ಬೆಂಗಳೂರು (ಏ. 22): ಜನಪ್ರಿಯ ತಾರೆ, ಕಾಂಗ್ರೆಸ್ ವಕ್ತಾರೆ ಖುಷ್ಬೂ ಸುಂದರ್ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇದು ಸಿನಿಮಾಗಾಗಿ ಅಲ್ಲ, ಬಿಜೆಪಿಯ ರಾಜಕೀಯ ದಾಳಿಗೆ ತಿರುಗೇಟು ನೀಡಲು ಖುಷ್ಬೂ ಹೆಸರು ಬದಲಿಸಿಕೊಂಡಿದ್ದಾರೆ.

ಆರಂಭದಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು, ಖುಷ್ಬೂ ಎಂದು ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಆದರೆ ಅವರ ನಿಜವಾದ ಹೆಸರು ‘ನಖಟ್ ಖಾನ್’ ಎಂಬ ವಿಷಯ ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ದಾಳಿ ಪ್ರಾರಂಭಿಸಿತ್ತು.
‘ಖುಷ್ಬೂ ತಮ್ಮ ಗುರುತನ್ನು ಮರೆಮಾಚುತ್ತಿದ್ದಾರೆ. ಅವರು ತಮ್ಮ ಧರ್ಮವನ್ನು ಕೀಳಾಗಿ ನೋಡುತ್ತಿದ್ದಾರೆ. ಹೆಸರನ್ನು ಮುಚ್ಚಿಡುತ್ತಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟೀಕರಣ ನೀಡಬೇಕು' ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನೇ ಆರಂಭಿಸಿತು. 

ಇದೀಗ, ಬಿಜೆಪಿಗೆ ತಿರುಗೇಟು ನೀಡಿರುವ ಖುಷ್ಬೂ, ತಮ್ಮ ಹೆಸರನ್ನು ಟ್ವಿಟರ್‌ನಲ್ಲಿ ಬದಲಾಯಿಸಿಕೊಂಡಿದ್ದಾರೆ.  ‘ಖುಷ್ಬೂ ಸುಂದರ್... ಬಿಜೆಪಿಗಾಗಿ ನಖಟ್ ಖಾನ್' ಎಂದು ಟ್ವಿಟರ್​​ನಲ್ಲಿ ಬದಲಿಸಿಕೊಂಡಿದ್ದಾರೆ..
 ನಖಟ್ ನನ್ನ ತಂದೆತಾಯಿ ಇಟ್ಟ ಹೆಸರು. ಧರ್ಮದ ಜತೆಗೆ ರಾಜಕೀಯ ಬೆರೆಸುವುದು ಬಿಜೆಪಿಯವರಿಗೆ ಅಭ್ಯಾಸವಾಗಿದೆ. ಅವರಿಗೆ ಬುದ್ಧಿ ಕಲಿಸಲು ಹೆಸರು ಬದಲಾಯಿಸಿಕೊಂಡಿದ್ದೇನೆ' ಅಂತ ಖುಷ್ಬು ತಿರುಗೇಟು ನೀಡಿದ್ದಾರೆ.