ಗದಗ (ಮೇ. 08):  ಹಿಂದೆ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಯೋಗ ಶಿಕ್ಷಕರೂ ಆಗಿದ್ದ ಶಿವಾನಂದ ಕೆಲೂರ ಅವರು ತಮ್ಮ ವಿದ್ಯಾರ್ಥಿಯೊಬ್ಬ ಭಿಕ್ಷೆ ಬೇಡುತ್ತಿದ್ದದ್ದನ್ನು ಕಂಡು ಅಂಧರು ಸ್ವಾವಲಂಬಿಯಾಗಿ ಬದುಕು ನಡೆಸಬೇಕು, ಅದಕ್ಕಾಗಿ ನಾನು ಏನಾದರೂ ಮಾಡಬೇಕು ಎಂದುಕೊಂಡು ಜ್ಞಾನಸಿಂಧೂ ಅಂಧ ಮಕ್ಕಳ ವಸತಿ ಶಾಲೆ ಆರಂಭಿಸುತ್ತಾರೆ. ಸತತ 19 ವರ್ಷಗಳಿಂದ ನಡೆಯುತ್ತಿರುವ ಈ ಶಾಲೆ ಸಾವಿರಾರು ಮಕ್ಕಳ ಪಾಲಿಗೆ ವರವಾಗಿ ನಿಂತಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ತುಳಸಮ್ಮ ಶಾಲೆಯ ಸಂಚಾಲಕಿಯಾಗಿ ಅಂಧ ಮಕ್ಕಳಿಗೆ ತಾಯಿಯಾಗಿ ನಿಂತಿದ್ದಾರೆ.

ಗದಗ ಜಿಲ್ಲೆ, ರೋಣ ತಾಲೂಕಿನ ಹೊಳೆ ಆಲೂರಿನಲ್ಲಿ ಅಂಧ ಮಕ್ಕಳ ಶಾಲೆಯೊಂದಿದೆ. ಅದರ ಹೆಸರು ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆ. ಇದನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ತಾಯಿ ತುಳಸಮ್ಮ ನಿಜಲೂರು ಮತ್ತು ಮಗ ಶಿವಾನಂದ ಕೆಲೂರ. ಇದು ಹುಟ್ಟಿದ್ದರ ಹಿಂದೆ ಒಂದು ರೋಚಕ ಕತೆ ಇದೆ. ದೂರದ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ರೋಣದಂತಹ ತಾಲೂಕಿನ ಅಂಧ ಮಕ್ಕಳ ಪಾಲಿಗೆ ಬೆಳಕಾಗಿ ಬಂದಿದೆ.

ಶಿಷ್ಯನ ಕಷ್ಟವೇ ಪ್ರೇರಣೆ

ಅಂದು ಆಗಿದ್ದು ಇಷ್ಟು. ಶಿವಾನಂದ ಕೆಲೂರ ಅವರು ಸ್ವಯಂ ಪ್ರೇರಿತರಾಗಿ ತಮ್ಮ ಸುತ್ತ ಮುತ್ತಲ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಉಚಿತವಾಗಿ ಯೋಗ ಹೇಳಿಕೊಡುತ್ತಿದ್ದರು. ಇವರಿಂದ ಯೋಗ ಕಲಿತ ಅಂಧ ಹುಡುಗನೊಬ್ಬ ಮತ್ತೊಬ್ಬ ಅಂಧೆಯನ್ನು ಮದುವೆಯಾಗಿ ಹುಟ್ಟಿದ ಒಂದು ಮಗುವನ್ನು ಸಾಕುವುದಕ್ಕಾಗಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಭಿಕ್ಷೆ ಬೇಡುತ್ತಿರುತ್ತಾನೆ.

ಇದನ್ನು ನೋಡಿದ ಶಿವಾನಂದ ಅವರು ನನ್ನಿಂದ ಯೋಗ ಕಲಿತ ವಿದ್ಯಾರ್ಥಿ ಒಳ್ಳೆಯ ಬದುಕು ಕಟ್ಟಿಕೊಳ್ಳದೇ ಈ ರೀತಿ ಭಿಕ್ಷೆ ಬೇಡುತ್ತಿರುವುದಕ್ಕೆ ಏನು ಕಾರಣ, ಬೇರೆ ಅಂಧರ ಬದುಕಲ್ಲಿ ಈ ರೀತಿಯ ಘಟನೆ ಆಗಬಾರದು ಎಂದರೆ ತಾನೇನು ಮಾಡಬೇಕು ಎಂದು ಆಲೋಚಿಸುತ್ತಿರುವಾಗಲೇ ಹುಟ್ಟಿದ್ದು ಅಂಧ ಮಕ್ಕಳ ವಸತಿ ಶಾಲೆ ಪರಿಕಲ್ಪನೆ.

ಹೀಗೊಂದು ಆಲೋಚನೆ ಹುಟ್ಟಿದ ಕೂಡಲೇ ತನ್ನ ತಾಯಿ ತುಳಸಮ್ಮನಿಗೆ ಇದನ್ನು ಹೇಳುತ್ತಾರೆ. ಶಾಲೆಯೊಂದರಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದ ತುಳಸಮ್ಮ ಮಗನ ಕಾರ್ಯಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಇದರ ಫಲವಾಗಿ 2010ರಲ್ಲಿ ಯೋಗೀಶ್ವರ ವಿವಿಧೋದ್ದೇಶ ಸಮಿತಿ ಅಡಿಯಲ್ಲಿ ಜ್ಞಾನ ಸಿಂಧೂ ಅಂಧ ಮಕ್ಕಳ ವಸತಿ ಶಾಲೆ ಎದ್ದು ನಿಲ್ಲುತ್ತದೆ.

ದುಡಿದ ದುಡ್ಡೆಲ್ಲಾ ಶಾಲೆಯ ಅಭಿವೃದ್ಧಿಗೆ

‘ನಾನು ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೆ. ಒಂದಷ್ಟುಜಮೀನು ಇತ್ತು. ಇವುಗಳಿಂದ ಬಂದ ಆದಾಯದಲ್ಲಿ ಶಾಲೆ ಮುನ್ನಡೆಸಿಕೊಂಡು ಹೋಗಬಹುದು ಎನ್ನುವ ಲೆಕ್ಕಾಚಾರ ಮಾಡಿದೆ. ಆದರೆ ಇದರಿಂದಲೇ ಎಲ್ಲವನ್ನೂ ಮುಂದುವರೆಸಲು ಕಷ್ಟವಾಗುತ್ತದೆ ಎಂದುಕೊಳ್ಳುವಾಗ ಬೆಂಗಳೂರಿನ ‘ನೆಸ್ಟ್‌’ ಸಂಸ್ಥೆ ನನ್ನ ಸಹಕಾರಕ್ಕೆ ಬಂತು. ಕೆಲವರು ಆರ್ಥಿಕ ಸಹಾಯ ಮಾಡಿದರು. ಇದರಿಂದ ನನಗೆ ಹೆಚ್ಚು ಕಷ್ಟವಾಗಲಿಲ್ಲ. ನನ್ನ ಅಮ್ಮ ತುಳಸಮ್ಮ ಮತ್ತು ಹೆಂಡತಿ ಮಹಾಲಕ್ಷ್ಮಿ ಅವರು ನನ್ನ ಬೆನ್ನಿಗೆ ನಿಂತದ್ದರಿಂದ ನಾನು ಅಂದುಕೊಂಡಿದ್ದು ಸಾಧ್ಯವಾಯಿತು. 5 ಮಕ್ಕಳಿಂದ ಶುರುವಾದ ನಮ್ಮ ಶಾಲೆಯಲ್ಲಿ ಇಂದು 97 ಮಕ್ಕಳಿದ್ದಾರೆ. 14 ಮಂದಿ ಶಿಕ್ಷಕಿಯರಿದ್ದಾರೆ. ಇಲ್ಲಿ ಬರುವ ಎಲ್ಲಾ ಮಕ್ಕಳಿಗೂ ಸಂಪೂರ್ಣ ಉಚಿತವಾಗಿ ಯೋಗ, ಮಲ್ಲಗಂಬದ ಜೊತೆಗೆ ಸರಕಾರ ನಿಗದಿಪಡಿಸಿದ ಪಠ್ಯಪುಸ್ತಕಗಳ ಪಾಠ ಮಾಡುತ್ತಾ ಬಂದಿದ್ದೇವೆ’ ಎನ್ನುತ್ತಾರೆ ಶಿವಾನಂದ ಕೆಲೂರ.

ತುಳಸಮ್ಮನೆಂಬ ತಾಯಿ

ಇಲ್ಲಿ ಇರುವ 97 ಮಕ್ಕಳಿಗೆ ನಿಜವಾದ ತಾಯಿಯಂತೆ ಇರುವುದು ತುಳಸಮ್ಮ. ಬೆಳಿಗ್ಗೆ ಎದ್ದಾಗಿನಿಂದ ಮಕ್ಕಳಿಗೆ ಸ್ನಾನ ಮಾಡಿಸುವುದರಿಂದ ಪ್ರಾರಂಭವಾಗಿ ಅವರ ಬೇಕು, ಬೇಡಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವುದೇ ಇವರು. ಬ್ರೈಲ… ಆಧಾರಿತ ಓದು-ಬರಹ, ಕಂಪ್ಯೂಟರ್‌ ತರಬೇತಿ, ಚಲನವಲನ ತರಬೇತಿ, ಕರಕುಶಲ, ಕ್ರೀಡೆ, ಸಂಗೀತ ಶಿಕ್ಷಣದ ಜೊತೆಗೆ ಯೋಗ, ಮಲ್ಲಗಂಬ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಇಲ್ಲಿ. 6 ರಿಂದ 18 ವರ್ಷ ವಯಸ್ಸಿನ ಅಂಧ ಮಕ್ಕಳು ಇಲ್ಲಿದ್ದು, 1ರಿಂದ 9ನೇ ತರಗತಿಗಳು ನಡೆಯುತ್ತಿವೆ.

ಸಾಲು ಸಾಲು ಸಾಧನೆಗಳು

2010, 2011 ಮತ್ತು 2012ರಲ್ಲಿ ನಿರಂತರವಾಗಿ ಮೂರು ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡು ಯೋಗ, ಮಲ್ಲಗಂಬ ಪ್ರದರ್ಶನ ನೀಡಿದ್ದ ಗರಿಮೆ ಈ ಮಕ್ಕಳದ್ದು, ದೆಹಲಿಯಲ್ಲಿ ನಡೆದ ವಿಶ್ವ ಯೋಗ ದಿನ, ಯೋಗ ಸಪ್ತಾಹ ಮತ್ತು ಅಂತಾರಾಷ್ಟ್ರೀಯ ಯೋಗ ಹಬ್ಬದಲ್ಲಿ ಈ ಶಾಲೆಯ ಮಕ್ಕಳು ಪ್ರದರ್ಶನ ನೀಡಿದ್ದಾರೆ.

2012 ರಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಸರಕಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಸುಮಾರು 40 ದೇಶಗಳ ಸಾಮಾನ್ಯ ಮಕ್ಕಳ ವಿರುದ್ಧದ ಸ್ಪರ್ಧೆಯಲ್ಲಿ ಇಲ್ಲಿನ ಮಕ್ಕಳು ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿದ್ದು ದೊಡ್ಡ ಸಾಧನೆ.

- ಮಂಜುನಾಥ ಗದಗಿನ