ನವದೆಹಲಿ: 9 ಸಾವಿರ ಕೋಟಿ ರು. ಬ್ಯಾಂಕ್‌ ಸಾಲ ಮಾಡಿಕೊಂಡು ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಒಂದೆಡೆ ಮೋದಿ ಸರ್ಕಾರ ಅವಿರತ ಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಅವರದ್ದೇ ಸಂಪುಟದ ಪ್ರಭಾವಿ ಮಂತ್ರಿ ನಿತಿನ್‌ ಗಡ್ಕರಿ ಅವರು, ‘ಮಲ್ಯ ಕಳ್ಳ ಅಲ್ಲ’ ಎನ್ನುವ ಮೂಲಕ ಸರ್ಕಾರಕ್ಕೆ ಶಾಕ್‌ ನೀಡಿದ್ದಾರೆ.

‘ಎಕಾಮಿಕ್‌ ಟೈಮ್ಸ್‌’ ಪತ್ರಿಕೆ ಹಮ್ಮಿಕೊಂಡಿದ್ದ ಸಮ್ಮೇಳನವೊಂದರಲ್ಲಿ ಮಾತನಾಡಿದ ಗಡ್ಕರಿ, ‘40 ವರ್ಷದಿಂದ ಉದ್ದಿಮೆ ನಡೆಸುತ್ತಿದ್ದ ಮಲ್ಯ ಅವರು ಸರಿಯಾಗಿಯೇ ಸಾಲ ಮತ್ತು ಬಡ್ಡಿ ಕಟ್ಟುತ್ತಿದ್ದರು. ಆದರೆ ವಿಮಾನ ಉದ್ಯಮಕ್ಕೆ ಪ್ರವೇಶಿಸಿದ ನಂತರ ಜಾಗತಿಕ ಸ್ಥಿತ್ಯಂತರಗಳಿಂದ ಅವರಿಗೆ ಅಡಚಣೆಯಾಯಿತು. ಆಗ ಅವರಿಗೆ ಸಾಲ ಕಟ್ಟಲು ಆಗಲಿಲ್ಲ. ಹಾಗಂತ ಅವರನ್ನು ಕಳ್ಳ ಎಂದು ಕರೆಯಲಾಗುತ್ತಾ? 50 ವರ್ಷದಿಂದ ಸರಿಯಾಗಿ ಸಾಲ-ಬಡ್ಡಿ ಕಟ್ಟುವ ವ್ಯಕ್ತಿ ಒಮ್ಮೆ ಕಟ್ಟದೇ ಹೋದರೆ ವಂಚಕನಾಗಿಬಿಡುತ್ತಾನಾ? ಈ ಮಾನಸಿಕತೆ ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ಪ್ರತಿ ಉದ್ದಿಮೆಯಲ್ಲೂ ರಿಸ್ಕ್‌ ಇದ್ದೇ ಇರುತ್ತದೆ. ಒಮ್ಮೆ ತಪ್ಪು ಮಾಡಲು ಎಲ್ಲರಿಗೂ ಅಧಿಕಾರ ಇರುತ್ತದೆ. ಉದ್ದೇಶಪೂರ್ವಕವಾಗಿ ತಪ್ಪೆಸಗಿದರೆ ತಪ್ಪು. ಆದರೆ ಅನುದ್ದಿಶ್ಯದಿಂದ ತಪ್ಪಾಗಿದ್ದರೆ ಅದು ತಪ್ಪಲ್ಲ’ ಎಂದೂ ಗಡ್ಕರಿ ಹೇಳಿದರು.

‘ಆದರೆ ಮಲ್ಯ ಅವರನ್ನು ನಾನು ಸಮರ್ಥಿಸುತ್ತಿಲ್ಲ’ ಎಂಬ ಸಮಜಾಯಿಷಿಯನ್ನೂ ನೀಡಿದ ಗಡ್ಕರಿ, ‘ಮಲ್ಯ ಸುಳ್ಳು ದಾಖಲೆಗಳನ್ನು ಬಳಸಿಕೊಂಡು ವ್ಯವಹಾರ ನಡೆಸಿದ್ದರೆ ಅದಕ್ಕೆ ಅವರು ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು.