ನವದೆಹಲಿ[ಆ.06]: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಆಡಳಿತದ ದೃಷ್ಟಿಯಿಂದ ರಾಜ್ಯದಿಂದ ಕೇಂದ್ರಾಡಳಿತ ಪ್ರದೇಶವಾಗಿ ಹಿಂಬಡ್ತಿ ಪಡೆದ ಜಮ್ಮು-ಕಾಶ್ಮೀರವು 107 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರಲಿದೆ. ಅಲ್ಲದೆ, ಮುಂದಿನ ಹಂತದಲ್ಲಿ ಕ್ಷೇತ್ರ ಮರುವಿಂಗಡನೆ ಮೂಲಕ ವಿಧಾನಸಭೆ ಕ್ಷೇತ್ರಗಳ ಸಂಖ್ಯೆಯನ್ನು 114ಕ್ಕೆ ಎತ್ತರಿಸಲಾಗುತ್ತದೆ. ಅಲ್ಲದೆ, ದೆಹಲಿ ಮತ್ತು ಪುದುಚೇರಿ ಮಾದರಿಯಲ್ಲಿ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರತ್ಯೇಕ ಲೆಫ್ಟಿನೆಂಟ್‌ ಗವರ್ನರ್‌ ಇರಲಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ಲಡಾಕ್‌ ಪ್ರಾಂತ್ಯದ ನಾಲ್ಕು ಸೀಟುಗಳು ಸೇರಿದಂತೆ ಜಮ್ಮು-ಕಾಶ್ಮೀರದಲ್ಲಿ ಒಟ್ಟು 87 ವಿಧಾನಸಭಾ ಕ್ಷೇತ್ರಗಳಿವೆ. ಆದರೆ, ಜಮ್ಮು-ಕಾಶ್ಮೀರದಿಂದ ಪ್ರತ್ಯೇಕವಾಗಿ ಲಡಾಕ್‌ ಇದೀಗ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಲಿದೆ. ಆದರೆ, ಇದಕ್ಕೆ ವಿಧಾನಸಭೆಯೇ ಇರುವುದಿಲ್ಲ.

ಆಪರೇಷನ್ ಕಾಶ್ಮೀರ, ಆರ್ಟಿಕಲ್ 370 ರದ್ದು: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಧಾನಸಭೆಯ ಒಟ್ಟು ಸದಸ್ಯರ ಶೇ.10ಕ್ಕಿಂತ ಹೆಚ್ಚು ಪ್ರಮಾಣದಲ್ಲಿರದಂತೆ ಕೌನ್ಸಿಲ್‌ ಸಚಿವರು, ಮುಖ್ಯಮಂತ್ರಿ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಇರಲಿದ್ದು, ತನ್ನ ಕಾನೂನುಗಳನ್ನು ರೂಪಿಸಿಕೊಳ್ಳುವ ಸಂಪೂರ್ಣ ಅಧಿಕಾರ ವಿಧಾನಸಭೆಗೆ ಇರಲಿದೆ ಎಂದು ಜಮ್ಮು-ಕಾಶ್ಮೀರ ಮರು ಸಂಘಟನಾ ಮಸೂದೆ-2019ರಲ್ಲಿದೆ ಎಂದು ಹೇಳಲಾಗಿದೆ. ಅಲ್ಲದೆ, ವಿಧಾನಸಭೆ ಚುನಾವಣೆಯಲ್ಲಿ ಸಂವಿಧಾನದ ಆಶಯ ಪ್ರಕಾರವಾಗಿ ಪರಿಶಿಷ್ಟಜಾತಿ, ಪಂಗಡಗಳಿಗೂ ಮೀಸಲಾತಿ ಕಲ್ಪಿಸಲಾಗುತ್ತದೆ ಎಂದು ಸಹ ತಿಳಿಸಲಾಗಿದೆ.