Asianet Suvarna News Asianet Suvarna News

ಲೋಕಸಭಾ ಚುನಾವಣೆ : ಪಕ್ಷಗಳ ಆನ್ ಲೈನ್ ಸಮರ

ಲೋಕಸಭೆ ಚುನಾವಣೆ ಹೊಸ ರೀತಿಯ ಕಾಳಗಕ್ಕೆ ಸಜ್ಜಾಗುತ್ತಿದೆ.  ಸಾಂಪ್ರದಾಯಿಕ ಕಾದಾಟದ ಜತೆಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಸಮರ ಸಾರಲು ಸಜ್ಜಾಗಿವೆ. 

Political Party Campaign On Social Medias For LOk sabha Election
Author
Bengaluru, First Published Sep 17, 2018, 8:04 AM IST

ನವದೆಹಲಿ: ಸಾರ್ವತ್ರಿಕ ಚುನಾವಣೆಗಳು ಬಂತೆಂದರೆ ಅಬ್ಬರದ ಪ್ರಚಾರ, ರಾಜಕಾರಣಿಗಳ ವಾಕ್ಸಮರ ಸಾಮಾನ್ಯ. ಆದರೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಹೊಸ ರೀತಿಯ ಕಾಳಗಕ್ಕೆ ಸಜ್ಜಾಗುತ್ತಿದೆ.  ಸಾಂಪ್ರದಾಯಿಕ ಕಾದಾಟದ ಜತೆಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಸಮರ ಸಾರಲು ಸಜ್ಜಾಗಿವೆ. ಇದಕ್ಕಾಗಿ ದೊಡ್ಡ ಪಡೆಯನ್ನೇ ಸೃಷ್ಟಿ ಮಾಡಿದ್ದು, ಅಖಾಡಕ್ಕೆ ಧುಮುಕಲು ಸಿದ್ಧವಾಗಿವೆ. 

2014 ರ ಲೋಕಸಭೆ ಚುನಾವಣೆ ಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೆ ಹಿಂದೆ ಆನ್ ಲೈನ್ ಸಾಮಾಜಿಕ ಜಾಲತಾಣದ ಪಾತ್ರವೂ ದೊಡ್ಡದಿದೆ. ಬಿಜೆಪಿಯ ಈ ರಹಸ್ಯ ಅರಿತಿರುವ ಪ್ರತಿಪಕ್ಷ ಕಾಂಗ್ರೆಸ್ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರ ಮನಗೆಲ್ಲಲು ಪ್ರಯತ್ನ ನಡೆಸುತ್ತಿದೆ. ಸಿಪಿಎಂ ಹಾಗೂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕೂಡ ಸೈಬರ್ ಸೇನೆಗೆ ಈ ಬಾರಿ ಒತ್ತು ನೀಡುತ್ತಿರುವುದು ವಿಶೇಷ. 

ಪ್ರತಿ ರಾಜ್ಯದಲ್ಲೂ ವಾರ್ ರೂಂ: 2014 ರ ಲೋಕಸಭೆ ಚುನಾವಣೆ ಸೋಲಿನಿಂದ ಪಾಠ ಕಲಿತಿರುವ ಕಾಂಗ್ರೆಸ್ ಪಕ್ಷ, ಈ ಬಾರಿ ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ ವಿರುದ್ಧ ಮುಗಿಬೀಳಲು ಸಜ್ಜಾಗಿದೆ. ‘ಡಿಜಿಟಲ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಅಸ್ತಿತ್ವ ಬಹಳ ಹಿಂದೆಯೇ ಮೂಡಿದ್ದು, ಇದೀಗ ಪ್ರತಿ ರಾಜ್ಯಗಳಲ್ಲೂ ಡಿಜಿಟಲ್ ವಾರ್ ರೂಂಗಳನ್ನು ತೆರೆಯಲಾಗಿದೆ. ಪ್ರತಿ ರಾಜ್ಯದಲ್ಲೂ ಸಾಮಾಜಿಕ ಜಾಲತಾಣ ವಿಭಾಗಗಳಿದ್ದು, ಈಗ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದೆ’ ಎಂದು ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ಮಂಡ್ಯದ ಮಾಜಿ ಸಂಸದೆ ದಿವ್ಯ ಸ್ಪಂದನ (ರಮ್ಯಾ) ತಿಳಿಸಿದ್ದಾರೆ.  

ಸಾಮಾಜಿಕ ಜಾಲತಾಣ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ ಭಾರತದ ಮೊದಲ ಪಕ್ಷವಾಗಿರುವ ಬಿಜೆಪಿ ಈಗಲೂ ಡಿಜಿಟಲ್ ಕ್ಷೇತ್ರದಲ್ಲಿ ಬಲಶಾಲಿಯಾಗಿಯೇ ಇದೆ. ಅದರ ಪ್ರಬಲ ಸಂಘಟನೆ ಪ್ರತಿಪಕ್ಷಗಳ ಸವಾಲು ಎದುರಿಸಲು ಸಜ್ಜಾಗಿದೆ. ‘ನಮ್ಮಲ್ಲಿ ನುರಿತ ಪಡೆ ಹಾಗೂ ಬದ್ಧತೆ ಹೊಂದಿದ ಸ್ವಯಂ ಸೇವಕರ ಜಾಲವೇ ಇದೆ’ ಎಂದು ಬಿಜೆಪಿ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ತಿಳಿಸಿದ್ದಾರೆ. ವಿಶೇಷ ಎಂದರೆ ಈ ಬಾರಿ ಸಿಪಿಎಂ ಕೂಡ ಅಖಾಡಕ್ಕೆ ಧುಮುಕಿದೆ. 

‘ತಡವಾಗಿ ಸಾಮಾಜಿಕ ಜಾಲತಾಣ ಕ್ಷೇತ್ರ ಪ್ರವೇಶಿಸಿದ್ದೇವೆ. 2014 ರ ಬಳಿಕ ನಮಗೆ ಇದರ ಮಹತ್ವ ಅರಿವಾಯಿತು. ಎರಡು ವರ್ಷಗಳಲ್ಲಿ ಸಾಕಷ್ಟು ಜನರನ್ನು ತಲುಪಿದ್ದೇವೆ’ ಎಂದು ಪಕ್ಷದ ಸಾಮಾಜಿಕ ಜಾಲತಾಣ ತಂಡದ  ಸಮನ್ವಯಕಾರ ಪ್ರಾಂಜಲ್ ಹೇಳಿದ್ದಾರೆ. ಈ ನಡುವೆ, ಆಮ್ ಆದ್ಮಿ ಪಕ್ಷ ಕೂಡ ಭರ್ಜರಿ ಸಿದ್ಧತೆಯಲ್ಲಿ ತೊಡಗಿದೆ.  ‘ನಾವು ಸೀಕ್ರೆಟ್ ವಾರ್ ರೂಂ ಹೊಂದಿಲ್ಲ. ಬಿಜೆಪಿ ರೀತಿಯೂ ಕೆಲಸ ಮಾಡುವುದಿಲ್ಲ. ಸಾಕಷ್ಟು ಸ್ವಯಂ ಸೇವಕರು ನಮ್ಮಲ್ಲಿದ್ದಾರೆ’ ಎಂದು ಪಕ್ಷದ ಸಾಮಾಜಿಕ ಜಾಲತಾಣ ತಂತ್ರಜ್ಞ ಅಂಕಿತ್ ಲಾಲ್ ತಿಳಿಸಿದ್ದಾರೆ.

ಆನ್‌ಲೈನ್ ಸಮರ ಏಕೆ?

ವಿಶ್ವದಲ್ಲಿ ಚೀನಾ ಬಳಿಕ ಅತಿ ಹೆಚ್ಚು ಇಂಟರ್ನೆಟ್ ಬಳಸುವ ದೇಶ ಭಾರತ ಆಗಿದ್ದು, 46.21 ಕೋಟಿ ಜನರು ಅಂತರ್ಜಾಲದಲ್ಲಿದ್ದಾರೆ. 2019ರ ವೇಳೆಗೆ ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆ 25.82 ಕೋಟಿಗೆ ಏರುವ ನಿರೀಕ್ಷೆ ಇದೆ. 2016ರಲ್ಲಿ ಇದು 16.8 ಕೋಟಿಯಷ್ಟಿತ್ತು. ಹೀಗಾಗಿ ರಾಜಕೀಯ ಪಕ್ಷಗಳು ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿವೆ. 

Follow Us:
Download App:
  • android
  • ios