ಬಿಎಸ್ಸೆನ್ನೆಲ್‌ನಿಂದ ಎಲ್ಲಕ್ಕಿಂತ ಹೈಸ್ಪೀಡ್‌ ಇಂಟರ್ನೆಟ್‌?

Hi Speed Internet From BSNL
Highlights

ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್‌) ಇನ್ನೊಂದು ಕ್ರಾಂತಿಕಾರಿ ಹೆಜ್ಜೆ ಇರಿಸಿದೆ. ಇದು ಯಶಸ್ವಿಯಾದರೆ ಬೇರೆಲ್ಲಾ ಟೆಲಿಕಾಂ ಕಂಪನಿಗಳು ನೀಡುವುದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ವೇಗದ ಇಂಟರ್ನೆಟ್‌ ಹಾಗೂ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಬಿಎಸ್‌ಎನ್‌ಎಲ್‌ ನೀಡಲಿದೆ

ನವದೆಹಲಿ : ರಿಲಯನ್ಸ್‌ನ ಜಿಯೋ ನೀಡಿದ ಹೊಡೆತದಿಂದ ಭಾರತದ ಟೆಲಿಕಾಂ ಕಂಪನಿಗಳು ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದೆ ಇರುವಾಗ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್‌) ಇನ್ನೊಂದು ಕ್ರಾಂತಿಕಾರಿ ಹೆಜ್ಜೆ ಇರಿಸಿದೆ. ಇದು ಯಶಸ್ವಿಯಾದರೆ ಬೇರೆಲ್ಲಾ ಟೆಲಿಕಾಂ ಕಂಪನಿಗಳು ನೀಡುವುದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ವೇಗದ ಇಂಟರ್ನೆಟ್‌ ಹಾಗೂ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಬಿಎಸ್‌ಎನ್‌ಎಲ್‌ ನೀಡಲಿದೆ. ಅಷ್ಟೇ ಅಲ್ಲ, ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ಈ ಇಂಟರ್ನೆಟ್‌ ಲಭ್ಯವಾಗಲಿದೆ.

ಅದು ಹೇಗೆಂದರೆ, ಪ್ರಸಿದ್ಧ ಏರ್‌ಬಸ್‌ ಮತ್ತು ಸಾಫ್ಟ್‌ಬ್ಯಾಂಕ್‌ ಕಂಪನಿಗಳು ಹಾಗೂ ಉದ್ಯಮಿ ಬಿಲ್‌ ಗೇಟ್ಸ್‌ ಸೇರಿಕೊಂಡು ಒನ್‌ವೆಬ್‌ ಎಂಬ ಕಂಪನಿ ಹುಟ್ಟುಹಾಕಿದ್ದಾರೆ. ಈ ಕಂಪನಿಯು ಭೂಮಿಯಿಂದ 150-200 ಕಿ.ಮೀ. ಎತ್ತರದಲ್ಲಿ 850 ಉಪಗ್ರಹಗಳ ಗುಚ್ಛವೊಂದನ್ನು ಸ್ಥಾಪಿಸಲು ಮುಂದಾಗಿದೆ. ಇವು ಸಂಪರ್ಕ ಉಪಗ್ರಹಗಳಾಗಿದ್ದು, ಭೂಮಂಡಲದ ಯಾವುದೇ ಮೂಲೆಗೆ ಅತ್ಯಂತ ವೇಗದ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ನೀಡುತ್ತವೆ. ಈ ಒನ್‌ವೆಬ್‌ ಸೇವೆಯನ್ನು ತಾನು ಬಳಸಿಕೊಳ್ಳಲು ಬಿಎಸ್‌ಎನ್‌ಎಲ್‌ ಉತ್ಸುಕವಾಗಿದ್ದು, ಸಾಫ್ಟ್‌ಬ್ಯಾಂಕ್‌ ಜತೆ ಮಾತುಕತೆ ನಡೆಸುತ್ತಿದೆ. ಕಳೆದ ವಾರವಷ್ಟೇ ಜಪಾನ್‌ನಲ್ಲಿ ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಸಾಫ್ಟ್‌ಬ್ಯಾಂಕ್‌ ಜೊತೆ ಮೊದಲ ಸುತ್ತಿನ ಸಭೆ ನಡೆಸಿ, ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಬಿಎಸ್‌ಎನ್‌ಎಲ್‌ಗೆ ಒನ್‌ವೆಬ್‌ ತಂತ್ರಜ್ಞಾನ ದೊರೆತರೆ ಇದು ಭಾರತದ ದೂರಸಂಪರ್ಕ ಮಾರುಕಟ್ಟೆಯಲ್ಲಿ ಇಲ್ಲಿಯವರೆಗೆ ಎಂದೂ ಕಾಣದ ಅಲ್ಲೋಲಕಲ್ಲೋಲ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ. ಒನ್‌ವೆಬ್‌ನಿಂದ ಕೇವಲ ಹೈಸ್ಪೀಡ್‌ ಇಂಟರ್ನೆಟ್‌ ಮಾತ್ರವಲ್ಲ, ಸ್ಪಷ್ಟವಾದ ಕರೆಗಳು, ಟೀವಿ ಚಾನಲ್‌ಗಳು, ಎಫ್‌ಎಂ ಚಾನಲ್‌ಗಳು ಹಾಗೂ ಇನ್ನೂ ಹಲವಾರು ಸೇವೆಗಳು ಸಿಗಲಿವೆ. ಕುತೂಹಲಕರ ಸಂಗತಿಯೆಂದರೆ, ಒನ್‌ವೆಬ್‌ನ ಇಂಟರ್ನೆಟ್‌ ಬ್ಯಾಂಡ್‌ವಿಡ್‌್ತ (ತರಂಗಾಂತರ) ಸ್ವೀಕರಿಸಲು ಮೊಬೈಲ್‌ ಟವರ್‌ಗಳು ಬೇಕಾಗಿಲ್ಲ. ಸಣ್ಣದೊಂದು ಉಪಕರಣ ಸಾಕು. ಅಲ್ಲದೆ, ಆಪ್ಟಿಕಲ್‌ ಫೈಬರ್‌ ಕೇಬಲ್‌ ಹಾಗೂ ಟೆಲಿಫೋನ್‌ ತಂತಿಗಳನ್ನೂ ಇದು ಇತಿಹಾಸಕ್ಕೆ ಸೇರಿಸಲಿದೆ.

‘ಒನ್‌ವೆಬ್‌ ಎಂಬುದು ಹೊಸ ರೀತಿಯ ಚಿಂತನೆ. ಇದರ ತಂತ್ರಜ್ಞಾನವನ್ನು ನಾವು ಪಡೆಯುವ ಬಗ್ಗೆ ಈಗಷ್ಟೇ ಮಾತುಕತೆ ಆರಂಭಿಸಿದ್ದೇವೆ. ಇದಕ್ಕೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರದ ಒಪ್ಪಿಗೆಯನ್ನು ಇನ್ನೂ ಪಡೆದಿಲ್ಲ. ಒನ್‌ವೆಬ್‌ ಕಂಪನಿ ಮುಂದಿನ ಐದು ವರ್ಷಗಳಲ್ಲಿ ತನ್ನ ಯೋಜನೆ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದೆ’ ಎಂದು ಬಿಎಸ್‌ಎನ್‌ಎಲ್‌ ಚೇರ್ಮನ್‌ ಅನುಪಮ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಒನ್‌ವೆಬ್‌ ತಂತ್ರಜ್ಞಾನ ಭಾರತಕ್ಕೆ ದೊರೆತರೆ ಸದ್ಯ ದೇಶದ ಎಲ್ಲಾ ಭಾಗಗಳಲ್ಲಿ ವೇಗದ ಇಂಟರ್ನೆಟ್‌ ಸಿಗದೇ ಇರುವ ಕಾರಣಕ್ಕೆ ಕುಂಟುತ್ತಾ ಸಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಡಿಜಿಟಲ್‌ ಇಂಡಿಯಾ ಯೋಜನೆಗೆ ದೊಡ್ಡ ಪ್ರೋತ್ಸಾಹ ಸಿಕ್ಕಂತಾಗಲಿದೆ.

ಏನಿದು ಒನ್‌ವೆಬ್‌?

ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಹಾಗೂ ಕೆಲ ಜಾಗತಿಕ ಕಂಪನಿಗಳು ಸೇರಿಕೊಂಡು 850 ಸಂಪರ್ಕ ಉಪಗ್ರಹಗಳ ಗುಚ್ಛವೊಂದನ್ನು ಭೂಮಿಯ ಸಮೀಪದ ಅಂತರಿಕ್ಷದಲ್ಲಿ ಸ್ಥಾಪಿಸಲು ಹೊರಟಿದ್ದಾರೆ. ಆ ಉಪಗ್ರಹಗಳು ಅಲ್ಟಾ್ರ ಹೈಸ್ಪೀಡ್‌ ಇಂಟರ್ನೆಟ್‌ ತರಂಗಾಂತರವನ್ನು ಭೂಮಿಯ ಯಾವ ಮೂಲೆಗೆ ಬೇಕಾದರೂ ಕಳಿಸುತ್ತವೆ. ಬಿಎಸ್‌ಎನ್‌ಎಲ್‌ ಈ ಇಂಟರ್ನೆಟ್‌ ಪಡೆಯಲು ಮಾತುಕತೆ ಆರಂಭಿಸಿದೆ.

loader