ಕೋಲ್ಕತಾ[ಆ.13]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370, 35 ಎ ಪರಿಚ್ಛೇದ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಮುಂದಿನ ಗುರಿ ಪಶ್ಚಿಮ ಬಂಗಾಳವನ್ನು ವಿಭಜಿಸಿ ಗೋರ್ಖಾಲ್ಯಾಂಡ್‌ ರಚನೆಯೇ? ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಾರ್ಜಿಲಿಂಗ್‌ ಕ್ಷೇತ್ರದ ತಮ್ಮ ಪಕ್ಷದ ಸಂಸದರಿಗೆ ಬರೆದ ಪತ್ರವೊಂದು ಇಂಥ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇತ್ತೀಚೆಗಷ್ಟೇ ಡಾರ್ಜಿಲಿಂಗ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ರಾಜು ಬಿಸ್ತಾ, ದೆಹಲಿಯಲ್ಲಿ ನೆಲೆಗೊಂಡಿರುವ ಗೋರ್ಖಾ ಸಮುದಾಯಕ್ಕೆ ಭದ್ರತೆ ನೀಡಬೇಕು ಎಂದು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಸಂಬಂಧ ರಾಜು ಬಿಸ್ತಾಗೆ ಅಮಿತ್‌ ಶಾ ಅವರು ಉತ್ತರ ರೂಪದ ಪತ್ರ ಬರೆದಿದ್ದು, ಅದರಲ್ಲಿ ಗೋರ್ಖಾಲ್ಯಾಂಡ್‌ ಎಂದು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪಶ್ಚಿಮ ಬಂಗಾಳವನ್ನು ವಿಭಜಿಸಿ ಗೋರ್ಖಾಲ್ಯಾಂಡ್‌ ರಚನೆಗೆ ಮುಂದಾಗಿದೆ. ಪತ್ರದ ಈ ಉಲ್ಲೇಖದ ಬಗ್ಗೆ ಟಿಎಂಸಿ ಕಿಡಿಕಾರಿದೆ. ರಾಜ್ಯದಲ್ಲಿ ಟಿಎಂಸಿ ಆಡಳಿತ ಇರುವವರೆಗೂ ಬಿಜೆಪಿಯ ಇಂಥ ಯತ್ನಗಳು ಕೈಗೂಡದು ಎಂದು ಗುಡುಗಿದೆ. ಆದರೆ, ಟಿಎಂಸಿಯ ಈ ಆರೋಪವನ್ನು ಅಲ್ಲಗೆಳೆದಿರುವ ಬಿಜೆಪಿ, ಇದು ತಳ-ಬುಡ ಇಲ್ಲದ್ದು ಎಂದಿದೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ದೆಹಲಿಯಲ್ಲಿರುವ ಗೋರ್ಖಾಲ್ಯಾಂಡ್‌ ಹಾಗೂ ಲಡಾಖ್‌ ಪ್ರದೇಶದ ನಾಗರಿಕರ ಭದ್ರತೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದೆ. ಅದಕ್ಕಾಗಿ, ಶಾ ಅವರು ತಮ್ಮ ಪತ್ರದಲ್ಲಿ ಈ ಪದ ಉಲ್ಲೇಖಿಸಿದ್ದಾರಷ್ಟೇ. ಇದೊಂದನ್ನು ಇಟ್ಟುಕೊಂಡು ಬಿಜೆಪಿ ರಾಜ್ಯ ವಿಭಜಿಸಲು ಮುಂದಾಗಿದೆ ಎಂದು ಆರೋಪಿಸುವುದು ಸರಿಯಲ್ಲ ಎಂದಿದ್ದಾರೆ ಸಂಸದ ರಾಜು ಬಿಸ್ತಾ.