್ಲಿ ಬಂದಿತ್ತು. ಇದು ಚುನಾವಣೆಯಲ್ಲಿ ಬಿಜೆಪಿ ಮತಗಳಿಕೆಗೆ ದೊಡ್ಡ ಹೊಡೆತ ನೀಡಿತು. ಅಂತೆಯೆ ಚುನಾವಣೆ ಸಂದರ್ಭದಲ್ಲಿ ಬಿ.ಎಲ್‌.ಸಂತೋಷ್‌ ಅವರು ಲಿಂಗಾಯತ ಸಮುದಾಯದವರನ್ನು ಬೈದರು ಎಂಬ ಸುದ್ದಿ ಪಕ್ಷಕ್ಕೆ ದೊಡ್ಡ ಡ್ಯಾಮೇಜ್‌ ಮಾಡಿತು. ಅಂತೆಯೇ ಲಕ್ಷ್ಮಣ್‌ ಸವದಿ ಮತ್ತು ಜಗದೀಶ್‌ ಶೆಟ್ಟರ್‌ ವಿಚಾರವೂ ಹೆಚ್ಚು ಚರ್ಚೆಗೆ ಗ್ರಾಸವಾಯಿತು.

ಚುನಾವಣೆಯಲ್ಲಿನ ಟಿಕೆಟ್‌ ಹಂಚಿಕೆ ನಿರ್ಧಾರ ದೊಡ್ಡ ಹೊಡೆತ ಕೊಟ್ಟಿತಲ್ಲವೆ?

ಒಂದು ಸಂಸ್ಥೆ ಅಥವಾ ಪಕ್ಷದ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಅಭಿಪ್ರಾಯಗಳನ್ನು ಕೇಳಬೇಕು. ಆಗ ಪರ-ವಿರೋಧ ಗೊತ್ತಾಗುತ್ತದೆ. ಕಳೆದ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆ ವೇಳೆ ಪಕ್ಷದಲ್ಲಿ ಸರಿಯಾದ ಚರ್ಚೆಗಳು ಆಗಲಿಲ್ಲ. ಕೆಲವು ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರು, ಯಾಕೆ ಕೊಟ್ಟರು ಎಂಬುದು ಗೊತ್ತಾಗಲಿಲ್ಲ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರಿಂದಲೇ ಬಿಜೆಪಿಗೆ ಸೋಲಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ?

ಪಕ್ಷದ ಸೋಲಿಗೂ ಮತ್ತು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದ್ದಕ್ಕೂ ಸಂಬಂಧವಿಲ್ಲ. ಅವರು ವಯಸ್ಸಿನ ಕಾರಣಕ್ಕೆ ಸ್ಥಾನ ಬಿಟ್ಟುಕೊಟ್ಟರು. ಆದರೆ, ಅದನ್ನು ಕಡೆಗಣನೆ ಎಂದು ಬಿಂಬಿಸುವ ವ್ಯವಸ್ಥಿತ ಪ್ರಯತ್ನ ನಡೆಯಿತು.

ಈಗ ಮುಂಬರುವ ಲೋಕಸಭಾ ಚುನಾವಣೆಗೆ ಉದ್ದೇಶದಿಂದ ಬಿಜೆಪಿ ಹೈಕಮಾಂಡ್‌ ಮತ್ತೆ ಯಡಿಯೂರಪ್ಪ ಎದುರು ಮಂಡಿಯೂರಿ ಕುಳಿತಿರುವಂತೆ ಕಾಣುತ್ತಿದೆ?

ನನಗೆ ಹಾಗೇನು ಅನಿಸುತ್ತಿಲ್ಲ. ಲೋಕಸಭೆ ಚುನಾವಣೆ ನಾನಾ ವಿಷಯಗಳ ಮೇಲೆ ನಡೆಯುತ್ತದೆ. 2018ರಲ್ಲಿ ರಾಜ್ಯದಲ್ಲಿ ಬಿಜೆಪಿ 108 ಸ್ಥಾನ ಬಂದಿತ್ತು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 189 ಸ್ಥಾನಗಳಲ್ಲಿ ಹೆಚ್ಚು ಮತ ಗಳಿಸಿತು. ಅಂದರೆ, ಲೋಕಸಭಾ ಚುನಾವಣೆ ರಾಷ್ಟ್ರದ ವಿಚಾರ, ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕೆಲಸಗಳ ಮೇಲೆ ನಡೆಯುತ್ತದೆ.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಪಾತ್ರವಿದೆ ಎಂಬ ಅನುಮಾನವಿದೆ?

ಪ್ರಿಯಾಂಕ್ ಖರ್ಗೆ ತವರಲ್ಲಿ ಗೂಂಡಾಗಿರಿ ಮೀತಿ ಮೀರಿದೆ; ಬಿವೈ ವಿಜಯೇಂದ್ರ ಕಿಡಿ

ಈ ನೇಮಕಗಳಿಗೂ ಕುಮಾರಸ್ವಾಮಿಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ಅವರ ಪಾತ್ರ ಏನೂ ಇಲ್ಲ.

ಪಕ್ಷದ ನೂತನ ರಾಜ್ಯಾಧ್ಯಕ್ಷರಿಗೆ ಏನು ಹೇಳಲು ಬಯಸುತ್ತೀರಿ?

ರಾಜ್ಯಾಧ್ಯಕ್ಷರ ಸ್ಥಾನ ಪಕ್ಷದಲ್ಲಿ ದೊಡ್ಡದು. ಗುಂಪುಗಾರಿಕೆ, ಬಣ ರಾಜಕೀಯಕ್ಕೆ ಅವಕಾಶ ನೀಡದೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಪಕ್ಷ ಸಂಘಟಿಸಬೇಕು. ಕುಸಿದ ಪಕ್ಷವನ್ನು ಕಟ್ಟುವುದು ಸುಲಭ ಮತ್ತು ಕಠಿಣ. ಸರಿಯಾದ ರೀತಿಯಲ್ಲಿ ಪಕ್ಷವನ್ನು ಮರು ನಿರ್ಮಾಣ ಮಾಡಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆ ಆಗಿದೆ.ಟಿಕೆಟ್‌ ನೀಡುವಾಗಲೂ ಹೀಗೇ ಮಾಡಿದ್ದರು... ಕಳೆದ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆ ವೇಳೆ ಪಕ್ಷದಲ್ಲಿ ಸರಿಯಾದ ಚರ್ಚೆಗಳು ಆಗಲಿಲ್ಲ. ಕೆಲವು ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರು, ಯಾಕೆ ಕೊಟ್ಟರು ಎಂಬುದು ಗೊತ್ತಾಗಲಿಲ್ಲ. ಪಕ್ಷದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಅಭಿಪ್ರಾಯಗಳನ್ನು ಕೇಳಬೇಕು. ಆಗ ಪರ-ವಿರೋಧ ಗೊತ್ತಾಗುತ್ತದೆ.

ರಾಜ್ಯದಲ್ಲಿ ಬಿಜೆಪಿ ಸೋಲಿಗೆ 3 ಕಾರಣ

ಕಳೆದ ಚುನಾವಣೆಯಲ್ಲಿ ನಾವು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಸರಿಯಾಗಿ ಪ್ರಚಾರ ಮಾಡುವಲ್ಲಿ ಸೋತೆವು. ಹಿಂದುತ್ವದ ಛಾಯೆ ನಮ್ಮ ಸರ್ಕಾರದಲ್ಲಿ ಕಡಿಮೆಯಿತ್ತು. ಶೇ.40ರ ಕಮಿಷನ್‌ ಸುಳ್ಳು ಆರೋಪಕ್ಕೆ ಸರಿಯಾಗಿ ಕೌಂಟರ್‌ ಕೊಡಲಿಲ್ಲ. ಇವು ನಮ್ಮ ಸೋಲಿಗೆ ಪ್ರಮುಖ ಕಾರಣಗಳು.

Follow Us:
Download App:
  • android
  • ios