ಬೆಂಗಳೂರು[ಜೂ.06]: ಕೆಲ ದಿನಗಳ ಹಿಂದೆ ಕೊಲೆಯಾಗಿದ್ದ ರೌಡಿ ಸ್ಟೀವನ್‌ ಹತ್ಯೆಯ ಹಿಂದೆ ಆಕೆಯ ಪತ್ನಿಯೇ ಇರುವುದು ತನಿಖೆ ವೇಳೆ ಬಹಿರಂಗವಾಗಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ತನ್ನ ಪತಿಯನ್ನು ಸ್ನೇಹಿತರ ಮೂಲಕ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದ ಪತ್ನಿ ಸೇರಿದಂತೆ ಮೂವರನ್ನು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುಕ್ತಿನಗರದ ರಂಜನಿ, ವಿನೋಬ ನಗರದ ಕಿರಣ್‌ ಕುಮಾರ್‌ ಹಾಗೂ ಚಿಕ್ಕದೇವಸಂದ್ರದ ಮಹೇಂದ್ರನ್‌ ಬಂಧಿತರು. ಬಾಣಸವಾಡಿಯ 80 ಅಡಿ ರಸ್ತೆಯಲ್ಲಿ ಮೇ 30ರಂದು ರೌಡಿ ಸ್ಟೀವನ್‌ ರಾಜಾನ ಹತ್ಯೆಯಾಗಿತ್ತು. ತಮಿಳುನಾಡಿಗೆ ಪರಾರಿಯಾಗಲು ಕೆ.ಆರ್‌.ಪುರ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಿದ್ದಾಗ ಮೃತನ ಸ್ನೇಹಿತರಾದ ಕಿರಣ್‌ ಮತ್ತು ಮಹೇಂದ್ರನ್‌ ಎಂಬುವರನ್ನು ಬಂಧಿಸಿದ್ದರು.

ತನ್ನ ಸೋದರ ಸಂಬಂಧಿಕನ ಜತೆ ಅನೈತಿಕ ಸಂಬಂಧ ಹೊಂದಿದ್ದ ರಂಜನಿ, ಪತಿಯಿಂದ ಪ್ರತ್ಯೇಕವಾಗಲು ಯತ್ನಿಸಿದ್ದಳು. ಆದರೆ ಈ ಸ್ನೇಹಕ್ಕೆ ಪತಿ ಸ್ಟೀವನ್‌ ರಾಜಾ ವಿರೋಧ ವ್ಯಕ್ತಪಡಿಸಿದ್ದ. ಇತ್ತ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಗರ ತೊರೆದ ಸ್ಟೀವನ್‌, ಚೆನ್ನೈನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ನೆಲೆಸಿದ್ದ. ಈ ನಡುವೆ 2 ತಿಂಗಳ ಹಿಂದೆ ಜೋಸೆಫ್‌ ಎಂಬಾತನ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಪೊಲೀಸರ ಬಂಧನ ಭೀತಿಯಿಂದ ನಗರ ತೊರೆದ ವಿನೋಬಾ ನಗರ ಕಿರಣ್‌, ಚೆನ್ನೈನಲ್ಲಿದ್ದ ತನ್ನ ಆಪ್ತಮಿತ್ರ ಸ್ಟೀವನ್‌ ರಾಜಾನ ಮನೆಯಲ್ಲಿ ಆಶ್ರಯ ಪಡೆದಿದ್ದ. ಆಗ ಆತನ ಪತ್ನಿಗೆ ಕಿರಣ್‌ ಆತ್ಮೀಯನಾಗಿದ್ದಾನೆ. ಹೀಗಾಗಿ ಇತ್ತೀಚೆಗೆ ನಗರದಲ್ಲಿ ಹಿಡಿತ ಸಾಧಿಸುವ ವಿಷಯದಲ್ಲಿ ರಾಜಾನ ಜತೆ ಕಿರಣ್‌ ಮತ್ತು ಮಹೇಂದ್ರನ್‌ಗೆ ಮನಸ್ತಾಪವಾಗಿತ್ತು. ಈ ವೈಮನಸ್ಸು ಹಿನ್ನೆಲೆಯಲ್ಲಿ ಗೆಳೆಯನ ಕೊಲೆಗೆ ಹೊಂಚು ಹಾಕುತ್ತಿದ್ದ ಕಿರಣ್‌ಗೆ ಸ್ನೇಹಿತನ ಪತ್ನಿಯೇ ಸಾಥ್‌ ಕೊಟ್ಟಿದ್ದು ಅನುಕೂಲವಾಯಿತು.

ಮೇ 30ರಂದು ರಾಜಾನನ್ನು ಕರೆದುಕೊಂಡು ಹೋದ ಆರೋಪಿಗಳು, ದಿನವೀಡಿ ಮದ್ಯಪಾನ ಮಾಡಿಸಿದ್ದಾರೆ. ನಂತರ ರಾತ್ರಿ ಮದ್ಯದ ಅಮಲಿನಲ್ಲಿದ್ದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದ ಬಳಿಕ ಆಟೋದಲ್ಲಿ ಮೃತದೇಹ ಎಸೆದು ಹೋಗಿದ್ದರು ಎಂದು ಪೊಲೀಸರು ತಿಳಿಸಿದರು. ಇನ್ಸ್‌ಪೆಕ್ಟರ್‌ ಸುಭಾಷ್‌ ಭರಣಿ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.