Asianet Suvarna News Asianet Suvarna News

ಬೆಂಗಳೂರಲ್ಲಿ ಈ ಮಾರ್ಗದ 65 ಕಿ.ಮೀ. ಕ್ರಮಿಸಲು ರೈಲಿಗೆ ಬೇಕು ಎರಡು ಗಂಟೆ!

* ಯಶವಂತಪುರ-ಹೊಸೂರು ರೈಲು ಮಾರ್ಗದ ಮರ್ಮ
* ಸಿಂಗಲ್ ಹಳಿ, ಪ್ಯಾಸೆಂಜರ್, ಡೆಮು ರೈಲುಗಳಿಂದಾಗಿ ಪ್ರಯಾಣಿಕರು ಹೈರಾಣ
* ಅನೇಕ ರೈಲುಗಳು ಈ ಮಾರ್ಗದ ನಿಲ್ದಾಣಗಳಲ್ಲಿ ನಿಲ್ಲದೇ ಹೋಗುವುದರಿಂದ ಪ್ರಯಾಣಿಕರು ಡೆಮು ಅಥವಾ ಪ್ಯಾಸೆಂಜರ್ ರೈಲುಗಳನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ಇದೆ.

it takes 2 hrs to travel in train from yeshwantpur to hosur

ಬೆಂಗಳೂರು: ಬೆಂಗಳೂರಿನ ಐಟಿ ಕಾರಿಡಾರ್‌'ನ್ನು ಸಂಪರ್ಕಿಸುವ ಸಾವಿರಾರು ಟೆಕಿಗಳು, ಯಶವಂತಪುರ- ಹೊಸೂರು ಕಡೆಗೆ ಮಧ್ಯ ನಿತ್ಯ ಪ್ರಯಾಣಿಸುವ ಸಾವಿರಾರು ನೌಕರರು ರೈಲುಗಳಲ್ಲಿ ಪ್ರಯಾಣಿಸಲಾಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಯಶವಂತಪುರ- ಹೊಸೂರುಗಳ ನಡುವೆ ಸಿಂಗಲ್ ರೈಲು ಮಾರ್ಗ ಇರುವುದರಿಂದ ಜನರು ಪ್ರತಿ ದಿನ ರೈಲಿಗಾಗಿ ಗಂಟೆಗಟ್ಟಲೆ ಕಾಯುವ ಮೂಲಕ ಪ್ರಯಾಣವನ್ನು ನರಕವಾಗಿಸಿದೆ.

ಯಶವಂತಪುರ- ಹೊಸೂರು ಮಾರ್ಗ (65.1 ಕಿಮೀ) ಮಾರ್ಗವನ್ನು ಡಬ್ಲಿಂಗ್ ಮಾಡಬೇಕೆನ್ನುವ ಬೇಡಿಕೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಈ ಮಾರ್ಗದ ಅನೇಕ ರೈಲುಗಳು ಸಮಯಕ್ಕೆ ಸರಿಯಾಗಿ ಸಂಚರಿಸದೇ ಇರಲು ಕಾರಣವಾಗಿದೆ. ಇರುವ ಎಕ್ಸ್‌'ಪ್ರೆಸ್ ರೈಲುಗಳು ತಡೆರಹಿತವಾಗಿರುವುದರಿಂದ ಅನೇಕ ನಿಲ್ದಾಣಗಳಲ್ಲಿ ನಿಲ್ಲದೇ ಇರುವುದರಿಂದ ಈ ಮಾರ್ಗದ ಪ್ಯಾಸೆಂಜರ್, ಡೆಮು ರೈಲುಗಳಲ್ಲೇ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಆದರೆ ಎಕ್ಸ್‌'ಪ್ರೆಸ್ ಸೇರಿದಂತೆ ಇನ್ನಿತರ ರೈಲುಗಳಿಗೆ ಮಾರ್ಗ ತೆರವು ಮಾಡಲು ನಿಲ್ದಾಣದಲ್ಲಿ ನಿಲ್ಲಿಸುವುದರಿಂದ ಡೆಮು ರೈಲುಗಳು ಯಶವಂತಪುರ- ಹೊಸೂರು ಕ್ರಮಿಸಲು ಎರಡು ಗಂಟೆಗೂ ಹೆಚ್ಚು ಕಾಲ ತೆಗೆದುಕೊಳ್ಳುತ್ತಿವೆ. ಇದರಿಂದಾಗಿ ವಿವಿಧ ಕೆಲಸಗಳಿಗೆ ನಿಗದಿತ ಸಮಯಕ್ಕೆ ಹೋಗದಂತಾಗಿದೆ.

ರೈಲಿಲ್ಲ .. ಪ್ರಯಾಣಿಕರಿದ್ದಾರೆ:
ಮೊದಲಿಗೆ ಈ ಮಾರ್ಗದಲ್ಲಿ ರೈಲು ಇದ್ದರೂ ಪ್ರಯಾಣಿಕರಿಲ್ಲವೆಂಬ ಸ್ಥಿತಿ ಇತ್ತು. ದಿನದ ರೈಲುಗಳು ಬಹುತೇಕ ಖಾಲಿಯಾಗಿ ಓಡುತ್ತಿದ್ದವು. ಆದರೆ ಈಗ ಹಾಗಿಲ್ಲ ಪ್ರಯಾಣಿಕರು ಸಾವಿರಾರು ಸಂಖ್ಯೆಯಲ್ಲಿದ್ದರೂ, ರೈಲುಗಳ ಲಭ್ಯತೆ ಅಗತ್ಯಕ್ಕೆ ತಕ್ಕಂತೆ ಇಲ್ಲ. 1 ಗರೀಬ್ ರಥ್, 7 ಮೇಲ್/ ಎಕ್ಸ್‌'ಪ್ರೆಸ್ ರೈಲು, 3 ಪ್ಯಾಸೆಂಜರ್ ರೈಲು, 2 ಡೆಮು, 2 ಸೂಪರ್ ಫಾಸ್ಟ್ ರೈಲುಗಳು ಈ ಮಾರ್ಗದಲ್ಲಿ ಓಡಾಡುತ್ತಿವೆ. ಆದರೆ ಅನೇಕ ರೈಲುಗಳು ಈ ಮಾರ್ಗದ ನಿಲ್ದಾಣಗಳಲ್ಲಿ ನಿಲ್ಲದೇ ಹೋಗುವುದರಿಂದ ಪ್ರಯಾಣಿಕರು ಡೆಮು ಅಥವಾ ಪ್ಯಾಸೆಂಜರ್ ರೈಲುಗಳನ್ನೇ ಅವಲಂಭಿಸಬೇಕಾದ ಪರಿಸ್ಥಿತಿ ಇದೆ.

8 ಲಕ್ಷ ವಾಹನ!:
ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್, ಇಲೆಕ್ಟ್ರಾನಿಕ್ ಸಿಟಿ ಮೊದಲಾದ ಕಡೆಗೆ ತೆರಳುವ ನೌಕರರು ಇದೀಗ ಪ್ರತಿನಿತ್ಯ ಸುಮಾರು 8 ಲಕ್ಷ ವಾಹನಗಳನ್ನು ಬಳಸುತ್ತಿದ್ದಾರೆಂದು ಅಂದಾಜಿಸಲಾಗಿದೆ. ನೌಕರರು ಬಹುತೇಕ ರಸ್ತೆ ಮಾರ್ಗವನ್ನೇ ನೆಚ್ಚಿಕೊಂಡಿರುವುದರಿಂದಾಗಿ ವಾಹನ ದಟ್ಟಣೆ ಭಾರೀ ಪ್ರಮಾಣದಲ್ಲಿರುತ್ತದೆ. ಸಮಸ್ಯೆ ನಿವಾರಿಸಲು ಕನಿಷ್ಠ ಈ ಮಾರ್ಗದಲ್ಲಿ ಸಂಚರಿಸುವ ನಿಲುಗಡೆ ರಹಿತ ರೈಲುಗಳು ನಿಲ್ಲುವಂತಾದಲ್ಲಿ ಜನರ ಸಮಸ್ಯೆಯೂ ನಿವಾರಣೆ ಆಗುತ್ತದೆ. ರಸ್ತೆ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.

ಆಟೋ ಸಿಗ್ನಲಿಂಗ್ ವ್ಯವಸ್ಥೆ:
ಈ ಮಾರ್ಗದಲ್ಲಿ ಇನ್ನಷ್ಟು ರೈಲುಗಳು (ಲಘು ದೂರ ಕ್ರಮಿಸುವ) ಲಭ್ಯವಾದಲ್ಲಿ ಹೊರ ವರ್ತುಲ ರಸ್ತೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಸ್ವಲ್ಪ ಪ್ರಮಾಣದಲ್ಲಾದರೂ ಬ್ರೇಕ್ ಹಾಕಬಹುದು ಎಂದು ನಗರ ಯೋಜನಾ ತಜ್ಞರು ವಿಶ್ಲೇಷಿಸುತ್ತಾರೆ. ಜತೆಗೆ ಈಗ ಇರುವ ಹಳೆಯ ಸಿಗ್ನಲಿಂಗ್ ವ್ಯವಸ್ಥೆ ಬದಲು ಆಟೋ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸಿದಲ್ಲಿ ಈಗ ಇರುವ ರೈಲುಗಳೇ ಇನ್ನಷ್ಟು ವೇಗವಾಗಿ ಸಂಚರಿಸಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಸಬ್‌'ಅರ್ಬನ್ ರೈಲು ನಿರೀಕ್ಷೆ:
ಯೋಜಿತ ಉಪನಗರ ರೈಲು ಈ ಮಾರ್ಗದ ಪ್ರಯಾಣಿಕರಿಗೂ ಅನುಕೂಲತೆ ಕಲ್ಪಿಸಲಿದೆ. ಜೊತೆಗೆ ಇನ್ನಷ್ಟು ಹೆಚ್ಚಿನ ರೈಲುಗಳ ಸೌಲಭ್ಯವನ್ನೂ ಒದಗಿಸಲಿದೆ. ಆದರೆ ಎಷ್ಟೇ ಹೆಚ್ಚು ರೈಲು ದಗಿಸಿದರೂ ಒಂದೇ ಮಾರ್ಗ ಇರುವುದರಿಂದ ಡಬ್ಲಿಂಗ್ ಆಗದೇ ಯಾವ ಸಮಸ್ಯೆಯೂ ಬಗೆಹರಿಯದು ಎಂಬುದು ರೈಲ್ವೇ ತಜ್ಞರು , ರೈಲು ಬಳಕೆದಾರರ ಸಂಘಟನೆಗಳು ಅಭಿಪ್ರಾಯಪಡುತ್ತವೆ.

ಆಗಬೇಕಿರುವುದು ಏನು?
- ಯಶವಂತಪುರ-ಹೊಸೂರು ಲೈನ್ ಡಬ್ಲಿಂಗ್(ದ್ವಿಪಥ)
- ಈಗ ಇರುವ ರೈಲುಗಳ ಸಂಖ್ಯೆಯಲ್ಲಿ ಹೆಚ್ಚಳ
- ಬೆಳ್ಳಂದೂರುನಲ್ಲಿ ಕ್ರಾಸಿಂಗ್ ವ್ಯವಸ್ಥೆ
- ಟೆಕಿಗಳಿಗೆ ಅನುಕೂಲವಾಗುವಂತೆ ಅವರ ಪಾಳಿ ಅನುಸಾರ ರೈಲುಗಳು
- ಬೆಳಗ್ಗೆ ಮತ್ತು ಸಂಜೆ ವೇಳೆ ರೈಲುಗಳ ಲಭ್ಯತೆ ಹೆಚ್ಚಳ
- ಆಟೋ ಸಿಗ್ನಲಿಂಗ್ ವ್ಯವಸ್ಥೆ

ಕನ್ನಡಪ್ರಭ ವಾರ್ತೆ
epaperkannadaprabha.com

Follow Us:
Download App:
  • android
  • ios