ಡಿ.ಬಿ.ವಡವಡಗಿ ಮುದ್ದೇಬಿಹಾಳ

ಬೆಂಗಳೂರು[ಮೇ.08]: ಲಕ್ಷಾಂತರ ಹೆಕ್ಟೇರ್‌ ಜಮೀನಿಗೆ ನೀರಾವರಿ, ನೂರಾರು ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ ಕೃಷ್ಣಾ ನದಿಗೆ ಅಡ್ಡಲಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿ ನಿರ್ಮಿಸಿರುವ ಬಸವಸಾಗರ (ನಾರಾಯಣಪುರ) ಡ್ಯಾಂಗೆ ಮೂರೂವರೆ ತಿಂಗಳಿಂದ ಸೂಕ್ತ ಭದ್ರತೆಯೇ ಇಲ್ಲದಿರುವ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಉಗ್ರರ ಭೀತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೂ ಈ ಬೃಹತ್‌ ಡ್ಯಾಂನ ಭದ್ರತೆಯನ್ನು ನಿರ್ಲಕ್ಷಿಸಲಾಗಿದ್ದು, ಕೇವಲ 12 ಮಂದಿ ಪೊಲೀಸರು ಮತ್ತು ಬೆರಳೆಣಿಕೆಯ ಭದ್ರತಾ ಸಿಬ್ಬಂದಿ ಕಾಯುತ್ತಿದ್ದಾರೆ!

ಈ ಹಿಂದೆ ಬಸವರಾಜಸಾಗರ ಡ್ಯಾಂಗೆ ಭದ್ರತೆ ಹೊಣೆಗಾರಿಕೆ ಪಡೆದಿದ್ದ ಭದ್ರತಾ ಏಜೆನ್ಸಿ ಅವಧಿ 2019ರ ಜ.28ಕ್ಕೆ ಮುಗಿದಿದೆ. ಹೀಗಾಗಿ ಇಲ್ಲಿದ್ದ 40-50 ಸಿಬ್ಬಂದಿಯನ್ನು ಏಜೆನ್ಸಿ ಹಿಂಪಡೆದಿದೆ. ಹೊಸದಾಗಿ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದ್ದರೂ ಸ್ಥಳೀಯ ಶಾಸಕರ ತಿಕ್ಕಾಟದಿಂದಾಗಿ ತಾಂತ್ರಿಕ ಕಾರಣದ ನೆಪವೊಡ್ಡಿ ಅದನ್ನು ಮುಂದೂಡಲಾಗಿದೆ ಎಂಬ ಆರೋಪ ಇದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಜ.28ರಿಂದ ಇಲ್ಲಿಯವರೆæಗೆ ಅಗತ್ಯ ಭದ್ರತಾ ಸಿಬ್ಬಂದಿಯೇ ಇಲ್ಲಿ ನಿಯೋಜನೆಗೊಂಡಿಲ್ಲ.

ಹೀಗಾಗಿ ಡ್ಯಾಂನ 5 ಮುಖ್ಯ ಪ್ರವೇಶದ್ವಾರಗಳ ಪೈಕಿ ಸದ್ಯ 2ಕ್ಕೆ ಬೀಗ ಜಡಿಯಲಾಗಿದೆ. 3ಕ್ಕೆ ತಲಾ ಇಬ್ಬರಂತೆ ತಾತ್ಕಾಲಿಕವಾಗಿ ಖಾಸಗಿ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಪೊಲೀಸರು ಗೇಟುಗಳಿರುವ ಡ್ಯಾಂನ ಮುಖ್ಯ ಮೇಲ್ಭಾಗವನ್ನು ಮಾತ್ರ ಕಾಯುತ್ತಿದ್ದಾರೆ. ಉಳಿದಂತೆ ಗೇಟುಗಳಿರುವ ಕೆಳಭಾಗ, ಮುಂಭಾಗ, ಜಾವೂರ್‌ನಿಂದ ಆಂಧ್ರ ಕ್ಯಾಂಪ್‌ನ ಸಾಯಿಬಾಬಾ ದೇವಸ್ಥಾನ ಮಧ್ಯೆ ಬರುವ ಚಿತ್ತಾಪುರ ಬಳಿ ಎರಡು ಕಡೆ ಯಾರು ಬೇಕಾದರೂ ಪ್ರವೇಶಿಸುವಂತೆ ಒಡೆದಿರುವ ಕಾಂಪೌಂಡ್‌ ಭಾಗ, ಡ್ಯಾಂ ಮೇಲ್ಭಾಗದ ನಾಲತವಾಡ ಕಡೆ ಬರುವ ಆರ್‌ಎನ್‌ಎಸ್‌ ವಿದ್ಯುತ್‌ ಘಟಕದ ಗೇಟ್‌ ಬಳಿ ಯಾವುದೇ ಭದ್ರತೆ ಇಲ್ಲ. ಡ್ಯಾಂನಂಥ ಸೂಕ್ಷ್ಮ ಪ್ರದೇಶಗಳ ಭದ್ರತೆಗೆ ಇಷ್ಟೊಂದು ನಿಷ್ಕಾಳಜಿಯೇ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಟೆಂಡರ್‌ ವಿಳಂಬ ಏಕೆ?: ಡ್ಯಾಂನ ಭದ್ರತೆಗೆ ಸಿಬ್ಬಂದಿ ಒದಗಿಸಲು ಪ್ರತಿ ವರ್ಷ ಟೆಂಡರ್‌ ಕರೆಯಲಾಗುತ್ತದೆ. ಆರರಿಂದ ಎಂಟು ವರ್ಷಗಳ ವರೆಗೆ ಸತತವಾಗಿ ಕಾಂಗ್ರೆಸ್‌ ಶಾಸಕರ ಆಪ್ತರಾಗಿದ್ದ ನಾಗರಡ್ಡೆಪ್ಪ ಎನ್ನುವವರು ಟೆಂಡರ್‌ ಪಡೆದಿದ್ದರು. ಅವರ ಅವಧಿ ಜ.27ಕ್ಕೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಇ-ಟೆಂಡರ್‌ ಕರೆಯಲಾಗಿತ್ತು. 5 ಕಂಪನಿಗಳು ಟೆಂಡರ್‌ಗೆ ಅರ್ಜಿ ಹಾಕಿದ್ದವು. ಈ ಪೈಕಿ 3 ತಿರಸ್ಕೃತಗೊಂಡು ಎರಡು ಅಂತಿಮಗೊಂಡಿದ್ದವು. ಎರಡರಲ್ಲಿ ಬೆಂಗಳೂರು ಮೂಲದ ಕಂಪನಿಯೊಂದಕ್ಕೆ ಟೆಂಡರ್‌ ಅಂತಿಮಗೊಂಡಿತ್ತು. ಆದರೆ, ಫೆಬ್ರವರಿಯಲ್ಲಿ ಇನ್ನೇನು ಈ ಸಂಬಂಧ ಕಾರ್ಯಾದೇಶ ಹೊರಡಿಸಬೇಕು ಎನ್ನುವ ಹಂತದಲ್ಲಿ ಏಕಾಏಕಿ ತಾಂತ್ರಿಕ ಕಾರಣ ಮುಂದಿಟ್ಟುಕೊಂಡು ತಡೆ ಒಡ್ಡಲಾಯಿತು. ಹಳೆಯ ಏಜೆನ್ಸಿಗೆ ಗುತ್ತಿಗೆ ನೀಡಬೇಕು ಎನ್ನುವ ಒತ್ತಡದಿಂದಲೇ ಈ ರೀತಿ ಮಾಡಲಾಯಿತು ಎಂದು ಹೇಳಲಾಗುತ್ತಿದೆ. ನಂತರ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೊಂಡಿದ್ದರಿಂದ ಒಟ್ಟಾರೆ ಟೆಂಡರ್‌ ಪ್ರಕ್ರಿಯೆಗೆ ಬ್ರೇಕ್‌ ಬಿದ್ದಿದೆ. ಇದರಿಂದಾಗಿ ಡ್ಯಾಂಗೀಗ ಸೂಕ್ತ ಭದ್ರತೆ ಇಲ್ಲದಂತಾಗಿದೆ.

ಪ್ರತಿಷ್ಠೆಯ ತಿಕ್ಕಾಟಕ್ಕೆ ಡ್ಯಾಂ ಭದ್ರತೆ ನಿರ್ಲಕ್ಷ್ಯ?: ಯಾದಗಿರಿ, ರಾಯಚೂರು ಜಿಲ್ಲೆಗಳ ಮೂವರು (ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌) ಶಾಸಕರ ನಡುವೆ ಭದ್ರತಾ ಸಿಬ್ಬಂದಿ ಟೆಂಡರ್‌ ವಿಚಾರದಲ್ಲಿ ನಡೆಯುತ್ತಿರುವ ಪ್ರತಿಷ್ಠೆಯ ತಿಕ್ಕಾಟವೇ ಟೆಂಡರ್‌ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ಆರರಿಂದ ಎಂಟು ವರ್ಷಗಳ ಕಾಲ ಟೆಂಡರ್‌ ಹಿಡಿದಿದ್ದ ನಾಗರಡ್ಡೆಪ್ಪ ಕಾಂಗ್ರೆಸ್‌ ಶಾಸಕರ ಆಪ್ತ. ಆದರೆ ಈ ಬಾರಿ ಬೇರೆಯವರಿಗೆ ಕೊಡಿಸಬೇಕು ಎಂದು ಜೆಡಿಎಸ್‌ ಶಾಸಕರೊಬ್ಬರು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಬಿಜೆಪಿ ಶಾಸಕರ ಒತ್ತಾಸೆಯೂ ಇದೆ. ಹೀಗಾಗಿ ಸ್ಥಳೀಯ ರಾಜಕಾರಣದ ತಿಕ್ಕಾಟದಿಂದ ಡ್ಯಾಂನ ಭದ್ರತೆಗೆ ಪೆಟ್ಟು ನೀಡುತ್ತಿದೆ.

ಭದ್ರತಾ ವ್ಯವಸ್ಥೆ ಹೇಗಿದೆ?:

ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಹಂಚಿಹೋಗಿರುವ ಈ ಬೃಹತ್‌ ಡ್ಯಾಂ ಕಾಯುವ ಹೊಣೆ ಈ ಮೂರು ಜಿಲ್ಲೆಗಳ ಡಿಆರ್‌ ಪೊಲೀಸರದ್ದು. ಡ್ಯಾಂನ ಉತ್ತರ ಭಾಗದಲ್ಲಿ ವಿಜಯಪುರ (1 ಎಎಸೈ, 4 ಪಿಸಿ), ಮಧ್ಯಭಾಗದಲ್ಲಿ ಯಾದಗಿರಿ (1ಎಚ್‌ಸಿ, 2 ಪಿಸಿ), ದಕ್ಷಿಣ ಭಾಗದಲ್ಲಿ ರಾಯಚೂರು (1ಎಚ್‌ಸಿ, 2 ಪಿಸಿ) ಡಿಆರ್‌ ಪೊಲೀಸರು ನಿಯೋಜಿಸಲಾಗಿದೆ. ಡ್ಯಾಂನ ಸಂರಕ್ಷಿತ ವಲಯದೊಳಗೆ ಪ್ರವೇಶಿಸಲು ಉತ್ತರ ಭಾಗದಿಂದ ದಕ್ಷಿಣ ಭಾಗದವರೆಗೆ ಒಟ್ಟು 5 ಮುಖ್ಯ ಪ್ರವೇಶದ್ವಾರಗಳಿವೆ. ಇವುಗಳನ್ನು ಕಾಯುವ ಹೊಣೆ ಹೊರಗುತ್ತಿಗೆಯ ಭದ್ರತಾ ಸಿಬ್ಬಂದಿ ಕೆಲಸ.

ಇ-ಟೆಂಡರ್‌ಗೆ 5 ಅರ್ಜಿಗಳು ಬಂದಿದ್ದು, 3 ತಿರಸ್ಕೃತಗೊಂಡಿವೆ. ಬೆಂಗಳೂರು ಮೂಲದ ಕಂಪನಿ ಹಾಗೂ ನಾಗರಡ್ಡೆಪ್ಪ ಕಂಪನಿ ಅಂತಿಮಗೊಂಡಿದ್ದವು. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೊಂಡಿದ್ದರಿಂದ ಟೆಂಡರ್‌ ಅಂತಿಮಗೊಳಿಸಿಲ್ಲ. ಬೆಂಗಳೂರು ಕಂಪನಿ ತಾಂತ್ರಿಕ ದೋಷದಿಂದ ತಿರಸ್ಕೃತಗೊಂಡಿದೆ. ನಾಗರಡ್ಡೆಪ್ಪ ಅವರಿಗೆ ಟೆಂಡರ್‌ ಅಂತಿಮಗೊಂಡಿದೆ. ನೀತಿ ಸಂಹಿತೆ ಮುಗಿದ ಮೇಲೆ ಕಾರ್ಯಾದೇಶ ಕೊಡಲಾಗುತ್ತದೆ.

-ಶಂಕರ್‌ ನಾಯ್ಕೋಡಿ, ಇಇ, ಕೆಬಿಜೆಎನ್ನೆಲ್‌ ಸಿಇ ಕಚೇರಿ, ನಾರಾಯಣಪುರ