Asianet Suvarna News Asianet Suvarna News

ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಹತ್ಯೆ

ಗ್ರಾಮ ಪಂಚಾಯತ್ ಅಧ್ಯಕ್ಷರೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.  ಊಟ ಮುಗಿಸಿಕೊಂಡು ಸ್ನೇಹಿತರ ಜತೆ ಬೈಕ್‌ನಲ್ಲಿ ಮನೆಗೆ ಮರಳುವಾಗ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ಟಾಟಾ ಸುಮೋದಿಂದ ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದಾರೆ.

Village Panchayat President Murdered In Hubli
Author
Bengaluru, First Published Nov 25, 2018, 11:56 AM IST
  • Facebook
  • Twitter
  • Whatsapp

ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ್‌ ಕಡಪಟ್ಟಿ(28) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ. ತಾಲೂಕಿನ ಅಗಡಿ ಕ್ರಾಸ್‌ ಬಳಿಯ ಯಾತ್ರಿ ಡಾಬಾದಲ್ಲಿ ಊಟ ಮುಗಿಸಿಕೊಂಡು ಸ್ನೇಹಿತರ ಜತೆ ಬೈಕ್‌ನಲ್ಲಿ ಮನೆಗೆ ಮರಳುವಾಗ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ಟಾಟಾ ಸುಮೋದಿಂದ ಡಿಕ್ಕಿ ಹೊಡೆಸಿದ್ದಾರೆ. 

ಕೆಳಗೆ ಬಿದ್ದ ಬಸವರಾಜ್‌ ಹಾಗೂ ಅವರ ಸ್ನೇಹಿತರಾದ ಜಗದೀಶ್‌ ಪರ್ಚಾಪುರ ಮತ್ತು ಮೈಲಾರಿ ಬಸಪ್ಪ ಮಡಿವಾಳರ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಕೈಗೆ ಗಾಯವಾದರೂ ಎದ್ದೆನೋ ಬಿದ್ದೆನೋ ಎಂದು ಓಡಿದ ಮೈಲಾರಿ ಮಡಿವಾಳರ ದುಷ್ಕರ್ಮಿಗಳ ದಾಳಿಯಿಂದ ಪಾರಾಗಿದ್ದಾರೆ. ಆದರೆ, ಜಗದೀಶ್‌ ಪರ್ಚಾಪುರ ತೀವ್ರವಾಗಿ ಗಾಯಗೊಂಡಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇನ್ನು ಬಸವರಾಜ್‌ ಅವರನ್ನು ದುಷ್ಕರ್ಮಿಗಳು ಸ್ಥಳದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಯಾದ ಬಸವರಾಜ್‌ ಕಡಪಟ್ಟಿಅವರು ಕಳೆದ ಎರಡು ತಿಂಗಳ ಹಿಂದಷ್ಟೇ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಮೊದಲು ಜೆಡಿಎಸ್‌ನಲ್ಲಿದ್ದು, ಬಳಿಕ ಬಿಜೆಪಿ ಸೇರಿ, ಇತ್ತೀಚೆಗೆ ಕಾಂಗ್ರೆಸ್‌ ಸೇರ್ಪಡೆಯಾಗುವ ಮೂಲಕ ಗ್ರಾಪಂ ಅಧ್ಯಕ್ಷ ಗಾದಿ ಅಲಂಕರಿಸಿದ್ದರು. 

ಕೋಳಿ ಫಾರಂ ಕೂಡ ನಡೆಸುತ್ತಿದ್ದ ಬಸವರಾಜ್‌ ಕಡಪಟ್ಟಿಕೊಲೆಗೆ ಹಳೇ ರಾಜಕೀಯ ವೈಷಮ್ಯವೇ ಕಾರಣ ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Follow Us:
Download App:
  • android
  • ios