ಬೆಂಗಳೂರು :  ‘ನನಗೆ ಹೇಳೋದಕ್ಕೆ ದಿನೇಶ್‌ ಗುಂಡೂರಾವ್‌ ಯಾರು? ನನಗೆ ಹೇಳೋದಕ್ಕೆ ಕೇಳೋದಕ್ಕೆ ಪಕ್ಷದ ವರಿಷ್ಠ ನಾಯಕ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ಇದ್ದಾರೆ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ತೀಕ್ಷ್ಣವಾಗಿ ಹೇಳಿದ್ದಾರೆ.

‘ದಿನೇಶ್‌ ಗುಂಡೂರಾವ್‌ ಅವರು ಮೊದಲು ಕಾಂಗ್ರೆಸ್‌ ಪಕ್ಷದ ಶಾಸಕರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಿ. ನನಗೆ ಅವರು ಎಚ್ಚರಿಕೆ ಕೊಡೋ ಅವಶ್ಯಕತೆ ಇಲ್ಲ’ ಎಂದೂ ಅವರು ಗುಡುಗಿದ್ದಾರೆ.

ಶುಕ್ರವಾರ ವಿಧಾವಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿಗಮ ಮಂಡಳಿ ನೇಮಕಾತಿ ಸಂಬಂಧ ಸಮಸ್ಯೆಯನ್ನು ಮೈತ್ರಿ ಪಕ್ಷಗಳ ಹಿರಿಯರು ಕುಳಿತು ಬಗೆಹರಿಸುತ್ತಾರೆ. ಈ ವಿಚಾರದಲ್ಲಿ ನಾನು ತಲೆ ಹಾಕೋದಿಲ್ಲ. ನನ್ನದೇನಿದ್ದರೂ ನನಗೆ ವಹಿಸಿರುವ ಇಲಾಖೆಗೆ ಸಂಬಂಧಿಸಿದ ಮಾತ್ರ ಕೆಲಸ’ ಎಂದು ಸ್ಪಷ್ಟಪಡಿಸಿದರು.

‘ಕೆಪಿಸಿಸಿ ಅಧ್ಯಕ್ಷರು ಮೊದಲು ತಮ್ಮ ಪಕ್ಷದ ಶಾಸಕರನ್ನು ಹತೋಟಿಯಲ್ಲಿಟ್ಟುಕೊಳ್ಳಲಿ. ನನಗೆ ಅವರೇನು ಹೇಳುವ ಅವಶ್ಯಕತೆ ಇಲ್ಲ. ನನಗೆ ಹೇಳೋದಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಇದ್ದಾರೆ. ನಾನು ಐದನೇ ಬಾರಿಗೆ ಶಾಸಕನಾಗಿದ್ದೇನೆ ಎಂಬುದು ದಿನೇಶ್‌ ಗುಂಡೂರಾವ್‌ ಅವರಿಗೆ ಗೊತ್ತಿರಲಿ’ ಎಂದು ಏರಿದ ಧ್ವನಿಯಲ್ಲಿ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೇವಣ್ಣ, ದೇವೇಗೌಡರು ನಾಡಿನ ಜನರ ಕಷ್ಟನೋಡಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಹಾಗಾಗಿ ಗೌಡರ ಕಣ್ಣಿರಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದ ರೇವಣ್ಣ, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ದೇವೇಗೌಡರು ಹಲವು ನೀತಿ-ರಿವಾಜುಗಳನ್ನು ಹೊಂದಿದ್ದಾರೆ ಎಂದು ಸಮರ್ಥಿಸಿಕೊಂಡರು.

ಸ್ಟೀಲ್‌ ಬ್ರಿಡ್ಜ್‌ ವಿಚಾರ ನನ್ನದಲ್ಲ:  ಬೆಂಗಳೂರಿನಲ್ಲಿ ಕಳೆದ ಸರ್ಕಾರದ ಅವಧಿಯಲ್ಲಿ ಕೈಬಿಟ್ಟಿದ್ದ ವಿವಾದಿತ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮತ್ತೆ ಜೀವ ಬಂದಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ‘ನನಗೆ ಸ್ಟೀಲ್‌ ಬ್ರಿಡ್ಜ್‌ ಖಾತೆ ನೀಡಿಲ್ಲ. ರಸ್ತೆ ಮಾಡುವ ಖಾತೆ ನೀಡಿದ್ದಾರೆ. ರಸ್ತೆ ಬಗ್ಗೆ ಕೇಳಿದರೆ ಏನೋ ಹೇಳಬಹುದು. ಅನ್ನ ಬಿಟ್ಟು ಈ ಸರ್ವೆ ನಂಬರ್‌ ಬಗ್ಗೆ ಆ ಸರ್ವೆ ನಂಬರ್‌ ಬಗ್ಗೆ ಕೇಳಿದ್ರೆ ಕಷ್ಟ’ ಎಂದು ಜಾಣತನದಿಂದ ನುಣುಚಿಕೊಂಡರು.

ರಾಜ್ಯ ವ್ಯಾಪ್ತಿಯ ರಸ್ತೆ ಗುಂಡಿಗಳ ಮುಚ್ಚುವ ಕಾಮಗಾರಿಯನ್ನು ಮಳೆಗಾಲಕ್ಕೂ ಮುನ್ನ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಾಗೆ 120 ಕೋಟಿ ರು. ವೆಚ್ಚದಲ್ಲಿ ಮಲೆನಾಡಿನ ಶಾಲೆಗಳನ್ನು ಸಂಪರ್ಕಿಸುವ ಸೇತುವೆಗಳನ್ನು ನಿರ್ಮಿಸಲಾಗುತ್ತದೆ ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು.