Asianet Suvarna News Asianet Suvarna News

ನೂತನ ಸಚಿವರ ಸಂಪೂರ್ಣ ಪ್ರೊಫೈಲ್‌


ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊದಲ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕರುಗಳ ಕಿರುಪರಿಚಯ ಇಲ್ಲಿದೆ. ಅವರ ಶಿಕ್ಷಣ, ರಾಜಕೀಯ ಜೀವನದ ಮಾಹಿತಿ ನಿಮಗಾಗಿ. 

Karnataka New Minister's Profile

ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊದಲ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕರುಗಳ ಕಿರುಪರಿಚಯ ಇಲ್ಲಿದೆ. ಅವರ ಶಿಕ್ಷಣ, ರಾಜಕೀಯ ಜೀವನದ ಮಾಹಿತಿ ನಿಮಗಾಗಿ. 

ಹೆಸರು: ಡಿ.ಕೆ.ಶಿವಕುಮಾರ್‌ (ಕಾಂಗ್ರೆಸ್‌)

ಕ್ಷೇತ್ರ: ಕನಕಪುರ

ಜಾತಿ: ಒಕ್ಕಲಿಗ

ವಿದ್ಯಾರ್ಹತೆ: ಎಂಎ

7 ಬಾರಿ ಶಾಸಕ, 4ನೇ ಬಾರಿ ಸಚಿವ

ಕಾಂಗ್ರೆಸ್‌ನ ಪ್ರಬಲ ನಾಯಕ ಡಿ.ಕೆ. ಶಿವಕುಮಾರ್‌ ಇತ್ತೀಚಿನ ವರ್ಷಗಳಲ್ಲಿ ಪಕ್ಷದ ಪಾಲಿಗೆ ಟ್ರಬಲ್‌ ಶೂಟರ್‌ ಎನಿಸಿದ್ದಾರೆ. ಸಮಸ್ಯೆ ಬಂದಾಗ ಪಕ್ಷದ ಪರ ನಿಲ್ಲುವ ಅವರಿಗೆ ಪ್ರಮುಖ ಸ್ಥಾನ ದೊರೆಯುವಾಗ ಸದಾ ಸಮಸ್ಯೆ ಕಾಡಿದೆ. 1985ರಲ್ಲಿ ಮೊದಲ ಬಾರಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ, ಜನತಾ ಪಕ್ಷದ ಎಚ್‌.ಡಿ.ದೇವೇಗೌಡರ ವಿರುದ್ಧ ಸೊಲುನುಭವಿಸಿದರು. 1987ರಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದರು. 1989ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿ ಬಂದೀಖಾನೆ ಸಚಿವರಾದರು. 1994ರಲ್ಲಿ ಟಿಕೆಟ್‌ ಕೈ ತಪ್ಪಿದ ಕಾರಣ ಪಕ್ಷೇತರವಾಗಿ ಸ್ಪರ್ಧಿಸಿ 400 ಮತಗಳ ಅಂತರದಿಂದ ಗೆಲುವು ಸಾಧಿಸಿದರು. 1999ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ 13 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದರು. ಕನಕಪುರ ಕ್ಷೇತ್ರ ಮತ್ತು ಸಾತನೂರು ವಿಲೀನಗೊಂಡು ಕನಕಪುರ ವಿಧಾನಸಭಾ ಕ್ಷೇತ್ರವಾದಾಗ 2008ರ ಚುನಾವಣೆಯಲ್ಲಿ ಡಿ.ಎಂ.ವಿಶ್ವನಾಥ್‌, ಅನಂತರ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಶಿವಕುಮಾರ್‌ ಪಕ್ಷದಲ್ಲೂ ಕಾರ್ಯಾಧ್ಯಕ್ಷ ಹುದ್ದೆ ಹಾಗೂ ಹಾಲಿ ಚುನಾವಣೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆ ನಿಭಾಯಿಸಿದ್ದರು.

-------

ಹೆಸರು: ಸಿ.ಪುಟ್ಟರಂಗಶೆಟ್ಟಿ(ಕಾಂಗ್ರೆಸ್‌)

ಜಾತಿ: ಉಪ್ಪಾರ

ಕ್ಷೇತ್ರ: ಚಾಮರಾಜನಗರ

ವಿದ್ಯಾರ್ಹತೆ: ಬಿ.ಎ

ಶಾಸಕ: ಮೂರನೇ ಬಾರಿ

ಸಚಿವ : ಇದೇ ಮೊದಲು

ಮೂಲತಃ ಯಳಂದೂರು ತಾಲೂಕಿನ ಕೃಷಿಕರಾದ ಸಿ.ಪುಟ್ಟರಂಗಶೆಟ್ಟಿಅವರು ಮಂಡಲ ಪಂಚಾಯತ್‌ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ಯಳಂದೂರು ಟಿಎಪಿಸಿಎಂಎಸ್‌ ಅಧ್ಯಕ್ಷ, ಚಾಮರಾಜನಗರ ಎಪಿಎಂಸಿ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ 1995ರಲ್ಲಿ ಮೈಸೂರು ಜಿಲ್ಲಾ ಪಂಚಾಯತ್‌ಗೆ ಆಯ್ಕೆಯಾಗಿ 2005ರಲ್ಲಿ ಚಾಮರಾಜನಗರ ಜಿ.ಪಂ. ಸದಸ್ಯ, ನಂತರ ಜಿಲ್ಲಾ ಪಂಚಾಯತ್‌ ಸಾಮಾಜಿಕ ಮತ್ತು ನ್ಯಾಯ ಸ್ಧಾಯಿ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2008ರಿಂದ ಮೂರು ಚುನಾವಣೆಗಳಲ್ಲಿ ಚಾಮರಾಜನಗರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆಯಾಗಿ ಹ್ಯಾಟ್ರಿಕ್‌ ದಾಖಲಿಸಿದ್ದರು. ಇದೀಗ ಮೊದಲ ಬಾರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ವೀರಶೈವ- ಲಿಂಗಾಯತ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಉಪ್ಪಾರ ಜನಾಂಗದ ಪುಟ್ಟರಂಗಶೆಟ್ಟಿಹ್ಯಾಟ್ರಿಕ್‌ ಗೆಲುವು ಮೂಲಕ ಹೊಸ ಜಾತಿ ಸಮೀಕರಣ ಬರೆದಿದ್ದಾರೆ. 2008ಕ್ಕೂ ಮೊದಲು ಇಲ್ಲಿ ವೀರಶೈವ-ಲಿಂಗಾಯತರೇ ಆಯ್ಕೆಯಾಗುತ್ತಿದ್ದರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿ ಹಾಗೂ ರಾಜ್ಯ ರಸ್ತೆ ನಿರ್ಮಾಣ ನಿಗಮದ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದರು. ಇವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.

-------

ಹೆಸರು: ಆರ್‌.ವಿ.ದೇಶಪಾಂಡೆ (ಕಾಂಗ್ರೆಸ್‌)

ಜಾತಿ: ಬ್ರಾಹ್ಮಣ

ವಿದ್ಯಾರ್ಹತೆ: ಬಿಎ, ಎಲ್‌ಎಲ್‌ಬಿ

ಕ್ಷೇತ್ರ: ಹಳಿಯಾಳ

ಶಾಸಕ: 8ನೇ ಬಾರಿ

ಸಚಿವ: 6ನೇ ಬಾರಿ

1947ರಲ್ಲಿ ಉತ್ತರ ಕನ್ನಡದ ಹಳಿಯಾಳದಲ್ಲಿ ಜನಿಸಿದ ದೇಶಪಾಂಡೆ ಅವರದ್ದು ಸುದೀರ್ಘ ರಾಜಕೀಯ ಜೀವನ. ಹಳಿಯಾಳ ಕ್ಷೇತ್ರದಲ್ಲಿ 9 ಬಾರಿ ಚುನಾವಣೆಗೆ ಸ್ಪರ್ಧಿಸಿ 8 ಬಾರಿ ಗೆಲುವು ಸಾಧಿಸಿರುವ ಅವರು, ಹಲವು ಸರ್ಕಾರಗಳಲ್ಲಿ ಆರು ಬಾರಿ ವಿವಿಧ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರೂ ಆಗಿದ್ದವರು. 1985-86ರಲ್ಲಿ ಪ್ರಥಮ ಬಾರಿ ಸಣ್ಣ ಕೈಗಾರಿಕೆ ಸಚಿವರಾದರು. ನಂತರ ವಿವಿಧ ಸರ್ಕಾರಗಳಲ್ಲಿ ಕೃಷಿ ಸಚಿವರಾಗಿ, ವಸತಿ ಹಾಗೂ ನಗರಾಭಿವೃದ್ಧಿ ಸಚಿವರಾಗಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿ, ಸಹಕಾರ ಸಹಕಾರ ಸಚಿವರಾಗಿ, ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲೂ ಉನ್ನತ ಶಿಕ್ಷಣ ಮತ್ತು ಬೃಹತ್‌ ಕೈಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಜನತಾದಳದ ಮೂಲಕ ರಾಜಕೀಯ ಇನಿಂಗ್ಸ್‌ ಆರಂಭಿಸಿದ ದೇಶಪಾಂಡೆ 1999ರಲ್ಲಿ ಜನತಾದಳದಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ರಾಮಕೃಷ್ಣ ಹೆಗಡೆ ಗರಡಿಯಲ್ಲಿ ಪಳಗಿದ ಅವರಿಗೆ ರಾಜಕೀಯದಲ್ಲಿ ಹೆಗಡೆ ಅವರ ಪಟ್ಟುಗಳೆಲ್ಲ ಕರತಲಾಮಲಕ. ಸುದೀರ್ಘ ಅವಧಿಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

-------

ಹೆಸರು: ಎನ್‌.ಎಚ್‌.ಶಿವಶಂಕರರೆಡ್ಡಿ (ಕಾಂಗ್ರೆಸ್‌)

ಜಾತಿ: ರೆಡ್ಡಿ ಒಕ್ಕಲಿಗ

ವಿದ್ಯಾರ್ಹತೆ: ಬಿಎಸ್‌ಸಿ (ಕೃಷಿ)

ಕ್ಷೇತ್ರ: ಗೌರಿಬಿದನೂರು

ಶಾಸಕ: 5ನೇ ಬಾರಿ

ಸಚಿವ: ಇದೇ ಮೊದಲು

ಸತತ 5ನೇ ಬಾರಿಗೆ ಗೌರಿಬಿದನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1973ರಲ್ಲಿ ಬಿಎಸ್‌ಸಿ (ಕೃಷಿ) ವಿದ್ಯಾಭ್ಯಾಸ ಮುಗಿಸಿರುವ ಅವರು, ಮೊದಲ ಬಾರಿಗೆ 1978ರಲ್ಲಿ ನಾಗಸಂದ್ರ ಗ್ರಾ.ಪಂ ಅಧ್ಯಕ್ಷರಾಗಿ ರಾಜಕೀಯ ಪ್ರವೇಶ ಮಾಡಿದರು. ಆ ನಂತರ ಚಿಕ್ಕ ಕುರುಗೊಡು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ನಾಗಸಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. 1987ರಿಂದ 1992ರವರೆಗೆ ದೊಡ್ಡಕುರುಗೋಡು ಮಂಡಲ ಪಂಚಾಯತಿ ಅಧ್ಯಕ್ಷರಾಗಿ, 1995ರಲ್ಲಿ ತಾಲೂಕು ಪಂಚಾಯತಿ ಸದಸ್ಯರಾಗಿ ಆಯ್ಕೆ. 1999ರಲ್ಲಿ ಕಾಂಗ್ರೆಸ್‌ನಿಂದ ವಿಧಾನಸಭೆ ಟಿಕೆಟ್‌ ದೊರೆಯದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಹಂತದಲ್ಲಿಯೇ ವಿಧಾನಸಭೆ ಪ್ರವೇಶಿಸಿದವರು ಇಂದಿಗೂ ಸರಣಿ ಗೆಲುವಿನೊದಿಗೆ ಸಾಗುತ್ತಿದ್ದಾರೆ. ಐದು ಬಾರಿ ಶಾಸಕರಾದರೂ ಸಚಿವರಾಗುವ ಅದೃಷ್ಟದಿಂದ ವಂಚಿತರಾಗಿದ್ದರು. ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ನಂತರ ಸಿ. ಬೈರೇಗೌಡರ ನೇತೃತ್ವದಲ್ಲಿ ಜೆಡಿಯು ಪಕ್ಷ ಸೇರಿದ್ದರು. ಬೈರೇಗೌಡರು ಮೃತ ಪಟ್ಟನಂತರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿ ನಾಲ್ಕು ಬಾರಿ ಕಾಂಗ್ರೆಸ್‌ ಸದಸ್ಯರಾಗಿಯೇ ಆಯ್ಕೆಯಾಗಿರುವ ಇವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

-------

ಹೆಸರು: ಶಿವಾನಂದ ಪಾಟೀಲ (ಕಾಂಗ್ರೆಸ್‌)

ಜಾತಿ: ಲಿಂಗಾಯತ

ಶಿಕ್ಷಣ: ಡಿಪ್ಲೋಮಾ

ಕ್ಷೇತ್ರ: ಬಸವನ ಬಾಗೇವಾಡಿ

ಶಾಸಕ: 5ನೇ ಬಾರಿ

ಸಚಿವ: ಇದೇ ಮೊದಲು

ಸಚಿವ ಶಿವಾನಂದ ಪಾಟೀಲ ಐದು ಬಾರಿ ಶಾಸಕ ಸ್ಥಾನ ಅಲಂಕರಿಸಿದ್ದು, ಚೊಚ್ಚಲ ಬಾರಿಗೆ ಸಚಿವ ಸ್ಥಾನ ಒಲಿದು ಬಂದಿದೆ. 1962ರ ಏ.23ರಂದು ಜನಿಸಿದ ಶಿವಾನಂದ ಪಾಟೀಲ 1990ರಲ್ಲಿ ನಗರಸಭೆಯ ಸದಸ್ಯರಾದರು. ನಂತರ 1992ರಿಂದ 1994 ರವರೆಗೆ ವಿಜಯಪುರ ನಗರಸಭೆ ಅಧ್ಯಕ್ಷರಾದರು. 1994ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದರು. ನಂತರ 1999ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಿಕೋಟಾ ಕ್ಷೇತ್ರದಿಂದ ಆಯ್ಕೆಯಾದರು. 2004ರಲ್ಲಿ ಪಕ್ಷ ಹಾಗೂ ಕ್ಷೇತ್ರ ಬದಲಿಸಿದ ಪಾಟೀಲ ಅವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಆಯ್ಕೆಯಾದರು. 2008ರಲ್ಲಿ ಎಸ್‌.ಕೆ.ಬೆಳ್ಳುಬ್ಬಿ ವಿರುದ್ಧ ಸೋತರು. ನಂತರ 2013 ಹಾಗೂ 2018 ರಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸತತ ಎರಡು ಬಾರಿಗೆ ಶಾಸನಸಭೆ ಪ್ರವೇಶಿಸಿದರು. ಒಟ್ಟು ಐದು ಬಾರಿ ಶಾಸಕರಾಗಿದ್ದ ಶಿವಾನಂದ ಪಾಟೀಲರು ಈ ಬಾರಿ ಪ್ರಥಮ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ್ದಾರೆ.

-------

ಹೆಸರು: ಪ್ರಿಯಾಂಕ್‌ ಖರ್ಗೆ (ಕಾಂಗ್ರೆಸ್‌)

ಜಾತಿ: ಪರಿಶಿಷ್ಟಜಾತಿ

ವಿದ್ಯಾರ್ಹತೆ: ಪಿಯುಸಿ, ಸರ್ಟಿಫೈಡ್‌ ಪ್ರೊಫೆಷನಲ್‌ ಇನ್‌ ಕಂಪ್ಯೂಟರ್‌ ಆಟ್ಸ್‌ರ್‍ ಅಂಡ್‌ ಆ್ಯನಿಮೇಷನ್‌

ಕ್ಷೇತ್ರ: ಚಿತ್ತಾಪುರ (ಮೀಸಲು)

ಶಾಸಕ: 2ನೇ ಬಾರಿ

ಸಚಿವ: 2ನೇ ಬಾರಿ

ಕಾಂಗ್ರೆಸ್‌ನ ಹಿರಿಯ ನಾಯಕ ಲೋಕಸಭೆ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಸತತ 2ನೇ ಬಾರಿಗೆ ವಿಧಾನಸೌಧ ಪ್ರವೇಶಿಸಿದವರು. ತಂದೆಯ ಪ್ರಭಾವದಿಂದ ಮೊದಲ ಬಾರಿಗೆ ಶಾಸಕರಾದಾಗಲೇ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾದವರು. ಮತ್ತೆ ಈಗ ಸಮ್ಮಿಶ್ರ ಸರ್ಕಾರದಲ್ಲೂ ಸಚಿವ ಸ್ಥಾನ ಲಭಿಸಿದೆ. ಎನ್‌ಎಸ್‌ಯುಐ ಮೂಲಕ ರಾಜಕೀಯ ಪ್ರವೇಶಿಸಿದ ಅವರು, ರಾಜ್ಯ ಯುವ ಕಾಂಗ್ರೆಸ್‌ನಲ್ಲಿ ಮುಂದಾಳತ್ವ ವಹಿಸಿದ್ದರು. ಕ್ಷೇತ್ರ ಮರು ವಿಂಗಡಣೆ ನಂತರ ತಂದೆ ಮಲ್ಲಿಕಾರ್ಜುನ ಖರ್ಗೆ ಗುರುಮಿಟ್ಕಲ್‌ನಿಂದ ಚಿತ್ತಾಪುರಕ್ಕೆ ಬಂದು 2008ರಲ್ಲಿ ಚುನಾವಣೆ ಎದುರಿಸಿ ಗೆದ್ದರು. 2009ರಲ್ಲಿ ಅವರು ಲೋಕಸಭೆಗೆ ಸ್ಪರ್ಧಿಸಿ ಗೆದ್ದರು. ಇದರಿಂದಾಗಿ ಚಿತ್ತಾಪುರ 2009ರಲ್ಲಿ ಕಂಡ ಉಪ ಚುನಾವಣೆಯಲ್ಲಿ ಪ್ರಿಯಾಂಕ್‌ ಕೈ ಹುರಿಯಾಳಾಗಿ ಕಣಕ್ಕಿಳಿದು ಬಿಜೆಪಿಯ ವಾಲ್ಮೀಕಿ ನಾಯಕ ವಿರುದ್ಧ ಸೋತರಾದರೂ, ನಂತರ 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ವಾಲ್ಮೀಕಿ ನಾಯಕರನ್ನೇ ಸೋಲಿಸಿದರು. ಸಿದ್ದರಾಮಯ್ಯ ಸಂಪುಟದಲ್ಲಿ ಐಟಿ- ಬಿಟಿ, ಪ್ರವಾಸೋದ್ಯಮ ಸಚಿವರಾಗಿದ್ದರು. ಇದೀಗ 2018 ರಲ್ಲಿಯೂ ಪ್ರಿಯಾಂಕ್‌ ಗೆಲುವಿನ ಮೂಲಕ ದೋಸ್ತಿ ಸರ್ಕಾರದಲ್ಲಿಯೂ ಮಂತ್ರಿಯಾಗಿದ್ದಾರೆ.

----

ಹೆಸರು: ರಮೇಶ ಜಾರಕಿಹೊಳಿ (ಕಾಂಗ್ರೆಸ್‌)

ಜಾತಿ: ನಾಯಕ

ಶಿಕ್ಷಣ: ಬಿಎ

ಕ್ಷೇತ್ರ: ಗೋಕಾಕ

ಶಾಸಕ: 5ನೇ ಬಾರಿ

ಸಚಿವ: 2ನೇ ಬಾರಿ

1985ರಲ್ಲಿ ಮೊದಲ ಬಾರಿಗೆ ಗೋಕಾಕ ಕ್ಷೇತ್ರದಿಂದ ಸೋಲುಭವಿಸಿದ್ದ ರಮೇಶ ಜಾರಕಿಹೊಳಿ ನಂತರ ರಾಜಕೀಯದಲ್ಲಿ ಮುನ್ನೆಲೆಗೆ ಬಂದರು. ಇದಾದ ನಂತರ 1999, 2004, 2008, 2013 ಮತ್ತು 2018ರ ಚುನಾವಣೆಯಲ್ಲಿ ಸತತವಾಗಿ ಗೋಕಾಕ ಕ್ಷೇತ್ರದಿಂದ ನಿರಂತರವಾಗಿ ಗೆಲವು ಸಾಧಿಸುತ್ತಾ ಬಂದರು. ಈ ಮೂಲಕ ಅವರು ಐದು ಬಾರಿ ಶಾಸಕರಾಗಿ ಆಯ್ಕೆಯಾದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿದ್ದರು. ಅಲ್ಲದೆ, ಈಗ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರಿಗೆ ಸತತ ಎರಡನೇ ಬಾರಿಗೂ ಸಚಿವರಾಗಿ ಕಾರ್ಯನಿರ್ವಹಿಸುವ ಭಾಗ್ಯ ಸಿಕ್ಕಿದೆ. 2004ರ ನಂತರ ರಚನೆಯಾದ ಸರ್ಕಾರದಲ್ಲಿ ಗೋಕಾಕದ ಜಾರಕಿಹೊಳಿ ಸಹೋದರರ ಪೈಕಿ ಒಬ್ಬರಿಲ್ಲ ಒಬ್ಬರು ಸಚಿವರಾಗುತ್ತಲೇ ಬಂದಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಸತೀಶ ಜಾರಕಿಹೊಳಿ ಅಬಕಾರಿ ಸಚಿವರಾದರು. ಆದರೆ, ಖಾತೆ ಬದಲಾವಣೆಗೆ ಆಗ್ರಹಿಸಿ ರಾಜೀನಾಮೆ ನೀಡಿದರು. ನಂತರ ಸಣ್ಣ ಕೈಗಾರಿಕೆ ಖಾತೆ ಪಡೆಯುವಲ್ಲಿ ಯಶಸ್ವಿಯಾದರು. ಈ ಬಾರಿಯೂ ಸಹೋದರನ ಪೈಪೋಟಿಯ ನಡುವೆ ರಮೇಶ್‌ ಮತ್ತೆ ಸಚಿವರಾಗಿದ್ದಾರೆ.

-----

ಹೆಸರು: ಆರ್‌.ಶಂಕರ್‌ (ಕೆಪಿಜೆಪಿ)

ಜಾತಿ: ಕುರುಬ

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ

ಕ್ಷೇತ್ರ: ರಾಣಿಬೆನ್ನೂರು

ಶಾಸಕ: ಇದೇ ಮೊದಲು

ಸಚಿವ: ಇದೇ ಮೊದಲು

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದ ಸಚಿವ ಸಂಪುಟದಲ್ಲಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಕೆಪಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ ಆರ್‌.ಶಂಕರ್‌ ಅವರು ಸ್ಥಾನ ಪಡೆದಿದ್ದಾರೆ. 2013ರ ಚುನಾವಣೆ ವೇಳೆ ಬೆಂಗಳೂರಿನಿಂದ ರಾಣೆಬೆನ್ನೂರಿಗೆ ಬಂದು ಪಕ್ಷೇತರರಾಗಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲಿ ಸೋತಿದ್ದರು. ಇದೀಗ ದ್ವಿತೀಯ ಪ್ರಯತ್ನದಲ್ಲಿ ಜಯಭೇರಿ ಬಾರಿಸಿ ಸಚಿವ ಸಂಪುಟ ಸೇರಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿ ಪ್ರಸಿದ್ಧಿಯಾಗಿರುವ ಇವರು ಬಿಬಿಎಂಪಿ ಸದಸ್ಯರಾಗಿ, ಬಿಬಿಎಂಪಿ ಉಪಮೇಯರ್‌ ಆಗಿ ರಾಜಕೀಯ ಅನುಭವ ಹೊಂದಿದ್ದಾರೆ. 2013ರಲ್ಲಿ ಬೆಂಗಳೂರಿನಿಂದ ರಾಣೆಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 46 ಸಾವಿರ ಮತ ಪಡೆದು ಗಮನ ಸೆಳೆದಿದ್ದರು. ಕಡಿಮೆ ಅಂತರದಲ್ಲಿ ಸೋತಿದ್ದ ಆರ್‌.ಶಂಕರ್‌ 2018ರ ಚುನಾವಣೆಗಾಗಿ ರಾಣೆಬೆನ್ನೂರಿನಲ್ಲಿಯೇ ಹೊಸ ಮನೆ ಕಟ್ಟಿಸಿ ಅಲ್ಲಿಯೇ ಕಚೇರಿ ಆರಂಭಿಸಿದರು. ಚುನಾವಣೆಯಲ್ಲಿ ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ)ಯಿಂದ ಸ್ಪರ್ಧಿಸಿ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಅವರನ್ನು ಸೋಲಿಸಿ ರಾಜ್ಯದ ಗಮನ ಸೆಳೆದಿದ್ದರು.

-----

ಹೆಸರು: ಯು.ಟಿ.ಖಾದರ್‌ (ಕಾಂಗ್ರೆಸ್‌)

ಜಾತಿ: ಮುಸ್ಲಿಂ (ಅಲಸಖ್ಯಾಂತ)

ವಿದ್ಯಾರ್ಹತೆ: ಬಿಎ, ಎಲ್‌ಎಲ್‌ಬಿ

ಕ್ಷೇತ್ರ: ಉಳ್ಳಾಲ

ಶಾಸಕ: 4ನೇ ಬಾರಿ

ಸಚಿವ: 3ನೇ ಬಾರಿ

ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಗೆದ್ದಿರುವ ಯು.ಟಿ.ಖಾದರ್‌, 3ನೇ ಬಾರಿ ಸಚಿವರಾಗುತ್ತಿದ್ದಾರೆ. ಕಳೆದ ಬಾರಿ ಆರೋಗ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನಿರ್ವಹಿಸಿದ್ದ ಅವರು, ಇದೀಗ ಮೂರನೇ ಬಾರಿಗೆ ಸಚಿವರಾಗುತ್ತಿದ್ದಾರೆ. ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಚುನಾವಣೆ ಗೆದ್ದ ಸೋಲರಿಯದ ಸರದಾರ ಯು.ಟಿ. ಫರೀದ್‌ ಅವರ ನಿಧನಾನಂತರ, ಅವರ ಮಗ ಖಾದರ್‌ 2007ರ ಉಪಚುನಾವಣೆ ಮೂಲಕ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದರು. 2008ರಲ್ಲಿ ಮತ್ತೆ ಗೆದ್ದರಾದರೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. 2013ರಲ್ಲಿ ದ.ಕ. ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್‌ ಗೆದ್ದು ಜಯಭೇರಿ ಬಾರಿಸಿದ್ದರಿಂದ ಮೂರು ಖಾತೆಗಳು ಜಿಲ್ಲೆಗೆ ಲಭಿಸಿತ್ತು. ಮಂಗಳೂರಿನ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದಲ್ಲಿ ಬಿಎ, ಎಲ್‌ಎಲ್‌ಬಿ ವ್ಯಾಸಂಗ ಮಾಡಿರುವ ಯು.ಟಿ.ಖಾದರ್‌ ಅನಿರೀಕ್ಷಿತವಾಗಿ ಸಣ್ಣ ಪ್ರಾಯದಲ್ಲೇ ರಾಜಕೀಯಕ್ಕಿಳಿದರು. ಶಾಸಕರಾಗಿ, ಸಚಿವರಾಗಿ ಸಾಕಷ್ಟುಛಾಪು ಮೂಡಿಸಿದ್ದಾರೆ.

--------

ಹೆಸರು: ರಾಜಶೇಖರ ಪಾಟೀಲ್‌ (ಕಾಂಗ್ರೆಸ್‌)

ಜಾತಿ: ವೀರಶೈವ ಲಿಂಗಾಯತ

ವಿದ್ಯಾರ್ಹತೆ: ಪಿಯುಸಿ

ಕ್ಷೇತ್ರ: ಹುಮನಾಬಾದ್‌

ಶಾಸಕ: 4ನೇ ಬಾರಿ

ಸಚಿವ: ಇದೇ ಮೊದಲು

ನಾಲ್ಕನೇ ಅವಧಿಗೆ ಶಾಸಕರಾಗುವ ಮೂಲಕ ಜೊತೆಗೆ ಹೆಚ್ಚು ಅಂತರದ ಗೆಲುವು ಕಾಪಾಡಿಕೊಂಡು ಜಯ ದಾಖಲಿಸಿ ರಾಜ್ಯದ ಗಮನ ಸೆಳೆದಿದ್ದ ಸಚಿವ ರಾಜಶೇಖರ ಪಾಟೀಲ್‌ ಅವರಿಗೆ ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ಸಿಕ್ಕಿದೆ. ರಾಜಶೇಖರ ಪಾಟೀಲ್‌ಗೆ ಅವರ ತಂದೆ ಬಸವರಾಜ ಪಾಟೀಲರೇ ರಾಜಕೀಯ ಗುರುಗಳು. 1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ರಾಜಶೇಖರ್‌, 2003ರಲ್ಲಿ ನಡೆದ ಉಪಚುನಾವಣೆಯಲ್ಲಿ ಜಯ ಗಳಿಸಿದ್ದರು. 2004ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನ ದಿ. ಮೆರಾಜುದ್ದೀನ್‌ ಪಟೇಲ್‌ ವಿರುದ್ಧ ಸೋಲುಂಡಿದ್ದರು. ತದನಂತರ 2008 ಹಾಗೂ 2013ರಲ್ಲಿ ಸತತ ಜಯ ಗಳಿಸಿದ್ದು ಇದೀಗ 2018ರ ಜಯ ಅವರಿಗೆ ಬರೋಬ್ಬರಿ ಹ್ಯಾಟ್ರಿಕ್‌ ತಂದುಕೊಟ್ಟಿದೆ. ಅಭಿವೃದ್ಧಿ ಕಾರ್ಯಕ್ರಮಗಳು, ಕ್ಷೇತ್ರದ ಮೇಲಿನ ಹಿಡಿತ ಹಾಗೂ ಬಹುಸಂಖ್ಯಾತವಾಗಿರುವ ಲಿಂಗಾಯತ ಮತಗಳು ಸೇರಿದಂತೆ ಇನ್ನಿತರ ಕಾಂಗ್ರೆಸ್‌ ಪರಂಪರಾಗತ ಮತಗಳ ಸೆಳೆತ ರಾಜಶೇಖರ ಪಾಟೀಲ್‌ ಅವರ ಈ ವಿಜಯಕ್ಕೆ ಕಾರಣವಾಗಿದ್ದಷ್ಟೇ ಅಲ್ಲ ಸದ್ಯಕ್ಕೆ ಜಿಲ್ಲೆಯ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಗೆದ್ದ ಅತಿ ಹಿರಿಯ ಹಾಲಿ ಶಾಸಕ ಎಂಬ ಪಟ್ಟಪಡೆದುಕೊಂಡಿದ್ದ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ.

------

ಹೆಸರು: ವೆಂಕಟರಮಣಪ್ಪ (ಕಾಂಗ್ರೆಸ್‌)

ಜಾತಿ: ದಲಿತ (ಬೋವಿ)

ವಿದ್ಯಾರ್ಹತೆ: 10ನೇ ತರಗತಿ

ಕ್ಷೇತ್ರ: ಪಾವಗಡ

ಶಾಸಕ: 4ನೇ ಬಾರಿ

ಸಚಿವ: 2ನೇ ಬಾರಿ

ತುಮಕೂರು ಜಿಲ್ಲೆ ಪಾವಗಡ ಶಾಸಕ ವೆಂಕಟರಮಣಪ್ಪ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1989, 1999, 2008, 2018ರಲ್ಲಿ ಒಟ್ಟು ಮೂರು ಬಾರಿ ಕಾಂಗ್ರೆಸ್‌ನಿಂದ, ಒಮ್ಮೆ ಪಕ್ಷೇತರರಾಗಿ ಆಯ್ಕೆಯಾಗಿದ್ದಾರೆ. ಪಾವಗಡ ತಾಲೂಕಿನ ಹನುಮಂತನಹಳ್ಳಿಯ ಬೋವಿ ಜನಾಂಗದ ವೆಂಕಟಪ್ಪ, ಹನುಮಕ್ಕ ದಂಪತಿಯ 3ನೇ ಪುತ್ರರಾಗಿ 1946ರ ಮಾ.26ರಂದು ಜನಿಸಿದರು. ತಾಲೂಕಿನ ವೈ.ಎನ್‌. ಹೊಸಕೋಟೆ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿರುವ ವೆಂಕಟರಮಣಪ್ಪ, ಮರಿದಾಸನಹಳ್ಳಿ ಗ್ರಾಪಂ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದರು. ಮರಿದಾಸನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1989ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿ ಆಯ್ಕೆ. ನಂತರ 1999 ರಲ್ಲಿ 2ನೇ ಬಾರಿಗೆ ಶಾಸಕರಾಗಿ ಆಯ್ಕೆ. ನಂತರ 2008ರಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. 2008ರ ಅಂದಿನ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿ ಸರ್ಕಾರ ರಚನೆ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೇಷ್ಮೆ ಮತ್ತು ಸಣ್ಣಕೈಗಾರಿಕಾ ಸಚಿವರಾಗಿ 1 ವರ್ಷ 4 ತಿಂಗಳುಗಳ ಕಾಲ ಸಚಿವರಾಗಿದ್ದರು.

------

ಹೆಸರು: ಕೆ.ಜೆ. ಜಾರ್ಜ್

ಜಾತಿ : ಕ್ರಿಶ್ಚಿಯನ್‌

ವಿದ್ಯಾರ್ಹತೆ: ಪಿಯುಸಿ, ಪದವಿ (ಅನುತ್ತೀರ್ಣ)

ಕ್ಷೇತ್ರ: ಸರ್ವಜ್ಞನಗರ

ಶಾಸಕ: 5 ಬಾರಿ

ಸಚಿವ: 4 ಬಾರಿ

ಸರ್ವಜ್ಞನಗರ ಕ್ಷೇತ್ರದ ಶಾಸಕ ಕೆ.ಜೆ. ಜಾರ್ಜ್ ಕಳೆದ 50 ವರ್ಷಗಳಿಂದಲೂ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ವಿರಾಜಪೇಟೆ ತಾಲೂಕು ಕಾಂಗ್ರೆಸ್‌, ಯುವ ಕಾಂಗ್ರೆಸ್‌ ಮೂಲಕ ಪಕ್ಷದ ಹೋರಾಟದಲ್ಲಿ ತೊಡಗಿಸಿಕೊಂಡ ಅವರು 1985ರಲ್ಲಿ ಮೊದಲ ಬಾರಿಗೆ ಭಾರತಿನಗರದಿಂದ ಶಾಸಕರಾಗಿ ಆಯ್ಕೆಯಾದರು. ಬಳಿಕ ವೀರೇಂದ್ರ ಪಾಟೀಲ್‌ ಸಂಪುಟದಲ್ಲಿ ಆಹಾರ ಮತ್ತು ಸಾರಿಗೆ ಸಚಿವರಾಗಿ ಸ್ವತಂತ್ರ ಖಾತೆ ನಿರ್ವಹಿಸಿದ್ದರು. ಬಳಿಕ ಎಸ್‌. ಬಂಗಾರಪ್ಪ ಸರ್ಕಾರದಲ್ಲಿ ವಸತಿ ಹಾಗೂ ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದರು. 2013-15ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹ ಇಲಾಖೆ ವಹಿಸಿಕೊಂಡಿದ್ದರು. ಬಳಿಕ 2015ರಿಂದ 2018ರವರೆಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವರಾಗಿ ಕೆಲಸ ಮಾಡಿದ್ದರು. ಉದ್ಯಮಿ ಆಗಿರುವ ಅವರು ಇದೀಗ ನಾಲ್ಕನೇ ಬಾರಿಗೆ ಸಚಿವ ಸ್ಥಾನ ಹುಡುಕಿಕೊಂಡು ಬಂದಿದೆ.

---------

ಸಚಿವ: ಕೃಷ್ಣ ಬೈರೇಗೌಡ

ಜಾತಿ : ಒಕ್ಕಲಿಗ

ಕ್ಷೇತ್ರ : ಬ್ಯಾಟರಾಯನಪುರ

ವಿದ್ಯಾರ್ಹತೆ: ಅಮೆರಿಕದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ

ಶಾಸಕ: 4ನೇ ಬಾರಿ

ಸಚಿವ: 2ನೇ ಬಾರಿ

ಬ್ಯಾಟರಾಯನಪುರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಕೃಷ್ಣಬೈರೇಗೌಡ ಅವರು ದಿವಂಗತ ಸಿ. ಬೈರೇಗೌಡ ಅವರ ಪುತ್ರ. ತಂದೆಯ ನಿಧನದ ನಂತರ ವೇಮಗಲ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ದಾಖಲೆಯ ಅಂತರದಿಂದ ಗೆದ್ದಿದ್ದ ಕೃಷ್ಣ ಬೈರೇಗೌಡ 2008ರಲ್ಲಿ ಕ್ಷೇತ್ರ ಬದಲಿಸಿ ಬ್ಯಾಟರಾಯನಪುರಕ್ಕೆ ಕಾಲಿಟ್ಟರು. ಇಲ್ಲೂ ಮೂರು ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಜಯ ಗಳಿಸಿದ್ದಾರೆ. ಅಮೆರಿಕದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿರುವ ಅವರು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿ ಗಮನ ಸೆಳೆದಿದ್ದರು. ಕಳೆದ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕೃಷಿ ಸಚಿವರಾಗಿ ಕೆಲಸ ಮಾಡಿದ್ದ ಕೃಷ್ಣಬೈರೇಗೌಡ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಒಲಿದು ಬಂದಿದೆ.

---------

* ಹೆಸರು: ಬಿ.ಝಡ್‌. ಜಮೀರ್‌ ಅಹ್ಮದ್‌ಖಾನ್‌

ಜಾತಿ : ಮುಸ್ಲಿಂ

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ

ಕ್ಷೇತ್ರ : ಚಾಮರಾಜಪೇಟೆ

ಶಾಸಕ : 4ನೇ ಬಾರಿ

ಸಚಿವ : 2ನೇ ಬಾರಿ

ಜಮೀರ್‌ ಅಹ್ಮದ್‌ ಖಾನ್‌ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ. ಎಸ್‌.ಎಂ. ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕವಾದ ಹಿನ್ನೆಲೆಯಲ್ಲಿ ಚಾಮರಾಜಪೇಟೆಗೆ ನಡೆದ 2005ರ ಉಪ ಚುನಾವಣೆಯಲ್ಲಿ ಜೆಡಿಎಸ್‌ ಪರ ನಿಂತು ಗೆದ್ದಿದ್ದರು. ಸತತ 4 ಬಾರಿ ಗೆದಿರುವ ಅವರು ಎಚ್‌.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಹಜ್‌ ಮತ್ತು ವಕ್ಫ್ ಖಾತೆ ಸಚಿವನಾಗಿ ಕಾರ್ಯ ನಿರ್ವಹಿಸಿದ್ದರು. ನ್ಯಾಷನಲ್‌ ಟ್ರಾವೆಲ್ಸ್‌ ಮಾಲೀಕರಾಗಿರುವ ಅವರು 2016ರ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ನಡೆಸಿ ಜೆಡಿಎಸ್‌ ತೊರೆದಿದ್ದರು. 2018ರ ಮಾಚ್‌ರ್‍ನಲ್ಲಿ ಆರು ಮಂದಿ ಬಂಡಾಯ ಶಾಸಕರೊಂದಿಗೆ ರೋಷನ್‌ ಬೇಗ್‌ ಕಾಂಗ್ರೆಸ್‌ ಸೇರ್ಪಡೆಗೊಂಡು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸತತ ನಾಲ್ಕನೇ ಬಾರಿಗೆ ಭಾರಿ ಅಂತರದಿಂದ ಜಯ ಗಳಿಸಿದ ಅವರು, ಮೈತ್ರಿ ಸರ್ಕಾರದಲ್ಲಿ ಮತ್ತೆ ಕುಮಾರಸ್ವಾಮಿ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

-------

ಹೆಸರು: ಡಾ ಜಯಮಾಲಾ

ಜಾತಿ: ಈಡಿಗ

ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ, ಡಾಕ್ಟರೆಟ್‌

ಎಂಎಲ್‌ಸಿ : ಇದೇ ಮೊದಲು

ಸಚಿವ : ಇದೇ ಮೊದಲು

ಕಾಂಗ್ರೆಸ್‌ ಪರ ತಾರಾ ಪ್ರಚಾರಕಿಯಾಗಿ ಪಕ್ಷ ಸೇರ್ಪಡೆಗೊಂಡ ಜಯಮಾಲ ಅವರು ಅದಕ್ಕೂ ಮೊದಲು ಚಲನಚಿತ್ರ ರಂಗದಲ್ಲಿ ಅಪ್ರತಿಮೆ ಸೇವೆ ಸಲ್ಲಿಸಿದವರು. ಪಂಚ ಭಾಷಾ ತಾರೆಯಾಗಿ ಪ್ರೇಕ್ಷಕರನ್ನು ರಂಜಿಸಿರುವ ಅವರು 2014ರಲ್ಲಿ ಕಾಂಗ್ರೆಸ್‌ನಿಂದ ವಿಧಾನಪರಿಷತ್‌ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಜಯಾಮಾಲಾ ಅವರಿಗೆ ಎಚ್‌.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗುವ ಯೋಗ ಒದಗಿದೆ. ಪಕ್ಷದ ನಿಷ್ಠೆಯಿಂದ ಅವರಿಗೆ ಸಚಿವ ಸ್ಥಾನ ಒಲಿದಿದೆ ಎನ್ನುತ್ತಿದೆಯಾದರೂ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ನಿಂದ ಪ್ರಮಾಣ ವಚನ ಸ್ವೀಕಾರ ಮಾಡಿದ ಮಂತ್ರಿಗಳ ಪರಿಚಯ

ಎಚ್‌.ಡಿ.ರೇವಣ್ಣ

ಕ್ಷೇತ್ರ: ಹೊಳೆನರಸೀಪುರ

ಜಾತಿ: ಒಕ್ಕಲಿಗ

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ

ಐದು ಬಾರಿ ಶಾಸಕ, ನಾಲ್ಕು ಬಾರಿ ಸಚಿವ

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಚನ್ನಮ್ಮ ದಂಪತಿಯ ನಾಲ್ವರು ಪುತ್ರದಲ್ಲಿ ದ್ವಿತೀಯ ಪುತ್ರ. 1957ರ ಡಿಸೆಂಬರ್‌ 17ರಂದು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಜನನ. ಎಸ್ಸೆಸ್ಸೆಲ್ಸಿ (ಪಾಲಿಟೆಕ್ನಿಕ್‌ ಡಿಪ್ಲೊಮಾ) ವಿದ್ಯಾರ್ಹತೆ ಹೊಂದಿರುವ ರೇವಣ್ಣ, ಆಡಳಿತ ಮತ್ತು ರಾಜಕೀಯದಲ್ಲಿ ನಿಪುಣರು. ಇವರಿಗೆ ಪತ್ನಿ ಭವಾನಿ ರೇವಣ್ಣ, ಸೂರಜ್‌ ಮತ್ತು ಪ್ರಜ್ವಲ್‌ ಎಂಬ ಪುತ್ರರಿದ್ದಾರೆ. ಜಿ.ಪಂ. ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದ ರೇವಣ್ಣ ಅವರು, 1994ರಲ್ಲಿ ಮೊದಲ ಬಾರಿಗೆ ಹೊಳೆನರಸೀಪುರ ಕ್ಷೇತ್ರದಿಂದ ಶಾಸಕರಾದರು. ಮೊದಲ ಅವಧಿಯಲ್ಲೇ ಮಂತ್ರಿಗಿರಿಯೂ ಸಿಕ್ಕಿತು. 1999ರ ಚುನಾವಣೆಯಲ್ಲಿ ಸೋಲನುಭವಿಸಿದರು. 2004, 2008, 2013 ಹಾಗೂ 2018ರ ಚುನಾವಣೆಯಲ್ಲಿ ನಿರಂತರವಾಗಿ ಗೆಲುವು ಸಾಧಿಸಿ ಹೊಳೆನರಸೀಪುರದಿಂದ ಒಟ್ಟು ಐದು ಬಾರಿ ಶಾಸಕರಾದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಧರಂ ಸಿಂಗ್‌ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರಗಳಲ್ಲಿ ಇಂಧನ ಹಾಗೂ ಲೋಕೋಪಯೋಗಿ ಸಚಿವರಾಗಿದ್ದ ಅವರು ಕೆಎಂಎಫ್‌ ಮತ್ತು ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

..------------

ಸಿ.ಎಸ್‌. ಪುಟ್ಟರಾಜು

ಕ್ಷೇತ್ರ: ಮೇಲುಕೋಟೆ

ಜಾತಿ: ಒಕ್ಕಲಿಗ

ವಿದ್ಯಾರ್ಹತೆ- ಪಿಯುಸಿ

ಮೂರು ಬಾರಿ ಶಾಸಕ, ಒಂದು ಬಾರಿ ಸಂಸದ, ಮೊದಲ ಬಾರಿ ಸಚಿವ

ಸಣ್ಣತಮ್ಮೇಗೌಡ, ಅಂಕಮ್ಮ ದಂಪತಿ ಪುತ್ರರಾಗಿ 1964ರ ಸೆಪ್ಟೆಂಬರ್‌ 10ರಂದು ಚಿನಕುರಳಿ ಗ್ರಾಮದಲ್ಲಿ ಜನಿಸಿದ ಪುಟ್ಟರಾಜು ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಉದ್ಯಮ ಕುಟುಂಬದಿಂದ ಬಂದ ಅವರು 1995ರಲ್ಲಿ ಚಿನಕುರಳಿ ಜಿ.ಪಂ. ಸದಸ್ಯರಾಗಿ ಆಯ್ಕೆಯಾಗಿ, 2004ರಲ್ಲಿ ಪ್ರಥಮ ಬಾರಿಗೆ ಪಾಂಡವಪುರ ಕ್ಷೇತ್ರದಿಂದ ಶಾಸಕರಾದರು. 2008ರಲ್ಲಿ ಎರಡನೇ ಬಾರಿಗೆ ಮೇಲುಕೋಟೆಯಿಂದ ಶಾಸಕರಾದ ಪುಟ್ಟರಾಜು, 2013ರಲ್ಲಿ ರೈತ ನಾಯಕ ಕೆ.ಎಸ್‌. ಪುಟ್ಟಣ್ಣಯ್ಯ ವಿರುದ್ಧ ಪರಾಜಿತರಾದರು. ನಂತರ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಚಿತ್ರನಟಿ ರಮ್ಯಾ ವಿರುದ್ಧ ಸೋತರು. 2014ರ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅವರನ್ನು ಮಣಿಸಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದರು. ಈಗ ಮೂರನೇ ಬಾರಿಗೆ ಮೇಲುಕೋಟೆ ಶಾಸಕರಾಗಿ, ಸಚಿವರೂ ಆಗಿದ್ದಾರೆ. ಇವರಿಗೆ ಪತ್ನಿ ನಾಗಮ್ಮ ಹಾಗೂ ಪುತ್ರಿ ಅನಿತಾ, ಪುತ್ರ ಶಿವರಾಜ ಇದ್ದಾರೆ.

-------------

ಜಿ.ಟಿ. ದೇವೇಗೌಡ

ಕ್ಷೇತ್ರ: ಚಾಮುಂಡೇಶ್ವರಿ

ಜಾತಿ: ಒಕ್ಕಲಿಗ

ವಿದ್ಯಾರ್ಹತೆ: 8ನೇ ತರಗತಿ

ನಾಲ್ಕು ಬಾರಿ ಶಾಸಕ, ಎರಡನೇ ಬಾರಿ ಸಚಿವ

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಮೈಸೂರು ತಾಲೂಕು ಗುಂಗ್ರಾಲ್‌ಛತ್ರ ಗ್ರಾಮದ ದೇವೇಗೌಡರಿಗೆ ಇದೀಗ 68 ವರ್ಷ. ಓದಿರುವುದು ಎಂಟನೇ ತರಗತಿ. ಮೊದಲಿಗೆ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದ ಅವರು, ನಂತರ ಎಪಿಎಂಸಿ ಉಪಾಧ್ಯಕ್ಷರಾದರು. ನಂತರ ಎರಡು ಬಾರಿ ಜಿ.ಪಂ.ಗೆ ಆಯ್ಕೆಯಾಗಿ, ಆಡಳಿತ ಪಕ್ಷದ ನಾಯಕ, ಒಂದು ಅವಧಿಗೆ ಅಧ್ಯಕ್ಷರಾಗಿದ್ದರು. 1996ರಲ್ಲಿ ಮೈಸೂರು ಕ್ಷೇತ್ರದಿಂದ ಜನತಾದಳದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಕಡಿಮೆ ಅಂತರದಲ್ಲಿ ಸೋತಿದ್ದರು. 1998ರಲ್ಲಿ ತೃತೀಯ ಸ್ಥಾನ ಪಡೆದರು. ಅದೇ ವರ್ಷ ಹುಣಸೂರಿನಿಂದ ನಡೆದ ಉಪ ಚುನಾವಣೆಯಲ್ಲಿ ಪ್ರಥಮ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. 1999ರ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯಾಗಿ ಸೋತರು. 2004ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಗೆದ್ದು, ಎರಡನೇ ಬಾರಿ ವಿಧಾನಸಭೆ ಪ್ರವೇಶಿಸಿದರು. 2007ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌- ಬಿಜೆಪಿ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದರು. 2008ರಲ್ಲಿ ಬಿಜೆಪಿ ಸೇರಿ, ಹುಣಸೂರಿನಿಂದ ಸ್ಪರ್ಧಿಸಿ, ಮೂರನೇ ಸ್ಥಾನಕ್ಕೆ ಹೋದರು. ನಂತರ ಜೆಡಿಎಸ್‌ಗೆ ವಾಪಸಾಗಿ 2013ರಲ್ಲಿ ಚಾಮುಂಡೇಶ್ವರಿಯಿಂದ ಗೆದ್ದರು. ಈ ಬಾರಿ ಸಿದ್ದರಾಮಯ್ಯ ಅವರನ್ನೇ ಮಣಿಸಿ, ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಜತೆಗೆ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿದ್ದರು. ಜಿಲ್ಲಾ ಜನತಾದಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

----------------

ಸಾ.ರಾ.ಮಹೇಶ್‌

ಕ್ಷೇತ್ರ: ಕೆ.ಆರ್‌. ನಗರ

ಜಾತಿ: ಒಕ್ಕಲಿಗ

ವಿದ್ಯಾರ್ಹತೆ: ಬಿಎಸ್ಸಿ

ಮೂರು ಬಾರಿ ಶಾಸಕ, ಮೊದಲ ಬಾರಿಗೆ ಸಚಿವ

2004ರಲ್ಲಿ ಕೆ.ಆರ್‌. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಸಾ.ರಾ. ಮಹೇಶ್‌ ನಂತರ ಜೆಡಿಎಸ್‌ ಸೇರಿದರು. 2008, 2013 ಹಾಗೂ 2018ರ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಿ ಹ್ಯಾಟ್ರಿಕ್‌ ಹೀರೋ ಆದರು. ಕೆ.ಆರ್‌. ನಗರ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ಗೆದ್ದ ಮೊದಲಿಗರು ಎನಿಸಿಕೊಂಡಿದ್ದಾರೆ. ಮಹೇಶ್‌ ಹುಟ್ಟೂರು ಕೆ.ಆರ್‌.ನಗರ ತಾಲೂಕಿನ ಸಾಲಿಗ್ರಾಮ. ವಯಸ್ಸು 52. ಬಿಎಸ್ಸಿ ಪದವೀಧರರು. ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಪ್ರವೇಶಿಸಿದವರು. ಹಿಂದೆ ಜೆಡಿಎಸ್‌- ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕೆಲಕಾಲ ಕೆಲಸ ಮಾಡಿದ್ದಾರೆ. ಈ ಕ್ಷೇತ್ರದಿಂದ ಎಚ್‌. ವಿಶ್ವನಾಥ್‌, ಎಸ್‌. ನಂಜಪ್ಪ ನಂತರ ಮಂತ್ರಿಯಾಗುವ ಸುಯೋಗ ಸಾ.ರಾ. ಮಹೇಶ್‌ ಅವರದ್ದಾಗಿದೆ.

--------------

ಡಿ.ಸಿ. ತಮ್ಮಣ್ಣ

ಕ್ಷೇತ್ರ: ಮದ್ದೂರು

ಜಾತಿ: ಒಕ್ಕಲಿಗ

ವಿದ್ಯಾರ್ಹತೆ: ಬಿಎಸ್ಸಿ , ಬಿಇ (ಸಿವಿಲ್‌)

ನಾಲ್ಕು ಬಾರಿ ಶಾಸಕ, ಮೊದಲ ಬಾರಿಗೆ ಸಚಿವ

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಡಿ.ಸಿ. ತಮ್ಮಣ್ಣ ಅವರು 1943ರ ಏಪ್ರಿಲ್‌ 15ರಂದು ಚಿಕ್ಕಮರೀಗೌಡ, ಕಾಡಮ್ಮ ದಂಪತಿ ಪುತ್ರರಾಗಿ ಜನಿಸಿದರು. ಬಿಎಸ್ಸಿ, ಬಿಇ ಸಿವಿಲ್‌ ವ್ಯಾಸಂಗ ಮಾಡಿದರು. ಬಳಿಕ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಮುಖ್ಯಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಿವೃತ್ತಿ ಪಡೆದು 1999ರಲ್ಲಿ ಮಂಡ್ಯ ಜಿಲ್ಲೆಯ ಕಿರುಗಾವಲು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ರಾಜಕೀಯ ಪ್ರವೇಶಿಸಿದರು. 2004ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ತಮ್ಮಣ್ಣ ಅವರಿಗೆ ಮದ್ದೂರು ಕ್ಷೇತ್ರವನ್ನು ಬಿಟ್ಟುಕೊಟ್ಟು ಸ್ಪರ್ಧೆಗೆ ಅನುವು ಮಾಡಿಕೊಟ್ಟರು. ಆಗ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಮದ್ದೂರಿನಿಂದಲೇ ಸ್ಪರ್ಧಿಸಿ ಸೋಲನುಭವಿಸಿದರು. 2013ರಲ್ಲಿ ಜೆಡಿಎಸ್‌ ಸೇರ್ಪಡೆಯಾಗಿ ಸ್ಪರ್ಧಿಸಿ ಗೆದ್ದು, 2018ರಲ್ಲೂ ಗೆಲುವು ಸಾಧಿಸಿದ್ದಾರೆ. ಇದೀಗ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಪತ್ನಿ ಪ್ರಮೀಳಾ, ಸೌಮ್ಯ ರಮೇಶ್‌, ಸಂಗೀತಾ ಮಧುಸೂದನ್‌, ಶೃತಿ ರಾಜೇಶ್‌ ಗೌಡ, ಸ್ಪೂರ್ತಿ ಮಹೇಶ್‌ ಎಂಬ ನಾಲ್ವರು ಪುತ್ರಿಯರು, ಸಂತೋಷ್‌ ಎಂಬ ಪುತ್ರ ಇದ್ದಾರೆ. ಜೆಡಿಎಸ್‌ ವರಿಷ್ಠ ದೇವೇಗೌಡರ ಬೀಗರಾಗಿದ್ದಾರೆ.

------------------

ಎನ್‌. ಮಹೇಶ್‌

ಕ್ಷೇತ್ರ: ಕೊಳ್ಳೇಗಾಲ

ಜಾತಿ: ದಲಿತ

ವಿದ್ಯಾರ್ಹತೆ: ಎಂ.ಎ. ಅರ್ಥಶಾಸ್ತ್ರ

ಮೊದಲ ಬಾರಿಗೆ ಶಾಸಕ ಮತ್ತು ಸಚಿವ

ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ರಾಜ್ಯಾಧ್ಯಕ್ಷ ಎನ್‌. ಮಹೇಶ್‌ ಅವರು ಕೊಳ್ಳೇಗಾಲ ಪಟ್ಟಣ ಶಂಕನಪುರದವರು. 1956ರ ಜೂ.1ರಂದು ಜನಿಸಿದ ಅವರು, ಸಮಾಜಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. 1999ರಲ್ಲಿ ಸರ್ಕಾರಿ ಹುದ್ದೆ ತೊರೆದು ರಾಜಕಾರಣಿಯಾದರು. ಮೊದಲ ಬಾರಿಗೆ ಕಿರುಗಾವಲು ಕ್ಷೇತ್ರದಿಂದ ಆಗಿನ ಜನತಾ ಪರಿವಾರದ ಪ್ರಭಾವಿ ನಾಯಕ ಮಾಜಿ ಸಚಿವ ಕೆ.ಎನ್‌. ನಾಗೇಗೌಡರ ವಿರುದ್ಧ ಸ್ಪರ್ಧಿಸಿ ಸೋಲುಂಡರು. ಬಳಿಕ ರಾಜಕೀಯ ಕ್ಷೇತ್ರವನ್ನು ಕೊಳ್ಳೇಗಾಲಕ್ಕೆ ಬದಲಾಯಿಸಿಕೊಂಡ ಅವರು, ಈ ಕ್ಷೇತ್ರದಿಂದ 2004, 2008, 2013- ಹೀಗೆ ಸತತ ಮೂರು ಬಾರಿ ಕಣಕ್ಕಿಳಿದರೂ ಯಶಸ್ಸು ಸಿಗಲಿಲ್ಲ. ಆದರೆ ಈ ಬಾರಿ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಅವರ ವಿಧಾನಸೌಧ ಪ್ರವೇಶಿಸುವ ಕನಸು ಈಡೇರಿತು. ಮೊದಲ ಬಾರಿಗೆ ಶಾಸಕರಾದ ಅವರಿಗೆ ಸಚಿವ ಸ್ಥಾನವು ಒಲಿದು ಬಂದಿದೆ. ಈವರೆಗೆ ಕೊಳ್ಳೇಗಾಲದಿಂದ ಆಯ್ಕೆಯಾಗಿದ್ದ ಬಿ. ಬಸವಯ್ಯ ಅವರು ಮಾತ್ರ ಎಸ್‌.ಆರ್‌. ಬೊಮ್ಮಾಯಿ ಸಂಪುಟದಲ್ಲಿ ಅಲ್ಪಕಾಲ ಮಂತ್ರಿಯಾಗಿದ್ದರು. 2009ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮಹೇಶ್‌ ಸೋತಿದ್ದರು. ಅವರ ಪತ್ನಿ ವಿಜಯಾ ಅವರು ಸಹಕಾರಿ ಬ್ಯಾಂಕ್‌ ಹಿರಿಯ ಅಧಿಕಾರಿ. ಮಗ ಚೆ ಗೆವಾರ.

---------------

ಎಸ್‌.ಆರ್‌. ಶ್ರೀನಿವಾಸ್‌

ಕ್ಷೇತ್ರ: ಗುಬ್ಬಿ

ಜಾತಿ: ಒಕ್ಕಲಿಗ

ವಿದ್ಯಾರ್ಹತೆ: ಬಿಎ

ನಾಲ್ಕು ಬಾರಿ ಶಾಸಕ, ಮೊದಲ ಬಾರಿಗೆ ಸಚಿವ

ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿರುವ ಎಸ್‌.ಆರ್‌. ಶ್ರೀನಿವಾಸ್‌ ಅವರಿಗೆ ಮೊದಲ ಬಾರಿಗೆ ಸಚಿವ ಪದವಿ ಸಿಕ್ಕಿದೆ. ಗುಬ್ಬಿ ತಾಲೂಕು ಸೇವೇಗೌಡನ ಪಾಳ್ಯದವರಾದ ಶ್ರೀನಿವಾಸ್‌, ಕ್ಷೇತ್ರದಲ್ಲಿ ವಾಸಣ್ಣ ಎಂದೇ ಚಿರಪರಿಚಿತರು. ರಾಮೇಗೌಡ ಹಾಗೂ ಮಂಗಳಮ್ಮ ದಂಪತಿ ಪುತ್ರರಾದ ಶ್ರೀನಿವಾಸ್‌ ಬಿ.ಎ. ಪದವೀಧರರು. 53 ವರ್ಷ ವಯಸ್ಸಿನ ಇವರು ಹಾಲಿ ತುಮಕೂರು ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರು. 2001ರಲ್ಲಿ ಸಿ.ಎಸ್‌. ಪುರದಿಂದ ಜಿ.ಪಂ. ಸದಸ್ಯರಾಗಿದ್ದರು. 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು. ನಂತರ ಜೆಡಿಎಸ್‌ಗೆ ಸೇರ್ಪಡೆ. ಅಲ್ಲಿಂದ ಸತತ ನಾಲ್ಕು ಬಾರಿ ಗುಬ್ಬಿ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ. ಪತ್ನಿ ಭಾರತಿ ಶ್ರೀನಿವಾಸ್‌, ಇಬ್ಬರು ಮಕ್ಕಳು. ಕ್ಷೇತ್ರದಲ್ಲಿ ಶ್ರೀನಿವಾಸ್‌ ಅವರ ಪತ್ನಿ ಹಾಗೂ ಮಗ ಸಕ್ರಿಯ ರಾಜಕಾರಣದಲ್ಲಿದ್ದು, ಜಿ.ಪಂ. ಚುನಾವಣೆಯಲ್ಲಿ ಚೇಳೂರು ಕ್ಷೇತ್ರದಲ್ಲಿ ಅವರ ಪತ್ನಿ ಸೋಲುಂಡಿದ್ದರು.

--------------

ಎಂ.ಸಿ. ಮನಗೂಳಿ

ಕ್ಷೇತ್ರ: ಸಿಂದಗಿ

ಜಾತಿ: ವೀರಶೈವ/ ಲಿಂಗಾಯತ

ಶಿಕ್ಷಣ: ಎಸ್‌ಎಸ್‌ಸಿ

ಮೂರು ಬಾರಿ ಶಾಸಕ, ಎರಡು ಬಾರಿ ಸಚಿವ

ಹಿರಿಯ ರಾಜಕಾರಣಿ, ಸಿಂದಗಿ ಮತಕ್ಷೇತ್ರದ ಹಿರಿಯ ಶಾಸಕ ಎಂ.ಸಿ. ಮನಗೂಳಿ ಅವರಿಗೆ ಮತ್ತೆ ಸಚಿವ ಸ್ಥಾನ ಹುಡುಕಿಕೊಂಡು ಬಂದಿದೆ. ಬರೋಬ್ಬರಿ ಎರಡು ದಶಕಗಳ ನಂತರ ಶಾಸಕರಾಗಿ ಆಯ್ಕೆಯಾಗಿರುವ ಮನಗೂಳಿ ಅವರು, ಸಚಿವ ಸ್ಥಾನ ಗಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. 1998ರಲ್ಲಿ ಜೆ.ಎಚ್‌. ಪಟೇಲರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವರಾಗಿದ್ದ ಮನಗೂಳಿ ಅವರು ಈಗ ಎರಡನೇ ಬಾರಿಗೆ ಸಚಿವರಾಗಿದ್ದಾರೆ. 1936ರಲ್ಲಿ ಜನಿಸಿದ ಎಂ.ಸಿ. ಮನಗೂಳಿ ರಾಜಕೀಯ ಜೀವನದಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡವರು. 1960ರಲ್ಲಿ ಗ್ರಾಮ ಸೇವಕನಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಆ ಹುದ್ದೆಗೆ ರಾಜೀನಾಮೆ ನೀಡಿದರು. 1989ರಲ್ಲಿ ಸಿಂದಗಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರಾದರು. 1994ರಲ್ಲಿ ಪ್ರಥಮ ಬಾರಿಗೆ ಜನತಾ ದಳದಿಂದ ಆಯ್ಕೆಯಾದರು. 1998ರಲ್ಲಿ ಜೆ.ಎಚ್‌. ಪಟೇಲರ ಸಂಪುಟದಲ್ಲಿ ಸಚಿವರಾಗಿದ್ದರು. ಸಿಂದಗಿ ಕ್ಷೇತ್ರದ ನೀರಾವರಿ ಯೋಜನೆ ಹೋರಾಟಗಳಲ್ಲಿ ಅವರು ಖ್ಯಾತಿ ಪಡೆದಿದ್ದಾರೆ. ನೀರಾವರಿ ಯೋಜನೆಗಳಿಗೆ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಅನುದಾನ ನೀಡಿದ್ದರು ಎಂದು ಸ್ಮರಿಸಿ ಮನಗೂಳಿ, ತಮ್ಮ ಕ್ಷೇತ್ರದಲ್ಲಿ ದೇವೇಗೌಡರ ಪುತ್ಥಳಿ ಸ್ಥಾಪಿಸಿ ಗುರು ಕಾಣಿಕೆ ಸಲ್ಲಿಸಿದ್ದರು.

-------------------

ವೆಂಕಟರಾವ್‌ ನಾಡಗೌಡ

ಕ್ಷೇತ್ರ: ಸಿಂಧನೂರು

ಜಾತಿ:ವೀರಶೈವ/ಲಿಂಗಾಯತ

ವಿದ್ಯಾರ್ಹತೆ: ಬಿಎ, ಎಲ್‌ಎಲ್‌ಬಿ

ಎರಡು ಬಾರಿ ಶಾಸಕ, ಮೊದಲ ಬಾರಿ ಸಚಿವ

ಹಿರಿಯ ಕಾಂಗ್ರೆಸ್‌ ನಾಯಕ ಹಂಪನಗೌಡ ಬಾದರ್ಲಿ ವಿರುದ್ಧ ಜಯ ಸಾಧಿಸುವ ಮೂಲಕ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ವೆಂಕಟರಾವ್‌ ನಾಡಗೌಡ ಅವರಿಗೆ ಪ್ರಥಮ ಬಾರಿಗೆ ಸಚಿವರಾಗುವ ಸುಯೋಗ ಬಂದಿದೆ. ಸಿಂಧನೂರು ತಾಲೂಕಿನ ಹೆಸರಾಂತ ಜವಳಗೇರಾ ಸಂಸ್ಥಾನಕ್ಕೆ ಸೇರಿದ ವೆಂಕಟರಾವ್‌ ನಾಡಗೌಡ ಅವರಿಗೆ 53 ವರ್ಷ. ತಂದೆ ರಾಮರಾಮ್‌ ನಾಡಗೌಡ ಅವರು ಸಿಂಧನೂರು ತಾಲೂಕು ಅಭಿವೃದ್ಧಿ ಮಂಡಳಿ (ಟಿಡಿಬಿ)ಗೆ 13 ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ನಾಡಗೌಡರು ಕಾಲೇಜು ದಿಸೆಯಲ್ಲಿಯೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿದ್ದರು. 1985-86ರಲ್ಲಿ ಜವಳಗೇರಾ ಮಂಡಲ ಪ್ರಧಾನರಾಗಿ, ರಾಯಚೂರು-ಕೊಪ್ಪಳ ಅವಿಭಜಿತ ಜಿಲ್ಲೆಗಳ ಮಂಡಳ ಪ್ರಧಾನ ಒಕ್ಕೂಟದ ಅಧ್ಯಕ್ಷರಾಗಿ, ಜನತಾದಳದ ಅಧ್ಯಕ್ಷರಾಗಿ, ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೆಒಎಫ್‌ನ ರಾಜ್ಯಾಧ್ಯಕ್ಷರಾಗಿ 1995ರಿಂದ 2009ರ ವರೆಗೆ ಕಾರ್ಯನಿರ್ವಹಿಸಿದ್ದಾರೆ.

2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದರು.ಎಬಿಪಿಜೆಡಿಯ ರಾಜ್ಯ ಕಾರ್ಯದರ್ಶಿ, ಎನ್‌ಸಿಡಿಎಫ್‌ಐನ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ಕೋ ಆಪರೇಟಿವ್‌ ಫೆಡರೇಶನ್‌ ನಿರ್ದೇಶಕರಾಗಿ, ಆರ್‌ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗಿ ಕೆಲಸ ಮಾಡಿದ ಅನುಭವವಿದೆ. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. 2018ರ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಅವರ ಕೈ ಹಿಡಿದು ಸಚಿವರನ್ನಾಗಿ ಮಾಡಿದರು.

---------------

ಬಂಡೆಪ್ಪ ಕಾಶೆಂಪುರ

ಕ್ಷೇತ್ರ: ಬೀದರ ದಕ್ಷಿಣ

ಜಾತಿ: ಕುರುಬ

ವಿದ್ಯಾರ್ಹತೆ: ಪದವಿ

ಮೂರು ಬಾರಿ ಶಾಸಕ, ಎರಡು ಬಾರಿ ಸಚಿವ

ಜೆಡಿಎಸ್‌ ಸಂಸದೀಯ ಮಂಡಳಿಯ ಅಧ್ಯಕ್ಷರಾಗಿರುವ ಬಂಡೆಪ್ಪ ಕಾಶೆಂಪೂರ್‌, ಎರಡನೇ ಬಾರಿ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಬೀದರ್‌ ಕ್ಷೇತ್ರದಿಂದ 1999ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಂಡೆಪ್ಪ ಖಾಶೆಂಪೂರ್‌ ಬಿಜೆಪಿಯ ರಮೇಶಕುಮಾರ ಪಾಂಡೆ ಅವರ ವಿರುದ್ಧ ಸೋಲುಂಡಿದ್ದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತರಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಂಡೆಪ್ಪ ಕಾಶೆಂಪೂರ್‌ ಇನ್ನೋರ್ವ ಸ್ವತಂತ್ರ ಅಭ್ಯರ್ಥಿ ಜುಲ್ಫಿಕಾರ್‌ ಹಾಶ್ಮಿ ವಿರುದ್ಧ ಜಯ ಗಳಿಸಿದ್ದರು. ಕ್ಷೇತ್ರ ಪುನರ್‌ ವಿಂಗಡಣೆ ನಂತರ ಸೃಷ್ಟಿಯಾಗಿರುವ ಬೀದರ್‌ ದಕ್ಷಿಣ ಕ್ಷೇತ್ರಕ್ಕೆ 2008ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಸಂಜಯ ಖೇಣಿ ವಿರುದ್ಧ ಕೇವಲ 1271 ಮತಗಳ ಅಂತರದಿಂದ ಜಯಗಳಿಸಿದ್ದರು. ಇನ್ನು 2013ರ ಚುನಾವಣೆಯಲ್ಲಿ ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಯಾಗಿದ್ದ ಅಶೋಕ ಖೇಣಿ ವಿರುದ್ಧ ಕಾಶೆಂಪೂರ್‌ ಸೋಲುಂಡಿದ್ದರು. ಇದೀಗ 2018ರಲ್ಲಿ ಬಂಡೆಪ್ಪ ಕಾಶೆಂಪೂರ್‌ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಡಾ. ಶೈಲೇಂದ್ರ ಬೆಲ್ದಾಳೆ ವಿರುದ್ಧ ಜಯಗಳಿಸಿದ್ದು ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಈ ಅವಧಿಯಲ್ಲಿ ಮತ್ತೊಮ್ಮೆ ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Follow Us:
Download App:
  • android
  • ios