Asianet Suvarna News Asianet Suvarna News

ಈ ಶಾಲೆಯಲ್ಲಿ ಹನಿ ನೀರೂ ವ್ಯರ್ಥ ಆಗಲ್ಲ!

ಶಾಲೆಯಲ್ಲಿ ಸುಸಜ್ಜಿತ ಹಾಗೂ ವೈಜ್ಞಾನಿಕವಾಗಿ  ವಿನ್ಯಾಸ ಮಾಡಿದ ಮಳೆಕೊಯ್ಲಿನ ರಚನೆಯಿದೆ. ಶಾಲೆಯ ಮೇಲೆ ಹಾಗೂ ನೆಲಕ್ಕೆ ಬೀಳುವ ಹನಿ ಮಳೆ ನೀರು ಕೂಡ ವ್ಯರ್ಥವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಮಳೆಗಾಲದಲ್ಲಿ ಶಾಲೆಯ ಕ್ಯಾಂಪಸ್ಸಿನಲ್ಲಿ ಬೀಳುವ ನೀರು 2 ಲಕ್ಷ ಲೀಟರ್  ಸಾಮರ್ಥ್ಯದ ಕಲೆಕ್ಷನ್ ಟ್ಯಾಂಕಿಗೆ ಹೋಗುವಂತೆ ಜಲಮಾರ್ಗ ರಚಿಸಲಾಗಿದೆ. ಅದೇ ನೀರನ್ನು ಹೂದೋಟ, ಗಿಡ-ಮರಗಳಿಗೆ ಹಾಗೂ ಶಾಲೆಯ ಇತರ  ಅಗತ್ಯಗಳಿಗೆ ಬಳಸಲಾಗುತ್ತದೆ. 2004 ನೇ  ಇಸವಿಯಿಂದಲೂ ನೀರಿನ ಸಂರಕ್ಷಣೆ  ನಡೆಯುತ್ತಾ ಬಂದಿದೆ. ಇಲ್ಲಿ ಛಾವಣಿ ಮಳೆಕೊಯ್ಲು ಹಾಗೂ ಭೂಮೇಲ್ಮೈ  ಎನ್ನುವ ಎರಡೂ ಪದ್ಧತಿಗಳನ್ನು ಬಳಸಿಕೊಂಡು ವರ್ಷಕ್ಕೆ ಸುಮಾರು 2 ಲಕ್ಷ ಘನ ಅಡಿ ಮಳೆ ನೀರನ್ನು ಇಲ್ಲಿ ಪುನರ್ಬಳಕೆಗೆ ಸಿಗುವಂತೆ ನೋಡಿಕೊಳ್ಳಲಾಗುತ್ತದೆ!

Rain Water Harvesting Successful in this School

ಬೆಂಗಳೂರು (ಏ. 23):  ಅವತ್ತು ನಮಗೆ ರೇನ್ ವಾಟರ್ ಹಾರ್ವೆಸ್ಟಿಂಗ್ ಬಗ್ಗೆ ಪಾಠವಿತ್ತು. ಮಳೆ ನೀರು ಶೇಖರಣೆ ಮಾಡಿಟ್ಟುಕೊಂಡು ಅದನ್ನು ಪುನರ್ಬಳಕೆ ಮಾಡೋದು ಹೇಗೆ? ಅದನ್ನು ಭೂಮಿಯಲ್ಲಿ ಇಂಗಿಸಿ ಅಂತರ್ಜಲ ಹೆಚ್ಚುವಂತೆ ಮಾಡೋದು ಹೇಗೆ ಎಂದು ಟೀಚರ್ ಹೇಳುತ್ತಿದ್ದರು. ಆದರೆ, ನಮಗೆ ಅದು ಸರಿಯಾಗಿ ಇಳಿಯುತ್ತಿರಲಿಲ್ಲ. ನಮ್ಮೆಲ್ಲರ ಮುಖದಲ್ಲಿದ್ದ ಗೊಂದಲವನ್ನು ತಿಳಿದ ಟೀಚರ್ ನಮ್ಮನ್ನು ನೇರವಾಗಿ ಶಾಲೆಯ ಟೆರೇಸ್‌ಗೆ ಕರೆದುಕೊಂಡು ಹೋದರು. ಅಲ್ಲಿಂದ ಮಳೆ ನೀರು ಕೊಯ್ಲು ಪ್ರಾಕ್ಟಿಕಲ್ ಪಾಠ ಶುರುವಾಯ್ತು’ ಹೀಗೆ ಹೇಳಿದ್ದು, ಬೆಂಗಳೂರಿನ ಮಾರತ್ತಹಳ್ಳಿಯಲ್ಲಿರುವ  ವಾಗ್ದೇವಿ ವಿಲಾಸ್ ಶಾಲೆಯ ವಿದ್ಯಾರ್ಥಿನಿ ಪ್ರಚಿತಾ ಡಿ.ಎಂ.

‘ಮೊದಲಿಗೆ, ಟೆರೇಸ್ ಮೇಲೆ ಬಿದ್ದ ಮಳೆಯ ನೀರು ಹೇಗೆ ಪೈಪ್‌ನಲ್ಲಿ  ನೆಲಮಹಡಿಗೆ ಹೋಗುತ್ತೆ ಅಂತ ಟೀಚರ್ ತೋರಿಸಿದರು. ಆಮೇಲೆ ಗ್ರೌಂಡ್  ಫ್ಲೋರ್‌ಗೆ ಕರೆದುಕೊಂಡು ಹೋಗಿ ದೊಡ್ಡ ದೊಡ್ಡ ಅಂಡರ್‌ಗ್ರೌಂಡ್ ಟ್ಯಾಂಕ್ ತೋರಿಸಿದರು. ಆಮೇಲೆ ಅಲ್ಲಿಂದ ಓವರ್ ಫ್ಲೋ ಆಗುವ ನೀರು ಹೇಗೆ ಕಾಲುವೆಯಲ್ಲಿ ಹೋಗಿ ಬೋರ್‌ವೆಲ್, ಬಾವಿಗಳನ್ನು ತುಂಬುತ್ತೆ ಅಂತ  ವಿವರಿಸಿದರು. ಕೊನೆಯಲ್ಲಿ, ನೀವು ಶಾಲೆಯಲ್ಲಿ ಬಳಸುವ ಕ್ಲೀನ್ ವಾಟರ್ ಇದೆಯಲ್ಲ ಅದೆಲ್ಲ ಕಳೆದ ಮಳೆಗಾಲದಲ್ಲಿ ಹಿಡಿದಿಟ್ಟುಕೊಂಡ ಇದೇ ನೀರು ಅಂತ ಹೇಳಿ ನಮ್ಮಲ್ಲಿ ಅಚ್ಚರಿ ಹುಟ್ಟಿಸಿದರು!’ ಎಂದು ಹೇಳುವ ಶಾಲೆಯ ವಿದ್ಯಾರ್ಥಿಗಳಿಗೆ ಮಳೆನೀರು ಕೊಯ್ಲುವಿನ ಪ್ರಾಯೋಗಿಕ ಪಾಠ ಸಿಗುತ್ತಿದೆ.

ಇಲ್ಲಿ ಹನಿ ನೀರು ವ್ಯರ್ಥವಾಗಲ್ಲ: 
ಶಾಲೆಯಲ್ಲಿ ಸುಸಜ್ಜಿತ ಹಾಗೂ ವೈಜ್ಞಾನಿಕವಾಗಿ  ವಿನ್ಯಾಸ ಮಾಡಿದ ಮಳೆಕೊಯ್ಲಿನ ರಚನೆಯಿದೆ. ಶಾಲೆಯ ಮೇಲೆ ಹಾಗೂ ನೆಲಕ್ಕೆ ಬೀಳುವ ಹನಿ ಮಳೆ ನೀರು ಕೂಡ ವ್ಯರ್ಥವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಮಳೆಗಾಲದಲ್ಲಿ ಶಾಲೆಯ ಕ್ಯಾಂಪಸ್ಸಿನಲ್ಲಿ ಬೀಳುವ ನೀರು 2 ಲಕ್ಷ ಲೀಟರ್  ಸಾಮರ್ಥ್ಯದ ಕಲೆಕ್ಷನ್ ಟ್ಯಾಂಕಿಗೆ ಹೋಗುವಂತೆ ಜಲಮಾರ್ಗ ರಚಿಸಲಾಗಿದೆ. ಅದೇ ನೀರನ್ನು ಹೂದೋಟ, ಗಿಡ-ಮರಗಳಿಗೆ ಹಾಗೂ ಶಾಲೆಯ ಇತರ  ಅಗತ್ಯಗಳಿಗೆ ಬಳಸಲಾಗುತ್ತದೆ. 2004 ನೇ  ಇಸವಿಯಿಂದಲೂ ನೀರಿನ ಸಂರಕ್ಷಣೆ  ನಡೆಯುತ್ತಾ ಬಂದಿದೆ. ಇಲ್ಲಿ ಛಾವಣಿ ಮಳೆಕೊಯ್ಲು ಹಾಗೂ ಭೂಮೇಲ್ಮೈ  ಎನ್ನುವ ಎರಡೂ ಪದ್ಧತಿಗಳನ್ನು ಬಳಸಿಕೊಂಡು ವರ್ಷಕ್ಕೆ ಸುಮಾರು 2 ಲಕ್ಷ ಘನ ಅಡಿ ಮಳೆ ನೀರನ್ನು ಇಲ್ಲಿ ಪುನರ್ಬಳಕೆಗೆ ಸಿಗುವಂತೆ ನೋಡಿಕೊಳ್ಳಲಾಗುತ್ತದೆ!

ಇದಿಷ್ಟೇ ಅಲ್ಲದೇ ಇಲ್ಲಿರುವ ಮಳೆ ನೀರು ಸಂಗ್ರಹದ ಟ್ಯಾಂಕ್ ತುಂಬಿದ ನಂತರ  ಹೆಚ್ಚಾಗಿ ಹರಿಯುವ ನೀರು ಅಕ್ಕಪಕ್ಕದ ಬೋರ್‌ವೆಲ್ ಹಾಗೂ ಬಾವಿಗಳಿಗೆ ಹೋಗಿ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ. ಇಡೀ ಕ್ಯಾಂಪಸ್‌ನಲ್ಲಿ 12 ರೀಚಾರ್ಜಿಂಗ್ ಪಿಟ್‌ಗಳು, 2 ಲಕ್ಷ ಲೀಟರ್ ಸ್ಟೋರೇಜ್ ಟ್ಯಾಂಕ್ ಹಾಗೂ ಇವುಗಳಿಗೆ ಅಗತ್ಯವಿರುವ ಸುಸಜ್ಜಿತ ಜಲಮಾರ್ಗಗಳಿವೆ.
 
ಇದೆಲ್ಲ ಸಾಧ್ಯವಾಗಿದ್ದು ಹೇಗೆ?
ಶಾಲೆಯ ಚೇರ್ಮನ್ ಕೆ. ಹರೀಶ್ ಇಸ್ರೋದ ಮಾಜಿ ವಿಜ್ಞಾನಿ. ಇವರಿಗೆ ಪರಿಸರ ಸಂರಕ್ಷಣೆಯ ವಿಷಯದಲ್ಲಿ ಆಸಕ್ತಿ. ಅದಕ್ಕಾಗಿ ಪರಿಸರ ಕಾಳಜಿ ಕೇವಲ  ಕಾಳಜಿಯಾಗಷ್ಟೇ ಉಳಿಯದೆ ಅದರಿಂದ ನೇರವಾಗಿ ಶಾಲೆಗೂ ಸಮಾಜಕ್ಕೂ  ಪ್ರಯೋಜನವಾಗಬೇಕು ಎಂಬ ಉದ್ದೇಶದಿಂದ 2004 ರಿಂದ ತಮ್ಮ ಶಾಲೆಯಲ್ಲಿ ಮಳೆಕೊಯ್ಲು, ಹಸಿರು ಇಂಧನ ಉತ್ಪಾದನೆ, 100  ಕೆವಿಎ ಸಾಮರ್ಥ್ಯದ  ಸೋಲಾರ್ ವಿದ್ಯುತ್ ಘಟಕ, ತ್ಯಾಜ್ಯದಿಂದ ಗೊಬ್ಬರ ಉತ್ಪಾದನೆ, ಬಯೋಗ್ಯಾಸ್, ರದ್ದಿ ಕಾಗದದ ಪುನರ್ಬಳಕೆ, ತರಕಾರಿ ತೋಟ, ಮರಗಳನ್ನು ಬೆಳೆಸುವುದು ಹೀಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅವುಗಳ ಫಲವಾಗಿ ಇಂದು ಶಾಲೆಯ ಕ್ಯಾಂಪಸ್ ಹರಿಸಿನಿಂದ ನಳನಳಿಸುತ್ತ ಪರಿಸರಸ್ನೇಹಿ ತಾಣವಾಗಿ ರೂಪುಗೊಂಡಿದೆ.

‘ಭೂಮಿಯನ್ನು ಉಳಿಸಿಕೊಳ್ಳಬೇಕು ಅಂದರೆ ನಮ್ಮ ಬದುಕಿನಲ್ಲಿ ಪರಿಸರಸ್ನೇಹಿ  ವಿಧಾನಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಇದು ಕೇವಲ ಕಾನೂನು ಅಥವಾ ಕಾರ್ಯಾಗಾರಗಳಿಂದ ಆಗುವಂಥದ್ದಲ್ಲ. ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಈ ಬಗ್ಗೆ ಪ್ರಾಯೋಗಿಕವಾಗಿ ಅರಿವು ಮೂಡಿಸಿದರೆ ಮಾತ್ರ ಇದು ಸಾಧ್ಯ. ಆದ್ದರಿಂದಲೇ ನಮ್ಮ ಶಾಲೆಯಲ್ಲಿ ಮಳೆಕೊಯ್ಲಿನಿಂದ  ಹಿಡಿದು ನಾನಾ ಪರಿಸರಸ್ನೇಹಿ ಉಪಕ್ರಮಗಳನ್ನು ಅಳವಡಿಸಿಕೊಂಡಿದ್ದೇವೆ. ಅವುಗಳನ್ನು ಮಕ್ಕಳಿಗೆ ತೋರಿಸಿ, ಅವರೂ ಅವರವರ ಮನೆಗಳಲ್ಲಿ ಈ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಸ್ಫೂರ್ತಿ ತುಂಬುವ ಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಕೆ. ಹರೀಶ್. 

-ಕಿರಣ್ ಹೆಗ್ಗಡೆ

Follow Us:
Download App:
  • android
  • ios