ನವದೆಹಲಿ (ಜ. 12): ರಾಹುಲ್‌ ಗಾಂಧಿ ಕೈಯಲ್ಲಿ ಭಾರತದ ಮುಂದಿನ ಭವಿಷ್ಯ ಸರಕ್ಷಿತವಾಗಿರುತ್ತದೆ ಎಂದು ಮಾಜಿ ಬ್ರಿಟಿಷ್‌ ಪ್ರಧಾನಿಯೊಬ್ಬರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ಹೊಗಳಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ವೈರಲ್‌ ಇನ್‌ ಇಂಡಿಯಾ’ ಫೇಸ್‌ಬುಕ್‌ ಪೇಜ್‌ ರಾಹುಲ್‌ ಗಾಂಧಿ ಮತ್ತು ಬ್ರಿಟಿಷ್‌ ಮಾಜಿ ಪ್ರಧಾನಿ ಟೋನಿ ಬ್ಲೇರ್‌ ಅವರ ಪೋಟೋವನ್ನು ಪೋಸ್ಟ್‌ ಮಾಡಿ, ‘ ಬ್ರಿಟಿಷ್‌ ಮಾಜಿ ಪ್ರಧಾನಿ ಟೋನಿ ಬ್ಲೈರ್‌ ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿದ್ದು, ರಾಹುಲ್‌ ನೇತೃತ್ವದಲ್ಲಿ ಭಾರತದ ಭವಿಷ್ಯ ಸುಭದ್ರವಾಗಿರಲಿದೆ’ ಎಂದಿದ್ದಾರೆ ಎಂದು ಹಿಂದಿಯಲ್ಲಿ ಒಕ್ಕಣೆ ಬರೆದು ಪೋಸ್ಟ್‌ ಮಾಡಿದೆ. ಸದ್ಯ ಈ ಸಂದೇಶ 1500 ಬಾರಿ ಶೇರ್‌ ಆಗಿದೆ.

ಆದರೆ ವಾಸ್ತವ ಏನು ಎಂದು ಪರಿಶೀಲಿಸಿದಾಗ ಬ್ಲೈರ್‌ ರಾಹುಲ್‌ ಭೇಟಿಯಾಗಿದ್ದು ನಿಜ. ಆದರೆ ಈ ರೀತಿಯ ಹೇಳಿಕೆ ನೀಡಿಲ್ಲ ಎಂದು ತಿಳಿದುಬಂದಿದೆ. 2019 ಜನವರಿ 8ರಂದು ನವದೆಹಲಿಯಲ್ಲಿ ರಾಜಕೀಯ ನಾಯಕರ ಸಭೆ ನಡೆದಿತ್ತು. ಈ ಪ್ರಯುಕ್ತ ದೆಹಲಿಗೆ ಬಂದಿದ್ದ ಬ್ಲೈರ್‌ ಕಾರ್ಯಕ್ರಮದ ಮುಗಿದ ಬಳಿಕ ರಾಹುಲ್‌ ಗಾಂಧಿಯನ್ನೂ ಭೇಟಿಯಾಗಿದ್ದರು.

ಸಭೆಯಲ್ಲಿ ಬ್ಲೈರ್‌ ಮತ್ತು ಅಬ್ಸವ್‌ರ್‍ ರೀಸಚ್‌ರ್‍ ಫೌಂಡೇಶನ್‌ ಅಧ್ಯಕ್ಷ ಸಮೀರ್‌ ಸರಾನ್‌ ಅವರೊಂದಿಗೆ ನಡೆದ ಸಂವಾದದಲ್ಲಿ ರಾಹುಲ್‌ ಗಾಂಧಿ ವಿಷಯವೇ ಪ್ರಸ್ತಾಪವಾಗಿಲ್ಲ. ಅನಂತರದಲ್ಲಿ ಬ್ಲೈರ್‌ ಅವರು ರಾಹುಲ್‌ ಗಾಂಧಿಯನ್ನು ಭೇಟಿಯಾಗಿದ್ದು, ಕಾಂಗ್ರೆಸ್‌ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಆ ಫೋಟೋವನ್ನು ಅಪ್ಲೋಡ್‌ ಮಾಡಲಾಗಿದೆ. ಅಲ್ಲದೆ ರಾಹುಲ್‌ ಗಾಂಧಿ ಕೂಡ ಟ್ವೀಟರ್‌ನಲ್ಲಿ ಅಪ್ಲೋಡ್‌ ಮಾಡಿ ಸಮಾನ ಹಿತಾಸಕ್ತಿ ವಿಚಾರಗಳ ಬಗ್ಗೆ ಚರ್ಚಿಸಿದ್ದಾಗಿ ಹೇಳಿಕೊಂಡಿದ್ದಾರೆ.

- ವೈರಲ್ ಚೆಕ್