Asianet Suvarna News Asianet Suvarna News

ಬಿಜೆಪಿಯಿಂದ ರಮೇಶ್ ಜಾರಕಿಹೊಳಿಗೆ ಭರ್ಜರಿ ಆಫರ್!

ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನದ ಶಮನಕ್ಕೆ ಕೈಹಾಕಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬೆಳಗಾವಿಯ ಜಾರಕಿಹೊಳಿ ಸಹೋದರರು ಅದರಲ್ಲೂ ವಿಶೇಷವಾಗಿ ರಮೇಶ್ ಜಾರಕಿಹೊಳಿ ಅವರ ಧೋರಣೆ ಬಿಸಿತುಪ್ಪವಾಗಿ ಪರಿಣಮಿಸಿದೆ. 

Ramesh Jarkiholi Demands TO DCM Post
Author
Bengaluru, First Published Sep 18, 2018, 7:27 AM IST

ಬೆಂಗಳೂರು : ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನದ ಶಮನಕ್ಕೆ ಕೈಹಾಕಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬೆಳಗಾವಿಯ ಜಾರಕಿಹೊಳಿ ಸಹೋದರರು ಅದರಲ್ಲೂ ವಿಶೇಷವಾಗಿ ರಮೇಶ್
ಜಾರಕಿಹೊಳಿ ಅವರ ಧೋರಣೆ ಬಿಸಿತುಪ್ಪವಾಗಿ ಪರಿಣಮಿಸಿದೆ. 

ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ನಿಯಂತ್ರಿಸಬೇಕು ಎಂಬುದಷ್ಟೇ ಅಲ್ಲದೆ, ಬಿಜೆಪಿ ತಮ್ಮ ಮುಂದೆ ಇಟ್ಟಿರುವ ಆಮಿಷಗಳ ಪಟ್ಟಿಯನ್ನು ಮುಂದು ಮಾಡಿ ನಾವ್ಯಾಕೆ ಕಾಂಗ್ರೆಸ್‌ನಲ್ಲಿ ಇರಬೇಕು ಎಂದು ರಮೇಶ್ ಪ್ರಶ್ನೆ ಮಾಡಿರುವುದು ಸಿದ್ದರಾಮಯ್ಯ 
ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.  ಆದಾಗ್ಯೂ, ತಾವು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಭೇಟಿ ಮಾಡಿ ಬರುವವರೆಗೂ ಯಾವ ನಿರ್ಧಾರವನ್ನೂ ಕೈಗೊಳ್ಳದಂತೆ ರಮೇಶ್ ಜಾರಕಿಹೊಳಿ ಅವರಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿದೇಶದಿಂದ ಹಿಂತಿರುಗಿದ ಸಿದ್ದರಾಮಯ್ಯ ತಮ್ಮನ್ನು ಬಂದು ಭೇಟಿ ಮಾಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ನಗರಕ್ಕೆ ಆಗಮಿಸಿದ ರಮೇಶ್ ಜಾರಕಿಹೊಳಿ ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ಸರ್ಕಾರಿ ನಿವಾಸದಲ್ಲೇ ಸರಣಿ ಸಭೆಯನ್ನು ನಡೆಸಿದರು. 

ಸಂಜೆ ವೇಳೆಗೆ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಗೆ ತೆರಳಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ರಮೇಶ್ ಜಾರಕಿಹೊಳಿ ಅವರು ನೇರಾನೇರ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ತಮ್ಮ ಬೆಂಬಲಿಗರಾಗಿದ್ದು, ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆ ನೀಡುತ್ತಿರುವುದರಿಂದ ಇದರ ಹಿಂದೆ ನಾನು ಇದ್ದೇನೆ ಎಂದು ಬಿಂಬಿಸಲು ಕೆಲ ಸ್ವಪಕ್ಷೀಯರಿಗೆ ಅವಕಾಶ ದೊರಕಿದೆ. ಹೀಗಾಗಿ ಬಹಿರಂಗ ಹೇಳಿಕೆಗಳನ್ನು ನೀಡಬೇಡ ಎಂದು ಸಿದ್ದರಾಮಯ್ಯ ರಮೇಶ್‌ಗೆ ಸೂಚಿಸಿದರು ಎನ್ನಲಾಗಿದೆ.

ಈ ವೇಳೆ ರಮೇಶ್ ಪಕ್ಷದಲ್ಲಿ ತಮಗೆ ಆಗುತ್ತಿರುವ ಸಮಸ್ಯೆಗಳನ್ನು ವಿವರವಾಗಿ ತಿಳಿಸಿದರು ಎನ್ನಲಾಗಿದೆ. ಅದರಲ್ಲೂ ವಿಶೇಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬೆಳಗಾವಿ ರಾಜಕಾರಣದಲ್ಲಿ ಮುಂಚೂಣಿಗೆ ತರಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ
ಪ್ರಯತ್ನಗಳಿಂದ ಜಿಲ್ಲೆಯಲ್ಲಿ ತಮಗೆ ಆಗುತ್ತಿರುವ ಹಿನ್ನಡೆ ಹಾಗೂ ಬೇಸರವನ್ನು ವಿವರಿಸಿದರು ಎನ್ನಲಾಗಿದೆ. ಈ ಸಮಸ್ಯೆಗಳ ಬಗ್ಗೆ ಹೈಕಮಾಂಡ್ ಜತೆಗೆ ಚರ್ಚಿಸಿ ಬಗೆಹರಿಸಬಹುದು. ಶಿವಕುಮಾರ್ ಅವರಿಗೆ ಹೈಕಮಾಂಡ್ ಮೂಲಕವೇ ಸೂಚನೆ ನೀಡಬಹುದು
ಎಂದು ಸಿದ್ದರಾಮಯ್ಯ ಸಮಾಧಾನಪಡಿಸಲು ಯತ್ನಿಸಿದರು ಎನ್ನಲಾಗಿದೆ.

ಆದರೆ, ಇದಾದ ನಂತರ ರಮೇಶ್ ಜಾರಕಿಹೊಳಿ ಅವರು ಪ್ರಸ್ತಾಪ ಮಾಡಿದ ವಿಚಾರಗಳು ಖುದ್ದು ಸಿದ್ದರಾಮಯ್ಯ ಅವರನ್ನು ಅವಾಕ್ಕಾಗಿಸಿದವು ಎನ್ನಲಾಗಿದೆ. ತಮ್ಮನ್ನು ಪಕ್ಷ ನಿರ್ಲಕ್ಷ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಾಸಕರ ತಂಡವೊಂದು ತಮ್ಮನ್ನು ನಂಬಿಕೊಂಡಿದೆ. ನಾನು ಪಕ್ಷದಲ್ಲಿ ಉಳಿಯಲೇಬೇಕು ಎಂದರೆ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಾತಿ ವೇಳೆ ನನ್ನೊಂದಿಗೆ ಇರುವ ಶಾಸಕರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಮೊದಲ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸೇರ್ಪಡೆ ಹಾಗೂ ನಿಗಮ ಮಂಡಳಿ ನೇಮಕ ವಿಚಾರ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಬೇಕಿದೆ. ದೆಹಲಿ ಭೇಟಿ ವೇಳೆ ಈ ವಿಚಾರವನ್ನು ಚರ್ಚಿಸುವುದಾಗಿ ಭರವಸೆ ನೀಡಿದರು ಎನ್ನುತ್ತವೆ ಮೂಲಗಳು.

ಈ ಹಂತದಲ್ಲಿ ರಮೇಶ್ ಜಾರಕಿಹೊಳಿ ಅವರು ತಮಗೆ ಹಾಗೂ ತಮ್ಮ ಗುಂಪಿನ ಶಾಸಕರಿಗೆ ಬಿಜೆಪಿಯಿಂದ ಆಹ್ವಾನ ಬಂದಿರುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ, ತಮಗೆ ಬಿಜೆಪಿಯಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯ ಭರವಸೆ ದೊರಕಿದೆ. ಪರಿಸ್ಥಿತಿ ಹೀಗಿರುವಾಗ ಈ ಮಟ್ಟದ ಹುದ್ದೆಯೇ ಕಾಂಗ್ರೆಸ್‌ನಲ್ಲಿ ದೊರೆಯಬೇಕು ಎಂಬ ಅಹವಾಲನ್ನು ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದಾರೆ. ಇದು ಖುದ್ದು ಸಿದ್ದರಾಮಯ್ಯ ಅವರನ್ನು ಅವಾಕ್ಕಾಗಿಸಿತು ಎನ್ನಲಾಗಿದೆ. 

ಇಂತಹ ಅವಾಸ್ತವಿಕ ಬೇಡಿಕೆಗಳನ್ನು ಮುಂದಿಡಬೇಡ. ಇಷ್ಟಕ್ಕೂ ಡಿಸಿಎಂ ಹುದ್ದೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕು.ಯಾವುದಕ್ಕೂ ನಾನು ದೆಹಲಿಗೆ ಹೋಗಿ ರಾಹುಲ್ ಗಾಂಧಿ ಭೇಟಿ ಮಾಡುವವರೆಗೂ ಯಾವುದೇ ತೀರ್ಮಾನವನ್ನು ಕೈಗೊಳ್ಳಬೇಡ. ನೀನು ನನ್ನ ಬೆಂಬಲಿಗ ಎಂದು ಗುರುತಿಸಿಕೊಂಡಿರುವೆ. ನಿನ್ನ ಇಂತಹ ಹೇಳಿಕೆ ಹಾಗೂ ನಡವಳಿಕೆಗಳು ಪಕ್ಷದಲ್ಲಿ ನನ್ನ ವರ್ಚಸ್ಸಿಗೂ ಧಕ್ಕೆ ತರುತ್ತವೆ. ಹೀಗಾಗಿ ಹೈಕಮಾಂಡ್ ಜತೆ ನಾನು ಮಾತನಾಡುವವರೆಗೂ ಯಾವುದೇ ನಿಲುವು ತೆಗೆದುಕೊಳ್ಳಬೇಡ ಎಂದು ಸಿದ್ದರಾಮಯ್ಯ ಖಡಕ್ ಆಗಿ ಸೂಚಿಸಿದ್ದು, ಇದಕ್ಕೆ ತುಸು ಬೇಸರದಿಂದಲೇ ಒಪ್ಪಿಗೆ ಸೂಚಿಸಿ ರಮೇಶ್ ಸಿದ್ದರಾಮಯ್ಯ ಅವರ ನಿವಾಸದಿಂದ ತೆರಳಿದರು ಎಂದು ಮೂಲಗಳು ಹೇಳಿವೆ.

Follow Us:
Download App:
  • android
  • ios