Asianet Suvarna News Asianet Suvarna News

ಅಣೆಕಟ್ಟುಗಳ ಕಳಪೆ ನಿರ್ವಹಣೆಯೇ ಜಲಪ್ರಳಯಕ್ಕೆ ಕಾರಣಾನಾ?

ದೇಶದ ಅರ್ಧಕ್ಕಿಂತ ಹೆಚ್ಚು ಡ್ಯಾಮ್‌ಗಳು ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿವೆ | ಭಾರತದಲ್ಲಿರುವ ಹೆಚ್ಚಿನ ಬೃಹತ್ ಡ್ಯಾಮ್‌ಗಳು 1970-1990 ರ ಮಧ್ಯೆ ನಿರ್ಮಾಣವಾದುವು | ಅಣೆಕಟ್ಟುಗಳ ಕಳಪೆ ನಿರ್ವಹಣೆಯೇ ಕೇರಳ ಜಲಪ್ರಳಯಕ್ಕೆ ಕಾರಣವಂತೆ|

In proper maintenance of reservoir reason for Kerala flood
Author
Bengaluru, First Published Aug 27, 2018, 11:44 AM IST

ಬೆಂಗಳೂರು (ಆ. 27): ಕೇರಳದಲ್ಲಿ ಅಣೆಕಟ್ಟೆಗಳನ್ನು ಸರಿಯಾಗಿ ನಿರ್ವಹಿಸದೆ ಇದ್ದುದೇ ದಿಢೀರ್ ಪ್ರವಾಹ ಉಂಟಾಗಲು ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ವಿರೋಧ ಪಕ್ಷಗಳು ಕೂಡ ಡ್ಯಾಮ್‌ಗಳ ಕಳಪೆ ನಿರ್ವಹಣೆಯಿಂದಾಗಿ ಸರ್ಕಾರವೇ ಪರೋಕ್ಷವಾಗಿ ಪ್ರವಾಹಕ್ಕೆ ಕಾರಣವಾಯಿತು ಎಂದು ಆರೋಪಿಸಿವೆ.

ಸರ್ಕಾರ ಅದನ್ನು ಒಪ್ಪಿಕೊಳ್ಳುತ್ತಿಲ್ಲವಾದರೂ, ಅಣೆಕಟ್ಟೆಗಳ ಕೆಳಗಿರುವ ಪ್ರದೇಶಗಳಲ್ಲೇ ಹೆಚ್ಚು ನೆರೆಹಾನಿ ಸಂಭವಿಸಿದೆ. ಅಣೆಕಟ್ಟೆಗಳನ್ನು ನಿರ್ವಹಿಸುವುದು ಅಂದರೇನು? ನದಿಯಲ್ಲಿ ಹರಿದುಬರುವ ನೀರು ಅಣೆಕಟ್ಟೆಯಲ್ಲಿ ಸಂಗ್ರಹವಾಗುತ್ತದೆ, ಅಣೆಕಟ್ಟೆ ತುಂಬಿದಾಗ ಅದನ್ನು ಹೊರಬಿಟ್ಟರಾಯಿತು, ಅಷ್ಟೇ ಅಲ್ಲವೇ? ಅಲ್ಲ.

ನದಿ ನೀರಿನಿಂದಾಗುವ ಅಪಾಯಗಳನ್ನು ತಡೆಗಟ್ಟುವಲ್ಲಿ ಅಣೆಕಟ್ಟೆಗಳ ನಿರ್ವಹಣೆಗೆ ಬಹಳ ಪ್ರಾಮುಖ್ಯತೆಯಿದೆ. ಹಾಗಿದ್ದರೆ ಕೇರಳದಲ್ಲಿ ಏನಾಗಿದೆ? ಬೇರೆ ರಾಜ್ಯಗಳಲ್ಲಿ ಅಣೆಕಟ್ಟೆಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆ? ಕುತೂಹಲಕರ ವಿವರಗಳು ಇಲ್ಲಿವೆ.

ಕೇರಳದಲ್ಲಿ ಡ್ಯಾಮ್‌ಗಳಿಂದ ಉಂಟಾದ ಸಮಸ್ಯೆಯೇನು?

ಕೇರಳದಲ್ಲಿ 53 ದೊಡ್ಡ ಅಣೆಕಟ್ಟೆಗಳಿವೆ. ಅವುಗಳಿಗೆ ಒಟ್ಟು 7 ಲಕ್ಷ ಕೋಟಿ ಲೀಟರ್ ನೀರು ಸಂಗ್ರಹಿಸುವ ಶಕ್ತಿಯಿದೆ. ಭಾರಿ ಮಳೆಯಾಗಿ ನದಿಗಳು ತುಂಬಿ ಹರಿದಾಗ ಈ ಅಣೆಕಟ್ಟೆಗಳು ತಡೆಗೋಡೆಗಳಂತೆ ಕೆಲಸ ಮಾಡಬೇಕಿತ್ತು. ಕೇರಳದ ಅತಿ ಉದ್ದ ನದಿಯಾದ ಪೆರಿಯಾರ್ ನದಿಗೆ ಅಡ್ಡಲಾಗಿರುವ ರಾಜ್ಯದ ಎರಡು ಅತಿದೊಡ್ಡ ಡ್ಯಾಮ್‌ಗಳು ಇಡುಕ್ಕಿ ಮತ್ತು ಇಡಾಮಲೆಯಾರ್. ಇವು ಪೆರಿಯಾರ್ ನದಿಯ ವಾರ್ಷಿಕ ಹರಿವಿನ ಶೇ.21.3 ರಷ್ಟು ನೀರನ್ನು ಹಿಡಿದಿಟ್ಟುಕೊಂಡಿವೆ. ಹೀಗಾಗಿ ಪೆರಿಯಾರ್ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಬಾರದಿತ್ತು. ಆದರೆ, ಈ ಬಾರಿ ಹಾಗಾಗಿಲ್ಲ.

ಇವೆರಡೂ ಡ್ಯಾಮ್‌ಗಳಿಂದ ಸರಿಯಾದ ಮುನ್ಸೂಚನೆಯಿಲ್ಲದೆ ಭಾರಿ ಮಳೆಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಅದರಿಂದಾಗಿ ಪ್ರವಾಹ ಇನ್ನಷ್ಟು ಹೆಚ್ಚಾಗಿದೆ. ವಾಸ್ತವವಾಗಿ, ಈ ಡ್ಯಾಮ್‌ಗಳಿಲ್ಲದೆ ಇದ್ದಿದ್ದರೆ ಈ ವರ್ಷ ಕೇರಳದಲ್ಲಿ ಇಷ್ಟೊಂದು ದೊಡ್ಡ ಪ್ರವಾಹ ಸಂಭವಿಸುತ್ತಲೇ ಇರಲಿಲ್ಲ. 

ಮೊದಲೇ ತುಂಬಿದ್ದ  ನದಿಗೆ ಡ್ಯಾಮ್‌ನಿಂದಲೂ ನೀರು!

ಅಣೆಕಟ್ಟೆ ಮತ್ತು ಜಲಾಶಯಗಳು ಕೇವಲ ನೀರು ಹಿಡಿದಿಟ್ಟುಕೊಳ್ಳುವ ಕೆಲಸವನ್ನಷ್ಟೇ ಮಾಡುವುದಿಲ್ಲ, ಇವು ನೆರೆಯನ್ನು ಕೂಡ ನಿಯಂತ್ರಿಸುತ್ತವೆ. ಅಣೆಕಟ್ಟೆಗಳನ್ನು ನಿರ್ಮಿಸುವ ಉದ್ದೇಶದಲ್ಲಿ ಪ್ರವಾಹ ನಿಯಂತ್ರಣವೂ ಒಂದು. ಆದರೆ, ಪ್ರವಾಹ ನಿಯಂತ್ರಿಸಬೇಕು ಅಂದರೆ ಮಳೆಗಾಲ ಜೋರಾಗುವ ವೇಳೆಗೆ ಡ್ಯಾಮ್‌ಗಳು ಖಾಲಿಯಿರಬೇಕು. ಆದರೆ, ಕೇರಳದಲ್ಲಿ ಹಾಗೆ ಮಾಡಿಲ್ಲ. ಜುಲೈ ಅಂತ್ಯದ ವೇಳೆಗೆ, ಅಂದರೆ ಮಳೆಗಾಲ ಜೋರಾಗುವ ವೇಳೆಗೆ ಇಡುಕ್ಕಿ ಡ್ಯಾಂ ಬಹುತೇಕ ಭರ್ತಿಯಾಗಿತ್ತು!

30 ವರ್ಷದಲ್ಲಿ ಮೊದಲ ಬಾರಿ ಡ್ಯಾಂ ತುಂಬುತ್ತಿದೆ ಎಂದು ಎಲ್ಲರೂ ಖುಷಿಪಡುತ್ತಿದ್ದರು. ಆಗಸ್ಟ್‌ನಲ್ಲಿ ಮಳೆ ಇನ್ನೂ ಜೋರಾದಾಗ ಈಗಾಗಲೇ ನೆರೆಹಾವಳಿ ಶುರುವಾಗಿದ್ದ ಪ್ರದೇಶಕ್ಕೆ ಇದೇ ಇಡುಕ್ಕಿ ಡ್ಯಾಮ್‌ನಿಂದ ನೀರು ಬಿಡಲಾಯಿತು. ಇದು ಪ್ರವಾಹದ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿತು.

ಕೇರಳದ ಶೇ.57 ರಷ್ಟು ಡ್ಯಾಮ್ ಗಳು ವಿದ್ಯುತ್ ಉತ್ಪಾದನೆಗೆಂದು ನಿರ್ಮಾಣವಾದುವು. ಅವುಗಳನ್ನು ಕೇರಳ ರಾಜ್ಯ ವಿದ್ಯುತ್ ಮಂಡಳಿ ನೋಡಿಕೊಳ್ಳುತ್ತದೆ. ಇನ್ನುಳಿದ ಅಣೆಕಟ್ಟೆಗಳನ್ನು ನೀರಾವರಿ ಇಲಾಖೆ ನಿರ್ವಹಿಸುತ್ತದೆ.

ಎರಡೂ ಸಂಸ್ಥೆಗಳು ವಿದ್ಯುತ್ ಹಾಗೂ ನೀರಾವರಿಗೆ ಹೆಚ್ಚೆಚ್ಚು ನೀರು ಸಂಗ್ರಹಿಸಿಕೊಳ್ಳುವ ಕುರಿತು ಮಾತ್ರ ಯೋಚನೆ ಮಾಡುತ್ತವೆಯೇ ಹೊರತು ಪ್ರವಾಹ ನಿಯಂತ್ರಣದ ಬಗ್ಗೆ ಯೋಚಿಸುವುದಿಲ್ಲ. ಅಂತಾರಾಜ್ಯ ಅಣೆಕಟ್ಟೆಗಳ ಸಮಸ್ಯೆ
ನಮ್ಮ ದೇಶದಲ್ಲಿ ಅಣೆಕಟ್ಟೆಗಳಿಗೆ ಸಂಬಂಧಿಸಿದಂತೆ ರಾಜ್ಯ-ರಾಜ್ಯಗಳ ನಡುವೆ ಸಾಕಷ್ಟು ವಿವಾದಗಳಿವೆ.

ಕೇರಳದ ದೊಡ್ಡ ಅಣೆಕಟ್ಟೆಗಳಲ್ಲಿ ಒಂದಾಗಿರುವ ಮುಲ್ಲಾಪೆರಿಯಾರ್ ಡ್ಯಾಂ ತಮಿಳುನಾಡಿನಲ್ಲಿದೆ. ಇದರ ಮಾಲಿಕತ್ವ ಕೇರಳದ್ದಾದರೂ ತಮಿಳುನಾಡಿನ ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ. ಈ ಡ್ಯಾಮ್‌ನ ನೀರಿನ ಮಟ್ಟದ ಕುರಿತಾಗಿ ಉಭಯ ರಾಜ್ಯಗಳ ನಡುವೆ ಯಾವಾಗಲೂ ತಕರಾರು ನಡೆಯುತ್ತಿರುತ್ತದೆ.

ಇಂತಹ ಹಲವು ಡ್ಯಾಮ್‌ಗಳು ನಮ್ಮ ದೇಶದಲ್ಲಿವೆ. ಈ ಬಾರಿ ಮುಲ್ಲಾಪೆರಿಯಾರ್ ಡ್ಯಾಮ್‌ನಿಂದ ತಮಿಳುನಾಡಿನ ಅಧಿಕಾರಿಗಳು ಅವೈಜ್ಞಾನಿಕವಾಗಿ ನೀರು ಬಿಡುಗಡೆ ಮಾಡಿದ್ದು ಕೂಡ ಕೇರಳದಲ್ಲಿ ಪ್ರವಾಹಕ್ಕೆ ಕಾರಣವಾಗಿದೆ.

ಅಂತರಾಜ್ಯ ಅಣೆಕಟ್ಟುಗಳ ಸಮಸ್ಯೆ 

ನಮ್ಮ ದೇಶದಲ್ಲಿ ಅಣೆಕಟ್ಟೆಗಳಿಗೆ ಸಂಬಂಧಿಸಿದಂತೆ ರಾಜ್ಯ-ರಾಜ್ಯಗಳ ನಡುವೆ ಸಾಕಷ್ಟು ವಿವಾದಗಳಿವೆ. ಕೇರಳದ ದೊಡ್ಡ ಅಣೆಕಟ್ಟೆಗಳಲ್ಲಿ ಒಂದಾಗಿರುವ ಮುಲ್ಲಾಪೆರಿಯಾರ್ ಡ್ಯಾಂ ತಮಿಳುನಾಡಿನಲ್ಲಿದೆ. ಇದರ ಮಾಲಿಕತ್ವ ಕೇರಳದ್ದಾದರೂ ತಮಿಳುನಾಡಿನ ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ.

ಈ ಡ್ಯಾಮ್‌ನ ನೀರಿನ ಮಟ್ಟದ ಕುರಿತಾಗಿ ಉಭಯ ರಾಜ್ಯಗಳ ನಡುವೆ ಯಾವಾಗಲೂ ತಕರಾರು ನಡೆಯುತ್ತಿರುತ್ತದೆ. ಇಂತಹ ಹಲವು ಡ್ಯಾಮ್‌ಗಳು ನಮ್ಮ ದೇಶದಲ್ಲಿವೆ. ಈ ಬಾರಿ ಮುಲ್ಲಾಪೆರಿಯಾರ್ ಡ್ಯಾಮ್‌ನಿಂದ ತಮಿಳುನಾಡಿನ ಅಧಿಕಾರಿಗಳು ಅವೈಜ್ಞಾನಿಕವಾಗಿ ನೀರು ಬಿಡುಗಡೆ ಮಾಡಿದ್ದು ಕೂಡ ಕೇರಳದಲ್ಲಿ ಪ್ರವಾಹಕ್ಕೆ ಕಾರಣವಾಗಿದೆ.

ನಮ್ಮ ದೇಶದಲ್ಲಿದೆ 5250 ಡ್ಯಾಂ!

ನೀರಿನ ಹರಿವನ್ನು ನಿಯಂತ್ರಿಸುವ ಹುಚ್ಚು ನಮ್ಮ ದೇಶಕ್ಕೆ ಬಹಳ ಹಿಂದಿನಿಂದ ಇದೆ. ಹೀಗಾಗಿ ದೊಡ್ಡ ದೊಡ್ಡ ಅಣೆಕಟ್ಟೆಗಳನ್ನೇ ನಿರ್ಮಿಸಲಾಗಿದೆ. ದೇಶದಲ್ಲಿ 15 ಮೀಟರ್‌ಗಿಂತ ಎತ್ತರದ ಸುಮಾರು 5254 ದೊಡ್ಡ ಡ್ಯಾಮ್ಗಳಿವೆ. ಇದು ಜಗತ್ತಿನಲ್ಲೇ ಮೂರನೇ ಅತಿ ಹೆಚ್ಚು. ಅಮೆರಿಕದಲ್ಲಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಅಣೆಕಟ್ಟೆಗಳಿವೆ. ಚೀನಾ 2 ನೇ ಸ್ಥಾನದಲ್ಲಿದೆ.

ನಮ್ಮಲ್ಲಿರುವ ಡ್ಯಾಮ್‌ಗಳಲ್ಲಿ ಕೇವಲ 28 ಡ್ಯಾಮ್‌ಗಳನ್ನು ಮಾತ್ರ ಪ್ರವಾಹ ನಿಯಂತ್ರಣಕ್ಕೆಂದೇ ನಿರ್ಮಿಸಲಾಗಿದೆ. ವಿದ್ಯುತ್ ಅಥವಾ ನೀರಾವರಿ ಉದ್ದೇಶಕ್ಕೆಂದು ನಿರ್ಮಿಸಿದ ಡ್ಯಾಮ್‌ಗಳನ್ನು ಕೂಡ ಸರಿಯಾಗಿ ನಿರ್ವಹಣೆ ಮಾಡಿದರೆ ಅವುಗಳಿಂದ ನದಿಯ ಹರಿವನ್ನು, ನೀರಿನ ಸಂಗ್ರಹವನ್ನು, ಪ್ರವಾಹವನ್ನು ಮತ್ತು ಕಾಲುವೆಗಳನ್ನು ನಿಯಂತ್ರಿಸಬಹುದು.

ಆಘಾತಕಾರಿ ಸಂಗತಿಯೆಂದರೆ, ಮಹಾಲೇಖಪಾಲರ (ಸಿಎಜಿ) ವರದಿ ಪ್ರಕಾರ ನಮ್ಮ ದೇಶದ ಶೇ.7 ರಷ್ಟು ಡ್ಯಾಮ್‌ಗಳಲ್ಲಿ ಮಾತ್ರ ತುರ್ತು ಅಪಾಯ ನಿರ್ವಹಣೆ ವ್ಯವಸ್ಥೆಯಿದೆ. ಇನ್ನುಳಿದ ಡ್ಯಾಮ್‌ಗಳಲ್ಲಿ ಇಲ್ಲ. ಕೇರಳದ ಒಂದೂ ಅಣೆಕಟ್ಟೆಯಲ್ಲಿ ಈ ವ್ಯವಸ್ಥೆ ಇಲ್ಲ!

ಸೂಕ್ಷ್ಮ ಪ್ರದೇಶದಲ್ಲೇ ಅಪಾಯ ಹೆಚ್ಚು 

ಈ ಬಾರಿಯ ಪ್ರವಾಹದಲ್ಲಿ ಕೇರಳದಾದ್ಯಂತ ಸಾವು-ನೋವು ಸಂಭವಿಸಿದೆ. ಆದರೆ, ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಅತಿಹೆಚ್ಚು, ಅಂದರೆ ಒಟ್ಟು ಸುಮಾರು ೪೦೦ ಸಾವಿನಲ್ಲಿ ಶೇ.೩೦ರಷ್ಟು ಸಾವುಗಳು ಸಂಭವಿಸಿವೆ. ಏಕೆಂದರೆ ಇಲ್ಲಿ ದೊಡ್ಡ ಡ್ಯಾಮ್‌ಗಳಿವೆ.

ಕೊಲ್ಲಂ ಮತ್ತು ವಯನಾಡ್ ಕೂಡ ಪರಿಸರ ಸೂಕ್ಷ್ಮ ವಲಯದಲ್ಲೇ ಇದ್ದರೂ ಹಾಗೂ ಅಲ್ಲಿ ಕೂಡ ಅತಿಹೆಚ್ಚು ಮಳೆಯಾಗಿದ್ದರೂ ಕಡಿಮೆ ಹಾನಿಯಾಗಿದೆ. ಏಕೆಂದರೆ, ಅಲ್ಲಿನ ಘಟ್ಟದ ಸಾಲುಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ.

ಪಶ್ಚಿಮ ಘಟ್ಟದಲ್ಲಿರುವ ಡ್ಯಾಮ್‌ಗಳಿಂದ ಏನು ಅಪಾಯ?

ಹೆಚ್ಚುಕಮ್ಮಿ ಕೇರಳ ರಾಜ್ಯದ ಮುಕ್ಕಾಲು ಪಾಲು ಭಾಗ ಪಶ್ಚಿಮ ಘಟ್ಟದಲ್ಲಿ ಬರುತ್ತದೆ. ಪಶ್ಚಿಮ ಘಟ್ಟ ಪ್ರದೇಶ ನೈಸರ್ಗಿಕವಾಗಿ ಬಹಳ ಸೂಕ್ಷ್ಮ ವಲಯ. ಇಲ್ಲಿ ಅಣೆಕಟ್ಟೆಗಳನ್ನು ಕಟ್ಟುವುದು ಅಪಾಯಕಾರಿ. ಆದರೂ ಕೇರಳ, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಾಕಷ್ಟು ಅಣೆಕಟ್ಟುಗಳನ್ನು ಕಟ್ಟಲಾಗಿದೆ.

ಪಶ್ಚಿಮ ಘಟ್ಟ ರಕ್ಷಣೆಯ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಕೂಡ ಈ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು ಎಂದು ವರದಿ ನೀಡಿದ್ದರು.

ಅದನ್ನು ಕೇರಳ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದೆ. ಇಷ್ಟಕ್ಕೂ ಈ ವರದಿಗೂ ಮೊದಲೇ ಕೇರಳದ ಘಟ್ಟ ಸಾಲಿನಲ್ಲಿ ಡ್ಯಾಮ್‌ಗಳನ್ನು ಕಟ್ಟಿದ್ದಾಗಿದೆ. ರೈತರ ಹೊಲಗಳಿಗೆ ನೀರಾವರಿ ಕಲ್ಪಿಸಲು ಹಾಗೂ ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸಲು ಡ್ಯಾಮ್‌ಗಳು ಅನಿವಾರ್ಯ ಎಂದೇ ಎಲ್ಲ ಸರ್ಕಾರಗಳೂ ನಂಬಿವೆ. ಆದರೆ, ಆ ಡ್ಯಾಮ್‌ಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಅತಿದೊಡ್ಡ ನೈಸರ್ಗಿಕ ವಿಕೋಪಗಳಿಗೆ ಅವೇ ಕಾರಣವಾಗಬಹುದು ಎಂಬುದು
ಕೇರಳದಲ್ಲೀಗ ಸಾಬೀತಾಗಿದೆ.

ಕೇರಳ ಈಗ ಕಲಿತ ಪಾಠವೇನು? 

ಡ್ಯಾಮ್‌ಗಳ ಕಳಪೆ ನಿರ್ವಹಣೆಯಿಂದಾಗಿ ಅಪಾಯ ಮೈಮೇಲೆ ಎಳೆದುಕೊಂಡ ಮೇಲೆ ಕೇರಳ ಸರ್ಕಾರ ಮುಂದಿನ ವರ್ಷಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲು ಸಮಗ್ರ ವೈಜ್ಞಾನಿಕ ಡ್ಯಾಂ ನಿರ್ವಹಣೆ ವ್ಯವಸ್ಥೆ ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಇದು ಸಂಪೂರ್ಣ ಕಂಪ್ಯೂಟರೀಕೃತ ವ್ಯವಸ್ಥೆಯಾಗಿದ್ದು, ಯಾವಾಗ ನೀರು ಬಿಡಬೇಕು, ಎಷ್ಟು ಸಂಗ್ರಹಿಸಬೇಕು ಎಂಬುದೆಲ್ಲ ಮೊದಲೇ ಯೋಜಿಸಿದ ರೀತಿಯಲ್ಲಿ ವೈಜ್ಞಾನಿಕವಾಗಿ ತನ್ನಿಂತಾನೇ ನಿರ್ಧಾರವಾಗುತ್ತದೆ. ಅಣೆಕಟ್ಟೆಯ ಗೇಟು ತೆರೆಯುವುದು ಮತ್ತು ಮುಚ್ಚುವುದು ಮಾತ್ರ ಮನುಷ್ಯನ ಕೆಲಸ. 

Follow Us:
Download App:
  • android
  • ios