ಸದಾ ಜನರೊಡನೆ ಬೆರೆಯುವ ಸ್ವಭಾವದ ವೆಂಕಯ್ಯ ನಾಯ್ಡು ಅವರಿಗೆ ಉಪ ರಾಷ್ಟ್ರಪತಿ ಹುದ್ದೆ ಪಂಜರದ ಗಿಳಿ ಎಂದೇ ಅನ್ನಿಸುತ್ತದೆಯಂತೆ. ಉಪರಾಷ್ಟ್ರ ಪತಿ ಆಗಿ ಒಂದು ವರ್ಷ ಪೂರ್ಣಗೊಂಡಿದ್ದಕ್ಕಾಗಿ ಆಂಧ್ರ ಭೋಜನದೊಡನೆ ದಕ್ಷಿಣ ಭಾರತದ ಪತ್ರಕರ್ತರೊಂದಿಗೆ ಹರಟೆ ಹೊಡೆದ ಅವರು, ಪ್ರೋಟೋಕಾಲ್ ನಿಂದಾಗಿ ತನಗೆ ಎಷ್ಟು ಕಸಿವಿಸಿ ಆಗಿದೆ ಎಂದು ಮನದ ದುಗುಡವನ್ನೆಲ್ಲ  ಹೇಳಿಕೊಂಡರು.

ಉಪ ರಾಷ್ಟ್ರಪತಿಗಳು ವಿಶೇಷ ವಿಮಾನದಲ್ಲೇ ಓಡಾಡುವ ಅನಿವಾರ್ಯತೆ ಇದೆಯಂತೆ. ಯಾಕೆ, ನಾನು ಕಮರ್ಷಿಯಲ್ ವಿಮಾನದಲ್ಲೇ ಓಡಾಡುತ್ತೇನೆ ಎಂದು ವೆಂಕಯ್ಯ ಹಟ ಹಿಡಿದಾಗ, ಅಧಿಕಾರಿಗಳು ನಿಮ್ಮ ಜೊತೆ 24 ಜನ ಪ್ರವಾಸ ಮಾಡಬೇಕಾಗುತ್ತದೆ. ಅದಕ್ಕಿಂತ ನೀವೇ ಸೇನೆಯ ವಿಮಾನದಲ್ಲಿ ಬರೋದು ಒಳ್ಳೆಯದು ಎಂದರಂತೆ. ಕಳೆದ ತಿಂಗಳು ವಿಜಯವಾಡಾದಿಂದ ರಾಜಮಂಡ್ರಿಗೆ ಚಂದ್ರಬಾಬು ನಾಯ್ಡು ‘ನನ್ನ ವಿಮಾನದಲ್ಲಿ ಬನ್ನಿ’ ಎಂದು ಕರೆದರು. ಆದರೆ ಅಧಿಕಾರಿಗಳು ಪ್ರೋಟೋಕಾಲ್ ಪ್ರಕಾರ ನೀವು ಹಾಗೆಲ್ಲ ಹೋಗೋಹಾಗಿಲ್ಲ ಎಂದು ತಡೆದರಂತೆ.

ವೆಂಕಯ್ಯರಿಗೆ ಅನೇಕ ಬಾರಿ ಅಭ್ಯಾಸ ಬಲದಿಂದ ಯಾರಾದರೂ ಹೇಳಿಕೆ ನೀಡಿದರೆ ಬೆಳಿಗ್ಗೆ ಪತ್ರಿಕಾಗೋಷ್ಠಿ ಕರೆದು ಮನಸ್ಸಿನಲ್ಲಿ ಇರೋದನ್ನು ಹೇಳಿಕೊಂಡು ಬಿಡಬೇಕು ಅನ್ನಿಸುತ್ತದಂತೆ. ಆದರೆ ನಂತರ ಅಯ್ಯೋ ನಾನು ಉಪರಾಷ್ಟ್ರಪತಿ ಎಂದು ನೆನಪು ಬಂದು ಸುಮ್ಮನೆ ಆಗುತ್ತಾರಂತೆ. ಉಪರಾಷ್ಟ್ರಪತಿ ಆಗಿ ಒಂದು ತಿಂಗಳ ನಂತರ ರಾಷ್ಟ್ರಪತಿ ಭವನದ ಕಾರ್ಯಕ್ರಮ ಒಂದರಲ್ಲಿ ರಾಮನಾಥ ಕೋವಿಂದ್ ತೆರಳಿದ ಮೇಲೆ ವೆಂಕಯ್ಯ ಸಮಾರಂಭಕ್ಕೆ ಬಂದಿದ್ದ ಕುಟುಂಬಗಳನ್ನು ಕರೆದು ಕರೆದು ಮಾತನಾಡಿಸುತ್ತಿದ್ದರು. 

ಆಗ ಪಕ್ಕಕ್ಕೆ ಬಂದ ಪ್ರಧಾನಿ ಮೋದಿ 4 ಬಾರಿ ನಮಸ್ಕಾರ ಮಾಡಿದರಂತೆ. ವೆಂಕಯ್ಯ, ‘ಮೋದಿಜಿ ಕುಚ್ ಬಾತ್ ಕರನಾ ಹೈ ಕ್ಯಾ’ ಎಂದು ಕೇಳಿದರಂತೆ. ಆಗ ಕಿವಿಯಲ್ಲಿ ಮೋದಿ ಸಾಹೇಬರು, ‘ನೀವು ಬೇಗ ತೆರಳಿ. ಪ್ರೋಟೋಕಾಲ್ ಪ್ರಕಾರ ರಾಷ್ಟ್ರಪತಿ, ಉಪರಾಷ್ಟ್ರಪತಿ ತೆರಳಿದ ನಂತರವೇ ಪ್ರಧಾನಿ ಹೋಗಬೇಕು. ನೀವು ಹೋದರೆ ನಾನು ಅರ್ಜೆಂಟ್ ಸಭೆ ಒಂದಕ್ಕೆ ಹೋಗಬೇಕು’ ಎಂದರಂತೆ. ಎಲ್ಲವೂ ಚೆನ್ನಾಗಿದೆ, ಪ್ರೋಟೋಕಾಲ್‌ನಿಂದ ಸಾಕಾಗಿಹೋಗಿದೆ ಎನ್ನುತ್ತಾರೆ ಉಪರಾಷ್ಟ್ರಪತಿಗಳು.

[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]