Asianet Suvarna News Asianet Suvarna News

ಕುಮಾರಣ್ಣನ ಬಜೆಟ್ಟಿನಿಂದ ಆಯ್ದ ಹತ್ತು ಮುತ್ತುಗಳು !

ಹಲವು ತೊಡಕುಗಳನ್ನು ನಿವಾರಿಸಿಕೊಂಡು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಮೊದಲ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಶಸ್ವಿಯಾಗಿ ಮಂಡಿಸಿದ್ದು, ಸಿದ್ದರಾಮಯ್ಯ ಅವರು ಘೋಷಿಸಿದ ಇಂದಿರಾ ಕ್ಯಾಂಟೀನ್ ಸೇರಿ ಎಲ್ಲ ಯೋಜನೆಗಳನ್ನು ಮುಂದುವರಿಸಿ, ಅವರನ್ನು ಓಲೈಸಲು ಯತ್ನಿಸಿದ್ದಾರೆ. ಒಟ್ಟಾರೆ ಕುಮಾರಸ್ವಾಮಿ ಅವರು ಮಂಡಿಸಿದ ಹತ್ತು ಪ್ರಮುಖ ಅಂಶಗಳು ಇಲ್ಲಿವೆ....

Top 10 Key take aways from Karnataka Budget 2018

1. ಪ್ರಾಂತ್ಯವಾರು ಅನುದಾನವನ್ನು ನಿಗದಿಗೊಳಿಸುವಲ್ಲಿ ವಿಫಲವಾಗಿದ್ದು, ಜೆಡಿಎಸ್ ಕೈ ಹಿಡಿದ ಮೈಸೂರು ಪ್ರಾಂತ್ಯಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಆ ಮೂಲಕ ರಾಗಿ ಮುದ್ದೆ ಬಸ್ಸಾರು ಜಿಲ್ಲೆಗಳಿಗೆ ಬಾಡೂಟ ಹಾಕಿಸಿದ್ದಾರೆ. ಆದರೆ, ದಳಕ್ಕೆ ಮತಹಾಕದ ದಕ್ಷಿಣ ಕನ್ನಡ ಮತ್ತು ಮಲೆನಾಡು ಪ್ರದೇಶದ ಜಿಲ್ಲೆಗಳಿಗೆ ಮುಂಗಡ ಪತ್ರದಲ್ಲಿ ಏನೂ ಇಲ್ಲ.

2. ಸಂಪೂರ್ಣ ರೈತರ ಸಾಲ ಮನ್ನಾ ಮಾಡುವುದಾಗಿ ಆಶ್ವಾಸನೆ ನೀಡಿದ ಕುಮಾರಸ್ವಾಮಿ ಅನ್ನದಾತನನ್ನು ಸಮಾಧಾನಗೊಳಿಸಲು ಯತ್ನಿಸಿದ್ದಾರೆ. ಸುಸ್ತಿದಾರರಿಗೆ ಅನುಕೂಲವಾಗುವಂತೆ ಸಾಲ ಮನ್ನಾ ಮಾಡಿರುವುದು, ಪ್ರಾಮಾಣಿಕವಾಗಿ ಸಾಲ ಕಟ್ಟುವ ರೈತರಿಗೆ ಮುನಿಸು ತರಿಸಿದೆ. ಹೊಸ ಸಾಲ ಪಡೆಯಲು ರೈತರಿಗೆ ಅವಕಾಶ ನೀಡಿದ್ದು, ಸುಸ್ತಿ ಖಾತೆಯಲ್ಲಿರುವ ಬಾಕಿ ಮನ್ನಾ ಮಾಡಲು ನಿರ್ಧಾರಿಸಿದ್ದಾರೆ. ಈ ಉದ್ದೇಶಕ್ಕಾಗಿ ಬಜೆಟ್ನಲ್ಲಿ 6500 ಕೋಟಿ ರೂ. ನಿಗದಿಗೊಳಿಸಿದೆ.

3. ರೈತರ ಸಾಲಮನ್ನಾ ಮಾಡಲು ತೆರಿಗೆ ಏರಿಕೆ ಬರೆ ಎಳೆದ ಕುಮಾರಸ್ವಾಮಿ. ಒಂದೆಡೆ ತೆರಿಗೆ ಏರಿಸಿದರೆ, ಇನ್ನೊಂದೆಡೆ ಇಲಾಖೆಗಳ ಅನುದಾನಕ್ಕೆ ಕತ್ತರಿ ಹಾಕಿದ್ದಾರೆ. 

4. ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಅನ್ನಭಾಗ್ಯಕ್ಕೆ ಕತ್ತರಿ ಹಾಕಿದ್ದಾರೆ ಕುಮಾರಸ್ವಾಮಿ. 7 ಕೆಜಿ ಅಕ್ಕಿಗೆ ಬದಲು 5 ಕೆಜಿಗೆ ಅಕ್ಕಿ ನೀಡಲು ನಿರ್ಧರಿಸಿದ್ದಾರೆ. ಇನ್ನು ಮುಂದೆ ಅನ್ನಭಾಗ್ಯ ಯೋಜನೆಯಡಿಗೆ ಪ್ರತಿ ತಿಂಗಳು ಕೇವಲ 5 ಕೆಜಿ ಅಕ್ಕಿ ನೀಡಲಾಗುತ್ತದೆ. 1 ಕೆಜಿ ತೊಗರಿ ಬೇಳೆ ಬದಲು ಅರ್ಧ ಕೆಜಿ ವಿತರಿಸಲಿದೆ. 1 ಕೆಜಿ ಪಾಮ್ ಎಣ್ಣೆ, 1 ಕೆಜಿ ಉಪ್ಪು ಮತ್ತು 1 ಕೆಜಿ ಉಪ್ಪು ವಿತರಣೆಗೆ ನಿರ್ಧಾರಿಸಿದ್ದು,  ಆ ಮೂಲಕ ಬಿಪಿಎಲ್ ಕಾರ್ಡ್ದಾರರಿಗೆ ಸಿಗುತ್ತಿದ್ದ ಆಹಾರ ಪದಾರ್ಥಗಳಿಗೆ ಕತ್ತರಿ ಹಾಕಲಾಗಿದೆ.

5. ಬೆಂಗಳೂರಿನ ಸಂಚಾರ ದಟ್ಟಣೆ ತಡೆಯಲು ಹಲವು ಯೋಜನೆಗಳನ್ನು ಜಾರಿಗೊಳಿಸಲು ಎಚ್ಡಿಕೆ ಮುಂದಾಗಿದ್ದಾರೆ.  ಅನುಷ್ಠಾನ ಹೇಗಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಮೆಟ್ರೋ 3ನೇ ಹಂತದ ಕಾಮಗಾರಿಗೂ ಅನುದಾನ ನಿಗದಿಗೊಳಿಸಿದ್ದಾರೆ.

6.  ಗರ್ಭಿಣಿ- ಬಾಣಂತಿಯರಿಗೆ ಮಾಸಿಕ 6 ಸಾವಿರ ರೂ. ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಜೆಡಿಎಸ್, ಮಾತು ತಪ್ಪಿದೆ. ತಿಂಗಳಿಗೆ ಕೇವಲ 1 ಸಾವಿರ ರೂ. ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ.

7. ಬಡ ಬ್ರಾಹ್ಮಣರ ಉದ್ದಾರಕ್ಕೆ ಒಕ್ಕಲಿಗ ಮುಖ್ಯಮಂತ್ರಿ ಮನಸ್ಸು ಮಾಡಿದ್ದು, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಅಸ್ತು ಎಂದಿದ್ದಾರೆ. ಹಿಂದುಳಿದ ಬ್ರಾಹ್ಮಣ ಅಭಿವೃದ್ಧಿಗೆ ಈ ಮಂಡಳಿ ಕಾರ್ಯ ಪ್ರವೃತ್ತವಾಗಲಿದೆ. ಇಂಥದ್ದೊಂದು ಮಂಡಳಿ ಸ್ಥಾಪನೆಗೆ ಹಲವು ವರ್ಷಗಳಿಂದಲೂ ಬೇಡಿಕೆ ಇತ್ತು.

8. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮಠ ಮಾನ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿದ್ದರು. ಅವರಂತೆಯೇ ಕುಮಾರಸ್ವಾಮಿಯವರೂ ಸಾಮಾಜಿಕ ಕಳಕಳಿ ತೋರುತ್ತಿರುವ ಹಿಂದುಳಿದ ಮಠಗಳಿಗೆ 25 ಕೋಟಿ ರೂ. ಅನುದಾನ ನಿಗದಿಗೊಳಿಸಿದ್ದಾರೆ.

9.  ಮದ್ಯದ ಎಲ್ಲ 18 ಘೋಷಿತ ಬೆಲೆ ಸ್ಲ್ಯಾಬ್ಗಳ ಮೇಲಿನ ಅಬಕಾರಿ ಸುಂಕ ಏರಿಸಲಾಗಿದೆ. ಈಗಿನ ದರಗಳ ಮೇಲೆ ಶೇ.4ರಷ್ಟು ಸುಂಕ ಏರಿಸಿದ್ದು, ಮದ್ಯ ಬೆಲೆ ಏರಿಕೆಯಾಗಲಿದೆ. ಬಕಾರಿ ಇಲಾಖೆಗೆ ಈ ಸಾಲಿನಲ್ಲಿ 18,750 ಕೋಟಿ ರಾಜಸ್ವ ಸಂಗ್ರಹಣೆ ಗುರಿ ನೀಡಿದ್ದು, 2018 ಜೂನ್ ಅಂತ್ಯಕ್ಕೆ 4, 674 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ, ಎಂದು ತಿಳಿಸಿದ್ದಾರೆ.

10.  ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಏರಿಸಿದ್ದು, ಪೆಟ್ರೋಲ್ ಮೇಲೆ ಶೇ.30 ರಿಂದ 32ಕ್ಕೆ ಸೆಸ್ ಏರಿಸಲಾಗಿದೆ. ಡೀಸೆಲ್ ಮೇಲೆ ಶೇ.19 ರಿಂದ 21ಕ್ಕೆ ಸೆಸ್ ಏರಿಕೆಯಾಗಿದೆ. ರೈತನ ಕಷ್ಟ ನೀಗಿಸುವ ಭರದಲ್ಲಿ, ಶ್ರೀಸಾಮಾನ್ಯನಿಗೆ ಕುಮಾರಸ್ವಾಮಿ ಟೋಪಿ ಹೊಲಿದಿದ್ದಾರೆ.

 

Follow Us:
Download App:
  • android
  • ios