Asianet Suvarna News Asianet Suvarna News

ಉಪ ಚುನಾವಣೆ ಘೋಷಣೆ : ಬಿಜೆಪಿ ಅಭ್ಯರ್ಥಿಗಳು ಯಾರು..?

ಬಿಜೆಪಿಗೆ ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ  ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯು ಅಗ್ನಿ ಪರೀಕ್ಷೆಯಾಗಿದ್ದು, ದೋಸ್ತಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್‌ಗೆ ತಿರುಗೇಟು ನೀಡಲು ರಾಜಕೀಯ ತಂತ್ರಗಾರಿಕೆ ಪ್ರಾರಂಭಿಸಿದೆ. 

Who Will Contest From BJP Karnataka By Election
Author
Bengaluru, First Published Oct 7, 2018, 7:47 AM IST
  • Facebook
  • Twitter
  • Whatsapp

ಬೆಂಗಳೂರು: ಆಪರೇಷನ್ ಕಮಲದ ವೈಫಲ್ಯದಿಂದ ಕಂಗೆಟ್ಟಿರುವ ಬಿಜೆಪಿಗೆ ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ  ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯು ಅಗ್ನಿ ಪರೀಕ್ಷೆಯಾಗಿದ್ದು, ದೋಸ್ತಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್‌ಗೆ ತಿರುಗೇಟು ನೀಡಲು ರಾಜಕೀಯ ತಂತ್ರಗಾರಿಕೆ ಪ್ರಾರಂಭಿಸಿದೆ. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ನಾಯಕತ್ವದ ಪ್ರಶ್ನೆಯೂ ಎದುರಾಗಿರುವ ಹಿನ್ನೆಲೆಯಲ್ಲಿ ಉಪಚುನಾವಣೆಯನ್ನು ಗಂಭೀರ ವಾಗಿ ಪರಿಗಣಿಸಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ  ಜಯ ಗಳಿಸುವಂತಹ ಅಭ್ಯರ್ಥಿಗಳನ್ನುಅಖಾಡ ಕ್ಕಿಳಿಸುವ ಯೋಚನೆ ಬಿಜೆಪಿಗೆ ಇದೆ. ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆಯ ಜವಾಬ್ದಾರಿಯನ್ನು ಶಾಸಕ ಶ್ರೀರಾಮುಲು ಹೆಗಲಿಗೆ ಹಾಕಿ, ಇನ್ನುಳಿದ ಎರಡು ಲೋಕಸಭೆ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರದ ಹೊಣೆಯನ್ನು ರಾಜ್ಯದ ನಾಯಕರು ತೆಗೆದುಕೊಳ್ಳಲಿದ್ದಾರೆ.

ಬಳ್ಳಾರಿ ಕ್ಷೇತ್ರಕ್ಕೆ ನಾಲ್ಕು ಮಂದಿಯ ಹೆಸರುಗಳು ಕೇಳಿ ಬಂದಿವೆ. ನಾಲ್ವರ ಪೈಕಿ ಶ್ರೀರಾಮುಲು ಸಂಬಂಧಿಕರು ಹಾಗೂ ಮಾಜಿ ಸಂಸದರಾದ ಜೆ.ಶಾಂತಾ, ಸಣ್ಣ ಫಕೀರಪ್ಪ ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಅವರ ಹೆಸರು ಪ್ರಚಲಿತದಲ್ಲಿದೆ. ಬಳ್ಳಾರಿಯಿಂದ ೨೦೧೪ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಜೆ.ಶಾಂತಾ ಹೆಸರು ಮುಂಚೂಣಿಯಲ್ಲಿದೆ. ಸಣ್ಣ ಫಕೀರಪ್ಪ ಸಹ ರಾಯಚೂರು ಜಿಲ್ಲೆಯ ಸಂಸದರಾಗಿದ್ದರೆ, ಸುರೇಶ್ ಬಾಬು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಈ ಮೂವರ ಪೈಕಿ ಒಬ್ಬರಿಗೆ ರಾಮುಲು ರಾಜಕೀಯ ತಂತ್ರಗಾರಿಕೆ ರೂಪಿಸಿ ಟಿಕೆಟ್ ಕೊಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. 

ವೈದ್ಯರಾದ ಡಾ.ಟಿ.ಆರ್.ಶ್ರೀನಿವಾಸ್ ಸಹ ಬಳ್ಳಾರಿ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಪಕ್ಷದಲ್ಲಿ ಗುರುತಿಸಿಕೊಂಡಿರುವ ಶ್ರೀನಿವಾಸ್ ಕಳೆದ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಟಿಕೆಟ್ ಲಭ್ಯವಾಗಿರಲಿಲ್ಲ. ಜೆಡಿಎಸ್ ಬಂಡಾಯ ನಾಯಕರಾದ ಚಲುವರಾಯಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿಸುವ ಚಿಂತನೆ ಬಿಜೆಪಿಗಿದೆ. ಅವರನ್ನು ಬಿಜೆಪಿಗೆ ಕರೆತಂದು ಮೈತ್ರಿ ಪಕ್ಷಕ್ಕೆ ತಿರುಗೇಟು ನೀಡುವ ಪ್ರಯತ್ನ ನಡೆದಿದೆ. ಚಲುವರಾಯಸ್ವಾಮಿ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ. 

ಆದರೆ, ಚಲುವರಾಯಸ್ವಾಮಿ ಬಿಜೆಪಿ ಬರುವ ಆಸಕ್ತಿ ಇನ್ನು ತೋರಿಲ್ಲ. ಒಂದು ವೇಳೆ ಬಿಜೆಪಿಗೆ ಬಾರದಿದ್ದರೆ ಬೇರೆಯವರಿಗೆ ಟಿಕೆಟ್ ನೀಡುವುದುಬಿಜೆಪಿಯ ಆಲೋಚನೆಯಾಗಿದೆ ಎಂದು ಮೂಲಗಳು ಹೇಳಿವೆ. ಶಿವಮೊಗ್ಗ ಕ್ಷೇತ್ರದಿಂದ ಯಡಿಯೂರಪ್ಪ ಪುತ್ರ ಮಾಜಿ ಸಂಸದ  ಬಿ.ವೈ. ರಾಘವೇಂದ್ರ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಯಡಿಯೂರಪ್ಪ ಸ್ಪರ್ಧಿಸುವ ಮುನ್ನ ರಾಘವೇಂದ್ರ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 

2014 ರಲ್ಲಿ ಯಡಿಯೂರಪ್ಪ ಶಿವಮೊಗ್ಗದಿಂದ ಸ್ಪರ್ಧಿಸಿದ್ದರಿಂದ ತಂದೆಗೆ ಬಿಟ್ಟು ಕೊಟ್ಟಿದ್ದರು. ಇದೀಗ ಮತ್ತೊಮ್ಮೆ ರಾಘವೇಂದ್ರ ಅವರನ್ನುಪಕ್ಷವು ಕಣಕ್ಕಿಳಿಸಲಿದೆ ಎಂದು ಹೇಳಲಾಗಿದೆ. ರಾಮನಗರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಕ್ಷೇತ್ರ. ಆದರೂ, ಜೆಡಿಎಸ್‌ಗೆ ತಿರುಗೇಟು ನೀಡಲು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ. ಪಕ್ಷದ ರಾಮನಗರ ಜಿಲ್ಲಾಧ್ಯಕ್ಷ ರುದ್ರೇಶ್ ಅವರಿಗೆ ನೀಡುವ ಟಿಕೆಟ್ ನೀಡುವ ಬಗ್ಗೆ ನಿರ್ಧರಿಸಲಾಗಿದೆ. 

ಜಮಖಂಡಿ ಕ್ಷೇತ್ರಕ್ಕೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರನ್ನು ಅಖಾಡಕ್ಕಿಳಿಸಲು ಪಕ್ಷವು ಮುಂದಾಗಿದೆ. ಶ್ರೀಕಾಂತ ಕುಲಕರ್ಣಿ ಅವರು ಈ ಹಿಂದೆಯೂ ಶಾಸಕರಾಗಿದ್ದರು. ಅಲ್ಲದೇ, ಆರ್‌ಎಸ್‌ಎಸ್ ಹಿನ್ನೆಲೆಯುಳ್ಳವರಾಗಿದ್ದಾರೆ. ಒಂದು ವೇಳೆ ಶ್ರೀಕಾಂತ ಕುಲಕರ್ಣಿ ಅವರಿಗೆ ಟಿಕೆಟ್ ನೀಡಲು ಪಕ್ಷವು ಹಿಂದೇಟು ಹಾಕಿದರೆ ಹೊಸ ಮುಖವನ್ನು ಪರಿಚಯಿಸುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios