ಮಂಡ್ಯ :  ಸಮುದ್ರದ ನೆಂಟಸ್ಥನ ಉಪ್ಪಿಗೆ ಬರ’ ಎನ್ನುವ ಹಾಗೆ ಕೃಷ್ಣರಾಜಸಾಗರ ಭರ್ತಿಯಾಗಿ ಲಕ್ಷಾಂತರ ಕ್ಯುಸೆಕ್‌ ನೀರು ಸಮುದ್ರ ಸೇರಿದರೂ ಮಂಡ್ಯ ಜಿಲ್ಲೆ ಮಾತ್ರ ಕಳೆದ ನಾಲ್ಕು ವರ್ಷಗಳಿಂದ ಬರದ ಶಾಪದಿಂದ ಮುಕ್ತವಾಗಿಲ್ಲ.

ಈ ಬಾರಿ ಸಾಕಷ್ಟುಮಳೆ ಬಂದಿದೆ. ಆದರೆ ಸರಿಯಾದ ಸಮಯಕ್ಕೆ ಬಂದಿಲ್ಲ. ಪರಿಣಾಮ ಬೆಳೆ ಒಣಗಿ ಹೋಗಿದೆ. ಕೆಲವು ಕಡೆ ಮೊಳಕೆ ಹಂತದಲ್ಲೇ ಬೆಳೆ ನಾಶವಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆಯನ್ನು ಎದುರಿಸುವ ಜಿಲ್ಲೆಯ ಕೆ.ಆರ್‌. ಪೇಟೆ ತಾಲೂಕು ಒಂದನ್ನು ಹೊರತುಪಡಿಸಿ 6 ತಾಲೂಕುಗಳು ಬರಪೀಡಿತವಾಗಿವೆ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ.

ಬೆಳೆ ಎಷ್ಟುನಷ್ಟ?:  ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದ್ದರಿಂದ ಮಳೆಯಾಶ್ರಿತ ಪ್ರದೇಶಗಳಲ್ಲಿ ರಾಗಿ, ಜೋಳ, ನೆಲಗಡಲೆ, ಅಲಸಂದೆ, ತೊಗರಿ, ಸೇರಿ ಒಟ್ಟು 28 168 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ರಾಗಿ 24394 ಹೆಕ್ಟೇರ್‌, ಮುಸುಕಿನ ಜೋಳ 1914 ಹೆಕ್ಟೇರ್‌, ತೊಗರಿ 101 ಹೆಕ್ಟೇರ್‌, ಅಲಸಂದೆ 1521 ಹೆಕ್ಟೇರ್‌, ನೆಲಗಡಲೆ 197 ಹಾಗೂ ಎಳ್ಳು ಮತ್ತು ಇತರ ಬೆಳೆ 41 ಹೆಕ್ಟೇರ್‌ ಪ್ರದೇಶದ ಬೆಳೆ ನಾಶವಾಗಿರುವುದಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ಆದ್ಯತೆಗಳು ಏನು?:  ಬರ ಇದ್ದರೂ ಬೋರ್‌ವೆಲ್‌ಗಳಲ್ಲಿ ನೀರು ಸಿಗುತ್ತಿದೆ. ಆದರೆ ಪರಿಸ್ಥಿತಿ ಇದೇ ರೀತಿ ಇರುತ್ತದೆ ಎನ್ನುವ ಹಾಗಿಲ್ಲ. ಬಿರುಬೇಸಿಗೆಯ ದಿನಗಳು ಹತ್ತಿರವಿದ್ದು ಮುಂದಿನ ದಿನಗಳನ್ನು ಎದುರಿಸಲು ಸಜ್ಜಾಗಬೇಕಿದೆ. ಒಮ್ಮೆ ಬೇಸಿಗೆ ಬಂತೆಂದರೆ ಕೃಷಿಗಿರಲಿ, ಕುಡಿಯಲು ನೀರಿಲ್ಲದ ಪರಿಸ್ಥಿತಿ ಪ್ರತಿ ವರ್ಷ ಉದ್ಭವವಾಗುತ್ತಿದೆ.

ಪ್ರತಿ ತಾಲೂಕಿಗೆ 50 ಲಕ್ಷ ರು. ಬರ ಪರಿಹಾರ ಅನುದಾನವನ್ನು ನೀಡಲಾಗಿದ್ದು, ಸದ್ಯಕ್ಕೆ 25 ಲಕ್ಷ ರು.ಗಳನ್ನು ಸರ್ಕಾರ ತುರ್ತಾಗಿ ನೀಡಿದೆ. ತಾಲೂಕು ಕೇಂದ್ರಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್‌ ರಚಿಸಲಾಗಿದೆ. ಈ ತಂಡದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಇರುತ್ತಾರೆ. ತಾಲೂಕಿನ ಯಾವುದೇ ಹಳ್ಳಿಯಲ್ಲಿ ಸಮಸ್ಯೆಗಳನ್ನು ಇರುವುದನ್ನು ಗ್ರಾ.ಪಂ.ಗಳ ಮೂಲಕ ಮಾಹಿತಿ ಪಡೆದು ತಂಡ ಮುಖ್ಯಸ್ಥರು ಚರ್ಚೆ ಮಾಡಿದ ನಂತರ ಯೋಜನೆಗೆ ಅನುದಾನ ಖರ್ಚು ಮಾಡಲಾಗುತ್ತದೆ.

ಸದ್ಯಕ್ಕೆ ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ. ಕಳೆದ ವರ್ಷದ ಮೇವು ಇನ್ನೂ ದಾಸ್ತಾನು ಇದೆ. ಕೆಲವು ಕಡೆ ಮೇವು ತೊಂದರೆಯಾಗುವ ತಾಲೂಕುಗಳಲ್ಲಿ ಈಗಿನಿಂದಲೇ ಮೇವಿನ ಕೊರತೆಯನ್ನು ಪೂರೈಕೆ ಮಾಡಲು ಚಿಂತನೆಗಳು ನಡೆದಿವೆ.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಬಿಡುಗಡೆಯಾಗಿರುವ ಒಟ್ಟು 36.78 ಕೋಟಿ ರು. ಅನುದಾನಕ್ಕೆ ಕ್ರಿಯಾ ಯೋಜನೆ ಪಡೆದು ಆ ನಂತರದಲ್ಲಿ ತುರ್ತು ಕಾಮಗಾರಿಗಳಿಗೆ ಖರ್ಚು ಮಾಡಿದ್ದ ಹಣ (ಸ್ಪಿಲ್‌ ಓವರ್‌) 16 ಕೋಟಿ ರು. ಹಣ ಕಡಿತಗೊಳಿಸಿ ಕೇವಲ 20 ಕೋಟಿ ರು.ಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಯಾಕೆ ಈ ರೀತಿ ಅಧಿಕಾರಿಗಳು ಮಾಡಿದರು ಯಕ್ಷ ಪ್ರಶ್ನೆಯಾಗಿದೆ.