Asianet Suvarna News Asianet Suvarna News

ಸುಪ್ರೀಂನಿಂದ ಹೊರಬೀಳುತ್ತಾ ಮೈಲುಗಲ್ಲಾಗುವ ತೀರ್ಪು?

ಕರ್ನಾಟಕ ರಾಜಕೀಯ ಪ್ರಹಸನ ಮುಂದುವರಿದಿದ್ದು, ಈ ಸಂಬಂಧ ಇಂದು ಮಹತ್ವದ ತೀರ್ಪು ಸುಪ್ರೀಂ ನಿಂದ ಹೊರಬೀಳಲಿದೆ. 

Supreme Court Hearing Over Karnataka Political Crisis
Author
Bengaluru, First Published Jul 16, 2019, 7:48 AM IST
  • Facebook
  • Twitter
  • Whatsapp

ನವದೆಹಲಿ [ಜು.16] :  ಹದಿನೈದು ಮಂದಿ ಅತೃಪ್ತ ಶಾಸಕರ ರಾಜೀನಾಮೆಯಿಂದ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಹಿಡಿದಿರುವ ಗ್ರಹಣ ಚಂದ್ರಗ್ರಹಣದ ದಿನ ದೂರವಾಗುವುದೇ ಅಥವಾ ರಾಜ್ಯದ ರಾಜಕೀಯದ ಅಜಲುಗೋಜಲುಗಳು ಇನ್ನಷ್ಟುದಿನ ಮುಂದುವರಿಯುವುದೇ ಎನ್ನುವ ಕುತೂಹಲಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ.

ತಮ್ಮ ರಾಜೀನಾಮೆಯನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ದುರುದ್ದೇಶದಿಂದ ಅಂಗೀಕರಿಸದೆ ಪಕ್ಷಪಾತಿಯಾಗಿ ವರ್ತಿಸಿದ್ದಾರೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಒಟ್ಟು 10 ಶಾಸಕರು ಸಲ್ಲಿಸಿರುವ ಅರ್ಜಿ, ಇದರೊಂದಿಗೆ ಸ್ಪೀಕರ್‌ ನಮ್ಮ ರಾಜೀನಾಮೆಯನ್ನೂ ಅಂಗೀಕರಿಸುತ್ತಿಲ್ಲ ಎಂದು ಹೇಳಿಕೊಂಡು ಶಾಸಕರಾದ ಎಂ.ಟಿ.ಬಿ.ನಾಗರಾಜ್‌ ಸೇರಿ ಉಳಿದ ಐವರು ಸಲ್ಲಿಸಿದ ಅರ್ಜಿ ಹಾಗೂ ಈ ರಾಜೀನಾಮೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಂವಿಧಾನಿಕ ಬಾಧ್ಯತೆಗಳನ್ನು ನಿರ್ವಹಿಸಬೇಕಿದೆ ಎಂಬ ಸ್ಪೀಕರ್‌ ಅರ್ಜಿ, ಹೀಗೆ ಒಟ್ಟು ಮೂರು ಮಹತ್ವದ ಅರ್ಜಿಗಳ ವಿಚಾರಣೆ ಮಂಗಳವಾರ ಬೆಳಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

ಸುಪ್ರೀಂ ಕೋರ್ಟ್‌ ಈಗಾಗಲೇ ಈ ಪ್ರಕರಣದಲ್ಲಿ ಸಂವಿಧಾನದ 160ನೇ ವಿಧಿ, 190ನೇ ವಿಧಿ ಮತ್ತು 361ನೇ ವಿಧಿಗಳು ಅಡಕವಾಗಿರುವ ಜೊತೆಗೆ ಸಂವಿಧಾನಬದ್ಧ ನ್ಯಾಯಾಲಯ ಇನ್ನೊಂದು ಸಾಂವಿಧಾನಿಕ ಸಂಸ್ಥೆಗೆ ನಿರ್ದೇಶನ ನೀಡಬಹುದೇ ಎಂಬ ಪ್ರಮುಖ ಅಂಶಗಳು ಬಂದಿವೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ವೇಳೆ ಈ ಕುರಿತು ವಿವರವಾದ ವಿಚಾರಣೆಗೆ ಮುಂದಾದರೆ ಪ್ರಕರಣ ಇತ್ಯರ್ಥಗೊಳ್ಳಲು ಇನ್ನಷ್ಟುಸಮಯ ತೆಗೆದುಕೊಳ್ಳಬಹುದು. ಒಂದು ವೇಳೆ ಪ್ರಕರಣವನ್ನು ತಕ್ಷಣವೇ ಇತ್ಯರ್ಥಗೊಳಿಸಲು ಮುಂದಾದರೆ ಮಹತ್ವದ ಆದೇಶ ನೀಡಲೂಬಹುದು. ಹಾಗೆಯೇ ಮಧ್ಯಂತರ ಆದೇಶವೊಂದನ್ನು ನೀಡಿ ಉಳಿದಂತೆ ಸಾಂವಿಧಾನತ್ಮಕ ವಿಷಯಗಳನ್ನು ವಿವರವಾಗಿ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲೂಬಹುದು ಎಂದು ಕಾನೂನುಪಂಡಿತರು ಮಂಗಳವಾರದ ವಿಚಾರಣೆಗೆ ಸಂಬಂಧಿಸಿ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಆದೇಶ ರಾಜೀನಾಮೆ ನೀಡಿರುವ 16(15+ರಾಮಲಿಂಗಾ ರೆಡ್ಜಿ) ಶಾಸಕರೊಂದಿಗೆ ರಾಜ್ಯ ಮೈತ್ರಿ ಸರ್ಕಾರದ ಪಾಲಿಗೂ ಮಹತ್ವದ್ದಾಗಿರಲಿದೆ. ಇಡೀ ರಾಜ್ಯ ರಾಜಕಾರಣದ ದಿಕ್ಕನ್ನೇ ಸುಪ್ರೀಂ ನೀಡಲಿರುವ ತೀರ್ಪು ಬದಲಿಸಬಹುದಾಗಿದೆ.

ರಾಜೀನಾಮೆ ಸ್ವೀಕಾರಕ್ಕೆ ಸೂಚಿಸಿತ್ತು: ಈ ಹಿಂದೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗಾಯ್‌, ನ್ಯಾ. ದೀಪಕ್‌ ಗುಪ್ತ ಮತ್ತು ನ್ಯಾ. ಅನಿರುದ್ಧ ಬೋಸ್‌ ಅವರನ್ನು ಒಳಗೊಂಡಿರುವ ನ್ಯಾಯಪೀಠ ಜು.11ರಂದು ಸಂಜೆ 6ರ ಹೊತ್ತಿಗೆ ರಾಜೀನಾಮೆ ನೀಡಲು ಬಯಸಿರುವ ಶಾಸಕರಿಂದ ರಾಜೀನಾಮೆ ಪತ್ರ ಪಡೆಯಬೇಕು. ಮರುದಿನ ವಿಚಾರಣೆ ವೇಳೆ(ಜು.12)ರಂದು ಆ ರಾಜೀನಾಮೆಗಳ ಕುರಿತು ಕೋರ್ಟ್‌ಗೆ ತಿಳಿಸಬೇಕೆಂದು ಸೂಚಿಸಿತ್ತು.

ಅದರಂತೆ ಜು.12ರಂದು ನಡೆದ ವಿವರವಾದ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಅಣತಿಯಂತೆ ಸ್ಪೀಕರ್‌ ನಡೆದುಕೊಂಡಿಲ್ಲ. ರಾಜೀನಾಮೆ ಬಗ್ಗೆ ನಿರ್ಧಾರಕ್ಕೆ ಬಂದಿಲ್ಲ ಎಂದು ಅತೃಪ್ತರ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದಿಸಿದರೆ, ಸ್ಪೀಕರ್‌ ನಡೆಯನ್ನು ಅವರ ಪರ ಹಿರಿಯ ವಕೀಲ ಅಭಿಷೇಕ್‌ ಮನುಸಿಂಘಿಘಿಘಿಘ್ವಿ ಮತ್ತು ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಪರ ಹಿರಿಯ ವಕೀಲ ರಾಜೀವ್‌ ಧವನ್‌ ಸಮರ್ಥಿಸಿಕೊಂಡರು. ಈ ಸಂದರ್ಭದಲ್ಲಿ ಸ್ಪೀಕರ್‌ಗೆ ಸಂವಿಧಾನ ನೀಡಿರುವ ಅಧಿಕಾರವನ್ನು ಉಲ್ಲೇಖಿಸಿದ್ದರು.

ಆದರೆ ಪ್ರಕರಣದಲ್ಲಿ ಸಂವಿಧಾನದ ಮಹತ್ವದ ಅಂಶಗಳು ಅಡಕವಾಗಿದ್ದ ಹಿನ್ನೆಲೆಯಲ್ಲಿ ಶಾಸಕರ ಅನರ್ಹತೆ ಮತ್ತು ರಾಜೀನಾಮೆ ಪತ್ರದ ಬಗ್ಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸ್ಪೀಕರ್‌ ಅವರಿಗೆ ಸೂಚಿಸಿದ ಸುಪ್ರೀಂ ಕೋರ್ಟ್‌ ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತ್ತು. ಈ ಮಧ್ಯೆ ನಾವು ಕ್ರಮಬದ್ಧವಾಗಿ ರಾಜೀನಾಮೆ ನೀಡಿದರೂ ನಮ್ಮ ರಾಜೀನಾಮೆ ಅಂಗೀಕರಿಸಿಲ್ಲ ಎಂದು ಆರೋಪಿಸಿ ಮತ್ತೆ ಐವರು ಶಾಸಕರು ಶನಿವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸೋಮವಾರ ಮುಕುಲ್ ರೋಹಟ್ಗಿ ಅವರು ನ್ಯಾ

ಗೋಗಾಯ್‌ ನೇತೃತ್ವದ ನ್ಯಾಯಪೀಠದ ಗಮನಕ್ಕೆ ತಂದಾಗ ಮಂಗಳವಾರವೇ ಈ ಅರ್ಜಿ ಕೂಡ ವಿಚಾರಣೆ ನಡೆಸಲು ನಿಗದಿ ಪಡಿಸಲಾಯಿತು.

ಏನೇನು ಪರಿಶೀಲನೆ?

1. ಸಂವಿಧಾನದ 361ನೇ ವಿಧಿಯಲ್ಲಿ ರಾಷ್ಟ್ರಪತಿ, ರಾಜ್ಯಪಾಲರು ಕೋರ್ಟ್‌ಗೆ ಉತ್ತರದಾಯಿಗಳಲ್ಲ ಎಂಬ ಉಲ್ಲೇಖದ ಬಗ್ಗೆ

2. ಸಂವಿಧಾನದ 164 ವಿಧಿಯಡಿ ಮುಖ್ಯಮಂತ್ರಿ ಮತ್ತು ಮಂತ್ರಿಗಳನ್ನು ನೇಮಿಸುವ ರಾಜ್ಯಪಾಲರ ಅಧಿಕಾರದ ಬಗ್ಗೆ

3. ಸಂವಿಧಾನದ 190ನೇ ವಿಧಿ ಪ್ರಕಾರ ಶಾಸಕರ ಅನರ್ಹತೆ, ರಾಜೀನಾಮೆ ಹಾಗೂ ಈ ಹಂತದಲ್ಲಿ ಸ್ಪೀಕರ್‌ ಅಧಿಕಾರದ ಬಗ್ಗೆ

4. ಸಾಂವಿಧಾನಿಕ ಸಂಸ್ಥೆಗಳಿಗೆ ಸಾಂವಿಧಾನಿಕ ನ್ಯಾಯಾಲಯವು ನಿರ್ದೇಶನ ನೀಡಬಹುದೇ ಎಂಬ ವಿಚಾರದ ಬಗ್ಗೆ

5. ವಿಪ್‌ ಉಲ್ಲಂಘನೆ ಹಾಗೂ ಶಾಸಕರ ರಾಜೀನಾಮೆ ಮೂಲಭೂತ ಹಕ್ಕಿನ ವ್ಯಾಪ್ತಿಗೆ ಬರಲಿದೆಯೇ ಎಂಬ ವಿಚಾರಗಳ ಬಗ್ಗೆ

Follow Us:
Download App:
  • android
  • ios