Asianet Suvarna News Asianet Suvarna News

ಶ್ರೀರಾಮುಲು ಗೆಲ್ಲಿಸಿ ಡಿಸಿಎಂ ಮಾಡಲು ಜನಾರ್ದನ ರೆಡ್ಡಿ ಪಣ

ಬಿಜೆಪಿಗೂ ಮತ್ತು ಗಾಲಿ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಬಹಿರಂಗವಾಗಿ ಹೇಳಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದ ರೆಡ್ಡಿ ಅವರು ತಮ್ಮ ಆಪ್ತಮಿತ್ರ ಹಾಗೂ ಸಂಸದ ಬಿ.ಶ್ರೀರಾಮುಲು ಅವರು ರಾಜ್ಯ ರಾಜಕಾರಣಕ್ಕೆ ಮರಳುವುದಕ್ಕಾಗಿ ಟೊಂಕಕಟ್ಟಿನಿಲ್ಲಲು ಮುಂದಾಗಿದ್ದಾರೆ.

Janardhana Reddy striving to make Sriramulu a DyCM

- ರೆಡ್ಡಿಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದು ಅಮಿತ್‌ ಶಾ ಹೇಳಿದ್ದರೂ ರಾಮುಲು ಪರ ಚುನಾವಣಾ ಹೊಣೆ ಹೊರಲು ಸಿದ್ಧತೆ

- ಬಳ್ಳಾರಿ ಗಡಿಭಾಗದಲ್ಲಿ ವಾಸ್ತವ್ಯ ಹೂಡಲು ಸಕಲ ವ್ಯವಸ್ಥೆ

- ರಾಮುಲು ರಾಜ್ಯಾದ್ಯಂತ ಸಂಚರಿಸಿ ಬಿಜೆಪಿಗೆ ಹೆಚ್ಚು ಸ್ಥಾನ ತಂದು ಕೊಡಲಿ ಎಂದು ರೆಡ್ಡಿ ಆಶಯ

- ಆಪ್ತಮಿತ್ರ ರಾಮುಲು ಎಲ್ಲೇ ಸ್ಪರ್ಧಿಸಿದರೂ ಗೆಲ್ಲಿಸಿಕೊಡುವ ಜವಾಬ್ದಾರಿ ತಮ್ಮದು ಎಂದ ರೆಡ್ಡಿ

- ಬಳ್ಳಾರಿ ಹೊರತುಪಡಿಸಿ ಬೇರೆ ಜಿಲ್ಲೆಗಳಿಂದ ಸ್ಪರ್ಧಿಸುವಂತೆ ರಾಮುಲುಗೆ ಸಲಹೆ ನೀಡಿದ್ದೇ ರೆಡ್ಡಿ

- ತಾವು ಬಳ್ಳಾರಿ ಜಿಲ್ಲೆಗೆ ಪ್ರವೇಶಿಸಲು ಕೋರ್ಟ್‌ ನಿರ್ಬಂಧ ಇರುವುದರಿಂದ ಈ ತಂತ್ರಗಾರಿಕೆ

- ರಾಮುಲು ಗೆಲ್ಲಿಸಿ ಉಪಮುಖ್ಯಮಂತ್ರಿ ಮಾಡೋದೇ ನನ್ನ ಗುರಿ ಎಂದು ಆಪ್ತರ ಬಳಿ ಹೇಳಿಕೆ

- ವಿಜಯ್‌ ಮಲಗಿಹಾಳ

ಬೆಂಗಳೂರು: ಬಿಜೆಪಿಗೂ ಮತ್ತು ಗಾಲಿ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಬಹಿರಂಗವಾಗಿ ಹೇಳಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದ ರೆಡ್ಡಿ ಅವರು ತಮ್ಮ ಆಪ್ತಮಿತ್ರ ಹಾಗೂ ಸಂಸದ ಬಿ.ಶ್ರೀರಾಮುಲು ಅವರು ರಾಜ್ಯ ರಾಜಕಾರಣಕ್ಕೆ ಮರಳುವುದಕ್ಕಾಗಿ ಟೊಂಕಕಟ್ಟಿನಿಲ್ಲಲು ಮುಂದಾಗಿದ್ದಾರೆ.

ಅಂದರೆ, ಶ್ರೀರಾಮುಲು ಅವರ ವಿಧಾನಸಭಾ ಚುನಾವಣೆಯ ಹೊಣೆಯನ್ನು ಜನಾರ್ದನರೆಡ್ಡಿ ವಹಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ತೆರೆಮರೆಯಲ್ಲಿ ರಾಮುಲು ಸ್ಪರ್ಧಿಸಲಿರುವ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಕ್ಷೇತ್ರದ ಚುನಾವಣೆಯನ್ನು ರೆಡ್ಡಿ ಅವರೇ ನಿಯಂತ್ರಿಸಲಿದ್ದಾರೆ.

ಗೆಳೆಯ ಶ್ರೀರಾಮುಲು ರಾಜ್ಯಾದ್ಯಂತ ಓಡಾಡಿ ಪಕ್ಷಕ್ಕೆ ಹೆಚ್ಚು ಸ್ಥಾನ ತಂದು ಕೊಡಲಿ. ನಾನು ಆತನ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರಲು ನೆರವಾಗುತ್ತೇನೆ ಎಂಬ ಮಾತನ್ನು ರೆಡ್ಡಿ ಅವರು ತಮ್ಮ ಬೆಂಬಲಿಗರ ಬಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಬಳ್ಳಾರಿ ಜಿಲ್ಲೆಯನ್ನು ಹೊರತುಪಡಿಸಿ ಅಕ್ಕಪಕ್ಕದ ಜಿಲ್ಲೆಗಳಿಂದ ಸ್ಪರ್ಧಿಸುವಂತೆ ಶ್ರೀರಾಮುಲು ಮತ್ತು ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದೇ ಜನಾರ್ದನರೆಡ್ಡಿ ಎಂಬ ಮಾತೂ ಅವರ ಆಪ್ತ ಬಳಗದಿಂದ ಹೊರಬಿದ್ದಿದೆ. ಅಷ್ಟೇ ಅಲ್ಲ, ಶ್ರೀರಾಮುಲು ಅವರನ್ನು ಈ ಬಾರಿ ಉಪಮುಖ್ಯಮಂತ್ರಿನ್ನಾಗಿ ಮಾಡಬೇಕು ಎಂಬ ದಿಕ್ಕಿನಲ್ಲಿ ಸಕಲ ಪ್ರಯತ್ನ ನಡೆಸುವುದಾಗಿಯೂ ರೆಡ್ಡಿ ತಮ್ಮ ಬೆಂಬಲಿಗರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ನ್ಯಾಯಾಲಯದ ನಿರ್ಬಂಧ ಇರುವುದರಿಂದ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಜಿಲ್ಲೆ ಪ್ರವೇಶಿಸುವಂತಿಲ್ಲ. ಹೀಗಾಗಿ ಬಳ್ಳಾರಿ ಜಿಲ್ಲೆಗೆ ಅಂಟಿಕೊಂಡಿರುವ ಕೊಪ್ಪಳ ಅಥವಾ ಚಿತ್ರದುರ್ಗ ಜಿಲ್ಲೆಗಳಲ್ಲಿ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಿದರೆ ತಾವು ಅಲ್ಲಿಯೇ ಮನೆ ಮಾಡಬಹುದು ಎಂಬುದು ರೆಡ್ಡಿ ಅವರ ಲೆಕ್ಕಾಚಾರ. ಈಗಾಗಲೇ ರೆಡ್ಡಿ ಅವರು ಕೊಪ್ಪಳ ಮತ್ತು ಬಳ್ಳಾರಿ ಗಡಿ ಭಾಗದಲ್ಲಿರುವ ಆನೆಗೊಂದಿ ಹಾಗೂ ಚಿತ್ರದುರ್ಗ ಹಾಗೂ ಬಳ್ಳಾರಿ ಗಡಿಭಾಗದಲ್ಲಿರುವ ಮೊಳಕಾಲ್ಮುರು ಕ್ಷೇತ್ರಗಳಲ್ಲಿ ವಾಸ್ತವ್ಯ ಹೂಡಲು ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ.

ಸದ್ಯಕ್ಕೆ ಬಿಜೆಪಿಯ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ಶ್ರೀರಾಮುಲು ಅವರಿಗೆ ಮೊಳಕಾಲ್ಮುರು ಕ್ಷೇತ್ರದ ಟಿಕೆಟ್‌ ಘೋಷಿಸಲಾಗಿದೆ. ಈ ನಡುವೆ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ಮುಂದಾಗಿರುವಂತೆ ರಾಮುಲು ಅವರನ್ನೂ ಮೊಳಕಾಲ್ಮುರು ಜತೆಗೆ ಹಳೆ ಮೈಸೂರು ಭಾಗದ ಎಚ್‌.ಡಿ.ಕೋಟೆ ಅಥವಾ ಇನ್ಯಾವುದಾದರೂ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿಸುವ ಬಗ್ಗೆ ಚಿಂತನೆ ನಡೆದಿದೆ. ಹಾಗೊಂದು ವೇಳೆ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದರೂ ಅವುಗಳ ಹೊಣೆಯನ್ನು ಹೊರಲು ಜನಾರ್ದನರೆಡ್ಡಿ ಸಜ್ಜಾಗಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಜನಾರ್ದನರೆಡ್ಡಿ ಅವರಿಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂಬ ಮಾತನ್ನು ಬಹಿರಂಗವಾಗಿಯೇ ಹೇಳಿದ್ದರು. ಈ ಮಾತಿನ ಬೆನ್ನಲ್ಲೇ ರೆಡ್ಡಿ ಅವರು ತಟಸ್ಥರಾಗುತ್ತಾರೆ, ಅನ್ಯ ಪಕ್ಷಕ್ಕೆ ವಲಸೆ ಹೋಗಬಹುದು ಎಂಬಿತ್ಯಾದಿ ವದಂತಿಗಳು ಹಬ್ಬಿದ್ದವು. ಆದರೆ, ಅದೆಲ್ಲ ಕೇವಲ ವದಂತಿ ಎಂಬುದನ್ನು ರಾಮುಲು ಸೇರಿದಂತೆ ತಮ್ಮ ಆಪ್ತ ಬಳಗಕ್ಕೆ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಅಧ್ಯಕ್ಷರು ಯಾವ ಸಂದರ್ಭದಲ್ಲಿ, ಪತ್ರಕರ್ತರ ಯಾವ ಪ್ರಶ್ನೆಗೆ ಉತ್ತರ ನೀಡಿದ್ದಾರೋ ಗೊತ್ತಿಲ್ಲ. ಅದು ಮುಖ್ಯವೂ ಅಲ್ಲ. ಬಿಜೆಪಿ ಅಧಿಕಾರಕ್ಕೆ ಬರಬೇಕು. ಮಿತ್ರ ರಾಮುಲು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಉಪಮುಖ್ಯಮಂತ್ರಿಯಾಗಬೇಕು. ಈ ದಿಕ್ಕಿನಲ್ಲಿ ನನ್ನ ಎಲ್ಲ ಶ್ರಮವನ್ನೂ ಹಾಕುತ್ತೇನೆ ಎಂದು ಹೇಳಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪರಿಶಿಷ್ಟಪಂಗಡ ಸಮುಪಾದಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ಕೊಡಬೇಕು ಎಂಬ ಕೂಗು ಇದೆ. ಇದೇ ವೇಳೆ, ನಾನು ಉಪಮುಖ್ಯಮಂತ್ರಿಯಾಗಬೇಕು ಎಂದು ಪಕ್ಷದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಆದರೆ, ಅದು ಪಕ್ಷದ ಹಿರಿಯ ನಾಯಕರಿಗೆ ಬಿಟ್ಟವಿಚಾರ. ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ.

- ಬಿ.ಶ್ರೀರಾಮುಲು, ಮೊಳಕಾಲ್ಮುರು ಬಿಜೆಪಿ ಅಭ್ಯರ್ಥಿ

Follow Us:
Download App:
  • android
  • ios