ಬೆಂಗಳೂರು (ಜು. 01): ಶುಶ್ರೂಷಕರು (ನರ್ಸ್‌ಗಳು) ಮತ್ತು ವೈದ್ಯರು (ಮೆಡಿಕಲ್‌ ಪ್ರಾಕ್ಟೀಷನರ್ಸ್‌) ಬೇರೆ ಬೇರೆಯಾಗಿರುವುದರಿಂದ ವೈದ್ಯಕೀಯ ನಿರ್ಲಕ್ಷ್ಯ ಆರೋಪದಡಿ ಶುಶ್ರೂಷಕರ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ವೈದ್ಯಕೀಯ ಪರಿಷತ್ತುಗೆ (ಕೆಎಂಸಿ) ಅಧಿಕಾರ ವ್ಯಾಪ್ತಿ ಇಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಉಡುಪಿ ಜಿಲ್ಲೆಯ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಶುಶ್ರೂಷಕರಾದ ಸಂಗೀತಾ ಶೆಟ್ಟಿಮತ್ತು ಸುಮಲತಾ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಬೆಂಗಳೂರು ನಿವಾಸಿ ಫಾತಿಮಾ ಬಾಯಿ ಅವರು 2010ರ ಅ.9ರಂದು ಕಸ್ತೂರಬಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮೃತರ ಮಗ ಮೊಹಮ್ಮದ್‌ ಕಸ್ತೂರಬಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯ ಆರೋಪದಡಿ ದೂರು ದಾಖಲಿಸಿದ್ದರು.

ಆ ಕುರಿತು ವಿಚಾರಣೆ ನಡೆಸಿದ್ದ ಕೆಎಂಸಿ, ನರ್ಸ್‌ಗಳಾದ ಸುಮಲತಾ ಮತ್ತು ಸಂಗೀತಾಶೆಟ್ಟಿವಿರುದ್ಧ ಕ್ರಮ ಜರುಗಿಸುವಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಶಿಫಾರಸು ಮಾಡಿತ್ತು. ಆ ಕ್ರಮವನ್ನು ಪ್ರಶ್ನಿಸಿ ಇಬ್ಬರು ಶುಶ್ರೂಷಕಿಯರು ಹಾಗೂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲ ಎನ್‌. ರವೀಂದ್ರನಾಥ್‌ ಕಾಮತ್‌ ವಾದ ಮಂಡಿಸಿ, ಕರ್ನಾಟಕ ವೈದ್ಯಕೀಯ ನೋಂದಣಿ ಕಾಯ್ದೆ-1961ರ ಪ್ರಕಾರ ಶುಶ್ರೂಷಕರು ವೈದ್ಯರಲ್ಲ. ಹೀಗಾಗಿ, ಶುಶ್ರೂಷಕಿಯರಾದ ಸುಮಲತಾ ಮತ್ತು ಸಂಗೀತಾ ಶೆಟ್ಟಿವಿರುದ್ಧ ವೈದ್ಯಕೀಯ ನಿರ್ಲಕ್ಷ್ಯ ಆರೋಪದಡಿ ಕ್ರಮ ಜರುಗಿಸುವಂತೆ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ಶಿಫಾರಸು ಮಾಡಲು ಕೆಎಂಸಿಗೆ ಯಾವುದೇ ಅಧಿಕಾರ ವ್ಯಾಪ್ತಿ ಇರುವುದಿಲ್ಲ.

ಮೇಲಾಗಿ 2015ರಲ್ಲೇ ಪ್ರಕರಣ ಸಂಬಂಧ ದೂರುದಾರ ಹಾಗೂ ಇಬ್ಬರು ಶುಶ್ರೂಷಕಿಯರ ನಡುವೆ ಒಪ್ಪಂದವಾಗಿ ಇತ್ಯರ್ಥವಾಗಿದೆ. ಹೀಗಾಗಿ ಕೆಎಂಸಿಯ ಶಿಫಾರಸು ಕಾನೂನು ಬಾಹಿರ ಕ್ರಮವಾಗಿದೆ, ಕೆಎಂಸಿಯು ವೈದ್ಯರ ವಿರುದ್ಧ ಮಾತ್ರ ಕ್ರಮ ಜರುಗಿಸಲು ಶಿಫಾರಸು ಮಾಡಬಹುದು ಎಂದು ಕೋರ್ಟ್‌ ಗಮನಕ್ಕೆ ತಂದಿದ್ದರು.

ಈ ವಾದವನ್ನು ಒಪ್ಪಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಶುಶ್ರೂಷಕರನ್ನು ವೈದ್ಯರೆಂದು ಪರಿಗಣಿಸಲು ಸಾಧ್ಯವಿಲ್ಲ. ಎಲ್ಲ ರೋಗಿಗಳಿಗೆ ವೈದ್ಯಕೀಯ ಸವಲತ್ತುಗಳನ್ನು ನರ್ಸ್‌ಗಳು ಸೂಕ್ತವಾಗಿ ಒದಗಿಸುವುದನ್ನು ಖಾತ್ರಿಪಡಿಸಲು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಕ್ರಮ ಜರುಗಿಸಬೇಕು.

ವೈದ್ಯಕೀಯ ವೃತ್ತಿಯು ಒಂದು ಪವಿತ್ರ ವೃತ್ತಿಯಾಗಿರುತ್ತದೆ. ಹೀಗಾಗಿ, ವೈದ್ಯಕೀಯ ನಿರ್ಲಕ್ಷ್ಯ ಆರೋಪದಡಿ ಶುಶ್ರೂಷಕರ ವಿರುದ್ಧ ಕ್ರಮ ಜರುಗಿಸಲಾಗದು. ಆದ್ದರಿಂದ ಪ್ರಕರಣದಲ್ಲಿ ಕೆಎಂಸಿಯ ಶಿಫಾರಸು ಕಾನೂನು ಬಾಹಿರವಾಗಿದೆ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಅರ್ಜಿಗಳನ್ನು ಪುರಸ್ಕರಿಸಿ, ಸುಮಲತಾ ಮತ್ತು ಸಂಗೀತ ಶೆಟ್ಟಿವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದಡಿ ಕ್ರಮ ಜರುಗಿಸುವಂತೆ ಕೆಎಂಸಿಯು ಕಸ್ತೂರ ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಮಾಡಿದ್ದ ಶಿಫಾರಸು ಅನ್ನು ರದ್ದುಪಡಿಸಿ ನ್ಯಾಯಪೀಠ ಆದೇಶಿಸಿತು.